ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ‘ಬೆಳಕಿನ ದಸರೆ’ಗೆ ಮುನ್ನುಡಿ ಬರೆಯಲಿದೆ ಕರಗೋತ್ಸವ

ನಾಳೆ ಸಂಜೆ 5 ಗಂಟೆಗೆ ಮಹದೇವಪೇಟೆಯ ಪಂಪಿನಕೆರೆ ಆವರಣದಿಂದ ಚಾಲನೆ
Published 14 ಅಕ್ಟೋಬರ್ 2023, 5:43 IST
Last Updated 14 ಅಕ್ಟೋಬರ್ 2023, 5:43 IST
ಅಕ್ಷರ ಗಾತ್ರ

ಮಡಿಕೇರಿ: ಮಡಿಕೇರಿಯ ‘ಬೆಳಕಿನ ದಸರಾ’ಕ್ಕೆ ಮುನ್ನುಡಿ ಬರೆಯಲಿರುವ ಕರಗೋತ್ಸವಕ್ಕಾಗಿ ಸಿದ್ಧತೆಗಳು ಭರದಿಂದ ನಡೆದಿವೆ. ಅ. 15 ರಂದು ಸಂಜೆ 5 ಗಂಟೆಗೆ ಮಹದೇವಪೇಟೆಯ ಪಂಪಿನಕೆರೆ ಆವರಣದಿಂದ 4 ಕರಗಗಳು ಹೊರಡಲಿವೆ. ಅದಕ್ಕಾಗಿ ಇಲ್ಲಿನ ಎಲ್ಲ 4 ಶಕ್ತಿ ದೇವತೆಗಳ ದೇಗುಲಗಳೂ ಅಲಂಕೃತಗೊಂಡಿದ್ದು, ಕರಗಧಾರಿಗಳು ಕಟ್ಟುನಿಟ್ಟಿನ ನಿಯಮಗಳ ಪಾಲನೆಯಲ್ಲಿ ತೊಡಗಿದ್ದಾರೆ.

ಸುಮಾರು ಒಂದು ತಿಂಗಳಿಗೂ ಅಧಿಕ ಕಾಲದಿಂದಲೇ ಇವರು ಮಾಂಸಹಾರ ತ್ಯಜಿಸಿದ್ದು, ನಿಯಮಿತವಾಗಿ ಪೂಜಾವಿಧಿಗಳನ್ನು ಮಾಡುತ್ತಿದ್ದಾರೆ. ಸುಮಾರು ಒಂದು ವಾರದಿಂದ ಪಾದರಕ್ಷೆ ಇಲ್ಲದೇ ನಡೆಯುವ ಅಭ್ಯಾಸವನ್ನೂ ಹಲವು ಮಂದಿ ನಡೆಸಿದ್ದಾರೆ.

ಸುಮಾರು 300 ವರ್ಷಗಳಿಗೂ ಮುಂಚೆ ನಗರದಲ್ಲಿ ಸಾಂಕ್ರಮಿಕ ರೋಗಗಳು ಕಾಡಲು ಆರಂಭಿಸಿದಾಗ ಬೀದಿಬೀದಿಗಳಲ್ಲಿ ಜನರು ಸಾಯುತ್ತಿದ್ದರು. ಎಲ್ಲೆಂದರಲ್ಲಿ ಸಂಭವಿಸುತ್ತಿದ್ದ ಸಾವುಗಳು ರಾಜರನ್ನೂ ದಿಙ್ಮೂಡಗೊಳಿಸಿತು. ಆಗ ಇಲ್ಲಿನ 4 ಶಕ್ತಿ ದೇವತೆಗಳಾದ ಕೋಟೆ ಮಾರಿಯಮ್ಮ, ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ, ದಂಡಿನ ಮಾರಿಯಮ್ಮ ಹಾಗೂ ಕಂಚಿಕಾಮಾಕ್ಷಮ್ಮ ಅವರ ಕರಗಗಳನ್ನು ನವರಾತ್ರಿಯ ವೇಳೆ ಹೊತ್ತು ನಗರ ಪ್ರದಕ್ಷಿಣೆ ಮಾಡಲಾಯಿತು. ಆ ನಂತರ ಸಾಂಕ್ರಮಿಕ ರೋಗಗಳು ನಿಯಂತ್ರಣ ಬಂದವು. ಹಾಗಾಗಿ, ಅಂದಿನಿಂದಲೂ ಈ ಕರಗೋತ್ಸವ ನಿರಂತರವಾಗಿ ನಡೆಯುತ್ತಿದೆ ಎಂದು ಕರಗಧಾರಿಗಳು ಹೇಳುತ್ತಾರೆ.

ಕರಗ ಹೊರುವವರು ಇವರು

ಸತತ 50 ವರ್ಷಗಳ ಕಾಲ ಇಲ್ಲಿನ ದಂಡಿನಮಾರಿಯಮ್ಮ ಅವರ ಕರಗ ಹೊತ್ತಿರುವ ಉಮೇಶ್‌ಪೂಜಾರಿ ಅವರು 51ನೇ ವರ್ಷ ಕರಗ ಹೊರಲು ಸಿದ್ಧವಾಗುತ್ತಿದ್ದಾರೆ. ತಮ್ಮ 14ನೇ ವಯಸ್ಸಿನಿಂದಲೇ ಅಂದರೆ 1972ರಿಂದಲೆ ಕರಗ ಹೊರಲು ಇವರು ಆರಂಭಿಸಿದರು. ನಂತರ, ಸೇನೆಗೆ ಸೇರಿದರೂ ಇವರು ಕರಗ ಹೊರುವುದನ್ನು ತಪ್ಪಿಸಲಿಲ್ಲ. ಪ್ರತಿ ವರ್ಷ ನವರಾತ್ರಿಯ ಸಮಯದಲ್ಲಿ ರಜೆ ತೆಗೆದುಕೊಂಡು ಬಂದು ಕರಗ ಹೊತ್ತು ಸೇನೆಗೆ ವಾಪಸ್ ತೆರಳುತ್ತಿದ್ದರು. ಸೇನೆಯಿಂದ ನಿವೃತ್ತಿಯಾದ ನಂತರವೂ ಇವರು ಕರಗ ಹೊರುತ್ತಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಉಮೇಶ್‌ ಪೂಜಾರಿ, ‘ನಮ್ಮ ಮುತ್ತಾತ ರಾಮಯ್ಯ, ತಾತ ಪಾಪಯ್ಯ, ಅಪ್ಪ ಪೂಜಾರಿ ಅಣ್ಣಯ್ಯ, ಅಣ್ಣ ಪೂಜಾರಿ ಲೋಕನಾಥ ನಂತರ ನಾನು ಈ ಕರಗ ಹೊರುತ್ತಿದ್ದೇನೆ. ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುತ್ತಿರುವೆ. ಒಂದು ತಿಂಗಳಿನಿಂದ ಮಾಂಸ ಸೇವನೆ ಬಿಟ್ಟಿದ್ದು, ಒಂದು ವಾರದಿಂದ ಪಾದರಕ್ಷೆ ತೊಟ್ಟಿಲ್ಲ. ಎಲ್ಲವೂ ನಾಡಿನ ಒಳಿತಿಗಾಗಿ’ ಎಂದು ಹೇಳಿದರು. 

ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ ಅವರ ಕರಗವನ್ನು ಸತತ 50 ವರ್ಷಗಳ ಕಾಲ ಹೊತ್ತಿರುವ ಪಿ.ಪಿ.ಚಾಮಿ ಅವರು ಪ್ರತಿಕ್ರಿಯಿಸಿ, ‘ನನ್ನ ಅಜ್ಜನ ಕಾಲದಿಂದಲೂ ಈ ಕರಗ ನಡೆಯುತ್ತಿದೆ. ದೇಗುಲಕ್ಕೆ ಸುಮಾರು 700 ವರ್ಷಗಳ ಇತಿಹಾಸ ಇದೆ’ ಎಂದು ಹೇಳಿದರು.

‘ಅಜ್ಜ ಚಿನ್ನಯ್ಯ, ತಂದೆ ಪೂಜಾರಿ ಪಾಪಯ್ಯ ಅವರ ನಂತರ ನಾನು ಕರಗ ಹೊರುತ್ತಿದ್ದು, ಈಗ ನಮ್ಮ ಚಿಕ್ಕಪ್ಪರ ಮಗ ಹರೀಶ್ 3 ದಿನಗಳ ಕಾಲ ನನ್ನೊಂದಿಗೆ ಕರಗ ಹೊರಲಿದ್ದಾರೆ’ ಎಂದು ತಿಳಿಸಿದರು.

ಕೋಟೆ ಮಾರಿಯಮ್ಮ ಕರಗವನ್ನು ಸತತ 31 ವರ್ಷಗಳಿಂದ ಪಿ.ಬಿ.ಅನೀಶ್‌ಕುಮಾರ್, ಪಿ.ಬಿ.ಉಮೇಶ್‌ಸುಬ್ರಹ್ಮಣಿ ಹೊರುತ್ತಿದ್ದರೆ, ಕಂಚಿ ಕಾಮಾಕ್ಷಮ್ಮ ದೇಗುಲದ ಕರಗವನ್ನು ನವೀನ್‌ಕುಮಾರ್ ಅವರು ಕಳೆದ 15 ವರ್ಷಗಳಿಂದ ಹೊರುತ್ತಿದ್ದರು. ಈಗ ಅವರ ಸೋದರ ಕಾರ್ತಿಕ್ ಇದೇ ಮೊದಲ ಬಾರಿ ಕರಗವನ್ನು ಹೊರಲು ಅಣಿಯಾಗುತ್ತಿದ್ದಾರೆ.

ಅ.15 ರಂದು ಕರಗ ಉತ್ಸವಕ್ಕೆ ಚಾಲನೆ

ಮಡಿಕೇರಿ: ನಗರದ ಇತಿಹಾಸ ಪ್ರಸಿದ್ದ 4 ಶಕ್ತಿ ದೇವತೆಗಳ ಕರಗ ಉತ್ಸವವು ಅ. 15 ರಂದು ಸಂಜೆ 5 ಗಂಟೆಗೆ ಮಹದೇವಪೇಟೆಯ ಪಂಪಿನಕೆರೆ ಆವರಣದಿಂದ ಹೊರಡಲಿದೆ. ಇಲ್ಲಿ ನಗರ ದಸರಾ ಸಮಿತಿ ವತಿಯಿಂದ ಸಾಂಪ್ರದಾಯಿಕ ಪೂಜೆಯನ್ನು ಸಲ್ಲಿಸಿ ನಗರ ಪ್ರದಕ್ಷಿಣೆಗೆ ಕರಗಗಳನ್ನು ಬರಮಾಡಿಕೊಳ್ಳುವ ಮೂಲಕ ‘ಮಡಿಕೇರಿ ದಸರಾಗೆ ಚಾಲನೆ’ ದೊರೆಯಲಿದೆ ಎಂದು ನಗರ ದಸರಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಮಡಿಕೇರಿ ನಗರದಲ್ಲಿರುವ ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ ದೇಗುಲ
ಮಡಿಕೇರಿ ನಗರದಲ್ಲಿರುವ ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ ದೇಗುಲ
ದಂಡಿನಮಾರಿಯಮ್ಮ ಅವರ ಕರಗ ಹೊತ್ತಿರುವ ಉಮೇಶ್‌ಪೂಜಾರಿ
ದಂಡಿನಮಾರಿಯಮ್ಮ ಅವರ ಕರಗ ಹೊತ್ತಿರುವ ಉಮೇಶ್‌ಪೂಜಾರಿ
ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ ಅವರ ಕರಗವನ್ನು ಹೊತ್ತಿರುವ ಪಿ.ಪಿ.ಚಾಮಿ
ಕುಂದೂರುಮೊಟ್ಟೆ ಚೌಟಿ ಮಾರಿಯಮ್ಮ ಅವರ ಕರಗವನ್ನು ಹೊತ್ತಿರುವ ಪಿ.ಪಿ.ಚಾಮಿ
ಕೋಟೆ ಮಾರಿಯಮ್ಮ ಕರಗವನ್ನು ಹೊತ್ತಿರುವ ಅನೀಶ್‌ಕುಮಾರ್
ಕೋಟೆ ಮಾರಿಯಮ್ಮ ಕರಗವನ್ನು ಹೊತ್ತಿರುವ ಅನೀಶ್‌ಕುಮಾರ್
ಕೋಟೆ ಮಾರಿಯಮ್ಮ ಕರಗವನ್ನು ಹೊತ್ತಿರುವ ಪಿ.ಬಿ.ಉಮೇಶ್‌ಸುಬ್ರಹ್ಮಣಿ
ಕೋಟೆ ಮಾರಿಯಮ್ಮ ಕರಗವನ್ನು ಹೊತ್ತಿರುವ ಪಿ.ಬಿ.ಉಮೇಶ್‌ಸುಬ್ರಹ್ಮಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT