ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಡವ ಕೌಟುಂಬಿಕ ಕ್ರಿಕೆಟ್‌ ಟೂರ್ನಿ: ಫೈನಲ್‌ ತಲುಪಿದ ನೆರವಂಡ, ಅಚ್ಚಪಂಡ

Published 19 ಮೇ 2024, 6:08 IST
Last Updated 19 ಮೇ 2024, 6:08 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಅರಮಣಮಾಡ ಕೊಡವ ಕೌಟುಂಬಿಕ ಕ್ರಿಕೆಟ್‌ ಟೂರ್ನಿ ಅಂತಿಮ ಹಂತ ತಲುಪಿದ್ದು, ಫೈನಲ್ ಹಣಾಹಣಿಗೆ ಇಲ್ಲಿನ ಬಾಳೆಲೆ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜಿನ ಮೈದಾನ ಸಜ್ಜಾಗಿದೆ.

ಶನಿವಾರ ನಡೆದ ಸೆಮಿಫೈನಲ್ ಪಂದ್ಯಗಳಲ್ಲಿ ನೆರವಂಡ ಮತ್ತು ಅಚ್ಚಪಂಡ ತಂಡಗಳು ಜಯ ಗಳಿಸಿ, ಫೈನಲ್ ತಲುಪಿದವು. ಭಾನುವಾರ ಇಲ್ಲಿ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಪ್ರಶಸ್ತಿಗಾಗಿ ನೆರವಂಡ ಮತ್ತು ಅಚ್ಚಪಂಡ ತಂಡಗಳು ಹಾಗೂ ಮಹಿಳಾ ವಿಭಾಗದಲ್ಲಿ ಮಣವಟ್ಟಿರ- ಮುಕ್ಕಾಟೀರ (ಹರಿಹರ ಬೆಳ್ಳೂರು) ತಂಡಗಳು ಸೆಣಸಲಿವೆ.

ಚೆಕ್ಕೇರ ಮತ್ತು ನೆರವಂಡ ತಂಡಗಳ ನಡುವೆ ನಡೆದ ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ನೆರವಂಡ ವಿಕೆಟ್‌ಗಳ ಜಯ ಗಳಿಸಿತು. ಮೊದಲಿಗೆ ಬ್ಯಾಟ್ ಮಾಡಿದ ಚೆಕ್ಕೇರ ನಿಗದಿತ 10 ಓವರ್‌ಗಳಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡು 75 ರನ್‌ ಗಳಿಸಿತು. ಗುರಿ ಬೆನ್ನತ್ತಿದ ನೆರವಂಡ ತಂಡವು 4 ವಿಕೆಟ್‌ ಕಳೆದುಕೊಂಡು 8.5 ಓವರ್‌ಗಳಲ್ಲೇ ಗುರಿ ತಲುಪಿತು. ನೆರವಂಡ ತಂಡದ ಪರ ಪ್ರವೀಣ್ ಪೆಮ್ಮಯ್ಯ ಅವರು 46 ರನ್‌ ಗಳಿಸಿದರು. ಅರುಣ್ ಮತ್ತು ವರುಣ್ ತಲಾ 13 ರನ್‌ಗಳನ್ನು ಗಳಿಸಿದರು.

ಚೆಕ್ಕೇರ ತಂಡದ ಪರ ಆಡಿದ ಆಕರ್ಷ 46 ರನ್‌ ಗಳಿಸಿದರೆ ಜೊತೆಗೆ 1 ವಿಕೆಟ್‌ ಗಳಿಸಿದರು. ಇವರು ಪಂದ್ಯ ಪುರುಷೋತ್ತಮ ಗೌರವಕ್ಕೆ ಪಾತ್ರರಾದರು.

ಮತ್ತೊಂದು ಸೆಮಿಫೈನಲ್‌ ಪಂದ್ಯದಲ್ಲಿ ಅಚ್ಚಪಂಡ ತಂಡವು ಕಳಕಂಡ ತಂಡದ ವಿರುದ್ಧ 7 ವಿಕೆಟ್‌ಗಳ ಜಯ ಗಳಿಸಿತು. ಮೊದಲಿಗೆ ಬ್ಯಾಟ್ ಮಾಡಿದ ಕಳಕಂಡ ತಂಡವು ನಿಗದಿತ 10 ಓವರ್‌ಗಳಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡು 60 ರನ್‌ ಗಳಿಸಿತು. ಕಳಕಂಡ ತಂಡದ ಪರ ಭರತ್ 27 ರನ್‌ ಗಳಿಸಿದರು. ಅಚ್ಚಪಂಡ ತಂಡದ ಪರ ನಿರೋಶ್ 4 ವಿಕೆಟ್‌ಗಳನ್ನು ಪಡೆದರು.

ಗುರಿ ಬೆನ್ನತ್ತಿದ ಅಚ್ಚಪಂಡ ತಂಡವು 7.1 ಓವರ್‌ಗಳಲ್ಲಿ 3 ವಿಕೆಟ್‌ಗಳನ್ನು ಕಳೆದುಕೊಂಡು ಗುರಿ ತಲುಪಿತು. ಅಚ್ಚಪಂಡ ತಂಡದ ಪರ ಅಯ್ಯಪ್ಪ ಮತ್ತು ಮಿಥುನ್ ತಲಾ 22 ರನ್‌ ಗಳಿಸಿದರು. 27 ರನ್‌ ಗಳಿಸಿ 3 ವಿಕೆಟ್‌ಗಳನ್ನು ಪಡೆದ ಕಳಕಂಡ ತಂಡದ ಭರತ್ ಪಂದ್ಯ ಪುರುಷೋತ್ತಮ ಗೌರವಕ್ಕೆ ಪಾತ್ರರಾದರು. 

ಮಹಿಳಾ ವಿಭಾಗದಲ್ಲಿ ಈಗಾಗಲೇ ಸೆಮಿಫೈನಲ್‌ ಜಯಿಸಿರುವ ಮಣವಟ್ಟಿರ- ಮುಕ್ಕಾಟೀರ (ಹರಿಹರ ಬೆಳ್ಳೂರು) ತಂಡಗಳ ನಡುವೆ ಭಾನುವಾರ ಫೈನಲ್ ಪಂದ್ಯ ನಡೆಯಲಿದೆ. ಇದರ ವುಮೆನ್ ಆಫ್ ದಿ ಸೀರಿಸ್, ಉತ್ತಮ ಬೌಲರ್, ಉತ್ತಮ ಬ್ಯಾಟರ್, ಫೀಲ್ಡರ್, ಮತ್ತು ವಿಕೆಟ್ ಕೀಪರ್‌ ಗೌರವಕ್ಕೆ ಪಾತ್ರರಾದವರಿಗೆ ಮೂವೆರ ಅನು ಸುರೇಶ್ ಅವರು ಬೆಳ್ಳಿಯ ಜೋಮಾಲೆಯನ್ನು ಉಡುಗೊರೆಯಾಗಿ ನೀಡಲಿದ್ದಾರೆ.

ಸೆಮಿಫೈನಲ್‌ ಪಂದ್ಯಗಳ ನಡುವೆ ಮೈದಾನದಲ್ಲಿ ಮ್ಯಾಜಿಕ್ ಶೋ ನಡೆಯಿತು
ಸೆಮಿಫೈನಲ್‌ ಪಂದ್ಯಗಳ ನಡುವೆ ಮೈದಾನದಲ್ಲಿ ಮ್ಯಾಜಿಕ್ ಶೋ ನಡೆಯಿತು
ಇಂದು ನಡೆಯಲಿವೆ ರಣರೋಚಕ ಪಂದ್ಯಗಳು ಎರಡೂ ವಿಭಾಗದಲ್ಲಿಯೂ ಫೈನಲ್ ಪಂದ್ಯ 30 ದಿನಗಳ ಕಾಲ ನಡೆದ ಪಂದ್ಯಕ್ಕೆ ಬೀಳಲಿದೆ ತೆರೆ
ಅರಮಣಮಾಡ ಕ್ರಿಕೆಟ್ ಟೂರ್ನಿಗೆ ಇಂದು ತೆರೆ
ಗೋಣಿಕೊಪ್ಪಲು: ಒಂದು ತಿಂಗಳಿನಿಂದ ಬಾಳೆಲೆ ವಿಜಯಲಕ್ಷ್ಮಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ನಡೆದ ಅರಮಣಮಾಡ ಕೊಡವ ಕೌಟುಂಬಿಕ ಕ್ರಿಕೆಟ್ ಟೂರ್ನಿಗೆ ಮೇ 19ರಂದು ತೆರೆ ಬೀಳಲಿದೆ. ಏಪ್ರಿಲ್ 22ರಿಂದ ನಿರಂತರವಾಗಿ ನಡೆದ ಟೂರ್ನಿಯಲ್ಲಿ ಮಹಿಳಾ ಮತ್ತು ಪುರುಷ ವಿಭಾಗದಿಂದ ಒಟ್ಟು 313 ತಂಡಗಳು ಸೆಣೆಸಾಡಿದ್ದವು. 19ರಂದು ಬೆಳಿಗ್ಗೆ 10 ಗಂಟೆಗೆ ಮಹಿಳೆಯರ ಮತ್ತು ಪುರುಷರ ವಿಭಾಗದ ಫೈನಲ್ ಪಂದ್ಯಗಳು ನಡೆಯಲಿವೆ. ಸಂಜೆ 3 ಗಂಟೆಗೆ ವಿಜೇತ ತಂಡಗಳಿಗೆ ಬಹುಮಾನ ವಿತರಣ ಸಮಾರಂಭ ಜರುಗಲಿದೆ. ಅರಮಣಮಾಡ ಕ್ರಿಕೆಟ್ ಟೂರ್ನಿಯ ಅಧ್ಯಕ್ಷ ಅರಮಣಮಾಡ ಕೆ.ಸುರೇಶ್ ಅಧ್ಯಕ್ಷತೆ ವಹಿಸಲಿದ್ದು ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಂಡ ಕಾರ್ಸನ್ ಕಾರ್ಯಪ್ಪ ಶಾಸಕ ಎ.ಎಸ್.ಪೊನ್ನಣ್ಣ ದಾನಿ ಕೋಣೆರಿರ ಆದಿತ್ಯ ಉತ್ತಪ್ಪ ಪಾಲ್ಗೊಳ್ಳಲಿದ್ದಾರೆ. ಮೈಸೂರು ಕೊಡಗು ವಿಧಾನ ಸಭಾ ಕ್ಷೇತ್ರದ ಸಂಸದ ಪ್ರತಾಪ ಸಿಂಹ ಫೈನಲ್ ಪಂದ್ಯ ಉದ್ಘಾಟಿಸಲಿದ್ದಾರೆ. ಪದ್ಮಶ್ರೀ ಪುರಸ್ಕೃತ ಹಿರಿಯ ಕಲಾವಿದೆ ಐಮುಡಿಯಂಡ ರಾಣಿ ಮಾಚಯ್ಯ ಒಲಂಪಿಯನ್ ಅಶ್ವಿನಿ ನಾಚಪ್ಪ ಪತ್ರಕರ್ತ ಚೇರಂಡ ಕಿಶಾನ್ ಮಾದಪ್ಪ ಮೈಸೂರಿನ ಸೈಕಲ್ ಬ್ರಾಂಡ್ ಅಗರ್ ಬತ್ತಿ ಉದ್ಯಮಿ ಅರ್ಜುನ್ ರಂಗ ವೈದ್ಯ ಮಾಪಂಗಡ ಬೆಳ್ಳಿಯಪ್ಪ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ರಘುರಾಮ್ ಭಟ್ ಅವರನ್ನು ಸನ್ಮಾನಿಸಲಾಗುತ್ತದೆ. ಸಂಜೆ 6.30ಕ್ಕೆ ಕೊಡವ ಸಂಗೀತ ಮತ್ತು ಡಿಜೆ ನೃತ್ ಆಯೋಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT