ಕೊಡವರು ಆಸ್ತಿ ಮಾರಾಟ ಮಾಡದಿರಿ

7
ಪುತ್ತರಿ ಊರೊರ್ಮೆ ಸಂತೋಷ ಕೂಟದಲ್ಲಿ ಕ್ರೀಡಾಪಟು ಅರ್ಜುನ್ ದೇವಯ್ಯ ಸಲಹೆ

ಕೊಡವರು ಆಸ್ತಿ ಮಾರಾಟ ಮಾಡದಿರಿ

Published:
Updated:
Deccan Herald

ಮಡಿಕೇರಿ: ಹಿರಿಯರು ಬೆಳೆಸಿದ ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸಿ ಮುಂದಿನ ಜನಾಂಗಕ್ಕೆ ಬಳುವಳಿಯಾಗಿ ಕೊಡಬೇಕಾದ ಜವಾಬ್ದಾರಿ ಆಯಾ ಸಮಾಜಗಳ ಮುಖಂಡರು ತೆಗೆದುಕೊಳ್ಳಬೇಕು' ಎಂದು ಕ್ರೀಡಾಪಟು ಅರ್ಜುನ್ ದೇವಯ್ಯ ಸಲಹೆ ನೀಡಿದರು.

ನಗರದ ಕೊಡವ ಸಮಾಜದಲ್ಲಿ ಭಾನುವಾರ ಪುತ್ತರಿ ಊರೊರ್ಮೆ ಸಂತೋಷ ಕೂಟದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಯಾವ ದೇಶ ತನ್ನ ಸಂಸ್ಕೃತಿ ಮರೆಯುತ್ತಿದೆಯೋ ಆ ದೇಶ ನಾಶವಾಗುತ್ತಿದೆ. ಸಂಸ್ಕೃತಿ ಇರುವುದಿಲ್ಲವೋ ಜನಾಂಗ ಪತನವಾಗುತ್ತದೆ. ನಮ್ಮ ಸಂಸ್ಕೃತಿ, ಸಂಸ್ಕಾರ ಮತ್ತೊಬ್ಬರ ಮನಸ್ಸಿಗೆ ಮೆಚ್ಚುಗೆಯಾಗುವ ರೀತಿಯಲ್ಲಿರಬೇಕು ಎಂದು ಸಲಹೆ ನೀಡಿದರು.

ಯಾರನ್ನು ಸೋಲಿಸಲು ಪ್ರಯತ್ನಿಸಬಾರದು. ಬದಲಿಗೆ ತಾನು ಗೆಲುವು ಸಾಧಿಸಲು ಪ್ರಯತ್ನಿಸಬೇಕು. ಹೀಗಾದಾಗ ಯಾರ ನಡುವೆಯೂ ದ್ವೇಷ ಹುಟ್ಟಿಕೊಳ್ಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಿಸಿದರು.

'ಕೊಡವರಂತಹ ಸಂಸ್ಕೃತಿಯನ್ನು ಮತ್ತೊಂದು ಜನಾಂಗದಲ್ಲಿ ಕಾಣಲು ಸಾಧ್ಯವೇ ಇಲ್ಲ. ಕೊಡವರು ತಮ್ಮ ಆಸ್ತಿಯನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡಬಾರದು. ಆಸ್ತಿ ಕಳೆದುಕೊಂಡರೆ ಅಸ್ತಿತ್ವವೇ ನಾಶವಾಗಲಿದೆ' ಎಂದು ಅರ್ಜುನ್ ದೇವಯ್ಯ ಎಚ್ಚರಿಸಿದರು.

ಮಡಿಕೇರಿ ಕೊಡವ ಸಮಾಜ ಅಧ್ಯಕ್ಷ ಕೊಂಗಂಡ ಎಸ್ ದೇವಯ್ಯ ಮಾತನಾಡಿ, ‘ಪ್ರಕೃತಿ ವಿಕೋಪದಿಂದಾಗಿ ಅದೆಷ್ಟೋ ಕೊಡವ ಜನಾಂಗದವರು ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಮುಂದೆಂದೂ ಕೊಡಗಿನಲ್ಲಿ ಈ ರೀತಿಯ ಘಟನೆ ಸಂಭವಿಸದಿರಲಿ’ ಎಂದು ಆಶಿಸಿದರು.

ಕೂಟದಲ್ಲಿ ಪ್ರಕೃತಿ ವಿಕೋಪದಲ್ಲಿ ಮಡಿದವರಿಗೆ ಸಂತಾಪ ಸೂಚಿಸಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಕೊಡವ ಸಮಾಜದ ಸದಸ್ಯರ ಮಕ್ಕಳಿಗೆ ಅರ್ಜುನ್ ದೇವಯ್ಯ ಪ್ರೋತ್ಸಾಹ ಧನ ವಿತರಿಸಿದರು.

ಕೊಡವ ಸಮಾಜ ಉಪಾಧ್ಯಕ್ಷ ಮಣವಟ್ಟಿರ ಚಿಣ್ಣಪ್ಪ, ಕೊಡವ ಮಕ್ಕಡ ಕೂಟ ಹಾಗೂ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಪದಾಧಿಕಾರಿಗಳು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !