ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು: ಆಲಿಕಲ್ಲು ಮಳೆಗೆ ಅಪಾರ ಹಾನಿ

Last Updated 20 ಫೆಬ್ರುವರಿ 2021, 21:52 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯ ಶನಿವಾರಸಂತೆ ವ್ಯಾಪ್ತಿಯಲ್ಲಿ ಶುಕ್ರವಾರ ಸುರಿದ ಆಲಿಕಲ್ಲು ಸಹಿತ ಮಳೆಯಿಂದ ಅಪಾರ ಹಾನಿಯಾಗಿದ್ದು, ರೈತರು ಕಂಗಾಲಾಗಿದ್ದಾರೆ. ಬೆಳೆಗಳು ನೆಲಕಚ್ಚಿವೆ. ಕೃಷಿ, ತೋಟಗಾರಿಕೆ ಹಾಗೂ ಕಾಫಿ ಮಂಡಳಿಯ ಅಧಿಕಾರಿಗಳು ಶನಿವಾರ ಸ್ಥಳಕ್ಕೆ ಭೇಟಿ ನೀಡಿ, ಸಮೀಕ್ಷೆ ನಡೆಸಿದರು.

ಅಂಕನಹಳ್ಳಿ, ಗಂಗಾವರ, ಸೀಗೆಮರೂರು, ಮೆಣಸ, ಬೆಟ್ಟದಳ್ಳಿ, ಮನೆಹಳ್ಳಿ, ನಾಗವಾರ, ಮೈಲಾಪುರ, ಬಡುಬನಹಳ್ಳಿ, ಅಮ್ಮಳ್ಳಿ, ನಿಡ್ತ, ದೊಡ್ಡಳ್ಳಿ, ಮುಳ್ಳೂರು, ಸಿಡಿಗಳಲೆ, ಕೈಸರವಳ್ಳಿ ಗ್ರಾಮಗಳಲ್ಲಿ 1,450 ಎಕರೆ ಕಾಫಿ, 400 ಎಕರೆ ಕಾಳುಮೆಣಸು ಹಾಗೂ 198 ಎಕರೆಯಲ್ಲಿ ಬೆಳೆದ ಅಡಿಕೆ ನಷ್ಟವಾಗಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

155 ಎಕರೆ ಜೋಳ, 123 ಎಕರೆ ಹಸಿರು ಮೆಣಸಿನಕಾಯಿ, 95 ಎಕರೆ ಬಾಳೆ, 129 ಎಕರೆ ಶುಂಠಿ , 112 ಎಕರೆಯಲ್ಲಿ ಬೆಳೆದ ಸಿಹಿಗೆಣಸು ಹಾಳಾಗಿದೆ.

ಆಲಿಕಲ್ಲಿನ ಹೊಡೆತಕ್ಕೆ ಕಾಳುಮೆಣಸು ಬಳ್ಳಿ, ಹಸಿರು ಮೆಣಸಿನಕಾಯಿ ಗಿಡಗಳು ನೆಲಕಚ್ಚಿವೆ. ಅಂಕನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಚಾವಣಿಗೆ ಹಾನಿಯಾಗಿದೆ. ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ನಡೆಸಿರುವ ಪ್ರಾಥಮಿಕ ಸಮೀಕ್ಷೆಯ ಪ್ರಕಾರ, ಚಾಮರಾಜನಗರ ಜಿಲ್ಲೆಯಲ್ಲಿ 600 ಎಕರೆ ಬಾಳೆ ನಾಶವಾಗಿದೆ. ಅಂದಾಜು ₹ 3 ಕೋಟಿ ಹಾನಿಯಾಗಿದೆ. 60ಕ್ಕೂ ಹೆಚ್ಚು ತೆಂಗಿನ ಮರಗಳು ಬಿದ್ದಿದ್ದು, ಈರುಳ್ಳಿ ಬೆಳೆಗೂ ಹಾನಿಯಾಗಿದೆ.

ಹಾಸನ ಜಿಲ್ಲೆಯ ಅರಕಲಗೂಡು, ಸಕಲೇಶಪುರ ಹಾಗೂ ಬೇಲೂರು ತಾಲ್ಲೂಕಿನಲ್ಲಿ ಕಾಫಿ, ಮೆಣಸು ಹಾಗೂ ತರಕಾರಿ ಬೆಳೆಗಳು ಅಪಾರ ಪ್ರಮಾಣದಲ್ಲಿ ಹಾನಿಗೀಡಾಗಿದ್ದು, ನಷ್ಟದ ಅಂದಾಜು ಸಿಕ್ಕಿಲ್ಲ. ಚಿಕ್ಕಮಗಳೂರು ಭಾಗದಲ್ಲಿ ಒಣಗಲು ಹಾಕಿದ್ದ ಕಾಫಿ ಕೊಚ್ಚಿಕೊಂಡು ಹೋಗಿದ್ದು, ನಷ್ಟದ ಅಂದಾಜು ತಿಳಿದುಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT