ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ದಿನ ಕೊಡಗು ‘ಲಾಕ್‌ಡೌನ್‌’

ಹಾಲು, ದಿನಪತ್ರಿಕೆ ಖರೀದಿಗೆ ಬೆಳಿಗ್ಗೆ 6ರಿಂದ 9 ಗಂಟೆಯ ತನಕ ಮಾತ್ರ ಅವಕಾಶ
Last Updated 17 ಜುಲೈ 2020, 13:38 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲೂ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು ಅದರ ನಿಯಂತ್ರಣಕ್ಕೆ ಜಿಲ್ಲಾಡಳಿತವು ವಾರಾಂತ್ಯದ ‘ಲಾಕ್‌ಡೌನ್’‌ಗೆ ಮೊರೆ ಹೋಗಿದೆ.

ಜಿಲ್ಲೆಯಲ್ಲಿ ಶುಕ್ರವಾರ ಸಂಜೆ 6ಕ್ಕೆ ಎಲ್ಲ ಅಂಗಡಿಗಳು ಬಾಗಿಲು ಮುಚ್ಚಿದ್ದು ಇನ್ನು ಸೋಮವಾರ ಬೆಳಿಗ್ಗೆ ತರೆಯಲಿವೆ. ಅಗತ್ಯ ವಸ್ತುಗಳ ಮಾರಾಟ ಅಂಗಡಿಗಳಿಗೆ ವಿನಾಯಿತಿ ಇದ್ದು ಅವುಗಳಿಗೂ ಸಮಯ ನಿಗದಿ ಪಡಿಸಲಾಗಿದೆ. ಜಿಲ್ಲೆಯಲ್ಲಿ ಶನಿವಾರ ಹಾಗೂ ಭಾನುವಾರ ಪೂರ್ಣ ಪ್ರಮಾಣದ ‘ಲಾಕ್‌ಡೌನ್’‌ ಇರಲಿದೆ.

ಆಸ್ಪತ್ರೆ, ಮೆಡಿಕಲ್‌ ಶಾಪ್, ಫಾರ್ಮಸಿ, ಲ್ಯಾಬ್, ಡಯಾಲಿಸಿಸ್ ಸೇರಿದಂತೆ ವೈದ್ಯಕೀಯ ಸೇವೆಗಳನ್ನು ನೀಡುವ ಕೇಂದ್ರಗಳು ಹಾಗೂ ಪೆಟ್ರೋಲ್ ಬಂಕ್‌ಗಳು 24X7 ತೆರೆಯಬಹುದು. ಪಡಿತರ ವಿತರಿಸುವ ಸರ್ಕಾರಿ ನ್ಯಾಯಬೆಲೆ ಅಂಗಡಿಗಳನ್ನು ನಿಗದಿತ ಅವಧಿಯಂತೆ ತೆರೆಯಬಹುದು ಎಂದು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ತಿಳಿಸಿದರು.

ಹಾಲು, ದಿನಪತ್ರಿಕೆಗಳ ವಿತರಣೆ ಹಾಗೂ ಖರೀದಿಗೆ ಬೆಳಿಗ್ಗೆ 6ರಿಂದ ಬೆಳಿಗ್ಗೆ 9 ಗಂಟೆತ ತನಕ ಮಾತ್ರ ಅವಕಾಶವಿದೆ. ಜಿಲ್ಲೆಯ ಒಳಗೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇರುವುದಿಲ್ಲ. ತುರ್ತು, ವೈದ್ಯಕೀಯ, ಅತ್ಯವಶ್ಯಕ, ಸರಕು ಸಾಗಾಣಿಕೆ ಮತ್ತು ಸರ್ಕಾರಿ, ಕೋವಿಡ್ 19 ಕರ್ತವ್ಯ ನಿಮಿತ್ತ ಸಂಚರಿಸುವ ವಾಹನಗಳ ಹೊರತಾಗಿ ಉಳಿದಂತೆ ಯಾವುದೇ ರೀತಿಯ ವಾಹನಗಳ ಸಂಚಾರಕ್ಕೆ ಅವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ತುರ್ತು, ವೈದ್ಯಕೀಯ, ಕೋವಿಡ್ ಹಾಗೂ ಕಚೇರಿ ಕರ್ತವ್ಯ ನಿಮಿತ್ತ ಅಧಿಕಾರಿ, ಸಿಬ್ಬಂದಿಗಳ ಸಂಚಾರ ಹೊರತು ಪಡಿಸಿ ಉಳಿದಂತೆ ಎಲ್ಲಾ ರೀತಿಯ ಚಟುವಟಿಕೆಗಳನ್ನು ಮತ್ತು ವ್ಯಕ್ತಿಗಳ ಸಂಚಾರವನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ. ಪ್ರಸ್ತುತ ಮಡಿಕೇರಿಯ ಸೇಂಟ್ ಮೈಕಲರ ಶಾಲೆಯಲ್ಲಿ ನಡೆಯುತ್ತಿರುವ ಎಸ್ಸೆಸ್ಸೆಲ್ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ನಿರತ ಅಧಿಕಾರಿ, ಸಿಬ್ಬಂದಿಗಳು ಸಂಬಂಧಪಟ್ಟ ಕಚೇರಿ ಅಥವಾ ಇಲಾಖೆಯಿಂದ ನೀಡಿದ ಗುರುತಿನ ಚೀಟಿಯನ್ನು ಹೊಂದಿರುವುದು ಮತ್ತು ತಪಾಸಣೆ ವೇಳೆ ಹಾಜರುಪಡಿಸಬೇಕು ಎಂದು ಸೂಚಿಸಿದ್ದಾರೆ.

ಕಚೇರಿ ಕಾರ್ಯನಿರತ ಅಧಿಕಾರಿ, ಸಿಬ್ಬಂದಿಗಳು ಸಂಬಂಧಪಟ್ಟ ಕಚೇರಿಯಿಂದ ನೀಡಿದ ಗುರುತಿನ ಚೀಟಿಯನ್ನು ಜೊತೆಯಲ್ಲಿ ಇರಿಸಿಕೊಂಡು, ತಪಾಸಣೆ ವೇಳೆ ಕಡ್ಡಾಯವಾಗಿ ಹಾಜರು ಪಡಿಸಬೇಕು. ಪೂರ್ವ ನಿಗದಿಯಾಗಿದ್ದ ಮದುವೆ ಕಾರ್ಯಕ್ರಮಗಳನ್ನು ನಡೆಸುವುದಿದ್ದಲ್ಲಿ ಸಂಬಂಧಪಟ್ಟ ಗ್ರಾಮ ಪಂಚಾಯ್ತಿ, ನಗರ ಸ್ಥಳೀಯ ಸಂಸ್ಥೆಯಿಂದ ಪಡೆದ ಪೂರ್ವಾನುಮತಿ ಮೇರೆಗೆ ಗರಿಷ್ಠ 50 ಮಂದಿ ಮೀರದಂತೆ ಅಂತರ ಕಾಯ್ದುಕೊಂಡು ನಡೆಸಬಹುದು. ಮೇಲಿನ ವಿನಾಯಿತಿ ಹೊರತಾಗಿ ಉಳಿದಂತೆ ಯಾವುದೇ ಚಟುವಟಿಕೆಗಳು ಇರುವುದಿಲ್ಲ. ಈ ಬಗ್ಗೆ ಸಂಬಂಧಪಟ್ಟ ಕಾರ್ಯ ವ್ಯಾಪ್ತಿಯ ಪೊಲೀಸ್, ಗ್ರಾಮ ಪಂಚಾಯ್ತಿ, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ನಿಯಮಾನುಸಾರ ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಕೊರೊನಾ ನಿಯಂತ್ರಣಕ್ಕೆ ಧನ್ವಂತರಿ ಯಾಗದ ಮೊರೆ:

ಜಿಲ್ಲಾ ಬ್ರಾಹ್ಮಣರ ಸಂಘದ ವತಿಯಿಂದ ಮೂರ್ನಾಡು ಗಾಂಧಿನಗರದ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಕೊರೊನಾ ರೋಗ ನಿಯಂತ್ರಣ ಹಾಗೂ ರೋಗಕ್ಕೆ ಶೀಘ್ರ ಉತ್ತಮ ಔಷಧಿ ದೊರೆಯಲಿ ಎಂದು ಪ್ರಾರ್ಥಿಸಿ ಧನ್ವಂತರಿ ಯಾಗ ನಡೆಸಲಾಯಿತು.

ಸಂಘದ ಅಧ್ಯಕ್ಷ ಡಾ.ಮಹಾಭಲೇಶ್ವರ್ ಭಟ್ ಅವರ ಅಧ್ಯಕ್ಷತೆಯಲ್ಲಿ ವಿಶೇಷ, ಪೂಜೆ, ಪುನಸ್ಕಾರ, ಹೋಮಗಳು ಜರುಗಿದವು.ಪೊನ್ನಂಪೇಟೆಯ ಜನಾರ್ಧನ್ ಭಟ್, ಮೂರ್ನಾಡಿನ ವಿಘ್ನೇಶ್ ಭಟ್, ಅಮಿತ್ ಭಟ್ ಹಾಗೂ ಬಿಳಿಗೇರಿಯ ಸುಬ್ರಮಣ್ಯ ಭಟ್ ಹೋಮ ನಡೆಸಿಕೊಟ್ಟರು.

ಸಂಘದ ಕಾರ್ಯದರ್ಶಿ ಕೆ.ಎಸ್.ರಾಮ್‍ಭಟ್, ಖಜಾಂಚಿ ಎಚ್.ಆರ್.ಮುರುಳಿಭಟ್, ಸದಸ್ಯರಾದ ಎಂ.ಜಿ.ಮಾಧವರಾಜ್, ಎಂ.ಪಿ.ಶ್ರೀನಿವಾಸ್, ಎಂ.ಜಿ.ನಾರಾಯಣರಾವ್, ಎಂ.ಎಂ.ವಿಜಯ ಕುಮಾರ್, ಎಂ.ಎಂ.ಸುರೇಶ್ ಕುಮಾರ್, ನಟರಾಜ್ ಭಟ್, ರಾಘವೇಂದ್ರ ಹಾಜರಿದ್ದರು.

ಮತ್ತೆ 13 ಮಂದಿಗೆ ಸೋಂಕು:

ಜಿಲ್ಲೆಯಲ್ಲಿ ಮತ್ತೆ 13 ಮಂದಿಗೆ ಸೋಂಕು ತಗುಲಿರುವುದು ವೈದ್ಯಕೀಯ ವರದಿಯಿಂದ ದೃಢಪಟ್ಟಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 252ಕ್ಕೆ ಏರಿಕೆಯಾಗಿದೆ. 141 ಮಂದಿಗೆ ಇದುವರೆಗೂ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಸದ್ಯಕ್ಕೆ 107 ಸಕ್ರಿಯ ಪ್ರಕರಣಗಳಿವೆ. ಹೊಸದಾಗಿ ಮಡಿಕೇರಿಯ ಭಗವತಿ ನಗರ, ಚೌಡೇಶ್ವರಿ ನಗರ, ಮಹದೇವಪೇಟೆ ಹಾಗೂ ತಾಲ್ಲೂಕಿನ ಹೆಬ್ಬಟ್ಟಗೇರಿಯಲ್ಲಿ ನಿಯಂತ್ರಿತ ವಲಯ ತೆರೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT