ಗೋಣಿಕೊಪ್ಪಲು: ‘ಸೈಬರ್ ಕಳ್ಳರು ದಿನಕ್ಕೊಂದು ವಂಚನೆಯ ಹೊಸ ಮಾರ್ಗ ಕಂಡುಕೊಳ್ಳುತ್ತಿದ್ದು, ಮೊಬೈಲ್ ಕರೆ ಮಾಡಿ ಮರುಳು ಮಾಡುವ ವಂಚನೆಗೆ ಒಳಗಾಗಬೇಡಿ’ ಎಂದು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಬಿ.ಪ್ರಸಾದ್ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಡಿಕೇರಿ ವಕೀಲರ ಸಂಘ, ಕಾವೇರಿ ಕಾಲೇಜಿನ ಎನ್‌ಸಿಸಿ ಘಟಕದ ಸಂಯುಕ್ತಾಶ್ರಯದಲ್ಲಿ ಅಪರಾಧ ತಡೆಗಟ್ಟುವಿಕೆ ಮತ್ತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಸೋಮವಾರ ನಡೆದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಇತ್ತಿಚಿನ ದಿನಗಳಲ್ಲಿ ಬ್ಯಾಂಕಿಂಗ್, ಆನ್‌ಲೈನ್ ವಂಚನೆ, ಸರ್ಕಾರಿ ವೆಬ್ ಸೈಟ್‌ಗಳ ಹ್ಯಾಕ್, ಮೊಬೈಲ್ ಫೋನ್ ಹಾಗೂ ಇ-ಮೇಲ್ ಮೂಲಕ ವಂಚನೆ ನಡೆಯುತ್ತಿದೆ. ಅನುಮತಿ ಇಲ್ಲದೆ ಒಬ್ಬರ ಫೋಟೋ ಹಾಕುವುದು, ಬ್ಯಾಂಕಿಂಗ್ ಹಾಗೂ ಎಸ್‌ಎಂಎಸ್ ಮೂಲಕ ನಡೆಸುವ ವಂಚನೆಗಳು ಮಾಹಿತಿ ತಂತ್ರಜ್ಞಾನ ಕಾಯ್ದೆಯಲ್ಲಿ ಬರುತ್ತವೆ. ಅಂತರ್ಜಾಲದ ಬಳಕೆದಾರರು ಸೈಬರ್ ಅಪರಾಧಗಳ ಕುರಿತು ಎಚ್ಚರ ವಹಿಸಬೇಕು’ ಎಂದು ಸಲಹೆ ನೀಡಿದರು.
ಜಿಲ್ಲಾ ಅಪರಾಧ ಪೊಲೀಸ್ ಠಾಣೆಯ ಬಿ.ಕೆ.ದೀಪಕ್, ‘ಮೊಬೈಲ್ ನಂಬರ್‌ಗೆ ಅಪರಿಚಿತ ವ್ಯಕ್ತಿಗಳು ಕರೆಮಾಡಿ ನಾನು ಬ್ಯಾಂಕ್ ಅಧಿಕಾರಿ ಎಂದು ಹೇಳಿ ಎಟಿಎಂನ ಕ್ರೆಡಿಟ್, ಡೆಬಿಟ್ ಕಾರ್ಡ್ ಮುಕ್ತಾಯಗೊಂಡಿದೆ. ಅದನ್ನು ನವೀಕರಣ ಮಾಡಲು ಒಟಿಪಿ ತಿಳಿಸಿ ಎಂದು ಖಾತೆಯಿಂದ ಹಣ ಲಪಟಾಯಿಸುತ್ತಾರೆ. ಇಂತಹ ಕೆರೆಗಳ ಬಗ್ಗೆ ಎಚ್ಚರವಹಿಸಬೇಕು. ಯಾರು ಕೂಡ ಅಪರಿಚಿತ ಫೋನ್ ಕೆರೆಗಳಿಗೆ ಸ್ಪಂದಿಸಿ ಮೋಸ ಹೋಗಬಾರದು’ ಎಂದು ಮಾಹಿತಿ ನೀಡಿದರು.
ಸಾಮಾಜಿಕ ಜಾಲತಾಣ, ಆನ್‌ಲೈನ್ ಖರೀದಿ, ಲಾಟರಿ ಬಹುಮಾನ ಇತ್ಯಾದಿಗಳ ಅಮೀಷ, ಫೇಸ್ ಬುಕ್, ವಾಟ್ಸಾಪ್ , ಉದ್ಯೋಗದ ಆಮಿಷವೊಡ್ಡಿ ಸಾಮಾಜಿಕ ಜಾಲತಾಣದ ಮೂಲಕ ಸೈಬರ್ ಅಪರಾಧಗಳು ಹೆಚ್ಚುತ್ತಿವೆ. ಅನ್‌ಲೈನ್ ಮೂಲಕ ವ್ಯವಹರಿಸುವಾಗ ಜಾಗರೂಕತೆಯಿಂದ ಇರಬೇಕು. ಯುವ ಜನತೆ ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿ ತಮ್ಮ ಪ್ರಾಣ ಕಳೆದುಕೊಳ್ಳಬೇಡಿ. ಅಪರಿಚಿತರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳುವಾಗ ಎಚ್ಚರಿಕೆಯಿಂದ ಇರಬೇಕು’ ಎಂದರು.
ಪ್ರಾಂಶುಪಾಲ ಎಂ.ಬಿ.ಕಾವೇರಪ್ಪ, ಉಪಪ್ರಾಂಶುಪಾಲ ಎಂ.ಕೆ,ಪದ್ಮಾ, ನಯನಾ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಚಾಲಕ ಜೋಯಪ್ಪ, ಲೆಫ್ಟಿನೆಂಟ್ ಎಂ.ಆರ್.ಅಕ್ರಂ ಲೆಫ್ಟಿನೆಂಟ್ ಐ.ಡಿ.ಲೇಪಾಕ್ಷಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.