ಮಡಿಕೇರಿ: ಕಾಫಿನಾಡು ಕೊಡಗಿನಲ್ಲಿ ಬುಧವಾರ ಕನ್ನಡದ ಕಂಪು ಹರಡಿತ್ತು. ಕನ್ನಡದ ಬಾವುಟಗಳು ರಾರಾಜಿಸಿದವು. ಕನ್ನಡ ಗೀತೆಗಳು ಮೊಳಗಿದವು. ಎಲ್ಲೆಲ್ಲೂ ಕನ್ನಡದ ನುಡಿ ಕೇಳಿಬಂತು.
ಜಿಲ್ಲಾಡಳಿತದ ವತಿಯಿಂದ ಇಲ್ಲಿನ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯೋತ್ಸವವು ಹಲವು ವೈವಿಧ್ಯಮಯ ಕಾರ್ಯಕ್ರಮಗಳಿಂದ ಗಮನ ಸೆಳೆಯಿತು. ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಮುನ್ನುಡಿ ಬರೆದರು.
ಮೋಡಗಳ ಮರೆಯಲ್ಲಿ ಅಡಗಿದ್ದ ಸೂರ್ಯ, ಹನಿಗಳನ್ನು ತಾರದ ಮೋಡಗಳಿಂದಾಗಿ ವಿದ್ಯಾರ್ಥಿಗಳ ಕಲಾಪ್ರದರ್ಶನವು ನೇಸರ, ವರುಣರ ಅಡ್ಡಿಗಳಿಲ್ಲದೇ ಸಾಂಗವಾಗಿ ನೆರವೇರಿತು.
ಮೈಸೂರಿನ ಅಮ್ಮ ರಾಮಚಂದ್ರ ಮತ್ತು ತಂಡದವರು ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’, ‘ಎಲ್ಲಾದರು ಇರು ಎಂತಾದರು ಇರು..., ‘ಒಂದೇ ಒಂದೇ ಕರ್ನಾಟಕ ಒಂದೇ...’, ‘ಹೊತ್ತಿತೋ ಹೊತ್ತಿತು ಕನ್ನಡದ ದೀಪ..’ ಮತ್ತು ‘ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ..’ಗೀತೆಗಳನ್ನು ಹಾಡುವ ಮೂಲಕ ಕನ್ನಡದ ಕಂಪು ಹರಡಿದರು.
ಬಳಿಕ ಕ್ರೀಡಾಂಗಣದಲ್ಲಿ ಸಂತ ಮೈಕಲರ ಪ್ರೌಢಶಾಲೆ, ಸಂತ ಜೋಸೆಫರ ಪ್ರೌಢಶಾಲೆ, ರಾಜರಾಜೇಶ್ವರಿ ಪ್ರೌಢಶಾಲೆ, ಕೊಡಗು ವಿದ್ಯಾಲಯ, ಜನರಲ್ ತಿಮ್ಮಯ್ಯ ಶಾಲೆ, ಬಾಲಕರ ಬಾಲಮಂದಿರದ ವಿದ್ಯಾರ್ಥಿಗಳು ಹಾಗೂ ಸಮಾಜಕಲ್ಯಾಣ ಇಲಾಖೆಯಡಿ ನಡೆಯುತ್ತಿರುವ ಬಾಲಮಂದಿರದ ವಿದ್ಯಾರ್ಥಿನಿಯರಿಂದ ವೈವಿಧ್ಯಮಯವಾದ ನೃತ್ಯ ಪ್ರದರ್ಶನ ಕಂಡಿತು.
ಒಂದೊಂದು ತಂಡವೂ ಮತ್ತೊಂದು ತಂಡವನ್ನು ಮೀರಿಸುವಂತೆ ನೃತ್ಯ ಪ್ರದರ್ಶಿಸಿತು. ಮಾನವ ಗೋಪುರಗಳನ್ನು ನಿರ್ಮಿಸಿ, ಅದರ ಮೇಲೆ ಕನ್ನಡ ಧ್ವಜ ಏರಿಸಿ, ಬಹುಜನರ ಕರತಾಡನಕ್ಕೆ ಕಾರಣರಾದರು. ಇಡೀ ಕ್ರೀಡಾಂಗಣ ಕನ್ನಡಮಯದ ಗೀತೆಗಳು, ನೃತ್ಯಗಳಿಂದ ತುಂಬಿ ಹೋಗಿತ್ತು.
ಇದಕ್ಕೂ ಮುನ್ನ ಚೆನ್ನನಾಯಕ ಅವರ ನೇತೃತ್ವದಲ್ಲಿ ನಡೆದ ಪಥ ಸಂಚಲನದಲ್ಲಿ ಒಟ್ಟು 18 ತಂಡಗಳು ಭಾಗಿಯಾಗಿದ್ದವು. ಜಿಲ್ಲಾಸಶಸ್ತ್ರ ದಳವು ಕೆ.ಜಿ.ರಾಕೇಶ್ ಅವರ ನೇತೃತ್ವದಲ್ಲಿ ಮುಂದೆ ಸಾಗಿದರೆ, ನಾಗರಿಕ ಪೊಲೀಸ್ ತಂಡ ಈ.ಮಂಜುನಾಥ್ ನೇತೃತ್ವದಲ್ಲಿ, ಗೃಹರಕ್ಷಕ ದಳ ಕವನ್‌ಕುಮಾರ್ ಹಾಗೂ ಅರಣ್ಯ ಇಲಾಖೆ ಎಂ.ಕೆ.ಮನು ನೇತೃತ್ವದಲ್ಲಿ ಮುನ್ನಡೆಯಿತು.
ಕೊಡಗು ಸೈನಿಕ ಶಾಲೆ ನಿಶಾಂತ್ ನಾರಾಯಣ್, ಸಂತ ಜೋಸೆಫರ ಪದವಿಪೂರ್ವ ಕಾಲೇಜಿನ ಎನ್‌ಸಿಸಿ ತಂಡ ಟಿ.ಎಸ್.ವೈಭವ್, ಸರ್ಕಾರಿ ಪಿಯು ಕಾಲೇಜಿನ ಪ್ರೌಢಶಾಲೆಯ ಎನ್‌ಸಿಸಿ ದಿಶಾನ್, ಜನರಲ್ ತಿಮ್ಮಯ್ಯ ಶಾಲೆಯ ಎನ್‌ಸಿಸಿ ಯು.ಡಿ.ಮೋನಿಶ್, ಸಂತ ಮೈಕಲರ ಶಾಲೆಯ ಎನ್‌ಸಿಸಿ ಕೆ.ಪ್ರೇರಣಾ, ಸಂತ ಜೋಸೆಫರ ಪ್ರೌಢಶಾಲೆಯ ಎನ್‌ಸಿಸಿ ಬಿ.ಆರ್.ಅದಿತಿ, ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯ ಸೇವಾದಳ ಕೆ.ಕೆ.ಮೋಕ್ಷಾ, ಸಂತ ಮೈಕಲರ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯ ಸೇವಾದಳ ಎಚ್.ಆರ್.ನಮೃತ್, ಸಂತ ಮೈಕಲರ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಗೈಡ್ಸ್ ಕಲ್ಪನಾ, ಸಂತ ಜೋಸೆಫರ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಗೈಡ್ಸ್ ಎಚ್.ಎನ್.ಬೊಳ್ಳಮ್ಮ, ಜನರಲ್ ತಿಮ್ಮಯ್ಯ ಶಾಲೆಯ ಗೈಡ್ಸ್ ಕೆ.ಎಚ್.ಪುಣ್ಯಾ, ಸಂತ ಜೋಸೆಫರ ಪ್ರೌಢಶಾಲೆ ಗೈಡ್ಸ್ ಜೆ.ಆರ್.ವಂಶಿಕಾ, ಜನರಲ್ ತಿಮ್ಮಯ್ಯ ಶಾಲೆಯ ಸ್ಕೌಟ್ಸ್ ಎಂ.ಎನ್.ನೀಲಾ, ರಾಜೇಶ್ವರಿ ಪ‍್ರೌಢಶಾಲೆಯ ಸ್ಕೌಟ್ಸ್ ಎಂ.ಎಫ್.ಫಹಾದ್, ಪೊಲೀಸ್ ವಾದ್ಯಗೋಷ್ಠಿ ಎಂ.ಸಿದ್ದೇಶ್ ನೇತೃತ್ವದಲ್ಲಿ ಪಥಸಂಚಲನದಲ್ಲಿ ಹೆಜ್ಜೆ ಇಟ್ಟವು.
ಕಾರ್ಯಕ್ರಮಕ್ಕೂ ಮುನ್ನ ಕೋಟೆ ಆವರಣದಿಂದ ಸ್ತಬ್ಧ ಚಿತ್ರಗಳ ಹಾಗೂ ಕಲಾ ತಂಡಗಳ ಮೆರವಣಿಗೆಗೆ ಉಪ ವಿಭಾಗಾಧಿಕಾರಿ ಡಾ.ಯತೀಶ್ ಉಲ್ಲಾಳ್ ಚಾಲನೆ ನೀಡಿದರು. ಜಿಲ್ಲಾ ಪಂಚಾಯಿತಿ, ಕೃಷಿ, ತೋಟಗಾರಿಕೆ, ಪಶುಪಾಲನೆ, ಅರಣ್ಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ತಾಲ್ಲೂಕು ಪಂಚಾಯಿತಿ ವತಿಯಿಂದ ರೂಪಿಸಲಾದ ಸ್ತಬ್ಧ ಚಿತ್ರಗಳು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಗೊಂಬೆ ಕುಣಿತ, ಡೊಳ್ಳು ಕುಣಿತ ಮೊದಲಾದ ಕಲಾ ತಂಡಗಳು ಮೆರವಣಿಗೆಗೆ ಮೆರುಗು ತುಂಬಿದವು.
ಶಾಸಕ ಡಾ.ಮಂತರ್‌ಗೌಡ, ನಗರಸಭೆ ಅಧ್ಯಕ್ಷೆ ಎನ್.ಪಿ.ಅನಿತಾ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಮಾಜಿ ಅಧ್ಯಕ್ಷರಾದ ಟಿ.ಪಿ.ರಮೇಶ್, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ, ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ತ್ರಿಪಾಠಿ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಇದ್ದರು.
ಕನ್ನಡತನ ಅಳವಡಿಸಿಕೊಳ್ಳಿ; ಎನ್.ಎಸ್.ಭೋಸರಾಜು
ಮಡಿಕೇರಿ: ‘ಕನ್ನಡತನವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ತಿಳಿಸಿದರು. ಇಲ್ಲಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಅವರು ಮಾತನಾಡಿದರು. ಕಲೆ ಸಂಸ್ಕೃತಿ ಹಾಗೂ ರಾಜ್ಯದ ಶ್ರೀಮಂತ ಪರಂಪರೆಯನ್ನು ರಕ್ಷಿಸುವ ಮತ್ತು ಉತ್ತೇಜಿಸುವ ಬದ್ಧತೆಯನ್ನು ಸರ್ಕಾರ ಹೊಂದಿದೆ ಎಂದು ಹೇಳಿದರು. ಉಳಿದ ತಮ್ಮ ಭಾಷಣದ ಬಹುಭಾಗದಲ್ಲಿ ಅವರು ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಕುರಿತೇ ಹೆಚ್ಚು ಮಾತನಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.