ನಾಪೋಕ್ಲು: ಧೋ ಎಂದು ಸುರಿವ ಮಳೆಯಲ್ಲೂ ಭೂಮಿ ತಾಯಿ ಹತ್ತು ಹಲವು ಹೂಗಳಿಂದ ಸಿಂಗಾರಗೊಳ್ಳುತ್ತಾಳೆ. ಸುರಿವ ಮಳೆಗೆ ಕೊಳೆಯದ ಗೆಡ್ಡೆಗಳಿಂದ ಅರಳುವ ಹೂಗಳು ಮುಂಗಾರು ಚಿತ್ರಗಳಿಗೆ ವಿಭಿನ್ನವಾದ ಮುನ್ನುಡಿ ಬರೆಯುತ್ತವೆ. ಟಪಟಪ ಬೀಳುವ ಮಳೆಯಲ್ಲೂ ದಳಗಳನ್ನು ಅರಳಿಸಿಕೊಂಡ ವಿವಿಧ ಬಗೆಯ ಹೂಗಳ ಚೆಲುವನ್ನು ಕಣ್ತುಂಬಿಕೊಳ್ಳುವುದೇ ರೋಮಾಂಚನ.
ಮುಂಗಾರಿನ ಮೊದಲ ಮಳೆ ಭೂಮಿಗೆ ಇಳಿಯುತ್ತಿದ್ದಂತೆ ನೆಲದಾಳದಲ್ಲಿ ಅಡಗಿದ್ದ ಗೆಡ್ಡೆಗಳು ಮೆಲ್ಲನೆ ಜಿಗಿದೆದ್ದು ಹೂ ಅರಳಿಸುತ್ತವೆ. ಅಲ್ಲಿಯವರೆಗೆ ಅದೆಷ್ಟೇ ನೀರು ಸುರಿದರೂ ಸುಮ್ಮನಿರುವ ಗೆಡ್ಡೆಗಳು ಗುಡುಗು ಸಹಿತ ಸುರಿವ ಮೊದಲ ಮಳೆಗೆ ಕಾದಿದ್ದು, ಮಳೆ ಬಿರುಸುಗೊಳ್ಳುತ್ತಿದ್ದಂತೆ ಹೂಗಳನ್ನರಳಿಸುತ್ತವೆ. ಲಿಲ್ಲಿ, ಕ್ಯಾನಾ, ಡೇಲಿಯ, ಆರ್ಕಿಡ್‌ಗಳು, ಸುಗಂಧಿ, ರಥಪುಷ್ಪ ಮಳೆಗಾಲದ ಹೂಗಳು.
ಮಳೆಲಿಲ್ಲಿ ಮಳೆಗಾಲದ ವಿಶೇಷ ಹೂ. ಸಾಧಾರಣವಾಗಿ ಗಡ್ಡೆಯ ರೂಪದಲ್ಲಿ ನೆಲದಡಿಯಲ್ಲಿ ಇರುವ ಇವು ಮಳೆಬಿದ್ದ ಕೂಡಲೇ ಮೈ ಕೊಡವಿಕೊಂಡು ಮೇಲೆದ್ದು ಬರುತ್ತವೆ. ಧೋ ಎಂದು ಸುರಿಯುವ ಮಳೆಯಲ್ಲಿ ದಟ್ಟ ಬಣ್ಣದಿಂದ ಈ ಹೂಗಳು ಎಲ್ಲರನ್ನು ಸೆಳೆಯುತ್ತವೆ. ಈರುಳ್ಳಿ ತರಹದ ಗೆಡ್ಡೆಗಳನ್ನು ಬೇಸಿಗೆಯಲ್ಲಿ ಸಾಲಾಗಿ ನೆಟ್ಟುಬಿಟ್ಟರೆ ಮಳೆ ಬಂದಾಗ ಹೂ ಬಿಡುತ್ತವೆ. ಮತ್ತೆ ಮುಂದಿನ ವರ್ಷಕ್ಕೆ ಗೆಡ್ಡೆಯ ರೂಪದಲ್ಲಿ ಉಳಿದು ತಾನಾಗಿಯೇ ಮೇಲೇಳುತ್ತವೆ.
ಸುರುಳಿ ಅಥವಾ ಸುಗಂಧಿ ಪುಷ್ಪ ಶುಂಠಿ ಜಾತಿಗೆ ಸೇರಿದ ಹೂವು. ಮಳೆಗಾಲದಲ್ಲಿ ಪರಿಮಳದ ಬೀರುವ ಗಿಡ. ಗೆಡ್ಡೆಗಳನ್ನು ನಾಟಿ ಮಾಡುವುದರ ಮೂಲಕ ಹೊಸ ಗಿಡಗಳನ್ನು ಪಡೆಯಬಹುದು. ಸೀತೆ ಹೂ ಎಂಬ ಹೆಸರು ಹೊತ್ತ ಆರ್ಕಿಡ್ ಜಾತಿಯ ಹೂಗಳ ಹಲವು ಬಗೆಗಳನ್ನು ಪಶ್ಚಿಮ ಘಟ್ಟದ ಕಾಡುಗಳಲ್ಲಿ ಕಾಣಬಹುದು. ಸಾಧಾರಣವಾಗಿ ಈ ಹೂವುಗಳು ಜಿಲ್ಲೆಯಲ್ಲಿ ಮುಂಗಾರು ಮಳೆಯಲ್ಲಿ ಕಾಡಿನಲ್ಲಿ ಈ ಹೂವು ಕಾಣಸಿಗುತ್ತವೆ.
ಸೀತೆ ಹೂವು ಮರಗಳ ಆಶ್ರಯದಲ್ಲಿ ಪೊಟರೆಗಳಲ್ಲಿ ಬೆಳೆಯುವ ಪರಾವಲಂಬಿ ಸಸ್ಯ. ಇದು ನೆಲದಲ್ಲಿ ಮಣ್ಣಿನಲ್ಲಿ ಕಂಡು ಬರುವುದಿಲ್ಲ. ಸೀತೆ ಹೂವು ಅಥವಾ ಅಡವಿ ಸುಂದರಿ ಮಳೆಗಾಲದಲ್ಲಿ ಮಾತ್ರ ಕಂಡು ಬರುತ್ತದೆ. ಬೇಸಿಗೆಯಲ್ಲಿ ಈ ಸಸ್ಯ ಮರದಲ್ಲಿ ಒಣಗಿ ಹೋಗುತ್ತದೆ. ಮಳೆ ಪ್ರಾರಂಭವಾದ ಕೂಡಲೇ ಹಸಿರ ಗಿಡ ಕಾಣಿಸಿಕೊಂಡು ಇದರಲ್ಲಿ ಹೂ ಬಿಟ್ಟು ಸೂಜಿಗಲ್ಲಿನಂತೆ ಸೆಳೆಯುತ್ತದೆ.
ಸೀತೆ ಹೂವು ಒಂದೇ ಗೊಂಚಲಲ್ಲಿ 5-10 ಹೂವುಗಳನ್ನು ಬಿಡುತ್ತದೆ. ಈ ಹೂವುಗಳು ಬಿಳಿ, ನೀಲಿ, ನೇರಳೆ ಮಿಶ್ರಿತವಾದ ಹೂವಾಗಿದ್ದು, 1-2 ಅಡಿಗಳಷ್ಟು ಉದ್ದವಾಗಿ ಬೆಳೆದು ಕಂಗೊಳಿಸುತ್ತವೆ. ಹೂವುಗಳು ಕಿತ್ತ ಬಳಿಕ 10 ದಿನಗಳವರೆಗೆ ಬಾಡದೇ ಹಾಗೆಯೇ ಉಳಿಯುತ್ತವೆ. ಮರದಲ್ಲಿ ತಿಂಗಳುಗಳ ಕಾಲ ಬಾಡದೇ ಇರುವ ಈ ಹೂವುಗಳನ್ನು ವೈಜ್ಞಾನಿಕವಾಗಿ ರಿಂಕೋ ಸ್ಟೈಲಿಸ್ ರೆಟೂಸ ಎನ್ನುತ್ತಾರೆ.
ಮಳೆಗಾಲದಲ್ಲಿ ಮನೆಯಂಗಳದಲ್ಲಿ ಕಂಗೊಳಿಸುವ ಹೂಗಳಲ್ಲಿ ಡೇಲಿಯ ಪ್ರಮುಖವಾದುದು. ಪ್ರತಿ ವರ್ಷ ಹೊಸದಾಗಿ ನಾಟಿ ಮಾಡಿದರೆ ಅಂಗಳದ ತುಂಬೆಲ್ಲ ಸ್ವರ್ಗವನ್ನೇ ಸೃಷ್ಟಿ ಮಾಡುವ ತಾಕತ್ತು ಇವುಗಳಿಗೆ ಇವೆ. ಗೆಡ್ಡೆಗಳಿಂದಲೇ ಈ ಗಿಡವನ್ನು ಬೆಳೆಸಬಹುದು. ಗೌರಿ ಹಬ್ಬದ ಸಂದರ್ಭದಲ್ಲಿ ಪುಷ್ಪಲೋಕದ ವಿಸ್ಮಯವಾಗಿ ಗೌರಿ ಹೂ ಕಂಗೊಳಿಸುತ್ತದೆ. ಇದರ ಗೆಡ್ಡೆಗಳು ವಿಷಕಾರಿ. ಮೊದಲು ಕಾಡಿನಲ್ಲಿದ್ದ ಈ ಹೂಗಳು ತಮ್ಮ ಚೆಲುವಿನಿಂದ ಈಗ ಹೂದೋಟಗಳಲ್ಲಿ ಸ್ಥಳ ಪಡೆದಿವೆ.
ಮನೆಯಂಗಳದಲ್ಲಿ ಮಾತ್ರವಲ್ಲ, ಯಾರ ಹಂಗಿಗೂ ಒಳಗಾಗದೆ ಪ್ರಕೃತಿ ತಾನೆ ತಾನಾಗಿ ಅರಳಿಸಿ ನಗಿಸುವ ಹಲವು ಹೂಗಳು ದಾರಿ ಬದಿಯಲ್ಲಿ ಕಾಣಿಸುತ್ತವೆ. ರಥಪುಷ್ಪ ಅಥವಾ ತೇರುಹೂ ಮಳೆ ಸುರಿದಷ್ಟೂ ಅರಳಿ ಕಂಗೊಳಿಸುತ್ತವೆ.
ಮುಂಗಾರಿನ ಮಳೆಗೆ ಮೈಕೊಡವಿ ಎದ್ದು ನಿಲ್ಲುವ ಹೂಗಳು ಸ್ವರ್ಗವನ್ನೇ ಸೃಷ್ಟಿಸುವ ಪುಷ್ಪಲೋಕ ಸೃಷ್ಟಿಯ ವಿಸ್ಮಯಕ್ಕೆ ಮಾರು ಹೋದ ಜನಸಮುದಾಯ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.