ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು: ಮನೆಯಂಗಳದಲ್ಲಿ ಸುಂದರ ಉದ್ಯಾನ

ಲಾಕ್‌ಡೌನ್‌ ವೇಳೆ ಉದ್ಯಾನ ನಿರ್ಮಿಸಿದ ಚಿಕ್ಕಕೊಳತ್ತೂರಿನ ಸಿ.ಎಸ್‌.ಸತೀಶ್‌
Last Updated 7 ಜೂನ್ 2020, 9:39 IST
ಅಕ್ಷರ ಗಾತ್ರ

ಶನಿವಾರಸಂತೆ: ಸಮೀಪದ ಚಿಕ್ಕಕೊಳತ್ತೂರು ಗ್ರಾಮದ ನಿವಾಸಿ, ಶಿಕ್ಷಕ ಸಿ.ಎಸ್.ಸತೀಶ್ ಅವರು ತಮ್ಮ ಮನೆ ಅಂಗಳದಲ್ಲಿ ಸುಂದರ ಉದ್ಯಾನವನ್ನು ನಿರ್ಮಿಸಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ.

ಸತೀಶ್ ಮುಳ್ಳೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕರಾಗಿದ್ದು, ಲಾಕ್‌ಡೌನ್‌ ಸಂದರ್ಭದಲ್ಲಿ ರಜೆ ನೀಡಲಾಗಿತ್ತು. ಈ ಅವಧಿಯನ್ನು ಸಮರ್ಪಕವಾಗಿ ಬಳಸಿಕೊಂಡ ಅವರು, ತಮ್ಮ ಮನೆಯ ಅಂಗಳದ ಹೂದೋಟ, ಹಿತ್ತಲಿನ ಕಾಫಿ, ತರಕಾರಿ ತೋಟದಲ್ಲಿ ತ್ಯಾಜ್ಯ ವಸ್ತುಗಳನ್ನು ಉಪಯೋಗಿಸಿಕೊಂಡು ಉದ್ಯಾನವನ್ನು ನಿರ್ಮಿಸಿದ್ದಾರೆ.

ಹೆಂಚಿನ ಮನೆಯ ಹೊಂಗೆ ಮರದಡಿಯ ಗೇಟ್ ತೆರೆದು ಒಳಗೆ ಹೋಗುತ್ತಿದ್ದಂತೆ ಎಡಭಾಗದಲ್ಲಿ ಕಿರಿದಾದ ತಾವರೆಕೊಳ, ಕಿರು ಜಲಪಾತ, ಶಿವನ ಮೂರ್ತಿ, ವಿಶ್ರಾಂತ ಡಾಬ ಗಮನ ಸೆಳೆಯುತ್ತದೆ. ಸ್ಥಳೀಯವಾಗಿ ಸಿಗುವ ವಸ್ತುಗಳನ್ನು ಬಳಸಿಕೊಂಡಿರುವುದು ವಿಶೇಷ. ಮಣ್ಣು ಹಾಗೂ ಸಿಮೆಂಟ್ ಬಳಸಿ ಜಲಪಾತದ ಮಾದರಿಯನ್ನು ನಿರ್ಮಿಸಲಾಗಿದೆ. ಮೇಲ್ಭಾಗದಿಂದ ನೀರು ಬಿಟ್ಟರೆ ಜಲಪಾತ ಸೃಷ್ಟಿಯಾಗಲಿದೆ. ಜುಳುಜುಳು ಶಬ್ದ ಮಾಡುತ್ತಾ ಹರಿದು ಬರುವ ನೀರಿನ ದೃಶ್ಯ ಮನಮೋಹಕ. ಪಕ್ಷಿಗಳ ಕಲರವ ಕಿವಿಗೆ ಹಿಂಪು ನೀಡುತ್ತದೆ. ಈ ಉದ್ಯಾನದಲ್ಲಿ ವೈವಿಧ್ಯಮಯ ಹೂವಿನ ಗಿಡಗಳನ್ನೂ ನೆಡಲಾಗಿದ್ದು, ಮನ ಸೂರೆಗೊಳ್ಳುತ್ತದೆ.

ಮಳೆ ನೀರು ಸಂಗ್ರಹಿಸಲು ಕೊಳವನ್ನು ನಿರ್ಮಿಸಿದ್ದು, ಸೀಮೆ ಬಿದಿರು ಮತ್ತು ನೈಲಾನ್ ಹಗ್ಗ ಬಳಸಿ 6 ಮೀಟರ್ ಉದ್ದದ ಪುಟ್ಟ ತೂಗು ಸೇತುವೆಯನ್ನು ನಿರ್ಮಿಸಿದ್ದಾರೆ.ಇದಲ್ಲದೆ, ಹಿತ್ತಲಿನಲ್ಲಿ ಮೂಲಂಗಿ, ಬೆಂಡೆ, ಸೌತೆ, ಕುಂಬಳ, ಹಾಗಲ, ಹಿರೇಕಾಯಿ, ಬೀನ್ಸ್, ನವಿಲುಕೋಸು, ಎಲೆಕೋಸು, ಅವರೆ, ಬಸಳೆ, ವಿವಿಧ ಬಗೆಯ ಸೊಪ್ಪು ತರಕಾರಿ ಬೆಳೆದಿದ್ದಾರೆ.

ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಸಿ.ಎಸ್.ಸತೀಶ್‌, ‘ಪ್ರಜಾವಾಣಿ’ಯ ‘ಯುವ ಸಾಧಕ–2020’ ಪುರಸ್ಕಾರಕ್ಕೂ ಭಾಜನರಾಗಿದ್ದರು. ಉದ್ಯಾನ ನಿರ್ಮಿಸಲು ಕುಟುಂಬದ ಸದಸ್ಯರೂ ಕೈಜೋಡಿಸಿದ್ದಾರೆ. ಲಾಕ್‌ಡೌನ್‌ ಸಂದರ್ಭವನ್ನು ಸಮರ್ಪಕವಾಗಿ ಬಳಸಿಕೊಂಡಿದ್ದೇನೆ. ಸಿ.ಎಸ್‌.ಸತೀಶ್‌, ಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT