ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನಾಪೋಕ್ಲು: ರಂಜಿಸಿದ ಕೈಲ್ ಮುಹೂರ್ತ ಕ್ರೀಡಾಕೂಟ

ಕಿರು೦ದಾಡು, ಬಲಮುರಿ, ಪೇರೂರು, ಮೂರ್ನಾಡು ಸೇರಿದಂತೆ ಹಲವೆಡೆ ಆಯೋಜನೆ
Published : 4 ಸೆಪ್ಟೆಂಬರ್ 2024, 4:30 IST
Last Updated : 4 ಸೆಪ್ಟೆಂಬರ್ 2024, 4:30 IST
ಫಾಲೋ ಮಾಡಿ
Comments

ನಾಪೋಕ್ಲು: ಜಿಲ್ಲೆಯಾದ್ಯಂತ ಮಂಗಳವಾರ ಕೈಲ್ ಮುಹೂರ್ತ ಹಬ್ಬದ ಸಂಭ್ರಮಕ್ಕೆ ಕ್ರೀಡಾಕೂಟಗಳು ಕಳೆ ನೀಡಿದವು. ಬೆಳಿಗ್ಗೆಯಿಂದಲೇ ಮಳೆ ಬಿಡುವು ಕೊಟ್ಟಿದ್ದು ಎಳೆಬಿಸಿಲು ಗ್ರಾಮೀಣ ಜನರಲ್ಲಿ ಸಂಭ್ರಮವನ್ನು ಹೆಚ್ಚಿಸಿತು.

ಹತ್ತಾರು ದೇಸಿ ಕ್ರೀಡೆಗಳಲ್ಲಿ ಪಾಲ್ಗೊಂಡಿದ್ದ ಗ್ರಾಮೀಣ ಮಂದಿ ಕೇಕೆ ಹಾಕಿ ಸಂಭ್ರಮಿಸಿದರು. ಗ್ರಾಮಗಳ ವಿವಿಧ ಕ್ರೀಡಾಂಗಣಗಳಲ್ಲಿ ನಡೆದ ಆಟೋಟಗಳಲ್ಲಿ ಕ್ರೀಡಾಪಟುಗಳನ್ನು ಗ್ರಾಮಸ್ಥರು ಹುರಿದುಂಬಿಸಿದರು. ವಿಜೇತರಿಗೆ ಟ್ರೋಫಿ ಹಾಗೂ ನಗದು ನೀಡಿ ಪುರಸ್ಕರಿಸಲಾಯಿತು. ವಿವಿಧ ಗ್ರಾಮಗಳಲ್ಲಿನ ಕಾಫಿ ಬೆಳೆಗಾರರು ಗ್ರಾಮೀಣ ಕ್ರೀಡೆಗಳಿಗೆ ಟ್ರೋಫಿಗಳನ್ನು ಪ್ರಾಯೋಜಿಸಿದ್ದರು.

ಸಮೀಪದ ಕಿರು೦ದಾಡು ಗ್ರಾಮದ ಕಿಸಾನ್ ಯೂತ್ ಕ್ಲಬ್ ವತಿಯಿಂದ ಕಿರುಂದಾಡು ಗ್ರಾಮದಲ್ಲಿ, ಮಹಾದೇವ ಕ್ರೀಡಾ ಮಂಡಳಿಯಿಂದ ಬಲಮುರಿ ಗ್ರಾಮದಲ್ಲಿ, ಪೇರೂರು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಪೇರೂರು ಗ್ರಾಮದಲ್ಲಿ ಕೈಲ್ ಮುಹೂರ್ತ ಕ್ರೀಡಾಕೂಟಗಳನ್ನು ಆಯೋಜಿಸಲಾಗಿತ್ತು. ಸಮೀಪದ ಮೂರ್ನಾಡಿನ ಪಾಂಡಾಣೆ ಕ್ರೀಡಾಂಗಣದಲ್ಲಿ ಸಹಕಾರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಶತಮಾನೋತ್ಸವ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.

ಗ್ರಾಮೀಣ ಕ್ರೀಡಾ ಸ್ಪರ್ಧೆಗಳೊಂದಿಗೆ ಮ್ಯಾರಥಾನ್ ಮತ್ತು ಸೈಕ್ಲಿಂಗ್ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕಬಡಕೇರಿ ಹಾಗೂ ವಾಟೆಕಾಡು ಭಾಗಗಳಲ್ಲೂ ಆಟೋಟಗಳು ಜರುಗಿದವು. ಕಿರು೦ದಾಡು ಗ್ರಾಮದ ಕಿಸಾನ್ ಯೂತ್ ಕ್ಲಬ್ ವತಿಯಿಂದ ಕಿರು೦ದಾಡು ಶಾಲಾ ಮೈದಾನದಲ್ಲಿ ಆಯೋಜಿಸಲಾಗಿತ್ತು.

ಕಿಸಾನ್ ಯೂತ್ ಕ್ಲಬ್ ಅಧ್ಯಕ್ಷ ತಾಪ೦ಡ ವಿಜು ಕಾಳಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಪಾರಾಣೆ ಪಂಚಾಯಿತಿ ಅಧ್ಯಕ್ಷ ಪಾಡೆಯಿಂದ ಕಟ್ಟಿ ಕುಶಾಲಪ್ಪ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಟಾಟಾ ಕಾಫಿ ಲಿಮಿಟೆಡ್‌ನ ನಿವೃತ್ತ ಸ್ಪೆಷಲ್ ಗ್ರೇಡ್ ಅಧಿಕಾರಿ ದೇವ ಜನ ಸುಬ್ಬಯ್ಯ ವೆಂಕಟೇಶ್, ಯುನೈಟೆಡ್ ಕಿಂಗ್ ಡ೦ ಸಿಇಒ ಅಪ್ಪನೆರವ೦ಡ ಮನೋಜ್ ಮಂದಪ್ಪ ಹಾಗೂ ಗ್ರಾಮ ಪಂಚಾಯಿತಿ ಸದಸ್ಯೆ ಮುಕಾಟಿರ ದಾಕ್ಷಾಯಿಣಿ ಪಾಲ್ಗೊಂಡಿದ್ದರು.

ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಪುರುಷರಿಗೆ ವಾಲಿಬಾಲ್, ಮಹಿಳೆಯರಿಗೆ ಥ್ರೋಬಾಲ್, ಶಾಟ್‌ಪಟ್, ವಿಷದ ಚೆಂಡು, ವಿವಿಧ ಓಟದ ಸ್ಪರ್ಧೆಗಳು ನಡೆದವು.

ಬಲಮುರಿ ಗ್ರಾಮದ ಮಹದೇವ ಕ್ರೀಡಾ ಮಂಡಳಿಯಿಂದ ಬಲಮುರಿ ಹೊಳೆಮುಡಿ ಮೈದಾನದಲ್ಲಿ ಹಬ್ಬದ ಅಂಗವಾಗಿ ವಿವಿಧ ಕ್ರೀಡೆಗಳು ಜರುಗಿದವು.

ಗ್ರಾಮಕ್ಕೆ ಒಳಪಟ್ಟ ನಾಲ್ಕು ಕೇರಿಯ ಪುರುಷರಿಗೆ ಹಾಗೂ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಭಾರದ ಕಲ್ಲು ಎಸೆಯುವುದು, ಗೋಣಿಚೀಲ ಓಟ, ಮೂರು ಕಾಲಿನ ಓಟ, ಸ್ಲೋ ಸೈಕಲ್ ರೇಸ್, ನಿಂಬು ಚಮಚ ಓಟ ... ಹೀಗೆ ವೈವಿಧ್ಯಮಯ ಗ್ರಾಮೀಣ ಕ್ರೀಡಾ ಸ್ಪರ್ಧೆಗಳು ಜರುಗಿದವು. ಸಮಾರಂಭದ ಅಧ್ಯಕ್ಷತೆಯನ್ನು ಕೊಣಂಜಗೇರಿ ಗ್ರಾಮ ಪಂಚಾಯಿತಿ ಸದಸ್ಯ ಬೊಳ್ಳಚೆಟ್ಟೀರ ಪ್ರಕಾಶ್ ಕಾಳಪ್ಪ ವಹಿಸಿದ್ದರು.

ಅತಿಥಿಗಳಾಗಿ ಮಹಾದೇವ ಕ್ರೀಡಾ ಮಂಡಳಿ ಅಧ್ಯಕ್ಷ ತೊತ್ತಿಯಂಡ ಬನ್ಸಿ ಚಿಣ್ಣಪ್ಪ, ನಿವೃತ್ತ ವಿಜ್ಞಾನಿ ನಾಡಂಡ ಎ. ಪ್ರಿನ್ಸ್ ತಿಮ್ಮಯ್ಯ, ನಿವೃತ್ತ ನಾಯಕ್ ಸುಬೇದಾರ್ ಪೊನ್ನಚ್ಚನ ದಯಾನಂದ, ನಿವೃತ್ತ ಸುಬೇದಾರ್ ಬೊಳ್ಳಚೆಟ್ಟಿರ ವಿಜಯ ಚೆಟ್ಟಿಚ್ಚ ಪಾಲ್ಗೊಂಡಿದ್ದರು.

ಕೈಲ್ ಮುಹೂರ್ತ ಹಬ್ಬದ ಅಂಗವಾಗಿ ನಾಪೋಕ್ಲುವಿನಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಸ್ಪರ್ಧಿಯೊಬ್ಬರು ಗುರಿಇಟ್ಟರು
ಕೈಲ್ ಮುಹೂರ್ತ ಹಬ್ಬದ ಅಂಗವಾಗಿ ನಾಪೋಕ್ಲುವಿನಲ್ಲಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಸ್ಪರ್ಧಿಯೊಬ್ಬರು ಗುರಿಇಟ್ಟರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT