ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾವೇರಿಯೊಂದಿಗೆ ಕೊಡವರಿಗೆ ಮಾತೃ ಸಂಬಂಧ’

ಕಣಿ ಪೂಜಾ ಕಾರ್ಯಕ್ರಮದಲ್ಲಿ ಬಾಚರಣಿಯಂಡ ಪಿ. ಅಪ್ಪಣ್ಣ
Last Updated 21 ಅಕ್ಟೋಬರ್ 2020, 12:34 IST
ಅಕ್ಷರ ಗಾತ್ರ

ವಿರಾಜಪೇಟೆ: ‘ಕೊಡವರು ಪ್ರಕೃತಿಯ ಆರಾಧಕರಾಗಿರುವುದರಿಂದ ಪ್ರಕೃತಿಯಲ್ಲಿ ಬೆಳೆದ ತೆಂಗಿನಕಾಯಿ, ಸೌತೆಕಾಯಿನ್ನು ಇಟ್ಟು ಸಾಂಪ್ರಾದಾಯಿಕ ಆಭರಣಗಳಿಂದ ಅಲಂಕರಿಸಿ ಕಾವೇರಿಯ ಪ್ರತಿರೂಪವನ್ನಾಗಿ ಪೂಜಿಸಲಾಗುತ್ತದೆ‘ ಎಂದು ಸಾಹಿತಿ ಬಾಚರಣಿಯಂಡ ಪಿ. ಅಪ್ಪಣ್ಣ ಹೇಳಿದರು.

ಪಟ್ಟಣದ ಅಖಿಲ ಕೊಡವ ಸಮಾಜದ ಸಭಾಂಗಣದಲ್ಲಿ ಬುಧವಾರ ನಡೆದ ಕಾವೇರಿ ಕಣಿ ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅನಾಧಿ ಕಾಲದಿಂದಲೂ ಕಾವೇರಿ ಮಾತೆ ಹಾಗೂ ಕೊಡವರ ನಡುವಿನ ಬಾಂಧವ್ಯ ತಾಯಿ ಮಕ್ಕಳದು. ಕಾವೇರಿ ಮಾತೆ ಜಲರೂಪಿಣಿಯಾಗಿ ಲೋಕ ಕಲ್ಯಾಣಕ್ಕಾಗಿ ಹರಿಯುವ ಸಂದರ್ಭ ನೀಡಿದ ಭಾಷೆಯಂತೆ ಪ್ರತಿವರ್ಷ ತುಲಾ ಸಂಕ್ರಮಣದಂದು ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡುತ್ತಿದ್ದಾಳೆ. ಈ ಸಂದರ್ಭ ಕೊಡವರ ಪ್ರತಿ ಮನೆಯಲ್ಲಿಯೂ ಕಣಿಪೂಜೆಯನ್ನು ಭಕ್ತಿ ಭಾವದಿಂದ ಆಚರಿಸುತ್ತಾರೆ. ‘ತೀರ್ಥೋದ್ಬವದ ದಿನದಿಂದ ಮುಂದಿನ 10 ದಿನದಲ್ಲಿ ನಡೆಯುವ ಪತ್ತಲೋದಿವರೆಗೆ ಕಾವೇರಿಯನ್ನು ಪೂಜಿಸಲು ಅತ್ಯಂತ ಶುಭ ಸಮಯವಾಗಿದೆ ಎಂದರು.

ಅಖಿಲ ಕೊಡವ ಸಮಾಜದ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಮಾತನಾಡಿದರು. ‘ಹಿಂದೆ ದಕ್ಷಿಣ ಕೊಡಗಿನ ಬಹುದೂರದ ಪ್ರದೇಶಗಳಿಂದ ಎರಡು ಮೂರು ದಿನಗಳ ಮೊದಲೇ ಹಿರಿಯ ದಂಪತಿ ಸಂಸಾರದೊಂದಿಗೆ ಸಾಂಪ್ರದಾಯಿಕ ಉಡುಪಿನಲ್ಲಿ ಪಾದಯಾತ್ರೆಯ ಮೂಲಕ ತೀರ್ಥೊದ್ಬವಕ್ಕೆ ಬರುತ್ತಿದ್ದರು‘ ಎಂದು ಸ್ಮರಿಸಿದರು.

ಅಖಿಲ ಕೊಡವ ಸಮಾಜದ ಪೊಮ್ಮಕ್ಕಡ ಪರಿಷತ್ತಿನ ಅಧ್ಯಕ್ಷೆ ಬಾಚರಣಿಯಂಡ ರಾಣು ಅಪ್ಪಣ್ಣ ಮಾತನಾಡಿದರು. ’ಕೊಡವ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ತೊಡಗಿಸಿಕೊಳ್ಳಬೇಕು. ಆಚರಣೆಯಿಂದ ಮಾತ್ರ ಸಂಸ್ಕೃತಿ ಉಳಿಯಲು ಸಾಧ್ಯ. ಕಾವೇರಿಯನ್ನು ಶೃದ್ದಾಭಕ್ತಿಯಿಂದ ಕೊಡವರು ಆರಾಧಿಸಿದಾಗ ಕೊಡಗು ಹಾಗೂ ಕೊಡವರಿಗೆ ಒಳಿತಾಗುತ್ತದೆ‘ ಎಂದರು.

ಅಖಿಲ ಕೊಡವ ಸಮಾಜ ಯುವ ಘಟಕದ ಅಧ್ಯಕ್ಷ ಚಮ್ಮಟ್ಟೀರ ಪ್ರವೀಣ್ ಉತ್ತಪ್ಪ ಮಾತನಾಡಿ, ‘ತಲಕಾವೇರಿ ವಿಷಯದಲ್ಲಿ ರಾಜಕೀಯ ಬೇಡ, ಎಲ್ಲರೂ ಒಂದಾಗಿ ತಾಯಿಯ ಸೇವೆ ಮಾಡಬೇಕಾಗಿದೆ. ಆದರೆ, ಈ ಬಾರಿ ಕೋವಿಡ್‌ ನೆಪದಲ್ಲಿ ನೈಜ ಭಕ್ತರಿಗೆ ತೊಂದರೆ ನೀಡಿದ್ದು, ಸರಿಯಲ್ಲ. ಮುಂದಿನ ದಿನಗಳಲ್ಲಿ ಪ್ರವಾಸಿಗರನ್ನು ಹೊರತುಪಡಿಸಿ ನೈಜ ಭಕ್ತರಿಗೆ ಅವಕಾಶ ಕಲ್ಪಿಸುವ ಮೂಲಕ ಕ್ಷೇತ್ರದ ಪವಿತ್ರತೆ ಕಾಪಾಡಬೇಕು’ ಎಂದರು.

ಅಖಿಲ ಕೊಡವ ಸಮಾಜದ ಕಾರ್ಯದರ್ಶಿ ಅಮ್ಮಣಿಚಂಡ ರಾಜ ನಂಜಪ್ಪ, ಪದಾಧಿಕಾರಿ ಚೇಂದಂಡ ವಸಂತ್, ಐನಂಡ ಜಪ್ಪು ಅಚ್ಚಪ್ಪ, ಮುಲ್ಲೇಂಗಡ ಶಂಕರಿ ಪೊನ್ನಪ್ಪ, ಅಪ್ಪುಮಣಿಯಂಡ ತುಳಸಿ, ಮೂವೇರ ರೇಖಾ ಪ್ರಕಾಶ್, ಅಖಿಲ ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ತಿನ ಕಾರ್ಯದರ್ಶಿ ಮಂಡೇಪಂಡ ಗೀತಾ ಮಂದಣ್ಣ, ಪದಾಧಿಕಾರಿ ಕಡೇಮಾಡ ಕವಿತ, ವಾಂಚೀರ ಜಾನ್ಸಿ, ಮಂಡೇಪಂಡ ತ್ಯಾಗಿ, ಯುವ ಘಟಕದ ಉಪಾಧ್ಯಕ್ಷ ಅಣ್ಣೀರ ಹರೀಶ್ ಮಾದಪ್ಪ, ಸಂಘಟನಾ ಕಾರ್ಯದರ್ಶಿ ಅಜ್ಜಿಕುಟ್ಟೀರ ಪೃಥ್ವಿ ಸುಬ್ಬಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT