ಸೋಮವಾರ, ನವೆಂಬರ್ 30, 2020
23 °C
ಮುಖ್ಯಮಂತ್ರಿ‌ ಬಿ.ಎಸ್. ಯಡಿಯೂರಪ್ಪ‌ ಒಪ್ಪಿಗೆ, ದಸರಾ ಸಮಿತಿ ಸದಸ್ಯರ ಹರ್ಷ

ಮಡಿಕೇರಿ ದಸರಾಕ್ಕೆ ₹1 ಕೋಟಿ ಅನುದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾಕ್ಕೆ ₹1 ಕೋಟಿ ಅನುದಾನ ನೀಡುವಂತೆ ದಸರಾ ಸಮಿತಿ ಸದಸ್ಯರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ್ದು, ಮುಖ್ಯಮಂತ್ರಿಯಿಂದಲೂ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ.

ಬೆಂಗಳೂರಿನಲ್ಲಿ ಗುರುವಾರ ಮುಖ್ಯಮಂತ್ರಿಯನ್ನು ಭೇಟಿಯಾದ ಮಡಿಕೇರಿ ನಗರ ದಸರಾ ಸಮಿತಿ ನಿಯೋಗವು ₹1 ಕೋಟಿ ಮೊತ್ತದ ಪ್ರಸ್ತಾವವನ್ನು ಮುಂದಿಟ್ಟು ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು.

ಈ ಮನವಿಗೆ ಸ್ಪಂದಿಸಿದ ಯಡಿಯೂರಪ್ಪ, ಅನುದಾನ ನೀಡುವಂತೆ ಸಂಬಂಧಪಟ್ಟ ಇಲಾಖೆಗೆ ಸೂಚಿಸಿದ್ದಾರೆ. ಸರ್ಕಾರದಿಂದ ಅನುದಾನ ಸಿಕ್ಕಿರುವ ವಿಚಾರ ಸದಸ್ಯರಲ್ಲಿ ಆಶಾಭಾವನೆ ಮೂಡಿಸಿದೆ.

ಇನ್ನು ಗೋಣಿಕೊಪ್ಪಲು ದಸರಾಕ್ಕೂ ಈ ಬಾರಿ ₹30 ಲಕ್ಷ ಅನುದಾನವನ್ನು ಶಾಸಕ ಕೆ.ಜಿ.ಬೋಪಯ್ಯ ಅವರ ಮೂಲಕ ನೀಡಲಾಗುವುದು ಎಂದು ಬಿ.ಎಸ್‌. ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಕಳೆದ ಮೂರು ವರ್ಷಗಳಿಂದ ಘೋಷಣೆ ಮಾಡಿದಷ್ಟು ಅನುದಾನವೂ ಸಮಿತಿಗೆ ಬಿಡುಗಡೆಯಾಗದೆ ಸಮಸ್ಯೆ ತಲೆದೋರಿತ್ತು. ಈ ಬಾರಿ ಮೊದಲೇ ಎಚ್ಚೆತ್ತುಕೊಂಡಿರುವ ಸಮಿತಿ ಸದಸ್ಯರು ಹೆಚ್ಚಿನ ಅನುದಾನಕ್ಕೆ ಮನವಿ ಮಾಡಿದ್ದಾರೆ.

ಮಡಿಕೇರಿ ದಸರಾ ಸಮಿತಿ ನಿಯೋಗದಲ್ಲಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ವಿಧಾನಪರಿಷತ್ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ, ದಸರಾ ಸಮಿತಿ ಅಧ್ಯಕ್ಷ ರಾಬಿನ್ ದೇವಯ್ಯ, ಪ್ರಧಾನ ಕಾರ್ಯದರ್ಶಿ ಬಿ.ಕೆ.ಜಗದೀಶ್, ಉಪಾಧ್ಯಕ್ಷ ನೆರವಂಡ ಜೀವನ್, ಖಜಾಂಚಿ ಉಮೇಶ್ ಸುಬ್ರಹ್ಮಣ್ಯ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಆರ್.ಬಿ. ರವಿ ಇದ್ದರು.

ದಸರಾಕ್ಕೆ ಸರ್ಕಾರ ನೀಡುವ ಅನುದಾನ ನೋಡಿಕೊಂಡು ಸರಳವಾಗಿ ಆಚರಿಸಬೇಕೇ ಅಥವಾ ವಿಜೃಂಭಣೆಯಿಂದ ಅಚರಿಸಬೇಕೇ ಎನ್ನುವ ಚಿಂತನೆಯಲ್ಲಿದ್ದ ಸಮಿತಿ ಸದಸ್ಯರಿಗೆ ನಿರೀಕ್ಷೆಯಂತೆ ಅನುದಾನ ಲಭ್ಯವಾಗಿದೆ.

ದಸರಾಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ದಸರಾ ಮಂಟಪಗಳ ಸಿದ್ಧತೆಗೆ ಸರ್ಕಾರದಿಂದ ಇದುವರೆಗೂ ಒಂದು ರೂಪಾಯಿ ಅನುದಾನ ಲಭ್ಯವಾಗಿಲ್ಲ ಎಂದು ಮಡಿಕೇರಿ ದಸರಾ ದಶಮಂಟಪ ಸಮಿತಿಯು ಸಭೆಗಳಲ್ಲಿ ಆರೋಪ ಮಾಡಿತ್ತು. ಈ ಬಗ್ಗೆ ಎಚ್ಚೆತ್ತ ಜಿಲ್ಲೆಯ ಶಾಸಕರ ಉಪಸ್ಥಿತಿಯಲ್ಲಿ ಅನುದಾನಕ್ಕಾಗಿ ನಿಯೋಗವನ್ನು ರಚಿಸಲಾಗಿತ್ತು.

ಪ್ರಕೃತಿ ವಿಕೋಪಕ್ಕೂ ಮೊದಲೂ ಸರ್ಕಾರ ಬಿಡುಗಡೆ ಮಾಡುತ್ತಿದ್ದ ಅನುದಾನ ಹಾಗೂ ಸಾರ್ವಜನಿಕರು ನೀಡುತ್ತಿದ್ದ ದೇಣಿಗೆ ಸೇರಿಸಿ ಸಮಿತಿಯವರು ವಿಜೃಂಭಣೆಯ ದಸರಾ ನಡೆಸುತ್ತಿದ್ದರು. ಆದರೆ, ಪ್ರಸಕ್ತ ವರ್ಷ ಯಾವ ಸಮಿತಿ ಬಳಿಯಲ್ಲೂ ಹಣವಿಲ್ಲ. ಮಳೆಯಿಂದ ಪ್ರವಾಸೋದ್ಯಮ ನೆಲಕಚ್ಚಿದ್ದು, ಉದ್ಯಮಿಗಳು ನೆರವು ನೀಡಲು ಮುಂದೆ ಬರುತ್ತಿಲ್ಲ.

ಕಳೆದ ಭಾರಿ ಅನುದಾನ ಇಲ್ಲದ ಕಾರಣ ಬಹುತೇಕ ದೇವಸ್ಥಾನ ಸಮಿತಿಯವರು ಡಿ.ಜೆ ಕೈಬಿಟ್ಟು ಒಂದು ಟ್ರಾಕ್ಟರ್‌ನಲ್ಲಿ ಕಲಾಕೃತಿಗಳನ್ನು ಅಳವಡಿಸಿದ್ದರು. ಈ ಭಾರಿ ವ್ಯವಸ್ಥಿತವಾಗಿ ನಡೆಸುವ ಬಗ್ಗೆ ಸದಸ್ಯರು ತೀರ್ಮಾನಿಸಿದ್ದಾರೆ.

ವೈಭವದ ದಸರಾ ನಿರೀಕ್ಷೆಯಲ್ಲಿ ಜನ

ಕಳೆದ ಎರಡು ವರ್ಷಗಳಲ್ಲಿ ನಗರದ ಗಾಂಧಿ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಮಹಿಳಾ ದಸರಾ, ಮಕ್ಕಳ ದಸರಾ, ಯುವ ದಸರಾ ನಡೆಯುತ್ತಿದ್ದವು. ರಾಜ್ಯದ ನಾನಾ ಕಡೆಯಿಂದ ಬಂದ ಕಲಾವಿದರು ಪ್ರದರ್ಶನ ನೀಡುತ್ತಿದ್ದರು. ಈ ಭಾರಿ ಮತ್ತೆ ದಸರಾ ವೈಭವ ಕಳೆಕಟ್ಟಬಹುದು ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ.

ದಸರಾ ನಿಮಿತ್ತ ಭರ್ಜರಿ ವ್ಯಾಪಾರ

ದಸರಾ ವೇಳೆ ಮಡಿಕೇರಿ ಪ್ರವಾಸಿ ತಾಣಗಳು ತುಂಬಿರುತ್ತಿದ್ದವು. ಆದರೆ, ಭೂಕುಸಿತ ಹಾಗೂ ಮಹಾಮಳೆಗೆ ಹೆದರಿರುವ ಪ್ರವಾಸಿಗರು ಜಿಲ್ಲೆಯತ್ತ ಮುಖ ಮಾಡಿರಲಿಲ್ಲ. ರೆಸಾರ್ಟ್‌, ಹೋಟೆಲ್‌, ಹೋಂಸ್ಟೇ ಉದ್ಯಮಕ್ಕೆ ಪೆಟ್ಟು ಬಿದ್ದಿತ್ತು. ಇದೀಗ ಈ ಭಾರಿಯ ದಸರಾ ಆಚರಣೆಯಿಂದ ಚೇತರಿಕೆ ಕಾಣುವ ಆಶಾಭಾವನೆಯಲ್ಲಿ ವ್ಯಾಪಾರಸ್ಥರು ಕೂಡ ಇದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.