ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಶಾಲನಗರ: ಮತದಾನ ಮಾಡಿದ ನವ ದಂಪತಿ

Published 27 ಏಪ್ರಿಲ್ 2024, 6:10 IST
Last Updated 27 ಏಪ್ರಿಲ್ 2024, 6:10 IST
ಅಕ್ಷರ ಗಾತ್ರ

ಕುಶಾಲನಗರ: ತಾಲ್ಲೂಕು ವ್ಯಾಪ್ತಿಯ 97 ಮತಗಟ್ಟೆ ಕೇಂದ್ರಗಳಲ್ಲಿ ಶಾಂತಿಯುತ ಮತದಾನ ನಡೆಯಿತು.

ಸಮೀಪದ ಹೆಬ್ಬಾಲೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮತದಾನ ಕೇಂದ್ರ 102ರ ಮತಗಟ್ಟೆಯಲ್ಲಿ ಮಧ್ಯಾಹ್ನ ಎಲೆಕ್ಟ್ರಾನಿಕ್ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಅರ್ಧತಾಸಿಗೂ ಹೆಚ್ಚು ಕಾಲ ಮತದಾನ ಸ್ಥಗಿತಗೊಂಡಿತು. ತಕ್ಷಣ ಸ್ಥಳಕ್ಕೆ ಸೆಕ್ಟರ್ ಅಧಿಕಾರಿ ಡಾ.ಲಿಂಗರಾಜು ದೊಡ್ಡಮನಿ ಭೇಟಿ ಪರಿಶೀಲನೆ ನಡೆಸಿ ವಿವಿಪ್ಯಾಟ್‌ನಲ್ಲಿ ಬ್ಯಾಟರಿ ಲೋ ಆಗಿದ್ದು, ಇದರಿಂದ ದೋಷ ಕಂಡು ಬಂದಿದೆ ಎಂದು ಹೇಳಿ ವಿವಿ ಪ್ಯಾಟ್ ಬದಲಾವಣೆ ಮಾಡಿದರು. ನಂತರ ಮತದಾನ ಪ್ರಕ್ರಿಯೆ ಮುಂದುವರೆಯಿತು.

ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಿರುವ ಮೂರು, ಮಹಿಳಾ ಸಮಾಜದಲ್ಲಿ ಮೂರು, ರೈತ ಸಂಪರ್ಕ ಕೇಂದ್ರದಲ್ಲಿ ಒಂದು, ನೀರಾವರಿ ಇಲಾಖೆಯ ಕಚೇರಿಯಲ್ಲಿ ಒಂದು, ಸರ್ಕಾರಿ ಪಿಯು ಕಾಲೇಜಿನಲ್ಲಿ ಒಂದು, ಅರಣ್ಯ ಇಲಾಖೆ ಕಚೇರಿಯಲ್ಲಿ ಒಂದು, ಮುಳ್ಳುಸೋಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರು, ಕೂಡುಮಂಗಳೂರು ಎರಡು, ಕೂಡಿಗೆ ಪ್ರಾಥಮಿಕ ಶಾಲೆಯಲ್ಲಿ ಎರಡು, ಹೆಬ್ಬಾಲೆ ಪ್ರಾಥಮಿಕ ಶಾಲೆಯಲ್ಲಿ ಮೂರು ಮತಗಟ್ಟೆ ಕೇಂದ್ರಗಳಲ್ಲಿ ಬೆಳಿಗ್ಗೆಯಿಂದಲೇ ಬಿರುಸಿನ ಮತದಾನ ಆರಂಭಗೊಂಡಿತು.

ಆದರೆ ಅತ್ತೂರು, ಚಿಕ್ಕತ್ತೂರು,ಕೂಡಿಗೆಯ ಶಾಲೆಯಲ್ಲಿ ಸ್ಥಾಪಿಸಿರುವ ಮತದಾನ ಕೇಂದ್ರದಲ್ಲಿ ನಿಧಾನಗತಿಯಲ್ಲಿ ಮತದಾನ ಆರಂಭಗೊಂಡಿತು. ಮಹಿಳಾ ಸಮಾಜದ 166 ಮತಗಟ್ಟೆ ಕೇಂದ್ರದಲ್ಲಿ ಮತದಾನ ಪ್ರಕ್ರಿಯೆ ನಿಧಾನವಾದ ಹಿನ್ನೆಲೆಯಲ್ಲಿ ತಡವಾಗುತ್ತಿರುವ ಬಗ್ಗೆ ಮತದಾರರು ಆಕ್ರೋಶ ವ್ಯಕ್ತಪಡಿಸಿದರು. ಶಿರಂಗಾಲ ಮತ್ತು ಮುಳ್ಳುಸೋಗೆ ಸಖಿ ಮತಗಟ್ಟೆಯಲ್ಲಿ ನಿಧಾನಗತಿಯಲ್ಲಿ ಮತದಾನ ನಡೆಯಿತು.
ವಯೋವೃದ್ಧರು ಹಾಗೂ ಅಂಗವಿಕಲರನ್ನು ಸ್ವಯಂ ಸೇವಕರು ತಳ್ಳುವ ಗಾಡಿಯಲ್ಲಿ ಕರೆದುಕೊಂಡು ಹೋಗಿದ ಮತದಾನಕ್ಕೆ ‌ಅವಕಾಶ ಮಾಡಿಕೊಟ್ಟರು.

ಮತದಾನ ಪಟ್ಟಿಯಲ್ಲಿ ಅನೇಕ ಯುವ ಮತದಾರರು ಹೆಸರು ಕೈಬಿಟ್ಟು ಹೋಗಿರುವ ಹಾಗೂ ಹೆಸರು ತಪ್ಪಾದ ಹಿನ್ನೆಲೆಯಲ್ಲಿ ಕೆಲವು ಕಡೆ ಅನೇಕ ಮತದಾರರು ಮತದಾನದ ಅವಕಾಶದಿಂದ ವಂಚಿತರಾದರು. ಎಲ್ಲಾ ಮತದಾನ ಕೇಂದ್ರಗಳಲ್ಲೂ ಬಿಗಿ ಪೊಲೀಸ್ ಭದ್ರತೆ ವ್ಯವಸ್ಥೆ ಕಲ್ಪಿಸಲಾಗಿತ್ತು.

ಅಳುವಾರ, ಹೆಬ್ಬಾಲೆ, ಕೂಡಿಗೆ ಹಾಗೂ ಕುಶಾಲನಗರ ಮತದಾನ ಕೆಂದ್ರಗಳಿಗೆ ಶಾಸಕ ಡಾ.ಮಂತರ್ ಗೌಡ ಭೇಟಿ ನೀಡಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್, ನಗರ ಘಟಕದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡೂರಾವ್ ನೇತೃತ್ವದಲ್ಲಿ ಕಾರ್ಯಕರ್ತರು ಅಭ್ಯರ್ಥಿ ಲಕ್ಷ್ಮಣ್ ಪರವಾಗಿ ಹಾಗೂ ಬಿಜೆಪಿ, ಜೆಡಿಎಸ್ ಮುಖಂಡರಾದ ಚರಣ್, ಮಧುಸೂದನ್, ಚಂದ್ರು, ಬಿ.ಜೈವರ್ಧನ್ ಸೇರಿದಂತೆ ಕಾರ್ಯಕರ್ತರು ಅಭ್ಯರ್ಥಿ ಯದುವೀರ್ ಪರವಾಗಿ ಮತದಾರರ ಮನವೊಲಿಸುವ ಅಂತಿಮ ಪ್ರಯತ್ನ ಮಾಡಿದರು.

ನವ ವಧು–ವರರಿಂದ ಹಕ್ಕು ಚಲಾವಣೆ : ಮೈಸೂರಿನಲ್ಲಿ ವಿವಾಹವಾದ ಕೂಡಿಗೆ ಗ್ರಾಮದ ನಿವಾಸಿ ಸೋಮಣ್ಣ ಎಂಬುವವರ ಪುತ್ರ ಕೆ.ಎಸ್.ಶ್ರೀನಿವಾಸ್ ಅವರು ಕೂಡಿಗೆ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ಅದೇ ರೀತಿ ನವವಿವಾಹಿತೆ ಕಾವ್ಯಶ್ರೀ ಕೂಡ ಮೈಸೂರಿನಲ್ಲಿ ಮತ ಚಲಾಯಿಸಿದರು.

ಮದುವೆ ಸಮಾರಂಭವನ್ನು ಬೇಗ ಮುಗಿಸಿಕೊಂಡು ಐವತ್ತಕ್ಕೂ ಹೆಚ್ಚಿನ ಮಂದಿ ಮದುವೆಗೆ ಬಂದಿದ್ದ ಬಂಧು ಬಾಂಧವರನ್ನು ಬಸ್ಸಿನಲ್ಲಿ ಕರೆದುಕೊಂಡು ಬಂದು ಮತದಾನ ಮಾಡಿಸುವ ಮೂಲಕ ಮಧುಮಗ ಶ್ರೀನಿವಾಸ್ ತಮ್ಮ ಜವಾಬ್ದಾರಿ ಮರೆದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರತಿಯೊಬ್ಬರೂ ತಪ್ಪದೆ ಮತದಾನ ಮಾಡಬೇಕು. ಇದು ನಮ್ಮ ಹಕ್ಕು. ದೇಶ ಕಟ್ಟುವ ಕಾಯಕದಲ್ಲಿ ಎಲ್ಲರೂ ಕೈಜೋಡಿಸಬೇಕು. ಈ ಹಿನ್ನೆಲೆಯಲ್ಲಿ ನನ್ನ ಮದುವೆಯನ್ನು ಮೈಸೂರಿನಲ್ಲಿ ಬೇಗ ಮುಗಿಸಿಕೊಂಡು ಸಮಯಕ್ಕೆ ಸರಿಯಾಗಿ ಪತ್ನಿಯೊಂದಿಗೆ ಆಗಮಿಸಿ ಮತದಾನ ಮಾಡಿದ್ದೇನೆ ಎಂದು ಹೇಳಿದರು.

ಕುಶಾಲನಗರದ ಕಲ್ಯಾಣ ಮಂಟಪವೊಂದರಲ್ಲಿ ವಿವಾಹವಾದ ಮಧುವಣಗಿತ್ತಿ ಮತಗಟ್ಟೆಗೆ ತೆರಳಿ ಮತದಾನ ಮಾಡಿದರು. ಜಿಲ್ಲಾ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ನಾಗೇಂದ್ರ ಪ್ರಸಾದ್ ಅವರ ಪುತ್ರಿ ಬಿ.ಎನ್.ಅಪೂರ್ವ ಅವರ ವಿವಾಹ ಏಪ್ರಿಲ್ 26ರ ಮತದಾನದ ದಿನದಂದು ಇಲ್ಲಿನ ಮಾರುತಿ ಸಭಾಂಗಣದಲ್ಲಿ ನಡೆದಿತ್ತು. ಮಧ್ಯಾಹ್ನ‌ ವಿವಾಹದ ಧಾರ್ಮಿಕ ವಿಧಿಗಳನ್ನು ಪೂರೈಸಿದ ಮಧುವಣಗಿತ್ತಿ ಕುಶಾಲನಗರದ ಮತಗಟ್ಟೆಗೆ ತೆರಳಿ ತಮ್ಮ ಹಕ್ಕು ಚಲಾಯಿಸಿದರು. ಮಧುಮಗ ಧನಂಜಯ ಗುಪ್ತ ಸಾಥ್ ನೀಡಿದರು.

ಸೀಗೆಹೊಸೂರು ಬೂತ್ ಸಂಖ್ಯೆ 149ರಲ್ಲಿ ನವದಂಪತಿ ಹರ್ಶನ್ ಪಿ.ಆರ್, ಚಂದ್ರಕಲಾ ತಮ್ಮ ಹಕ್ಕನ್ನು ಚಲಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT