ಮಂಗಳವಾರ, ಮಾರ್ಚ್ 9, 2021
30 °C
ನಾಪೋಕ್ಲು

ಕೊಡಗು: ಮುಂಗಾರು ಪೂರ್ವ ಮಳೆಗೆ ಅರಳಿದ ಹೂಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪ್ರಜಾವಾಣಿ ವಾರ್ತೆ

ನಾಪೋಕ್ಲು: ಬಿರು ಬೇಸಿಗೆಯಲ್ಲಿ ಮಳೆ ಸುರಿದು ನೆಲ ತಂಪಾದಾಗ ನೆಲದೊಳಗಿನಿಂದ ಗಡ್ಡೆಗಳು ಮೊಳಕೆಯೊಡೆದು ಚಿಗುರಿ ಹೂಗಳರಳುತ್ತವೆ. ಅರಳಿದ ಹೂಗಳ ಸೌಂದರ್ಯ ಮನಸೆಳೆಯುತ್ತವೆ. ನಾಪೋಕ್ಲು ವ್ಯಾಪ್ತಿಯಲ್ಲಿ ಕೆಲವು ದಿನಗಳಿಂದ ಮಳೆ ಸುರಿಯುತ್ತಿದ್ದು ನೆಲ ತಂಪಾಗಿದೆ. ತಂಪಾದ ನೆಲದಿಂದ ಮೂಡಿದ ಗಿಡಗಳು ಕೃಷಿಕರ ಮನೆಯಂಗಳದಲ್ಲಿ ಚೆಲುವು ಬೀರಿವೆ.

ಸಸ್ಯ ಜೀವನ ವಿಧಾನದಲ್ಲಿ ಹೂ ಬಿಡುವುದು ಸಾಮಾನ್ಯ ಪ್ರಕ್ರಿಯೆ. ಕೆಲವು ಚಳಿಗಾಲದಲ್ಲಿ ಅರಳಿದರೆ ಹಲವು ಮಳೆಗಾಲದಲ್ಲಿ ಅರಳುತ್ತವೆ. ಅಂತೆಯೇ, ಮಳೆಗಾಲಕ್ಕೆ ಮುನ್ನ ಅರಳುವ ಹೂಗಳೂ ಸಾಕಷ್ಟಿವೆ. ಅಂಗಳದಲ್ಲಿ, ಮನೆಯ ಹಿತ್ತಲಲ್ಲಿ, ಗದ್ದೆಗಳಲ್ಲಿ, ಬೇಲಿಗಳಲ್ಲಿ ಅರಳಿ ಸೌಂದರ್ಯಾಸಕ್ತರನ್ನು ಸೆಳೆಯುತ್ತವೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಕಾಣಿಸಿಕೊಳ್ಳುವ ಪುಷ್ಪಗಳಲ್ಲಿ ಲಿಲ್ಲಿ ಮತ್ತು ಸೀತಾಳೆ ಪ್ರಮುಖವಾದವುಗಳು. ಒತ್ತೊತ್ತಾದ ಗಿಡಸಮೂಹದಲ್ಲಿ ನೆಲದಿಂದ ಒಂದಡಿ ಎತ್ತರದಲ್ಲಿ ಅರಳುವ ಲಿಲ್ಲಿ ಕೇಸರಿ ಮತ್ತು ಬಿಳಿ ವರ್ಣದಲ್ಲಿ ಕಂಗೊಳಿಸುತ್ತದೆ. ದಾಸವಾಳ ಹೂ ಗಾತ್ರದ ಹೂ ಹಿಂಡಿನಲ್ಲಿ ನಾಲ್ಕೈದಾಗಿ ಅರಳಿಕೊಳ್ಳುತ್ತದೆ. ಮಳೆಗಾಲದ ಆರಂಭಿಕ ದಿನಗಳಲ್ಲಿ ಕಾಣಿಸಿಕೊಂಡ ಬಳಿಕ ಇದು ಗಿಡ ಸಹಿತ ಮಾಯವಾಗುತ್ತದೆ.

ಸೀತೆ ಹೂ, ಕಾಬಾಳೆ, ರಥಪುಷ್ಪ, ಸುಗಂಧಿ ಇವು ವರ್ಷಾಕಾಲದಲ್ಲಿ ಅರಳುವ ಇನ್ನಿತರ ಹೂಗಳು. ವರ್ಷಪೂರ್ತಿ ಬೆಳೆಯುವ, ಬೆಳೆಸುವ ಹೂಗಳಿದ್ದರೂ ಮಳೆಗಾಲದ ಆರಂಭದಲ್ಲಿ ಅರಳುವ ಹೂಗಳ ಸೌಂದರ್ಯವೇ ಬೇರೆ. ಮಳೆಯಿಂದಾಗಿ ಇಂತಹ ಕೆಲವು ಹೂಗಳು ಅರಳಿ ಇದೀಗ ಸೌಂದರ್ಯದಿಂದ ಕಣ್ಮನ ಸೆಳೆಯುತ್ತಿವೆ.

 

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು