ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಇಲ್ಲ: ಕೆರೆ ವಿಸ್ತರಣೆಯೇ ರಕ್ಷೆ

ಗದ್ದೆ, ಕಾಫಿ, ಕಾಳುಮೆಣಸಿನ ತೋಟಗಳಿಗೆ ನೀರಿನ ಕೊರತೆ
Published 6 ಮೇ 2024, 5:00 IST
Last Updated 6 ಮೇ 2024, 5:00 IST
ಅಕ್ಷರ ಗಾತ್ರ

ನಾಪೋಕ್ಲು: ಮೇ ತಿಂಗಳ ಬಿಸಿಲ ಝಳದ ನಡುವೆ ನಾಲ್ಕುನಾಡಿನಲ್ಲಿ ರೈತರು ಕೆರೆ ವಿಸ್ತರಣೆಯಲ್ಲಿ ತೊಡಗಿದ್ದಾರೆ. ಗದ್ದೆಗಳಲ್ಲಿ ಇದ್ದ ಪುಟ್ಟ ಕೃಷಿಹೊಂಡಗಳನ್ನು ಹಿಗ್ಗಿಸುವ, ಕೆರೆಯನ್ನು ವಿಸ್ತರಿಸುವ ಕಾರ್ಯ ಭರದಿಂದ ಸಾಗುತ್ತಿದೆ.

ಪ್ರತಿವರ್ಷ ಫೆಬ್ರುವರಿ ಕೊನೆಯ ವಾರ ತಪ್ಪಿದಲ್ಲಿ ಮಾರ್ಚ್ ಮೊದಲ ವಾರದಲ್ಲಿ ನಾಲ್ಕು ನಾಡಿನಲ್ಲಿ ಮಳೆ ಸುರಿದು ಕಾಫಿ ಬೆಳೆಗಾರರು ಸಂತಸ ಗೊಳ್ಳುತ್ತಿದ್ದರು. ಕಾಫಿಯ ತೋಟಗಳಲ್ಲಿ ಹೂಗಳು ಅರಳಿ ಬೆಳೆಗಾರರಿಗೆ ಆರ್ಥಿಕ ಚೈತನ್ಯದ ಭರವಸೆ ನೀಡುತ್ತಿತ್ತು. ಈ ವರ್ಷ ಮಳೆಯ ಕೊರತೆ ಬಹುತೇಕ ಬೆಳೆಗಾರರನ್ನು ಕಾಡಿದೆ. ತೋಟಗಳಿಗೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ ಕಾಫಿಯ ಹೂಗಳು ಅರಳದೆ ಇಳುವರಿಗೆ ಹೊಡೆತ ಬಿದ್ದಿದೆ. ಕೆರೆ ತೋಡುಗಳಿಂದ ಕೃತಕ ನೀರಾವರಿ ಮೂಲಕ ನೀರು ಹಾಯಿಸುತ್ತಿರುವವರು ಸಂಕಷ್ಟಕ್ಕೀಡಾಗಿದ್ದಾರೆ. ತೋಡುಗಳು, ನೀರಿನ ಮೂಲಗಳು ಬತ್ತಿ ಹೋಗಿವೆ. ಕೆರೆಗಳಲ್ಲಿ ನೀರು ತಳ ತಲುಪಿದೆ. ಕಾಫಿಯ ತೋಟಗಳಿಗೆ ನೀರು ಹಾಯಿಸಲೆಂದು ಕೆರೆ ವ್ಯವಸ್ಥೆ ಮಾಡಿಕೊಂಡ ಹಲವು ಬೆಳೆಗಾರರಿಗೆ ನೀರಿನ ಕೊರತೆ ಕಾಡಿದೆ.

ನಾಲ್ಕುನಾಡಿನ ವ್ಯಾಪ್ತಿಯಲ್ಲಿ ಸಮೃದ್ಧಿ ಮಳೆಯಾಗುತ್ತಿದ್ದ ದಿನಗಳಿದ್ದವು.ಆದರೆ ಇತ್ತೀಚೆಗೆ ಮಳೆ ಕೈಕೊಟ್ಟಿದೆ. ಒಂದೆರಡು ಮಳೆಯಾಗಿದ್ದರೂ ಭುವಿ ತಂಪಾಗಿಲ್ಲ .ಆಗೊಮ್ಮೆ ಈಗೊಮ್ಮೆ ಬಿರುಮಳೆ ಸುರಿಯುವಂತೆ ಅನ್ನಿಸಿದರೂ ಒಂದಷ್ಟು ಹನಿ ಸುರಿಸಿ ಬೆಳೆಗಾರರಿಗೆ ನಿರಾಸೆ ಉಂಟು ಮಾಡಿದೆ. ಬಿಸಿಲಿನ ಝಳಕ್ಕೆ ಕೆರೆಗಳಲ್ಲಿ ನೀರು ಇಂಗಿದೆ.ಮುಂದಿನ ವರ್ಷಗಳಲ್ಲೂ ಇದೇ ಪರಿಸ್ಥಿತಿ ಎಂಬ ಆತಂಕದಿಂದ ಹಲವೆಡೆ ರೈತರು ಕೆರೆ ವಿಸ್ತರಣೆಗೆ ಮುಂದಾಗಿದ್ದಾರೆ. ಈಗಾಗಲೇ ಇರುವ ಪುಟ್ಟ ಕೆರೆಗಳನ್ನು ಹಿಗ್ಗಿಸುತ್ತಿದ್ದಾರೆ.ಅಲ್ಲಲ್ಲಿ ಇದ್ದ ಸಣ್ಣ ಸಣ್ಣ ಕೃಷಿಹೊಂಡಗಳು ದೊಡ್ಡ ಕೆರೆಗಳಾಗಿ ಮಾರ್ಪಡುತ್ತಿವೆ. ಸಣ್ಣಕೆರೆಗಳನ್ನು ವಿಸ್ತರಿಸಿ ಮಳೆಗಾಲದ ನೀರು ಹೆಚ್ಚು ಪ್ರಮಾಣದ ಸಂಗ್ರಹವಾಗುವಂತೆ ಮಾಡುವ ದೂರಾಲೋಚನೆ ಬೆಳೆಗಾರರದ್ದು.

ಕಾಫಿ ಇಳುವರಿಯನ್ನು ಹೆಚ್ಚಿಸಿಕೊಳ್ಳಲು ಕೆರೆಗಳು,ಕೃಷಿಹೊಂಡಗಳು ನೆರವಾಗುತ್ತಿದ್ದವು. ಈ ವರ್ಷ ಬಹುತೇಕ ಬೆಳೆಗಾರರಿಗೆ ಕೃಷಿ ಹೊಂಡಗಳಿಂದ ತೋಟಗಳಿಗೆ ನೀರು ಪೂರೈಕೆ ಸಾಧ್ಯವಾಗಿಲ್ಲ. ಒಂದು ಶಿಫ್ಟ್ ಅಂದರೆ ಕನಿಷ್ಠ ನಾಲ್ಕು ಗಂಟೆಗಳ ಕಾಲ ಕಾಫಿ ಹೂ ಅರಳಿಸಲು ನೀರು ಹಾಯಿಸ ಬೇಕಾದ ಅನಿವಾರ್ಯತೆ ಇದೆ. ಅಷ್ಟು ಪ್ರಮಾಣದಲ್ಲಿ ನೀರು ಸಿಗದೇ ಅರ್ಧಂಬರ್ಧ ನೀರು ಹಾಯಿಸಿ ಕೈಬಿಟ್ಟವರಿದ್ದಾರೆ .ಮುಂದಿನ ವರ್ಷ ತೊಡಕಾಗದಿರಲಿ ಎಂದು ರೈತರು ಕೆರೆಗಳ ವಿಸ್ತರಣೆಗೆ ಮನಸ್ಸು ಮಾಡಿದ್ದಾರೆ.

ಬಿಸಿಲಿನ ತಾಪಕ್ಕೆ ಕಾಫಿಯ ಹೂಗಳನ್ನು ಅರಳಿ ಮಿಡಿ ಕಚ್ಚುವಂತೆ ಮಾಡಲು, ಕಾಳುಮೆಣಸಿನ ಬಳ್ಳಿಗಳು ಒಣಗದಂತೆ ನೋಡಿಕೊಳ್ಳಲು ನೀರು ಹಾಯಿಸುವುದು ಅನಿವಾರ್ಯವಾಗುತ್ತಿದೆ. ಬೇಸಿಗೆಯಲ್ಲಿ ಸಂಗ್ರಹಿಸಿದ ನೀರನ್ನು ತೋಟಗಳಿಗೆ ಹಾಯಿಸಲು ಅಗತ್ಯ ವ್ಯವಸ್ಥೆ ಕೈಗೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ಬಿಸಿಲಿನ ಝಳಕ್ಕೆ ತೋಟಗಳು ಒಣಗುತ್ತವೆ.

ಈ ವರ್ಷ ನೀರಿನ ಕೊರತೆಯಿಂದ ತೋಟಗಳಿಗೆ ನೀರು ಹಾಯಿಸಲು ಸಾಧ್ಯವಾಗಿಲ್ಲ. ಉತ್ತಮ ಇಳುವರಿ ಬೇಕಾದಲ್ಲಿ ತೋಟಗಳಿಗೆ ಸಕಾಲದಲ್ಲಿ ನೀರು ಹಾಯಿಸಲೇಬೇಕು. ಕೆರೆ ವಿಸ್ತರಣೆ ಅನಿವಾರ್ಯ.
ನಾರಾಯಣ ಬೇತು ಗ್ರಾಮದ ಕೃಷಿಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT