ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ 2024 | ಕೊಡಗಿನ ಆಕಾಂಕ್ಷಿಗಳಿಗೆ ಟಿಕೆಟ್: ಕೂಗು

ಬಿಜೆಪಿ, ಕಾಂಗ್ರೆಸ್‌ ಪಡಸಾಲೆಯಲ್ಲಿ ಬಲವಾಗಿ ಕೇಳಿ ಬರುತ್ತಿರುವ ಒತ್ತಾಯ
Published 30 ಜನವರಿ 2024, 23:30 IST
Last Updated 30 ಜನವರಿ 2024, 23:30 IST
ಅಕ್ಷರ ಗಾತ್ರ

ಮಡಿಕೇರಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈಸೂರು– ಕೊಡಗು ಕ್ಷೇತ್ರಕ್ಕೆ ಕೊಡಗು ಜಿಲ್ಲೆಯ ಅಭ್ಯರ್ಥಿಯನ್ನೇ ಪರಿಗಣಿಸಬೇಕು ಎನ್ನುವ ಕೂಗು ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಇಲ್ಲಿ ಬಲವಾಗಿ ಕೇಳಿ ಬರುತ್ತಿದೆ. ವಾಟ್ಸ್‌ಆ್ಯಪ್‌ ಗ್ರೂಪ್‌ಗಳು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಿನ ಚರ್ಚೆಗಳು ನಡೆಯುತ್ತಿವೆ.

1969ರಲ್ಲಿ ಕೊಡಗು ಜಿಲ್ಲೆಯಿಂದ ಸಿ.ಎಂ.ಪೂಣಚ್ಚ ಅವರು ಸಂಸತ್ತಿಗೆ ಆಯ್ಕೆಯಾಗಿದ್ದನ್ನು ಬಿಟ್ಟರೆ ಇಲ್ಲಿನ ಬೇರಾರಿಗೂ ಅವಕಾಶವೇ ದೊರೆತಿಲ್ಲ. ಕೊಡಗಿನ ಆಕಾಂಕ್ಷಿಗಳನ್ನು ಸತತವಾಗಿ ನಿರ್ಲಕ್ಷಿಸಲಾಗುತ್ತಿದೆ. ಈ ಬಾರಿಯಾದರೂ ಇಲ್ಲಿನವರಿಗೆ ಟಿಕೆಟ್ ಕೊಡಬೇಕು ಎಂದು ಬಿಜೆಪಿಯ ಹಲವು ಮುಖಂಡರು ವರಿಷ್ಠರನ್ನು ಒತ್ತಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

‘ಕೊಡಗು ಜಿಲ್ಲೆಯವರಿಗೆ ಟಿಕೆಟ್ ನೀಡಿದರೆ ಗೆಲ್ಲುವುದಿಲ್ಲ. ಹೆಚ್ಚಿನ ಮತಗಳು ಮೈಸೂರು ಜಿಲ್ಲೆಯಲ್ಲಿರುವುದರಿಂದ ಅಲ್ಲಿಯವರಿಗೆ ಟಿಕೆಟ್ ನೀಡಬೇಕು’ ಎನ್ನುವ ವಾದವನ್ನು ಬಲವಾಗಿ ತಳ್ಳಿ ಹಾಕಿರುವ ಇಲ್ಲಿನ ಬಿಜೆಪಿ ಮುಖಂಡರು, ಪ್ರತಾಪ ಸಿಂಹ ಮೈಸೂರಿನವರೂ ಅಲ್ಲ, ಕೊಡಗಿನವರೂ ಅಲ್ಲ. ಯಾರೇ ಅಭ್ಯರ್ಥಿಯಾದರೂ ಪ್ರಧಾನಿ ನರೇಂದ್ರ ಮೋದಿ ಅವರ ನಾಮಬಲದಿಂದ ಗೆಲ್ಲುವ ಅವಕಾಶ ಇದೆ’ ಎಂದು ವಾದ ಮಂಡಿಸುತ್ತಾರೆ.

‘ಕೊಡಗಿನವರೇ ಅಭ್ಯರ್ಥಿಯಾದರೆ ಪಕ್ಷಾತೀತವಾಗಿ ಮತಗಳು ಬರುವ ಜೊತೆಗೆ, ಕೊಡಗಿಗೆ ಹೊಂದಿಕೊಂಡ ಪಿರಿಯಾಪಟ್ಟಣ ಹಾಗೂ ಹುಣಸೂರು ತಾಲ್ಲೂಕಿನವರ ಬೆಂಬಲವೂ ಸಿಗಲಿದೆ. ಅಲ್ಲಿಂದ ನಿತ್ಯ 10 ಸಾವಿರಕ್ಕೂ ಅಧಿಕ ಮಂದಿ ಕೊಡಗಿಗೆ ಕೆಲಸಕ್ಕಾಗಿ ಬರುತ್ತಿದ್ದಾರೆ. ಇವರಲ್ಲಿ ಉದ್ಯೋಗ ಕೊಟ್ಟ ಕೊಡಗಿನ ಬಗ್ಗೆ ಪಕ್ಷಾತೀತವಾದ ಒಲವು ಇದೆ. ಹಾಗಾಗಿ, ಈ ಭಾಗದ ಮತಗಳನ್ನೂ ಸೆಳೆಯಬಹುದು’ ಎಂಬ ವಾದ ಬಿಜೆಪಿ ಮುಖಂಡರದಾಗಿದೆ.

ಈಚೆಗೆ ಬೆಂಗಳೂರಿನಲ್ಲಿ ನಡೆದ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಕೊಡಗು ಜಿಲ್ಲೆಯಿಂದ ತೆರಳಿದ ಸಮಿತಿ ಸದಸ್ಯರಲ್ಲಿ ಬಹುಪಾಲು ಮಂದಿ ಕೊಡಗು ಜಿಲ್ಲೆಗೆ ಸೇರಿದ ಯಾವುದೇ ಆಕಾಂಕ್ಷಿಗಾದರೂ ಟಿಕೆಟ್ ಕೊಡಿ ಎಂದು ಮನವಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಿಜೆಪಿಯ ಕೊಡಗು ಜಿಲ್ಲಾ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ‘ಕೊಡಗಿನ ಆಕಾಂಕ್ಷಿಗೆ ಟಿಕೆಟ್ ಕೊಡಬೇಕು ಎನ್ನುವ ಒತ್ತಾಯ ಸಾರ್ವಜನಿಕ ವಲಯದಲ್ಲಿ ಇರುವುದು ನಿಜ. ಆದರೆ, ಪಕ್ಷದ ವರಿಷ್ಠರು ಯಾರಿಗೇ ಟಿಕೆಟ್ ಕೊಟ್ಟರೂ ಅವರ ಪರವಾಗಿ ಕೆಲಸ ಮಾಡುತ್ತೇನೆ’ ಎಂದು ಹೇಳಿದರು.

ನನಗೆ ಲೋಕಸಭಾ ಚುನಾವಣೆ ಬಗ್ಗೆ ಹೆಚ್ಚಿನ ಆಸಕ್ತಿ ಇಲ್ಲ. ಪಕ್ಷದ ವರಿಷ್ಠರು ಯಾರಿಗೇ ಟಿಕೆಟ್ ಕೊಟ್ಟರೂ ಪಕ್ಷದ ಪರವಾಗಿ ಕೆಲಸ ಮಾಡುವೆ
–ಕೆ.ಜಿ.ಬೋಪಯ್ಯ ಬಿಜೆಪಿ ಮುಖಂಡ.
ಕೊಡಗಿನ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎನ್ನುವ ಒತ್ತಾಯ ಇರುವುದು ನಿಜ. ಪಕ್ಷದ ವರಿಷ್ಠರು ಕೈಗೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ
–ಎಂ.ಪಿ.ಅಪ್ಪಚ್ಚುರಂಜನ್, ಬಿಜೆಪಿ ಮುಖಂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT