ಕುಶಾಲನಗರ: ಕೊಡಗು ಜಿಲ್ಲೆಯ ಹಾರಂಗಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮಂಗಳವಾರ ಒಳಹರಿವಿನಲ್ಲಿ ಏರಿಕೆ ಕಂಡು ಬಂದಿದ್ದು, ಜಲಾಶಯದಿಂದ ನದಿಗೆ 18000 ಕ್ಯೂಸೆಕ್ ನೀರು ಹರಿಬಿಡಲಾಗಿದೆ.
ಅತೀ ಹೆಚ್ಚು ನೀರು ನದಿಗೆ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಕೆಳಸೇತುವೆ ಸಂಪೂರ್ಣ ಮುಳುಗಡೆಗೊಂಡಿದೆ. ಅಕ್ಕಪಕ್ಕದ ಹಳ್ಳಿಗಳಿಗೆ ಸಂಪರ್ಕ ಕಡಿತಗೊಂಡಿದೆ. ಇದರಿಂದ ಹತ್ತಾರು ಹಳ್ಳಿಗಳ ಜನರಿಗೆ, ಕಾರ್ಮಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿದೆ.
ಸೋಮವಾರಪೇಟೆ, ಯಡವನಾಡು, ಹುದುಗೂರು ಗ್ರಾಮಗಳ ಸಂಪರ್ಕದ ಕೊಂಡಿಯಾಗಿತ್ತು. ಈ ಸೇತುವೆ ಮುಳುಗಡೆಯಿಂದ ಇದೀಗ ಹಳ್ಳಿಗಳ ಜನರು ದೂರ ಕ್ರಮಿಸಿ ತಮ್ಮ ಮನೆಗಳಿಗೆ ತಲುಪಬೇಕಾದ ಅನಿವಾರ್ಯತೆ ಎದುರಾಗಿದೆ.
ನೂತನ ಸೇತುವೆ ನಿರ್ಮಾಣಕ್ಕೆ ಆಗ್ರಹ: ಪ್ರತಿವರ್ಷ ಮಳೆಗಾಲದಲ್ಲಿ ಜಲಾಶಯದಿಂದ ನೀರು ನದಿಗೆ ಹರಿಬಿಟ್ಟ ಸಂದರ್ಭ ಕೆಳಸೇತುವೆ ಮುಳುಗಡೆಯಾಗಿ ಸಂಪರ್ಕ ಕಡಿತಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಎತ್ತರವಾದ ನೂತನ ಸೇತುವೆಯ ನಿರ್ಮಾಣ ಮಾಡಬೇಕು ಎಂದು ಕೂಡುಮಂಗಳೂರು ಗ್ರಾಮ ಪಂಚಾಯತಿ ಅಧ್ಯಕ್ಷ ಭಾಸ್ಕರ್ ನಾಯಕ್ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾದ ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2859 ಅಡಿ ಇದ್ದು ಜಲಾಶಯದ ಇಂದಿನ ನೀರಿನ ಮಟ್ಟ 2850.35 ಅಡಿ ಇತ್ತು. ಜಲಾಶಯಕ್ಕೆ 7494 ಕ್ಯೂಸೆಕ್ ಒಳಹರಿವು ಇತ್ತು. 8.5 ಟಿ.ಎಂ.ಸಿ ಸಾಮರ್ಥ್ಯದ ಹಾರಂಗಿ ಜಲಾಶಯದಲ್ಲಿ ಇದೀಗ 5.99 ಟಿ.ಎಂ.ಸಿ.ಗಳಷ್ಟು ನೀರು ಶೇಖರಣೆಯಾಗಿದೆ. ಹಾರಂಗಿ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿ 1.3 ಸೆಂ.ಮೀ ಮಳೆ ದಾಖಲಾಗಿದೆ.
ಜಲಾಶಯದ ಕ್ರೆಸ್ಟ್ ಗೇಟ್ ಮೂಲಕ ಹಾಲಿನ ನೊರೆಯಂತೆ ಧುಮ್ಮಿಕ್ಕುವ ನೀರಿನ ದೃಶ್ಯ ನಯನ ಮನೋಹರವಾಗಿತ್ತು. ಜಲಾಶಯದಿಂದ ನೀರು ಹರಿಸುವ ಮುನ್ನ ತಗ್ಗುಪ್ರದೇಶದ ಜನರಿಗೆ ಮೀನುಗಾರರಿಗೆ, ನದಿಯ ಅಸುಪಾಸಿನಲ್ಲಿ ವಾಸಿಸುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲು ಸೈರನ್ ಮೋಳಗಿಸಲಾಯಿತು.
‘ಕಳೆದ ಕೇಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಜಲಾಶಯ ಬಹುತೇಕ ಭರ್ತಿಯಾಗಿರುವುದು ಅಚ್ಚುಕಟ್ಟು ವ್ಯಾಪ್ತಿಯ ರೈತರಿಗೆ ಹರ್ಷ ತಂದಿದೆ. ನದಿ ತೀರದಲ್ಲಿ ವಾಸಿಸುತ್ತಿರುವ ಜನರು ಮುನ್ನೆಚ್ಚರಿಕೆಯ ಕ್ರಮವಾಗಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ’ ಹಾರಂಗಿ ನೀರಾವರಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಐ.ಕೆ.ಪುಟ್ಟಸ್ವಾಮಿ ಸೂಚನೆ ನೀಡಿದ್ದಾರೆ.
ತಾಲ್ಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ಮತ್ತು ಕಂದಾಯ ಅಧಿಕಾರಿಗಳು ಹಾರಂಗಿ, ಕಣಿವೆ ಸೇರಿದಂತೆ
ವಿವಿಧೆಡೆ ತೆರಳಿ ಮಳೆಯಿಂದ ಉಂಟಾಗಿರುವ ಹಾನಿ ಪ್ರಮಾಣ ಹಾಗೂ ನದಿ ದಂಡೆಯಲ್ಲಿ ಸ್ಥಿತಿಗತಿಗಳ ಪರಿಶೀಲನೆ ನಡೆಸಿದರು.
‘ನದಿ ಪಾತ್ರದ ಜನರ ಸುರಕ್ಷತೆಗೆ ಗಮನಹರಿಸಿ’ ಕುಶಾಲನಗರ: ಕೊಡಗು ಜಿಲ್ಲೆಯ ಕಾವೇರಿ ಹಾಗೂ ಹಾರಂಗಿ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆ ಸುರಿಯುತ್ತಿದ್ದು ಹಾರಂಗಿ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣದಲ್ಲಿ ಗಣನೀಯವಾಗಿ ಏರಿಕೆ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಶಾಸಕ ಡಾ.ಮಂತರ್ ಗೌಡ ಹಾರಂಗಿ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಲಾಶಯದ ನೀರಿನ ಸಂಗ್ರಹ ಪ್ರಮಾಣ ಹಾಗೂ ಒಳ ಹರಿವು ಮತ್ತು ಹೊರ ಅರಿವಿನ ಮಾಹಿತಿ ಪಡೆದರು. ಅಣೆಕಟ್ಟೆ ವ್ಯಾಪ್ತಿಯ ಮಳೆ ಪ್ರಮಾಣದ ಕುರಿತು ನೀರಾವರಿ ಇಲಾಖೆ ಅಧೀಕ್ಷಕ ಎಂಜಿನಿಯರ್ ರಘುಪತಿ ಹಾಗೂ ಹಾರಂಗಿ ನೀರಾವರಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಐ.ಕೆ.ಪುಟ್ಟಸ್ವಾಮಿ ಅವರೊಂದಿಗೆ ಚರ್ಚೆ ನಡೆಸಿದರು. ಕುಶಾಲನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಪ್ರಮೋದ್ ಮುತ್ತಪ್ಪ ಪುರಸಭೆ ಸದಸ್ಯರಾದ ಶಿವಕುಮಾರ್ ಜಗದೀಶ್ ನವೀನ್‌ಕುಮಾರ್ ಕೆಪಿಸಿಸಿ ಸದಸ್ಯ ಎಚ್.ಕೆ.ನಟೇಶ್ ಗೌಡ ಮುಖಂಡರಾದ ಬಿ.ಡಿ.ಅಣ್ಣಯ್ಯ ಜನಾರ್ಧನ್ ರಂಜನ್ ಹೆಬ್ಬಾಲೆ ನೀರಾವರಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಐ.ಕೆ.ಪುಟ್ಟಸ್ವಾಮಿ ಸಹಾಯಕ ಎಂಜಿನಿಯರ್ ಸೌಮ್ಯ ಕಿರಣ್ ಡಿವೈಎಸ್ಪಿ ಚಂದ್ರಶೇಖರ್ ಸಿಪಿಐ ಪ್ರಕಾಶ್ ಪಾಲ್ಗೊಂಡಿದ್ದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಮನವಿ: ಹಾರಂಗಿ ಜಲಾಶಯ ಕೆಳ ಸೇತುವೆ ಮುಳುಗಡೆಯಾಗಿ ಹಲವು ಗ್ರಾಮಗಳ ಜನರಿಗೆ ಸಂಚಾರಕ್ಕೆ ತೊಂದರೆ ಉಂಟಾಗಿರುವ ಕುರಿತು ಶಾಸಕ ಮಂತರ್ ಗೌಡ ಅವರು ವಿಡಿಯೋ ಕಾಲ್ ಮೂಲಕ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.