ಮಡಿಕೇರಿ: ವರ್ಷಗಳು ಕಳೆದಂತೆಲ್ಲ ಕೊಡಗು ಜಿಲ್ಲೆಯಲ್ಲಿ ಆನೆ– ಮಾನವ ಸಂಘರ್ಷ ಹೆಚ್ಚುತ್ತಲೇ ಇದೆ. ಕಳೆದ ವರ್ಷದ ಮೊದಲ 7 ತಿಂಗಳುಗಳಲ್ಲಿ 11 ಕಾಡಾನೆಗಳು ಮೃತಪಟ್ಟಿದ್ದರೆ, ಈ ವರ್ಷ ಅದರ ಸಂಖ್ಯೆ 15 ದಾಟಿದೆ.
ಆನೆಗಳು ಇದೀಗ ಮನೆಯ ಬಾಗಿಲಿನವರೆಗೂ ಬರತೊಡಗಿವೆ. ಈಚೆಗಷ್ಟೇ ಆನೆಯೊಂದು ಮನೆಯಂಗಳದ ಬಾವಿಗೆ ಇದ್ದು ಅಲ್ಲಿಯೆ ಸಮಾಧಿಯಾಗಿದೆ. ರಸ್ತೆಗಳಲ್ಲಿ ದನಗಳು ಹೋಗುವ ಹಾಗೆ ಕಾಡಾನೆಗಳು ಮಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವುದು ಸಾಮಾನ್ಯ ಎನ್ನುವಂತಾಗಿದೆ.
ಕಾಡಾನೆಗಳು ನಾಡಿಗೆ ಬರುವುದನ್ನು ತಡೆಗಟ್ಟಲು ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಕೊಡಗು ಜಿಲ್ಲೆಗೆ ಒಳಪಡುವ ಆನೆಚೌಕೂರು ವನ್ಯಜೀವಿ ವಲಯದಲ್ಲಿ ಈವರೆಗೆ 21 ಕಿ.ಮೀ ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಪೂರ್ಣಗೊಂಡಿದೆ. ಹೀಗಿದ್ದರೂ ಕಾಡಾನೆಗಳು ಗ್ರಾಮಗಳತ್ತ ಬರುವುದು ನಿಂತಿಲ್ಲ.
ಇನ್ನು ಮಡಿಕೇರಿ ವನ್ಯಜೀವಿ ವಿಭಾಗದ ವ್ಯಾಪ್ತಿಗೆ ಒಳಪಡುವ ಪುಷ್ಪಗಿರಿ, ತಲಕಾವೇರಿ, ಬ್ರಹ್ಮಗಿರಿ ವನ್ಯಧಾಮದಿಂದ ನಿರಂತರವಾಗಿ ಕಾಡಾನೆಗಳು ಬರುತ್ತಿವೆ. ಆದರೆ, ಇವೆಲ್ಲವೂ ತೀರ ಕಡಿದಾದ ಬೆಟ್ಟ ಶ್ರೇಣಿಗಳನ್ನು ಹೊಂದಿರುವುದರಿಂದ, ಗುಡ್ಡಗಾಡು ಪ್ರದೇಶಗಳಾಗಿರುವುದರಿಂದ ರೈಲ್ವೆ ಬ್ಯಾರಿಕೇಡ್ ಅಳವಡಿಸಲು ಸಾಮಗ್ರಿಗಳನ್ನು ಸಾಗಿಸುವುದೇ ಕಷ್ಟಸಾಧ್ಯ ಎನಿಸಿದೆ. ಹೀಗಾಗಿ, ನಿರ್ದಿಷ್ಟ ಸ್ಥಳಗಳಲ್ಲಿ ಕಾಡಾನೆ ತಡೆ ಕಾವಲುಗಾರರನ್ನು ಹಾಗೂ ಕ್ಷಿಪ್ರ ಸ್ಪಂದನಾ ತಂಡವನ್ನು ನಿಯೋಜಿಸಲಾಗಿದೆ. ತೂಗು ಸೋಲಾರ್ ತಂತಿ ಬೇಲಿ, ಆನೆತಡೆ ಕಂದಕಗಳು, ಆರ್‌ಸಿಸಿ ಕಂಬಗಳನ್ನು ಅಳವಡಿಸಲಾಗಿದ್ದರೂ ಆನೆಗಳ ಬರುವಿಕೆಗೆ ಅಡ್ಡಿಯಾಗಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಈ ವ್ಯಾಪ್ತಿಯಲ್ಲಿ 2022–23ನೇ ಸಾಲಿನಲ್ಲಿ 1,713 ಆನೆದಾಳಿ ಪ್ರಕರಣಗಳು ಸಂಭವಿಸಿದ್ದರೆ, 2023–24ನೇ ಸಾಲಿನಲ್ಲಿ 1,738 ಪ್ರಕರಣಗಳು ಸಂಭವಿಸಿವೆ.
ಇನ್ನು ವಿರಾಜಪೇಟೆ ವಿಭಾಗ ವ್ಯಾಪ್ತಿಯಲ್ಲಿ ಕಾಡಾನೆಗಳನ್ನು ಹಿಮ್ಮೆಟಿಸಲು ಹಲವು ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ. 4.8 ಕಿ.ಮೀ ಆನೆ ತಡೆ ಕಂದಕದ ಉನ್ನತೀಕರಣ, 40 ಸೋಲಾರ್ ಬೀದಿ ದೀಪಗಳ ಅಳವಡಿಕೆ, 2 ಗೇಟ್‌ಗಳು, 9 ಕ್ಯಾಮೆರಾಗಳ ಅಳವಡಿಕೆ, 732 ಮೀಟರ್ ಆನೆ ತಡೆ ಕಾಂಕ್ರೀಟ್ ಬ್ಯಾರಿಕೇಡ್ ನಿರ್ಮಾಣ, 60 ಮೀಟರ್‌ಗಳ ವ್ಯಾಪ್ತಿಯಲ್ಲಿ ವಿಶೇಷ ಆಕೃತಿಗಳನ್ನು ನಿರ್ಮಿಸಲಾಗಿದೆ.
ಈ ವಿಭಾಗದಲ್ಲಿ ಒಟ್ಟು 17 ಕ್ಷಿಪ್ರ ಸ್ಪಂದನಾ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ. ತಿತಿಮತಿ ವಲಯಕ್ಕೆ 10, ವಿರಾಜಪೇಟೆಗೆ 8, ಪೊನ್ನಂಪೇಟೆ ವಲಯಕ್ಕೆ 4 ಒಟ್ಟು 22 ಕಾಡಾನೆಗಳಿಗೆ ರೇಡಿಯೊ ಕಾಲರ್ ಅಳವಡಿಸಲು ಪ್ರಸ್ತಾವ ಸಲ್ಲಿಕೆಯಾಗಿದೆ.
ಕಾಡಾನೆಗಳನ್ನು ಕಂಡ ಕೂಡಲೇ 8277124444 ಸಂಖ್ಯೆಗೆ ಕರೆ ಮಾಡಿದರೆ ಇಲಾಖೆ ಕ್ರಮ ಕೈಗೊಳ್ಳಲಿದೆ. ಇದು ದಿನದ 24 ಗಂಟೆಗಳ ಕಾಲವೂ ಲಭ್ಯವಿದೆ
- ಭಾಸ್ಕರ್ ಡಿಸಿಎಫ್ ಮಡಿಕೇರಿ.
ಆನೆಗಳ ಸಂಖ್ಯೆಯಲ್ಲಿ ದೇಶದಲ್ಲೆ ರಾಜ್ಯಕ್ಕೆ ಮೊದಲ ಸ್ಥಾನ ರಾಜ್ಯದಲ್ಲಿ ಒಟ್ಟು 6395 ಆನೆಗಳಿದ್ದು ರಾಜ್ಯ ದೇಶದಲ್ಲೇ ಆನೆಗಳ ಸಂಖ್ಯೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ರಾಜ್ಯದಲ್ಲಿ ಪ್ರತಿ ವರ್ಷ ಸರಾಸರಿ 30 ಜನರು ಆನೆಗಳ ದಾಳಿಯಿಂದ ಸಾವಿಗೀಡಾಗುತ್ತಿದ್ದಾರೆ. ಈ ವರ್ಷ ರಾಜ್ಯದಲ್ಲಿ ಜನವರಿಯಿಂದ ಇಲ್ಲಿಯವರೆಗೆ 25 ಜನರು ಆನೆಯ ದಾಳಿಯಿಂದ ಮೃತಪಟ್ಟಿದ್ದಾರೆ. ಕಳೆದ ಜನವರಿಯಿಂದೀಚೆಗೆ 36 ಆನೆಗಳು ರಾಜ್ಯದಲ್ಲಿ ಮೃತಪಟ್ಟಿವೆ. ಜನವರಿಯಲ್ಲಿ 2 ಫೆಬ್ರವರಿಯಲ್ಲಿ 6 ಮಾರ್ಚ್‌ನಲ್ಲಿ 7 ಏಪ್ರಿಲ್‌ನಲ್ಲಿ 5 ಮೇ ತಿಂಗಳಲ್ಲಿ 13 ಜೂನ್‌ನಲ್ಲಿ 2 ಮತ್ತು ಜುಲೈನಲ್ಲಿ 1 ಆನೆಗಳು ಮೃತಪಟ್ಟಿವೆ. ಈ ಪೈಕಿ ಅಸಹಜವಾಗಿ 5 ಕಾಡಾನೆಗಳು ಮೃತಪಟ್ಟಿವೆ. ಕೊಡಗು ಜಿಲ್ಲೆಯ ಮಡಿಕೇರಿ ವಿಭಾಗದಲ್ಲಿ ಜನವರಿಯಿಂದ ಇಲ್ಲಿಯವರೆಗೆ 7 ಕಾಡಾನೆಗಳು ಮೃತಪಟ್ಟಿವೆ. ಅವುಗಳಲ್ಲಿ 2 ಕಾಡಾನೆಗಳು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿವೆ. ಆನೆ ದಾಳಿಗೆ ಸಿಲುಕಿ ನಾಲ್ವರು ಮೃತಪಟ್ಟಿದ್ದಾರೆ. ವಿರಾಜಪೇಟೆ ವಿಭಾಗದಲ್ಲಿ ಜನವರಿಯಿಂದ ಇಲ್ಲಿಯವರೆಗೆ 8 ಕಾಡಾನೆಗಳು ಮೃತಪಟ್ಟಿವೆ. ಇಬ್ಬರು ಕಾಡಾನೆಗಳ ದಾಳಿಗೆ ಸಿಲುಕಿ ಮೃತಪಟ್ಟಿದ್ದಾರೆ.
ಅಂತರರಾಷ್ಟ್ರೀಯ ಸಮ್ಮೇಳನಕ್ಕೆ ಜಿಲ್ಲೆಯಿಂದ 70ಕ್ಕೂ ಅಧಿಕ ಮಂದಿ ಭಾಗಿ ಅರಣ್ಯ ಇಲಾಖೆ ವಿಶ್ವ ಆನೆಯ ದಿನದ ಪ್ರಯುಕ್ತ ಮಾನವ- ಆನೆ ಸಂಘರ್ಷ ಕುರಿತಂತೆ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಗಾಂಧೀ ಕೃಷಿ ವಿಜ್ಞಾನ ಕೇಂದ್ರ-ಜಿಕೆವಿಕೆ ಆವರಣದಲ್ಲಿ ಆ. 12ರಂದು ಏರ್ಪಡಿಸಿರುವ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಕೊಡಗು ಜಿಲ್ಲೆಯಿಂದ 70ಕ್ಕೂ ಅಧಿಕ ಮಂದಿ ಭಾಗಿಯಾಗಲಿದ್ದಾರೆ. ಇವರಲ್ಲಿ 50 ಮಂದಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಗೂ 20ಕ್ಕೂ ಅಧಿಕ ರೈತರು ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಮ್ಮೇಳನದಲ್ಲಿ ಅಮೆರಿಕ ಜರ್ಮನಿ ಜಪಾನ್ ಬ್ರಿಟನ್ ಸೇರಿದಂತೆ 11 ರಾಷ್ಟ್ರಗಳ ಸುಮಾರು 17ಕ್ಕೂ ಹೆಚ್ಚು ಪ್ರತಿನಿಧಿಗಳು ಹಾಗೂ ಭಾರತದ ವಿವಿಧ ರಾಜ್ಯಗಳ 660 ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.