ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಶಾಂತ ಪರಿಸರದ ಮೂಟೇರಿ ದೇಗುಲ

ವಿಷು ಸಂಕ್ರಮಣದಂದು ಸೂರ್ಯಕಿರಣ ನೇರವಾಗಿ ಶಿವಲಿಂಗಕ್ಕೆ ಬೀಳಲಿದೆ
ಸಿ.ಎಸ್.ಸುರೇಶ್
Published 21 ಜನವರಿ 2024, 6:34 IST
Last Updated 21 ಜನವರಿ 2024, 6:34 IST
ಅಕ್ಷರ ಗಾತ್ರ

ನಾಪೋಕ್ಲು: ಇಲ್ಲಿಗೆ ಸಮೀಪದ ಮೂಟೇರಿ ಎಂಬಲ್ಲಿ ಪ್ರಶಾಂತ ಪರಿಸರದಲ್ಲಿ ಇರುವ ಅಚ್ಚುಕಟ್ಟಾದ ದೇವಾಲಯ ಉಮಾಮಹೇಶ್ವರಿ ದೇವಾಲಯ. ಶಿವ-ಪಾರ್ವತಿ ನೆಲೆನಿಂತಿರುವ ಬಹಳ ಪುರಾತನವಾದ ದೇವಾಲಯ ಇದಾಗಿದ್ದು ಈ ದೇವಾಲಯಕ್ಕೆ ಸುಮಾರು 1,200 ವರ್ಷಗಳ ಇತಿಹಾಸ ಇದೆ.

ಸುಮಾರು ₹ 1.50 ಕೋಟಿ ವೆಚ್ಚದಲ್ಲಿ ದೇವಾಲಯದ ಜೀರ್ಣೋದ್ದಾರ ಕಾರ್ಯ ನಡೆದಿದ್ದು, ದೇವಾಲಯವು ನೂತನ ಗರ್ಭಗುಡಿ, ತೀರ್ಥಮಂಟಪ, ಪೌಳಿಗಳಿಂದ ಕಂಗೊಳಿಸುತ್ತಿದೆ. ದೇವಾಲಯಕ್ಕೆ ಅಗತ್ಯವಿರುವ ಶಿಲೆಗಳನ್ನು ಕಾರ್ಕಳದ ಶಿಲ್ಪಿ ಉಮೇಶ್ ಒದಗಿಸಿದ್ದಾರೆ. 2 ವರ್ಷಗಳ ಹಿಂದೆ ದೇವರ ಅಷ್ಟಬಂಧ ಬ್ರಹ್ಮಕಲಶ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ನೀಲೇಶ್ವರ ಶ್ರೀ ಪದ್ಮನಾಭ ಉಚ್ಚಿಲತ್ತಾಯ ತಂತ್ರಿಗಳ ನೇತೃತ್ವದಲ್ಲಿ ನಡೆದಿದ್ದು, ಊರ ದೇವಾಲಯ ಪ್ರಸಿದ್ಧಿ ಪಡೆದಿದೆ.

ತಮಿಳುನಾಡು ಅರಸ ರಾಜರಾಜೇಂದ್ರ ಚೋಳ ರಾಜ್ಯ ವಿಸ್ತರಣೆ ಸಂದರ್ಭದಲ್ಲಿ ಕಾವೇರಿ ನದಿ ದಂಡೆಯುದ್ದಕ್ಕೂ ಸ್ಥಾಪಿಸಿದ ದೇವಾಲಯಗಳ ಪೈಕಿ ಈ ದೇವಾಲಯವೂ ಒಂದು. ಅನಂತರ ಕೊಂಗಾಳ್ವ, ಚೆಂಗಾಳ್ವರ ಆಳ್ವಿಕೆಯಲ್ಲಿದ್ದ ಈ ದೇವಾಲಯ ಇಂದು ನಾಡು ದೇವಾಲಯವಾಗಿ ಅಭಿವೃದ್ದಿ ಕಂಡಿದೆ.

17ನೇ ಶತಮಾನದಲ್ಲಿ ದೇವಾಲಯ ಶಿಥಿಲಗೊಂಡಿತ್ತು. ವರ್ಷಗಳ ಬಳಿಕ ನಾಪೋಕ್ಲು, ಬೇತು, ಕೊಳಕೇರಿಯ ಗ್ರಾಮಸ್ಥರೆಲ್ಲ ಒಟ್ಟಾಗಿ ದೇವಾಲಯದ ಅಭಿವೃದ್ದಿಗೆ ಶ್ರಮಿಸಿದರು. 1956ರಲ್ಲಿ ಹಿರಿಯರಾದ ಬಿದ್ದಾಟಂಡ ತಿಮ್ಮಯ್ಯ ಅವರ ನೇತೃತ್ವದಲ್ಲಿ ಊರವರ ಸಹಕಾರದೊಂದಿಗೆ ಈ ದೇವಾಲಯವನ್ನು ಅಭಿವೃದ್ದಿಪಡಿಸಲಾಯಿತು.

1957ರಲ್ಲಿ ಈ ದೇವಾಲಯದಲ್ಲಿ ಅಷ್ಟಬಂಧ ಕೈಗೊಳ್ಳಲಾಯಿತು. ಈ ದೇವಾಲಯವು ಆಕರ್ಷಕ ಗರ್ಭಗುಡಿಯನ್ನು ಹೊಂದಿದ್ದು, ಅದರೊಳಗೆ ಮತ್ತೊಂದು ಪುಟ್ಟ ಗುಡಿಯೊಳಗೆ ಉಮಾಮಹೇಶ್ವರಿ ದೇವರ ವಿಗ್ರಹ ಇದೆ. ಸನಿಹದಲ್ಲಿ ಶಿವಲಿಂಗವಿದೆ. ವಿಷು ಸಂಕ್ರಮಣದಂದು ಸೂರ್ಯಕಿರಣ ನೇರವಾಗಿ ಶಿವಲಿಂಗಕ್ಕೆ ಬೀಳುವಂತೆ ಕ್ರಮಬದ್ದವಾಗಿ ಲೆಕ್ಕಾಚಾರ ಹಾಕಿ ಗರ್ಭಗುಡಿಯನ್ನು ನಿರ್ಮಿಸಲಾಗಿದೆ. ದೇವಾಲಯವನ್ನು ಲ್ಯಾಟರೈಟ್ ಕಲ್ಲಿನಿಂದ ನಿರ್ಮಿಸಲಾಗಿದ್ದು, ವಿಶೇಷವಾದ ಕೆತ್ತನೆಗಳನ್ನೊಳಗೊಂಡಿದೆ.

ಅರಸರ ಕಾಲದಲ್ಲಿ ನಿರ್ಮಾಣಗೊಂಡ ದೇವಾಲಯಗಳಲ್ಲಿ ಬಹಳ ಅಪರೂಪವಾದ ದೇವಾಲಯವಿದು ಎಂದು ರಾಜ್ಯ ಪುರಾತತ್ವ ಇಲಾಖೆಯವರು ದಾಖಲಿಸಿದ್ದಾರೆ. ಈ ಹಿಂದೆ ಕೊಳಕೇರಿ, ಬೇತು ಹಾಗೂ ನಾಪೋಕ್ಲು ಗ್ರಾಮಗಳ ವ್ಯಾಪ್ತಿಗೆ ಒಳಪಟ್ಟ ದೇವಾಲಯ ಇಂದು ಪೂರ್ವ ಕೊಳಕೇರಿಗೆ ಸಂಬಂಧಿಸಿದೆ.

ಕಾಟೂರು ಹಾಗೂ ಮೂಟೇರಿ ಹಿಂದಿನ ಎರಡು ಕೇರಿಗಳಾಗಿದ್ದು ದೇವಾಲಯವು ಮೂಟೇರಿಗೆ ಸಂಬಂಧಿಸಿರುವುದರಿಂದ ಮೂಟೇರಿ ಉಮಾಮಹೇಶ್ಚರಿ ದೇವಾಲಯವೆಂದು ಖ್ಯಾತಿ ಪಡೆದಿದೆ. ದೇವಾಲಯದಲ್ಲಿ ನಿತ್ಯಪೂಜೆ ಸಲ್ಲಿಸಲಾಗುತ್ತಿದೆ. ಗಣೇಶ ಚತುರ್ಥಿ, ಕಾವೇರಿ ಸಂಕ್ರಮಣ ಶಿವರಾತ್ರಿ ಸೇರಿದಂತೆ ವಿಶೇಷ ಹಬ್ಬಗಳನ್ನು ಶ್ರದ್ದಾ ಭಕ್ತಿಯಿಂದ ಆಚರಿಸಲಾಗುತ್ತದೆ. ಪ್ರತಿ ವರ್ಷ ಮೇಷಮಾಸದ 1 ಮತ್ತು 2 ರಂದು ವಾರ್ಷಿಕ ಹಬ್ಬವನ್ನು ಆಚರಿಸಲಾಗುತ್ತದೆ.

ವಾರ್ಷಿಕ ಹಬ್ಬವು 2 ದಿನಗಳ ಕಾಲ ನಡೆಯುತ್ತದೆ. ಮೊದಲನೇ ದಿನ ರಾತ್ರಿ ದೀಪಾರಾಧನೆ, ಮರುದಿನ ಬೆಳಿಗ್ಗೆ ದೇವರ ಬಲಿ, ಮಧ್ಯಾಹ್ನ ಎತ್ತುಪೋರಾಟ, ಬೊಳಕಾಟ್, ದುಡಿಕೊಟ್ ಪಾಟ್, ಮಹಾಪೂಜೆ, ಪಟ್ಟಣಿ ಜರುಗುತ್ತದೆ. ರಾತ್ರಿ ದೇವರ ಅವಭೃತ ಸ್ನಾನ ಹಾಗೂ ನೃತ್ಯಬಲಿ ಜರುಗುತ್ತದೆ.ದೇವಾಲಯದ ಎಲ್ಲಾ ಅಭಿವೃದ್ದಿ ಕಾರ್ಯಗಳನ್ನು ಊರಿನವರ ಸಹಕಾರದಿಂದ ಕೈಗೊಳ್ಳಲಾಗುತ್ತಿದೆ.

ನಾಪೋಕ್ಲು ಸಮೀಪದ ಮೂಟೇರಿಯಲ್ಲಿರುವ ಉಮಾಮಹೇಶ್ವರಿ ದೇವಾಲಯದ ಗರ್ಭಗುಡಿ.
ನಾಪೋಕ್ಲು ಸಮೀಪದ ಮೂಟೇರಿಯಲ್ಲಿರುವ ಉಮಾಮಹೇಶ್ವರಿ ದೇವಾಲಯದ ಗರ್ಭಗುಡಿ.
ನಾಪೋಕ್ಲು ಸಮೀಪದ ಮೂಟೇರಿಯಲ್ಲಿರುವ ಉಮಾಮಹೇಶ್ವರಿ ದೇವಾಲಯದ ಹೊರನೋಟ.
ನಾಪೋಕ್ಲು ಸಮೀಪದ ಮೂಟೇರಿಯಲ್ಲಿರುವ ಉಮಾಮಹೇಶ್ವರಿ ದೇವಾಲಯದ ಹೊರನೋಟ.
ನಾಪೋಕ್ಲು ಸಮೀಪದ ಮೂಟೇರಿಯಲ್ಲಿರುವ ಉಮಾಮಹೇಶ್ವರಿ ದೇವಾಲಯದ ಸಭಾಭವನ.
ನಾಪೋಕ್ಲು ಸಮೀಪದ ಮೂಟೇರಿಯಲ್ಲಿರುವ ಉಮಾಮಹೇಶ್ವರಿ ದೇವಾಲಯದ ಸಭಾಭವನ.

ದೇವಾಲಯ ಸಮಿತಿ ವತಿಯಿಂದ ಪುಟ್ಟ ಕೊಳ ನಿರ್ಮಾಣ ವಿಷು ಸಂಕ್ರಮಣದಂದು ಸೂರ್ಯಕಿರಣ ನೇರವಾಗಿ ಶಿವಲಿಂಗಕ್ಕೆ ಅದ್ಭುತವಾದ ವಾಸ್ತುಶಿಲ್ಪ ರಚನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT