ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರಪೇಟೆ: ಮಳೆ ಭೀತಿ ನಡುವೆ ಕೊಯ್ಲು ಶುರು

ಕಾರ್ಮಿಕರ ಕೊರತೆ; ಭತ್ತದ ಕಟಾವಿಗೆ ಯಂತ್ರಕ್ಕೆ ಮೊರೆ ಹೋದ ರೈತರು
Published 15 ಡಿಸೆಂಬರ್ 2023, 8:05 IST
Last Updated 15 ಡಿಸೆಂಬರ್ 2023, 8:05 IST
ಅಕ್ಷರ ಗಾತ್ರ

ಸೋಮವಾರಪೇಟೆ: ಮತ್ತೊಮ್ಮೆ ಕಾಡುತ್ತಿರುವ ಮಳೆಯ ನಡುವೆ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಭತ್ತದ ಫಸಲಿನ ಕಟಾವು ಪ್ರಾರಂಭಗೊಂಡಿದೆ.

ಈಗಾಗಲೇ ಕಳೆದ ಒಂದು ವಾರದಿಂದ ಕೆಲವೆಡೆಗಳಲ್ಲಿ ಮಳೆಯಾಗಿದೆ. ಕೆಲವು ಗದ್ದೆಗಳಲ್ಲಿ ಕಟಾವು ಮಾಡಿದ ಬೆಳೆ ಹಾನಿಯಾಗಿದ್ದರೂ, ಹೆಚ್ಚಿನ ನಷ್ಟವಾಗಿಲ್ಲ. ಮೋಡ ಕವಿದ ವಾತಾವರಣದಿಂದಾಗಿ ಬೆಲೆ ಕಟಾವಿಗೆ ಹಲವು ರೈತರು ಮುಂದಾಗಿರಲಿಲ್ಲ. ಇದರೊಂದಿಗೆ ಕಾರ್ಮಿಕರು ಕಾಫಿ ಕೊಯ್ಲು ಮಾಡಲು ಹೋಗುತ್ತಿದ್ದರಿಂದ ಕಾರ್ಮಿಕರ ಸಮಸ್ಯೆ ಕಾಡುತ್ತಿದೆ. ಯಾವಾಗ ಬೇಕಾದರೂ ಮಳೆಯಾಗಬಹುದಾದ ರೀತಿಯಲ್ಲಿ ಪರಿಸ್ಥಿತಿ ಇದ್ದು, ಇನ್ನೂ ಕಟಾವು ಮಾಡದ ಬೆಳೆ ನಷ್ಟವಾಗುವ ಭೀತಿ ರೈತರನ್ನು ಕಾಡುತ್ತಿದೆ.

ಈಗ ಸಕಾಲಕ್ಕೆ ಮಳೆಯಾಗದೇ ಹೋಗಿದ್ದರಿಂದ ಹೆಚ್ಚಿನ ಗದ್ದೆಗಳಲ್ಲಿ ಉತ್ತಮ ಇಳುವರಿ ಸಿಗದೆ, ಲಾಭವಾಗಿಲ್ಲ. ಮತ್ತೆ ಆಗಾಗ ಮಳೆಯಾಗುತ್ತಿರುವುದು ಇನ್ನಷ್ಟು ನಷ್ಟ ಅನುಭವಿಸುವಂತಾಗಿದೆ.

ಒಂದೆಡೆ ಅಲ್ಲಲ್ಲಿ ಮಳೆ ಬೀಳುತ್ತಿದ್ದರೆ, ಕಟಾವಿಗೆ ಕಾರ್ಮಿಕರ ಸಮಸ್ಯೆ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಹಲವು ರೈತರು ಭತ್ತದ ಕಟಾವಿಗೆ ಯಂತ್ರದ ಮೊರೆ ಹೋಗಿದ್ದಾರೆ. ಹೊರ ಜಿಲ್ಲೆಯಿಂದ ಯಂತ್ರಗಳನ್ನು ತರಿಸಿಕೊಂಡು ಕಟಾವು ನಡೆಸಲಾಗುತ್ತಿದೆ.

‘ಭತ್ತ ಮತ್ತು ಕಾಫಿ ಕಟಾವು ಮಾಡುವ ಸಂದರ್ಭವೇ ಹವಾಮಾನ ವೈಪರೀತ್ಯದಿಂದಾಗಿ ಕಳೆದ ಕೆಲವು ವರ್ಷಗಳಿಂದ ಬೆಳೆ ನಷ್ಟವಾಗುತ್ತಿದೆ. ಆದರೂ, ಹೆಚ್ಚಿನ ರೈತರು ಭತ್ತದ ಕೃಷಿಯಿಂದ ಹಿಂದೆ ಸರಿಯದೆ, ಕೃಷಿ ಮಾಡಿ ಕೈ ಸುಟ್ಟುಕೊಳ್ಳುತ್ತಿದ್ದಾರೆ’ ಎಂದು ಹಿರಿಕರ ಗ್ರಾಮದ ರಮೇಶ್ ಹೇಳಿದರು.

ಕಳೆದ ವಾರ 2 ದಿನ ಸಾಧಾರಣ ಮಳೆಯಾಗಿದೆ. ಅಲ್ಲದೆ, ಮೋಡ ಕವಿದ ವಾತಾವರಣ ಇದ್ದು, ಆಗಾಗ ತುಂತುರು ಮಳೆಯಾಗುತ್ತಿದೆ. ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭತ್ತದ ಗದ್ದೆಯಲ್ಲಿ ಯಂತ್ರದ ಮೂಲಕ ಭತ್ತದ ಕಟಾವು ನಡೆಸಿದರು. ಕೆಲವರು ಕೋಯ್ಲು ಮಾಡಿದರೂ, ಮನೆಗೆ ಸಾಗಿಸಲು ಸಾಧ್ಯವಾಗದೆ, ಗದ್ದೆಯಲ್ಲಿಯೇ ಬಿಟ್ಟಿದ್ದಾರೆ ಎಂದು ಹರೀಶ್ ತಿಳಿಸಿದರು.

ಸೋಮವಾರಪೇಟೆ ತಾಲ್ಲೂಕಿನ ಗೌಡಳ್ಳಿಯಲ್ಲಿ ಭತ್ತದ ಹುಲ್ಲನ್ನು ಸುರುಳಿ ಸುತ್ತಿರುವ ಯಂತ್ರಗಳು

ಸೋಮವಾರಪೇಟೆ ತಾಲ್ಲೂಕಿನ ಗೌಡಳ್ಳಿಯಲ್ಲಿ ಭತ್ತದ ಹುಲ್ಲನ್ನು ಸುರುಳಿ ಸುತ್ತಿರುವ ಯಂತ್ರಗಳು

ಯಂತ್ರದ ಮೂಲಕವೇ ಕಟಾವು ಮಾಡಿದ ಭತ್ತದ ಹುಲ್ಲನ್ನು ಕಟ್ಟುವ ವ್ಯವಸ್ಥೆಯೂ ಇದ್ದು, ಬೆಳೆಗಾರರಿಗೆ ವರದಾನವಾಗಿದೆ. ಈ ವರ್ಷ ಒಣ ಹುಲ್ಲು ಮತ್ತು ಭತ್ತಕ್ಕೆ ಉತ್ತಮ ಬೆಲೆ ಇದ್ದರೂ, ಗುಣಮಟ್ಟದ ಬೆಳೆ ಇಲ್ಲದಿರುವುದರಿಂದ ರೈತರಿಗೆ ನಷ್ಟವಾಗಿದೆ.

‘2023-24 ನೇ ಸಾಲಿನಲ್ಲಿ 9,500 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಕೃಷಿ ಕೈಗೊಳ್ಳುವ ಗುರಿ ಇತ್ತು. ಆದರೆ, 7,195 ಹೆಕ್ಟೇರ್‌ನಲ್ಲಿ ಮಾತ್ರವೇ ಬಿತ್ತನೆ ಮಾಡಲಾಗಿದೆ. ಈ ಸಾಲಿನಲ್ಲಿ ಶೇ 50ರಷ್ ಟುಮಳೆ ಕೊರತೆ ಕಂಡು ಬಂದಿದೆ. ಬೆಳವಣಿಗೆ ಹಂತದಲ್ಲಿ ಸಕಾಲದಲ್ಲಿ ಮಳೆಯಾಗದೆ ಭತ್ತದ ನಾಟಿ ಕಾರ್ಯ ಕೂಡ ತಡವಾಗಿ, ತೇವಾಂಶದ ಕೊರತೆಯಿಂದ ಇಳುವರಿ ಕುಂಠಿತಗೊಂಡಿದೆ. ಸೋಮವಾರಪೇಟೆ ಹಾಗೂ ಕುಶಾಲನಗರ ತಾಲ್ಲೂಕು ವ್ಯಾಪ್ತಿಯ ಶನಿವಾರಸಂತೆ, ಹೆಬ್ಬಾಲೆ, ಶಿರಂಗಾಲ, ಹುಲುಸೆ, ಕೂಡಿಗೆ ವ್ಯಾಪ್ತಿಯಲ್ಲಿ ಹೆಚ್ಚಿನ ಸಮಸ್ಯೆ ಕಂಡು ಬಂದಿದೆ’ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಯಾದವ ಬಾಬು ತಿಳಿಸಿದರು.

ಇಂದಿನಿಂದ ಒಂದೆರಡು ಕಡೆ ಹಗುರ ಮಳೆ
ಭಾರತೀಯ ಹವಾಮಾನ ಇಲಾಖೆ ನೀಡಿರುವ ಮುಂದಿನ 5 ದಿನಗಳ ಮುನ್ಸೂಚನೆಯಂತೆ ಕೊಡಗು ಜಿಲ್ಲೆಯಾದ್ಯಂತ ಬಹುತೇಕ ಕಡೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ. ಡಿ. 15 ಮತ್ತು 16ರಂದು ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಂಭವ ಇದೆ ಎಂದು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಗೋಣಿಕೊಪ್ಪಲಿನ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದ ಜಿಲ್ಲಾ ಕೃಷಿ ಹವಾಮಾನ ಘಟಕದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT