ಬುಧವಾರ, ಡಿಸೆಂಬರ್ 7, 2022
21 °C
ಎ.ಕೆ.ಮನು ಮುತ್ತಪ್ಪ ಅವರಿಗೆ ‘ಕೊಡಗು ಸಹಕಾರ ರತ್ನ’ ಪ್ರಶಸ್ತಿ ಪ್ರದಾನ

ಸಹಕಾರ ಸಂಘಗಳ ಬಲವರ್ಧನೆಗೆ ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ರೈತರಿಗೆ ಹೆಚ್ಚಿನ ನೆರವು ನೀಡುವ ಸಹಕಾರ ಸಂಘಗಳನ್ನು ಕೊಡಗು ಜಿಲ್ಲೆಯಲ್ಲಿ ಮತ್ತಷ್ಟು ಬಲಪಡಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಪ್ರತಿಪಾದಿಸಿದರು. 

ಇಲ್ಲಿನ ಹೋಟೆಲ್‌ ರಾಜ್‌ದರ್ಶನ್‌ನಲ್ಲಿ ಬುಧವಾರ ನಡೆದ 69ನೇ ಅಖಿಲ ಭಾರತ ಸಹಕಾರ ಸಪ್ತಾಹದ ಪ್ರಯುಕ್ತ ಸಹಕಾರ ಶಿಕ್ಷಣ, ವೃತ್ತಿಪರ ನಿರ್ವಹಣೆಯನ್ನು ಮುಖ್ಯವಾಹಿನಿಗೆ ತರಲು ಪುನರ್ ನಿರ್ಮಿಸುವ ದಿನಾಚರಣೆ ಹಾಗೂ ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನಿಂದ ಆಯ್ಕೆಗೊಂಡ ಕೊಡಗಿನ ಶ್ರೇಷ್ಠ ಸಹಕಾರಿಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ರೈತರಿಗೆ ಸಕಾಲದಲ್ಲಿ ಸಾಲವನ್ನು ನೀಡಿ ಕೃಷಿಕರ ಬದುಕನ್ನು ಹಸನು ಮಾಡುವಲ್ಲಿ ಸಹಕಾರ ಕ್ಷೇತ್ರದ ಪಾತ್ರ ಮಹತ್ತರವಾಗಿದೆ. ಕೊಡಗು ಜಿಲ್ಲೆಯಲ್ಲಿ ಶೇ 90ಕ್ಕಿಂತ ಹೆಚ್ಚು ಸಹಕಾರ ಸಂಘಗಳು ಲಾಭದಾಯಕವಾಗಿ ನಡೆಯುತ್ತಿದೆ. ಈ ಪ್ರಗತಿಯನ್ನು ಉಳಿಸಿಕೊಂಡು ಹೋಗುವುದರ ಜತೆಗೆ ಸಹಕಾರ ಸಂಘಗಳನ್ನು ಇನ್ನಷ್ಟು ಬಲಯುತಗೊಳಿಸಬೇಕಿದೆ’ ಎಂದು ತಿಳಿಸಿದರು.

‘2017ರಿಂದ ಕೊಡಗು ಜಿಲ್ಲೆಯಲ್ಲಿ ಸಹಕಾರ ರತ್ನ, ಶ್ರೇಷ್ಠ ಸಹಕಾರಿ ಮತ್ತು ಶೇಷ್ಠ ಮಹಿಳಾ ಸಹಕಾರಿ ಪ್ರಶಸ್ತಿ ನೀಡುತ್ತಾ ಬರಲಾಗಿದೆ. ಕೊಡಗು ಜಿಲ್ಲೆಯಲ್ಲಿ ಸಹಕಾರ ಸಂಘಗಳನ್ನು ಮತ್ತಷ್ಟು ಬಲಪಡಿಸುವಲ್ಲಿ ಸಹಕಾರಿಗಳೆಲ್ಲರೂ ಕೈಜೋಡಿಸಬೇಕಿದೆ’ ಎಂದು ಕೋರಿದರು.

ಕೊಡಗು ಸಹಕಾರ ರತ್ನ ಪ್ರಶಸ್ತಿಯನ್ನು ಅಪ್ಪಚೆಟ್ಟೋಳಂಡ ಕೆ.ಮನುಮುತ್ತಪ್ಪ ಅವರಿಗೆ, ಶ್ರೇಷ್ಠ ಸಹಕಾರಿ ಪ್ರಶಸ್ತಿಯನ್ನು ಬೊಟ್ಟೋಳಂಡ ಡಿ.ಬಿದ್ದಯ್ಯ, ಕೊಂಗಂಡ ಎಂ.ಗಣಪತಿ, ಕೆ.ವಿ.ಮಂಜುನಾಥ್ ಅವರಿಗೆ ಹಾಗೂ ಶ್ರೇಷ್ಠ ಮಹಿಳಾ ಸಹಕಾರಿ ಪ್ರಶಸ್ತಿಯನ್ನು ಕಮಲ ಕರಿಯಪ್ಪ ಅವರಿಗೆ ಪ್ರದಾನ ಮಾಡಲಾಯಿತು.

ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನ ಉಪಾಧ್ಯಕ್ಷ ಪಿ.ಸಿ.ಮನು ರಾಮಚಂದ್ರ, ರಾಜ್ಯ ಸಹಕಾರ ತೋಟಗಾರಿಕಾ ಮಹಾಮಂಡಳದ ನಿರ್ದೇಶಕ ಬಿ.ಎ.ರಮೇಶ್ ಚಂಗಪ್ಪ, ಸಹಕಾರಿ ಭಾರತಿ ಉಪಾಧ್ಯಕ್ಷ ಎನ್.ಎ.ರವಿಬಸಪ್ಪ, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ನಿರ್ದೇಶಕರಾದ ಬಿ.ಡಿ.ಮಂಜುನಾಥ್, ಕೆ.ಎ.ಸಂಪತ್, ಜಲಜಾ ಶೇಖರ್, ಪಿ.ಸಿ.ಅಚ್ಚಯ್ಯ, ಕೆ.ಎಸ್.ಗಣಪತಿ, ಕೆ.ಎಂ.ತಮ್ಮಯ್ಯ, ಸಿ.ಎಸ್.ಕೃಷ್ಣ ಗಣಪತಿ, ಪಿ.ವಿ.ಭರತ್, ಕೆ.ಪಿ.ವಾಸುಮುದ್ದಯ್ಯ, ವಿ.ಕೆ.ಅಜಯ್ ಕುಮಾರ್, ಎನ್.ಎಂ.ಉಮೇಶ್ ಉತ್ತಪ್ಪ, ಪಿ.ಬಿ.ಯತೀಶ್, ಸಹಕಾರ ಸಂಘಗಳ ಉಪನಿಬಂಧಕ ಕೃಷ್ಣಪ್ರಸಾದ್, ಸಹಕಾರ ಸಂಘಗಳ ಸಹಾಯಕ ನಿಬಂಧಕ ಮೋಹನ್, ಕೆಐಸಿಎಂನ ನಿವೃತ್ತ ಪ್ರಾಂಶುಪಾಲರಾದ ಎಂ.ಎಂ.ಶ್ಯಾಮಲ ಇದ್ದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಸಹಕಾರ ಇಲಾಖೆ, ಕರ್ನಾಟಕ ಇನ್‌ಸ್ಟಿಟ್ಯೂಟ್‌ ಆಫ್ ಕೋಆಪರೇಟಿವ್ ಮ್ಯಾನೇಜ್‍ಮೆಂಟ್ ಹಾಗೂ ಸ್ಥಳೀಯ ಎಲ್ಲಾ ಸಹಕಾರ ಸಂಘಗಳ ಆಶ್ರಯದಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.