ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಡಿಕೇರಿ ದಸರೆ | ಇರುವುದು ಒಂಬತ್ತೇ ದಿನ; ನಡೆದಿಲ್ಲ ಭರದ ಸಿದ್ಧತೆ

Published : 24 ಸೆಪ್ಟೆಂಬರ್ 2024, 7:26 IST
Last Updated : 24 ಸೆಪ್ಟೆಂಬರ್ 2024, 7:26 IST
ಫಾಲೋ ಮಾಡಿ
Comments

ಮಡಿಕೇರಿ: ಮಡಿಕೇರಿ ದಸರೆ ಜನೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಇದಕ್ಕೆ ಮುನ್ನುಡಿ ಬರೆಯಲಿರುವ ಕರಗೋತ್ಸವಕ್ಕೆ ಇನ್ನು ಬೆರಳೆಣಿಕೆಯಷ್ಟು ದಿನಗಳಷ್ಟೇ ಉಳಿದಿವೆ. ಹೀಗಿದ್ದರೂ, ಸಿದ್ಧತಾ ಕಾರ್ಯ ಚುರುಕು ಪಡೆದಿಲ್ಲ. ಅನುದಾನವೂ ಘೋಷಣೆಯಾಗಿಲ್ಲ.

ಸ್ಪಷ್ಟವಾಗಿ ಅನುದಾನ ಘೋಷಣೆಯಾಗದೇ ಇರುವುದರಿಂದ ಸಹಜವಾಗಿಯೇ ಕಾರ್ಯಕ್ರಮಗಳನ್ನು ರೂಪಿಸಲು ಸಾಧ್ಯವಾಗುತ್ತಿಲ್ಲ. ಸಾಕಷ್ಟು ಮುಂಚಿತವಾಗಿಯೇ ಹೆಚ್ಚಿನ ಅನುದಾನ ನೀಡಬೇಕು ಎಂಬ ಒತ್ತಾಯ ದಸರಾ ಪೂರ್ವಸಿದ್ಧತಾ ಸಭೆಯಲ್ಲಿ ವ್ಯಕ್ತವಾದರೂ, ಸರ್ಕಾರ ಅನುದಾನ ಘೋಷಣೆಗೆ ಮೀನಾಮೇಷ ಎಣಿಸುತ್ತಿದೆ. ಇದರಿಂದ ಎಲ್ಲ ಪೂರ್ವಸಿದ್ಧತಾ ಕಾರ್ಯಗಳೂ ಅಂಬೆಗಾಲಿಡುತ್ತಿವೆ.

ಮುಖ್ಯವಾಗಿ, ಕರಗೋತ್ಸವ ಸಂಚರಿಸುವ ಎಲ್ಲಾ ಮಾರ್ಗಗಳು ಪರಿಪೂರ್ಣವಾಗಿ ಇನ್ನೂ ಸಿದ್ಧಗೊಂಡಿಲ್ಲ. ಬಹುತೇಕ ಎಲ್ಲ ಕಡೆ ಗುಂಡಿಗಳೇ ಇದ್ದು, ಗುಂಡಿ ಇಲ್ಲದ ರಸ್ತೆಯನ್ನು ಎಷ್ಟು ಹುಡುಕಿದರೂ, ಸಿಗದಂತಹ ಸ್ಥಿತಿ ನಗರದಲ್ಲಿದೆ. ಇದುವರೆಗೂ ಮಳೆ ಎಂಬ ಕಾರಣವನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ನೀಡುತ್ತಿದ್ದರು. ಆದರೆ, ಮಳೆ ನಿಂತು ವಾರವಾದರೂ ಗುಂಡಿ ಮುಚ್ಚುವ ಕಾಮಗಾರಿ ಆಮೆಗತಿಯಲ್ಲಿದೆ. ಭರದ ಸಿದ್ಧತೆಗಳು ಎಲ್ಲೂ ಕಾಣುತ್ತಿಲ್ಲ.

ಈ ಬಾರಿ ಹೆಚ್ಚಿನ ಮಳೆ ಬಿದ್ದಿರುವುದರಿಂದ ಹಾಗೂ ಮಳೆ ಬಿರುಸೂ ಅಧಿಕಗೊಂಡಿದ್ದರಿಂದ ದಪ್ಪಗಾತ್ರದ ಕಲ್ಲುಗಳು ಹರಿಯುವ ನೀರಿನೊಂದಿಗೆ ಕೊಚ್ಚಿಕೊಂಡು ಬಂದು ರಸ್ತೆಯಲ್ಲೆಲ್ಲ ಆವರಿಸಿವೆ. ಕೆಲವೊಂದು ಕಡೆ ಇಂತಹ ಕಲ್ಲುಗಳ ಮೇಲೆ ದ್ವಿಚಕ್ರ ವಾಹನಗಳ ಚಕ್ರಗಳು ಹತ್ತಿ ಜಾರಿ ಬಿದ್ದ ಉದಾಹರಣೆಗಳೂ ಇವೆ. ಇಂತಹ ಕಲ್ಲುಗಳನ್ನು ಕರಗೋತ್ಸವಕ್ಕೆ ಅಡ್ಡಿ ಎಂದು ಯಾರೂ ಭಾವಿಸಿದಂತಿಲ್ಲ. ಉತ್ಸವಕ್ಕೆ ಇನ್ನು ಕೆಲವೇ ದಿನಗಳಿದ್ದರೂ ಇಂತಹ ಕಲ್ಲುಗಳೇ ಎಲ್ಲೆಡೆ ಕಾಣಿಸುತ್ತಿವೆ. ಇದನ್ನು ತೆಗೆಯುವ ಕಾರ್ಯಕ್ಕೆ ನಗರಸಭೆ ಇನ್ನೂ ಆಸಕ್ತಿ ತೋರಿಲ್ಲ.

ಕರಗೋತ್ಸವ ಆರಂಭವಾಗುವ ಪಂಪಿನಕೆರೆಯಿಂದ ಹಿಡಿದು ಕರಗಗಳು ಸಂಚರಿಸುವ ಮಾರ್ಗದಲ್ಲಿ ಗುಂಡಿ ಬೀಳದ ಹಾಗೆ ಶಾಶ್ವತ ಕಾಮಗಾರಿಗಳನ್ನು ಕೈಗೊಳ್ಳಬೇಕು ಎನ್ನುವ ಕನಿಷ್ಠ ಚಿಂತನೆಯೂ ಯಾರಿಗೂ ಬಂದಂತಿಲ್ಲ. ಕ್ಯಾನ್ಸರ್‌ನಂತೆ ಉಂಟಾಗುವ ಗುಂಡಿಗಳು ವರ್ಷಂಪ್ರತಿ ಹೆಚ್ಚುತ್ತಲೇ ಇದೆ. ಇದಕ್ಕಾಗಿ ಪ್ರತಿ ವರ್ಷ ಲಕ್ಷಾಂತರ ರೂಪಾಯಿಯನ್ನು ವ್ಯಯಿಸಲಾಗುತ್ತಿದೆ. ಒಮ್ಮೆ ಶಾಶ್ವತ ಕಾಮಗಾರಿ ನಡೆಸಿದರೆ ಪ್ರತಿ ವರ್ಷ ಗುಂಡಿ ಮುಚ್ಚುವುಕ್ಕೆ ಖರ್ಚಾಗುವ ಹಣವೂ ಉಳಿಯುತ್ತದೆ. ಆದರೂ ಈ ಕುರಿತು ಯಾರೊಬ್ಬರೂ ಗಂಭೀರ ಪ್ರಯತ್ನಕ್ಕೆ ಕೈ ಹಾಕಿಲ್ಲ.

ಮಡಿಕೇರಿ ನಗರದ ರಸ್ತೆಯಲ್ಲಿರುವ ಕಬ್ಬಿಣದ ಸಲಾಕೆಗಳು
ಮಡಿಕೇರಿ ನಗರದ ರಸ್ತೆಯಲ್ಲಿರುವ ಕಬ್ಬಿಣದ ಸಲಾಕೆಗಳು
ಭಾರಿ ಗಾತ್ರದ ರಸ್ತೆ ಗುಂಡಿ ಮಡಿಕೇರಿಯಲ್ಲಿರುವುದು ಸೋಮವಾರ ಕಂಡು ಬಂತು
ಭಾರಿ ಗಾತ್ರದ ರಸ್ತೆ ಗುಂಡಿ ಮಡಿಕೇರಿಯಲ್ಲಿರುವುದು ಸೋಮವಾರ ಕಂಡು ಬಂತು
ಮಳೆ ಕಾರಣಕ್ಕೆ ಗುಂಡಿ ಮುಚ್ಚಿಲ್ಲ ಎನ್ನುವ ಅಧಿಕಾರಿಗಳು ಶಾಶ್ವತ ರಸ್ತೆ ಕಾಮಗಾರಿ ನಡೆಸಲು ಇಲ್ಲ ಒಲವು ಪ್ರತಿ ವರ್ಷವೂ ನಡೆದಿದೆ ಗುಂಡಿ ಮುಚ್ಚುವ ಕೆಲಸ
ಕರಗಗಳು ಸಂಚರಿಸುವ ಪ್ರತಿ ಮಾರ್ಗದಲ್ಲೂ ಗುಂಡಿಗಳನ್ನು ಮುಚ್ಚಬೇಕು. ಕಲ್ಲುಗಳನ್ನು ತೆರವು ಮಾಡಿ ಕರಗಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕು
ಜಿ.ವಿ.ರವಿಕುಮಾರ್ ಕಂಚಿ ಕಾಮಾಕ್ಷಿ ದೇವಾಲಯದ ಸಮಿತಿಯ ಗೌರವ ಅಧ್ಯಕ್ಷ
ಗುಂಡಿ ಮುಚ್ಚಲು ₹ 18 ಲಕ್ಷ ಅಂದಾಜು; ಪೌರಾಯುಕ್ತ
ಈ ಕುರಿತು ‘ಪ್ರಜಾವಾಣಿ’ ಪೌರಾಯುಕ್ತ ಎಚ್.ಆರ್.ರಮೇಶ್ ಅವರನ್ನು ಸಂಪರ್ಕಿಸಿದಾಗ ಅವರು ‘ಗುಂಡಿ ಮುಚ್ಚುವುದಕ್ಕೆಂದೇ ₹ 18 ಲಕ್ಷವನ್ನು ಅಂದಾಜು ಮಾಡಲಾಗಿದೆ. ಎಲ್ಲ ಸಿದ್ಧತೆಗಳೂ ನಡೆದಿವೆ. ಆದರೆ ಮತ್ತೆ ಮಳೆ ಶುರುವಾಗಿದ್ದರಿಂದ ಕಾಮಗಾರಿ ಆರಂಭಿಸಲು ಹಿಂದೇಟು ಹಾಕುತ್ತಿದ್ದೇವೆ’ ಎಂದು ಹೇಳಿದರು. ಈ ಬಾರಿ ಕೇವಲ ವೆಟ್‌ಮಿಕ್ಸ್ ಹಾಕದೇ ಎಲ್ಲ ಗುಂಡಿಗಳನ್ನೂ ಡಾಂಬರಿನಿಂದಲೇ ಮುಚ್ಚಲು ಸಿದ್ಧತೆ ನಡೆಸಲಾಗಿದೆ. ಇದರಿಂದ ಗುಂಡಿ ಮುಚ್ಚಿ ದಸರಾ ಮುಗಿದ ಕೂಡಲೇ ಮತ್ತೆ ಗುಂಡಿ ಬೀಳುವುದಿಲ್ಲ ಎಂಬ ವಿಶ್ವಾಸ ಅಧಿಕಾರಿಗಳದ್ದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT