ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶನಿವಾರಸಂತೆಯ ಸಂತೆ ಅಧ್ವಾನ; ಮಳೆಗಾಲದಲ್ಲಿ ವ್ಯಾಪಾರಸ್ಥರಿಗೆ ಸಂಕಷ್ಟ

Last Updated 29 ಜುಲೈ 2021, 13:16 IST
ಅಕ್ಷರ ಗಾತ್ರ

ಶನಿವಾರಸಂತೆ: ಪಟ್ಟಣ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದೆ. ಜನಸಂಖ್ಯೆಯ ಏರಿಕೆಯೊಂದಿಗೆ ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಿದ್ದು, ವ್ಯಾಪಾರ-ವಹಿವಾಟು ಹೆಚ್ಚಾಗಿ ನಡೆಯುತ್ತಿದೆ. ಗ್ರಾಮ ಪಂಚಾಯಿತಿ ಶೀಘ್ರದಲ್ಲೇ ಪಟ್ಟಣ ಪಂಚಾಯಿತಿಯಾಗಿ ರೂಪುಗೊಂಡರೂ ಅಚ್ಚರಿಯಲ್ಲ.

ಆದರೆ, ಒಂದೂವರೆ ವರ್ಷದಿಂದ ಕೋವಿಡ್-19 ಲಾಕ್‌ಡೌನ್ ಹಿನ್ನೆಲೆಯಲ್ಲಿ ಇಲ್ಲಿನ ಸಂತೆ ಮಾರುಕಟ್ಟೆ ಮಾತ್ರ ಅವ್ಯವಸ್ಥೆಯ ಆಗರವಾಗಿ, ಅಭಿವೃದ್ಧಿ ಕುಂಠಿತವಾಗಿ, ಸಂತೆ ರದ್ದಾಗಿದ್ದು, ನಾಗರಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಇಲ್ಲಿನ ಸಂತೆ ಮಾರುಕಟ್ಟೆ ಕೊಡಗು ಜಿಲ್ಲೆಯಲ್ಲೇ ಅತಿ ವಿಸ್ತಾರವಾದ ಮಾರುಕಟ್ಟೆ ಎಂದು ಪ್ರಸಿದ್ಧಿ ಪಡೆದಿದೆ. ಆದರೆ, ಮಳೆಗಾಲದಲ್ಲಿ ಮಾತ್ರ ಮಾರುಕಟ್ಟೆಯೊಳಗಿನ ರಸ್ತೆಯೆಲ್ಲ ಕೆಸರುಮಯವಾಗಿ ನಾಟಿ ಮಾಡುವಂತಿರುತ್ತದೆ.

ವ್ಯಾಪಾರಿಗಳು ವ್ಯಾಪಾರಕ್ಕೆ ಹಾಗೂ ಗ್ರಾಹಕರು ತರಕಾರಿ, ಹಣ್ಣು, ದಿನಸಿ ಖರೀದಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ. ಜಿಲ್ಲೆ, ಪಕ್ಕದ ಜಿಲ್ಲೆಗಳಿಂದ ವ್ಯಾಪಾರಕ್ಕಾಗಿ ಬರುವ ವ್ಯಾಪಾರಿಗಳಿಗೆ ವ್ಯವಸ್ಥಿತ ಮಳಿಗೆಗಳಿಲ್ಲ. ಇರುವ ಮಳಿಗೆಗಳಿಗೆ ಛಾವಣಿ ಇಲ್ಲ. ಈ ಇಲ್ಲಗಳ ನಡುವೆ ವ್ಯಾಪಾರಿಗಳು ನಿಶ್ಚಿಂತೆಯಿಂದ ವ್ಯಾಪಾರ ಮಾಡುವಂತಿಲ್ಲ.

1983ರಲ್ಲಿ ಅಂದಿನ ಮುಖ್ಯಮಂತ್ರಿ ಗುಂಡೂರಾವ್, ಜಿಲ್ಲಾಧಿಕಾರಿ ವೀಣಾ ಶ್ರೀರಾಂ ಸಹಕಾರದಿಂದ, ಆಗಿನ ಪುರಸಭೆ ಅಧ್ಯಕ್ಷ ಬಿ.ಗಂಗಪ್ಪ ಕರ್ಕೇರ ಪರಿಶ್ರಮದಿಂದ 5 ಎಕರೆ ವಿಶಾಲ ಪ್ರದೇಶದಲ್ಲಿ ಸಂತೆ ಮಾರುಕಟ್ಟೆ ನಿರ್ಮಾಣವಾಗಿತ್ತು. ಅಂದು ಕರ್ಕೇರ ಮೇಲುಸ್ತುವಾರಿಯಲ್ಲಿ ವ್ಯವಸ್ಥಿತವಾಗಿದ್ದ ಮಾರುಕಟ್ಟೆ 2001ರ ನಂತರ ಆಕರ್ಷಣೆ ಕಳೆದುಕೊಂಡಿದೆ.

ಮಾರುಕಟ್ಟೆ ಸ್ಥಾಪನೆಗೆ ಕಾರಣಕರ್ತರಾದ ಗಂಗಪ್ಪ ಕರ್ಕೇರ ಅವರ ಹೆಸರನ್ನು ಮಾರುಕಟ್ಟೆ ಪ್ರವೇಶ ದ್ವಾರಕ್ಕೆ ಇಡಬೇಕೆಂಬ ಸಾರ್ವಜನಿಕರ ಬೇಡಿಕೆ, ಕ್ಷುಲ್ಲಕ ರಾಜಕೀಯ ಕಾರಣದಿಂದ ನನೆಗುದಿಗೆ ಬಿದ್ದಿದೆ. ನಾಮಫಲಕ ಗೋದಾಮಿನ ಮೂಲೆ ಸೇರಿದೆ ಎಂಬ ಮಾತಿದ್ದು, ಕೆಲವು ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಪುರಸಭೆ ಕಾಲದಲ್ಲಿ ಸಂತೆ ಮಾರುಕಟ್ಟೆ ವ್ಯವಸ್ಥಿತವಾಗಿದ್ದು ವಾರ್ಷಿಕ ₹ 2-3 ಲಕ್ಷ ಆದಾಯ ಬರುತ್ತಿತ್ತು. ನಂತರ, ಮಂಡಲ ಪಂಚಾಯಿತಿ, ಈಗ ಗ್ರಾಮ ಪಂಚಾಯಿತಿ ಆಡಳಿತದಲ್ಲಿ ಮಾರುಕಟ್ಟೆ ಆಕರ್ಷಣೆ ಕಳೆದುಕೊಳ್ಳುತ್ತಿದೆ.

ಮೂಲ ಸೌಲಭ್ಯ ವಂಚಿತ ಗ್ರಾಹಕರು ತೊಂದರೆ ಅನುಭವಿಸುವಂತಾಗಿದೆ. ಮಳೆಗಾಲದಲ್ಲಿ ಸಂತೆಯೊಳಗಿನ ರಸ್ತೆಗಳು ಕೆಸರು ತುಂಬಿಕೊಂಡು ನಾಟಿಗೆ ಸಜ್ಜುಗೊಳಿಸಿದಂತಿರುತ್ತದೆ ಎಂಬ ಆಕ್ಷೇಪವೂ ವ್ಯಾಪಾರಿಗಳು, ಗ್ರಾಹಕರಿಂದ ವ್ಯಕ್ತವಾಗಿದೆ.

ಹೋಬಳಿ ಕೇಂದ್ರ ಪ್ರದೇಶವಾಗಿರುವ ಶನಿವಾರಸಂತೆ ಕೊಡಗು-ಹಾಸನ ಜಿಲ್ಲೆಗಳ ಗಡಿ ಪ್ರದೇಶದಲ್ಲಿದೆ. 9 ಗ್ರಾಮ ಪಂಚಾಯಿತಿಗಳ 60 ಗ್ರಾಮ, ಉಪಗ್ರಾಮಗಳ ಜನರು ಇಲ್ಲಿನ ಸಂತೆಗೆ ಬರುತ್ತಾರೆ. ಸುತ್ತಮುತ್ತಲ ತಾಲ್ಲೂಕುಗಳಿಂದ ಹಾಗೂ ಪಕ್ಕದ ಹಾಸನ ಜಿಲ್ಲೆಯಿಂದ ಸುಮಾರು 12 ಸಾವಿರಕ್ಕೂ ಹೆಚ್ಚು ವ್ಯಾಪಾರಸ್ಥರು, ಗ್ರಾಹಕರು ಬಂದು ಸಂತೆಯಲ್ಲಿ ಸೇರುತ್ತಾರೆ. ರೈತರು ಬೆಳೆದು ಸಂತೆಯಲ್ಲಿ ಮಾರಾಟ ಮಾಡುವ ಹಸಿರು ಮೆಣಸಿನಕಾಯಿ, ಶುಂಠಿ, ಬಾಳೆಕಾಯಿ, ದಗ್ಗಿಳ್ಳಿಕಾಯಿ ಇಲ್ಲಿಂದ ಹೊರ ರಾಜ್ಯಗಳಿಗೆ ರವಾನೆಯಾಗುತ್ತದೆ.

‘ಮಾರುಕಟ್ಟೆ ಒಳಗೆ ಕಟ್ಟೆಯ ಮೇಲೆ ಕುಳಿತು ಮಳೆ-ಬಿಸಿಲು ಲೆಕ್ಕಿಸದೆ ವ್ಯಾಪಾರ ಮಾಡುವವರಿಗೆ ಸೂರು ಕಲ್ಪಿಸಬೇಕು. ಮಳೆಗಾಲದಲ್ಲಿ ಕೆಸರುಮಯವಾಗುವ ರಸ್ತೆಗಳಿಗೆ ಇಂಟರ್‌ಲಾಕ್ ಹಾಕಿಸಬೇಕು. ಬೀದಿ ಬದಿ ವ್ಯಾಪಾರ ಮಾಡುವವರೂ ಮಾರುಕಟ್ಟೆ ಒಳಗೆ ಕುಳಿತು ವ್ಯಾಪಾರ ಮಾಡುವಂತಾಗಬೇಕು. ಈ ಬಗ್ಗೆ ಎಂಜಿನಿಯರ್ ಜತೆ ಚರ್ಚಿಸಿ, ಕ್ರಿಯಾ ಯೋಜನೆ ರೂಪಿಸಿ, ಅಭಿವೃದ್ಧಿಗೊಳಿಸಿ ಪಂಚಾಯಿತಿಯ ಆದಾಯ ಹೆಚ್ಚಿಸಬೇಕು’ ಎಂಬ ಆಶಯ ಪಂಚಾಯಿತಿ ಉಪಾಧ್ಯಕ್ಷ ಎಸ್.ಆರ್.ಮಧು ಅವರದ್ದಾಗಿದೆ.

ಪಂಚಾಯಿತಿಯಲ್ಲಿ ಸಂತೆ ಮಾರುಕಟ್ಟೆ ಅಭಿವೃದ್ಧಿಪಡಿಸುವಷ್ಟು ಹಣವಿಲ್ಲ. ಪ್ರಾಪರ್ಟಿ ಕಾರ್ಡ್ ಸಿಕ್ಕಿರುವುದರಿಂದ ಶೀಘ್ರದಲ್ಲೇ ಪಟ್ಟಣ ಪಂಚಾಯಿತಿ ಆಗಬಹುದು. ಪೂರ್ಣ ಮಾರುಕಟ್ಟೆಗೆ ಕಾಯಕಲ್ಪ ಕಲ್ಪಿಸಲು ₹ 3-4 ಕೋಟಿ ವೆಚ್ಚ ತಗಲುತ್ತದೆ. ಸರ್ಕಾರದಿಂದ, ಶಾಸಕರಿಂದ, ಆರ್‌ಎಂಸಿಯಿಂದ ಅನುದಾನ ದೊರೆತರೆ ಮಾತ್ರ ಅಭಿವೃದ್ಧಿ ಸಾಧ್ಯವಾಗಬಹುದು.

ಆಡಳಿತ ಮಂಡಳಿಯವರು ಶಾಸಕ ಅಪ್ಪಚ್ಚುರಂಜನ್ ಬಳಿ ನಿಯೋಗ ಹೋಗಲು ನಿರ್ಧರಿಸಿದ್ದಾರೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಜೆ.ಮೇದಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT