ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟ ಶ್ರೀನಿವಾಸ ಪೂಜಾರಿಯಿಂದ ತೆರವಾಗುವ ಪರಿಷತ್‌ ಸ್ಥಾನಕ್ಕೆ ಯಾರು?

Published 8 ಜೂನ್ 2024, 7:39 IST
Last Updated 8 ಜೂನ್ 2024, 7:39 IST
ಅಕ್ಷರ ಗಾತ್ರ

ಮಂಗಳೂರು: ಉಡುಪಿ–ಚಿಕ್ಕಮಗಳೂರು ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರಿಂದ ವಿಧಾನ ಪರಿಷತ್‌ ಸ್ಥಾನ ತೆರವಾಗಲಿದೆ. ಈ ಕ್ಷೇತ್ರದ ಉಪ ಚುನಾವಣೆಗೆ ದಕ್ಷಿಣ ಕನ್ನಡ–ಉಡುಪಿ ಜಿಲ್ಲೆ ಸಜ್ಜಾಗಬೇಕಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಒಳಗೊಂಡ ವಿಧಾನ ಪರಿಷತ್‌ ಸ್ಥಳೀಯ ಸಂಸ್ಥೆಗಳ ಕ್ಷೇತ್ರ ದ್ವಿಸದಸ್ಯರನ್ನು ಒಳಗೊಂಡಿದೆ. 

2021ರ ಡಿಸೆಂಬರ್‌ನಲ್ಲಿ ಚುನಾವಣೆ ನಡೆದಿತ್ತು. ಕಳೆದ ಬಾರಿ ಕಾಂಗ್ರೆಸ್‌ ಮತ್ತು ಬಿಜೆಪಿ ಒಬ್ಬೊಬ್ಬ ಅಭ್ಯರ್ಥಿಗಳನ್ನು ಮಾತ್ರ ಕಣಕ್ಕಿಳಿಸಿ, ‘ನಿನಗೊಂದು–ನನಗೊಂದು’ ಎಂಬ ನೀತಿ ಅನುಸರಿಸಿದವು.

ಬಿಜೆಪಿಯಿಂದ ಕೋಟ ಶ್ರೀನಿವಾಸ ಪೂಜಾರಿ, ಕಾಂಗ್ರೆಸ್‌ನಿಂದ ಮಂಜುನಾಥ ಭಂಡಾರಿ ಆಯ್ಕೆಯಾಗಿದ್ದರು. ವಿಧಾನಪರಿಷತ್‌ ಸದಸ್ಯರ ಅವಧಿ ಆರು ವರ್ಷ. ಹೀಗಾಗಿ ಕೋಟ ಅವರ ವಿಧಾನ ಪರಿಷತ್‌ ಅವಧಿ ಇನ್ನೂ ಮೂರೂವರೆ ವರ್ಷ ಇತ್ತು.

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ, ಮಹಾನಗರ ಪಾಲಿಕೆ, ನಗರಸಭೆ, ಪುರ ಸಭೆ, ಪಟ್ಟಣ ಪಂಚಾಯಿತಿ ಸದಸ್ಯರು ಈ ಚುನಾವಣೆಯಲ್ಲಿ ಮತದಾನಕ್ಕೆ ಅರ್ಹರು. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಇನ್ನೂ ನಡೆದಿಲ್ಲ. ಈಗ ಲೋಕಸಭೆ ಚುನಾವಣೆ ಮುಗಿದಿದ್ದು, ಪಂಚಾಯಿತಿ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಮುಂದಾಗಬಹುದು ಎನ್ನಲಾಗುತ್ತದೆ.

ವಿಧಾನ ಪರಿಷತ್‌ ಉಪ ಚುನಾವಣೆಗೂ ಮುನ್ನವೇ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆದರೆ ಮತದಾರರ ಸಂಖ್ಯೆ ಹೆಚ್ಚಲಿದೆ. ಇಲ್ಲವಾದರೆ, ಈಗಿರುವ ಇತರೆ ಸ್ಥಳೀಯ ಸಂಸ್ಥೆಗಳ ಸದಸ್ಯರು ಮಾತ್ರ ಮತದಾನ ಮಾಡುವ ಅರ್ಹತೆ ಪಡೆಯಲಿದ್ದಾರೆ.

ಕೋಟ ಅವರಿಂದ ತೆರವಾಗುವ ಸ್ಥಾನಕ್ಕೆ ಉಪ ಚುನಾವಣೆ ಘೋಷಣೆಯಾದರೆ, ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಸಹ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ. ಹೀಗಾಗಿ ಈ ಚುನಾವಣೆ ರಂಗೇರಲಿದೆ.

ಚಿಕ್ಕಮಗಳೂರು ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸಿ.ಟಿ. ರವಿ ಸೋತಿದ್ದರು. ವಿಧಾನ ಸಭೆಯಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ನೀಡಿ ಅವರಿಗೆ ಸ್ಥಾನಮಾನ ನೀಡಿದೆ. ಕೋಟ ಅವರು ನಿರ್ವಹಿಸುತ್ತಿದ್ದ ವಿಧಾನ ಪರಿಷತ್‌ ಪ್ರತಿಪಕ್ಷದ ನಾಯಕ ಸ್ಥಾನ ಸಿ.ಟಿ. ರವಿಗೆ ನೀಡುವ ಲೆಕ್ಕಾಚಾರ ಬಿಜೆಪಿಯಲ್ಲಿ ನಡೆದಿದೆ ಎನ್ನುತ್ತವೆ ಮೂಲಗಳು.

‘ಕೋಟ ಅವರಿಂದ ತೆರವಾಗುವ ವಿಧಾನ ಪರಿಷತ್‌ ಚುನಾವಣೆಗೆ ನಳಿನ್‌ ಕುಮಾರ್‌ ಕಟೀಲ್‌ ಅವರಿಗೆ ಅವಕಾಶ ನೀಡಬೇಕು. ಬಿಜೆಪಿ ಲೋಕಸಭಾ ಟಿಕೆಟ್‌ ವಂಚಿತರಾಗಿರುವ ಅವರಿಗೆ ಸೂಕ್ತಸ್ಥಾನಮಾನ ನೀಡಬೇಕು ಎಂಬ ಬೇಡಿಕೆ ಇದೆ. ಇನ್ನೂ ಚುನಾವಣಾ ಪ್ರಕ್ರಿಯೇ ಆರಂಭಗೊಂಡಿಲ್ಲ. ಹೀಗಾಗಿ ಆಕಾಂಕ್ಷಿಗಳ ಯಾರು ಯಾರು ಇದ್ದಾರೆ ಎಂಬುದನ್ನು ಈಗಲೇ ಹೇಳುವುದಕ್ಕೆ ಸಾಧ್ಯವಿಲ್ಲ. ವರಿಷ್ಠರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಗೊತ್ತಿಲ್ಲ’ ಎನ್ನುತ್ತವೆ ಬಿಜೆಪಿ ಮೂಲಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT