ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗೋಣಿಕೊಪ್ಪಲು: ದೇವಸ್ಥಾನಕ್ಕೆ ಎತ್ತುಗಳೊಂದಿಗೆ ಬಂದ ದವಸ ಧಾನ್ಯ

ಕುಂದ ಈಶ್ವರ ದೇವರ ಎತ್ತ್ ಪೋರಾಟ್ ಉತ್ಸವ ಆರಂಭ
Published 4 ಮಾರ್ಚ್ 2024, 14:11 IST
Last Updated 4 ಮಾರ್ಚ್ 2024, 14:11 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಇತಿಹಾಸ ಪ್ರಸಿದ್ಧ ಕುಂದ ಬೊಟ್ಟಿಯತ್ ನಾಡ್ ಈಶ್ವರ ದೇವಸ್ಥಾನದ ಎತ್ ಪೋರಾಟ್ ಕಾರ್ಯಕ್ರಮ ಸೋಮವಾರ ಸಂಜೆ ಆರಂಭಗೊಂಡಿತು.

ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳು ಹೂಮಾಲೆಗಳಿಂದ ದೇವರಮಂಟಪ ಅಲಂಕರಿಸಿ ಶ್ರದ್ಧಾಭಕ್ತಿಯಿಂದ ಪೂಜೆ ನೆರವೇರಿಸಿದರು. ಈಶ್ವರ ದೇವರ ವಾರ್ಷಿಕೋತ್ಸವದ ಅಂಗವಾಗಿ ನಡೆಯುತ್ತಿರುವ ಉತ್ಸವದಲ್ಲಿ ಫೆ. 26ರಂದೇ ಕೊಡಿ ಮರ ನಿಲ್ಲಿಸಲಾಗಿತ್ತು.

ಸೋಮವಾರ ಕುಂದ, ಮುಗುಟಗೇರಿ ಸಮೀಪದಲ್ಲಿರುವ ನಾಡ್ ದೇವಸ್ಥಾನವೆಂದೇ ಖ್ಯಾತಿ ಪಡೆದಿರುವ ಈಶ್ವರ ದೇವಸ್ಥಾನದ ಅಂಬಲದಲ್ಲಿ ಕುಂದ, ಮುಗುಟಗೇರಿ, ಹಳ್ಳಿಗಟ್ಟು, ಹುದೂರು, ಅರುವತ್ತೊಕ್ಕಲು, ಈಚೂರು ಗ್ರಾಮಗಳ ತಕ್ಕ ಮುಖ್ಯಸ್ಥರು ಸೇರಿದ್ದರು. ದೇವಸ್ಥಾನದ ದೇವತಕ್ಕರು, ಭಂಡಾರ ತಕ್ಕರು ಆಯಾಯ ಊರುಗಳಿಂದ ತರಲಾಗಿದ್ದ ದವಸ ಧಾನ್ಯಗಳನ್ನು ಎತ್ತ್ ಪೋರಾಟ್ ಮೂಲಕ ದೇವಸ್ಥಾನಕ್ಕೆ ತಂದರು.

ಎತ್ತ್ ಪೋರಾಟ್ ಅನ್ನು ದೇವಸ್ಥಾನದ ಆವರಣದಲ್ಲಿ ಚೆಂಡೆ ಮದ್ದಳೆಯೊಂದಿಗೆ ಭಕ್ತಿ ಪೂರ್ವಕವಾಗಿ ಬರಮಾಡಿಕೊಳ್ಳಲಾಯಿತು. ಅರ್ಚಕರು ಅಲಂಕರಿಸಿ ಎತ್ತುಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಆರು ಊರುಗಳಿಂದ ತರಲಾಗಿದ್ದ ದವಸ ಧಾನ್ಯಗಳನನ್ನು ದೇವಸ್ಥಾನಕ್ಕೆ ಅರ್ಪಿಸಲಾಯಿತು.ಆನಂತರ ನೇರ್ಪು ಪ್ರಯುಕ್ತ ದೇವರ ಉತ್ಸವ ಮೂರ್ತಿಯನ್ನು ಹೊತ್ತು ಚೆಂಡೆ ವಾದ್ಯಕ್ಕೆ ಹೆಜ್ಜೆ ಹಾಕಲಾಯಿತು. ದೇವಸ್ಥಾನದ ಸುತ್ತ ವಿವಿಧ ಅಲಂಕಾರ ಪೂಜಾ ವಿಧಾನಗಳು ನಡೆದವು.

‘ಮಾರ್ಚ್ 5ರಂದು ಸಂಜೆ ದೇವರ ಸ್ನಾನ ಬಳಿಕ ಇತರ ದೈವಿಕ ಕಾರ್ಯಗಳು ನಡೆಯಲಿವೆ. ಕುಂದ ಮುಗುಟಗೇರಿಯ ಈ ದೇವಸ್ಥಾನಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು’ ಎಂದು ನಾಡ್ ತಕ್ಕರಾದ ಅಡ್ಡಂಡ ಪ್ರಕಾಶ್ ಕುಶಾಲಪ್ಪ ತಿಳಿಸಿದರು.

‘ಬೊಟ್ಟಿಯತ್ ನಾಡಿಗೆ ಸೇರಿದ ಮುಗಟಗೇರಿ, ಕುಂದ, ಹುದೂರು, ಹಳ್ಳಿಗಟ್ಟು, ಈಚೂರು, ಅರುವತ್ತೊಕ್ಕಲು ಸುತ್ತಾಮುತ್ತಲ ಗ್ರಾಮಗಳು ಜನತೆ ಒಂದೆಡೆ ಸೇರಿ ನಡೆಸುವ ವಾರ್ಷಿಕೋತ್ಸವ ವಿಜೃಂಭಣೆಯಿಂದ ಜರುಗಲಿದೆ. ಭಕ್ತಾದಿಗಳು ಅನ್ನ ಸಂತರ್ಪಣೆಗೆ ಬೇಕಾದ ಸಾಮಗ್ರಿಗಳನ್ನು ನೀಡಬಹುದು’ ಎಂದು ತಿಳಿಸಿದರು.

ಹೆಚ್ಚಿನ ಮಾಹಿತಿಗೆ 9901262398, 8105401819 ರಲ್ಲಿ ಸಂಪರ್ಕಿಸಬಹುದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT