ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ನಡೆದಿದೆ ಮುಂಗಾರಿಗೆ ಸಮರೋಪಾದಿ ಸಿದ್ಧತೆ

ವರ್ಷವರ್ಷವೂ ಹೆಚ್ಚುತ್ತಿರುವ ಮಣ್ಣು ಕುಸಿತ, ರಸ್ತೆ, ಸೇತುವೆ ಹಾನಿ, ತಪ್ಪದ ಜನರ ಬವಣೆ
Published 4 ಜೂನ್ 2023, 23:36 IST
Last Updated 4 ಜೂನ್ 2023, 23:36 IST
ಅಕ್ಷರ ಗಾತ್ರ

ಮಡಿಕೇರಿ: ಒಂದು ಕಾಲದಲ್ಲಿ ಕೊಡಗಿನಲ್ಲಿ ಮುಂಗಾರಿನ ವೈಭವವನ್ನು ಕಣ್ತುಂಬಿಕೊಳ್ಳುವುದೇ ರೋಮಾಂಚನದ ಸಂಗತಿ ಎನಿಸಿತ್ತು. ಇಲ್ಲಿದ್ದ ಪಂಜೆ ಮಂಗೇಶರಾಯರು ಸೇರಿದಂತೆ ಹಲವು ಸಾಹಿತಿಗಳಿಗೆ ಮುಂಗಾರಿನ ಮಳೆ ಅಕ್ಷರಶಃ ಸ್ಫೂರ್ತಿಯ ಸೆಲೆಯನ್ನು ಒದಗಿಸಿತ್ತು. ನಂತರದ ವರ್ಷಗಳಲ್ಲೂ ಹಲವು ಮಂದಿ ಕೊಡಗಿನಲ್ಲಿ ಸುರಿಯುವ ವರ್ಷವೈಭವವನ್ನು ಕಣ್ತುಂಬಿಕೊಳ್ಳಲೆಂದೇ ಮುಂಗಾರಿನಲ್ಲಿ ಬರುತ್ತಿದ್ದರು. ಇಲ್ಲೇ ಒಂದಷ್ಟು ದಿನ ಉಳಿದುಕೊಂಡು ಮಳೆಗಾಲದಲ್ಲಿ ಧುಮ್ಮಿಕ್ಕುತ್ತಿದ್ದ ಜಲಪಾತದ ಸೊಬಗನ್ನು ಸವಿಯುತ್ತಿದ್ದರು. ಆದರೆ, ಈಗ ಕಾಲ ಬದಲಾಗುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ಮುಂಗಾರು ಎಂದರೆ ಜನರು ಪುಳಕಗೊಳ್ಳುವ ಬದಲು ಭಯಗೊಳ್ಳುವಂತಾಗಿದೆ. ಎಲ್ಲಿ ಯಾವ ಗುಡ್ಡ ಕುಸಿಯುವುದೋ, ಎಲ್ಲಿ ಮಣ್ಣು ಕಸಿಯುವುದೋ, ರಸ್ತೆ ಸಂಪರ್ಕ ಕಡಿದು ಹೋಗುವುದೋ, ಸೇತುವೆಗಳು ಭೋರ್ಗರೆಯುವ ನೀರಿನಲ್ಲಿ ಕೊಚ್ಚಿ ಹೋಗುವುದೋ ಎಂಬ ಆತಂಕದಿಂದ ಪ್ರವಾಸಿಗರ ಸಂಖ್ಯೆ ಮಳೆಗಾಲದ ಸಮಯದಲ್ಲಿ ತೀರಾ ಕಡಿಮೆಯಾಗಿದೆ. ಇಲ್ಲಿ ಗುಡ್ಡದ ಮೇಲೆ, ಗುಡ್ಡದ ಕೆಳಭಾಗದಲ್ಲಿ, ನದಿನೀರಿನ ತೀರದಲ್ಲಿ ವಾಸಿಸುತ್ತಿರುವವರು ಜೀವವನ್ನು ಅಂಗೈಯಲ್ಲಿಡಿದುಕೊಳ್ಳುವಂತಾಗಿದೆ.

ಜಾಗತಿಕ ತಾಪಮಾನ ಏರಿಕೆ, ಜಾಗತಿಕವಾಗಿ ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆಯ ಜತೆಜತೆಗೆ ಸ್ಥಳೀಯವಾಗಿಯೂ ಕಡಿಮೆಯಾಗುತ್ತಿರುವ ಅರಣ್ಯೀಕರಣ, ತಲೆಎತ್ತುತ್ತಿರುವ ಹೊಸ ಹೊಸ ಕಟ್ಟಡಗಳು, ಬಡಾವಣೆಗಳು, ಬೆಳೆಯುತ್ತಿರುವ ನಗರಗಳು, ಪಟ್ಟಣಗಳು ಹೀಗೆ... ಒಂದಲ್ಲ ಎರಡಲ್ಲ ಹಲವು ಅಂಶಗಳು ಹವಾಮಾನದ ಮೇಲೆ ಪರಿಣಾಮ ಬೀರುತ್ತಿವೆ. ಹಾಗಾಗಿ, ಬೀಳುವ ಮಳೆ ನಿಲ್ಲುತ್ತಿಲ್ಲ, ಅತ್ಯಂತ ರಭಸವಾಗಿ ಒಂದಷ್ಟು ಹೊತ್ತು ಮಳೆ ಸುರಿದು ಪ್ರವಾಹದ ಸನ್ನಿವೇಶಗಳು ಉಂಟಾಗುತ್ತಿವೆ.

ಬದಲಾಗುತ್ತಿರುವ ಮುಂಗಾರಿಗೆ ತಕ್ಕಂತೆ ಜಿಲ್ಲಾಡಳಿತ ಸಾಕಷ್ಟು ಮುಂಚಿತವಾಗಿ ತಯಾರಿ ನಡೆಸಿದರೂ ಪ್ರಕೃತಿಯ ಮುಂದೆ ಯಾರ ಆಟವೂ ನಡೆಯುತ್ತಿಲ್ಲ. ಪ್ರತಿ ವರ್ಷ ಅಪಾಯದಲ್ಲಿ ವಾಸಿಸುವವರಿಗೆ ನೋಟಿಸ್ ನೀಡಿ, ತೆರವುಗೊಳಿಸುವಂತೆ ಸೂಚಿಸುವುದು, ಪ್ರವಾಹ ಬಂದಾದ ನಂತರ ಕಾಳಜಿ ಕೇಂದ್ರ ತೆರೆಯುವುದು, ಉಕ್ಕಿ ಹರಿಯುವ ನದಿಗಳಿಂದ ಕೊಚ್ಚಿ ಹೋದ ರಸ್ತೆ, ಸೇತುವೆಗಳ ದುರಸ್ತಿ, ಕುಸಿದ ಮಣ್ಣನ್ನು ತೆರವುಗೊಳಿಸುವುದು ಹೀಗೆ ಪ್ರತಿ ವರ್ಷವೂ ಜಿಲ್ಲಾಡಳಿತ ಪರಿಹಾರ ಕಾರ್ಯಾಚರಣೆ ಕೈಗೊಳ್ಳಬೇಕಿದೆ.

ಈ ವರ್ಷವೂ ಯಥಾಪ್ರಕಾರ ಮುನ್ನಚ್ಚರಿಕೆ ಕೈಗೊಂಡಿದೆ. ರಾಜಕಾಲುವೆಗಳನ್ನು ಸ್ವಚ್ಛಗೊಳಿಸುತ್ತಿವೆ, ಅಪಾಯದಲ್ಲಿ ವಾಸಿಸುವವರಿಗೆ ತೆರವುಗೊಳಿಸುವಂತೆ ನೋಟೀಸ್ ನೀಡುತ್ತಿದೆ. ಸೆಸ್ಕ್‌ನವರು ಬೇಕಾಗುವಷ್ಟು ವಿದ್ಯುತ್ ಕಂಬಗಳನ್ನು, ವಿದ್ಯುತ್ ಪರಿವರ್ತಕಗಳನ್ನು ದಾಸ್ತಾನು ಇಡುತ್ತಿದ್ದಾರೆ. ವಿದ್ಯುತ್ ಲೈನ್‌ಗೆ ಅಪಾಯಕಾರಿ ಎನಿಸುವ ಮರಗಳನ್ನು, ಅದರ ಕೊಂಬೆಗಳನ್ನು ಕಡಿಯುತ್ತಿದ್ದಾರೆ. ಆದರೆ, ಪ್ರಕೃತಿ ತನ್ನ ಕಾರ್ಯವೈಖರಿಯ ಒಂದಿಷ್ಟು ಸುಳಿವನ್ನೂ ಎಲ್ಲಿಯೂ ಬಿಟ್ಟುಕೊಡುತ್ತಿಲ್ಲ.

ವಿರಾಜಪೇಟೆ ಪುರಸಭೆ ವ್ಯಾಪ್ತಿಯಲ್ಲಿ ಮಳೆಗಾಲವನ್ನು ಎದುರಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯಲು ಪುರಸಭೆಯ ವ್ಯಾಪ್ತಿಯ ರಾಜಕಾಲುವೆ ಹೂಳು ತೆಗೆಯುವುದು ಹಾಗೂ ವಾರ್ಡ್‌ಗಳ ಚರಂಡಿಗಳನ್ನು ಸ್ವಚ್ಚಗೊಳಿಸುವ ಕಾರ್ಯ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಮಳೆ ಆರಂಭವಾಗುವ ಸಾಧ್ಯತೆ ಇರುವುದರಿಂದ ಈ ಕಾರ್ಯಗಳು ಬೇಗನೆ‌ ಪೂರ್ಣಗೊಳಿಸಬೇಕಿದೆ.

ಪ್ರತಿ ಮಳೆಗಾಲದ ಸಂದರ್ಭದಲ್ಲೂ ಪಟ್ಟಣದ ಬೆಟ್ಟ ಪ್ರದೇಶದ ನಿವಾಸಿಗಳು ಭೂಕುಸಿತದ ಭೀತಿಯನ್ನು ಎದುರಿಸುತ್ತಿದ್ದು, ಈ ಬಾರಿಯೂ ಹೆಚ್ಚಿನ ಮಳೆಯಾದ ಸಂದರ್ಭದಲ್ಲಿ ಹಿಂದಿನ ವರ್ಷಗಳಂತೆ ಕಾಳಜಿ ಕೇಂದ್ರ ತೆರೆಯಲು ಬೇಕಾದ ಅಗತ್ಯ ಸಿದ್ಧತೆಗಳನ್ನು ಪುರಸಭೆ ಕೈಗೊಂಡಿದೆ. ಈ ಬೆಟ್ಟ ಪ್ರದೇಶದ ನಿವಾಸಿಗಳಿಗೆ ಶಾಶ್ವತವಾಗಿ ಪರ್ಯಾಯ ವಸತಿ ವ್ಯವಸ್ಥೆಯನ್ನು ಇನ್ನೂ ಒದಗಿಸಿಲ್ಲ.

ಸೋಮವಾರಪೇಟೆ; ನಡೆದಿದೆ ಸಿದ್ಧತೆ

ಸೋಮವಾರಪೇಟೆ: ಇನ್ನೇನು ಕೆಲವೇ ದಿನಗಳಲ್ಲಿ ಮುಂಗರು ಮಳೆ ಪ್ರಾರಂಭಗೊಳ್ಳಲಿದ್ದು, ತಾಲ್ಲೂಕು ಆಡಳಿತದಿಂದ ಸಿದ್ಧತೆಗಳು ನಡೆಯುತ್ತಿವೆ.

ಹಿಂದಿನ ಸಾಲಿನಲ್ಲಿ ಸಂಭವಿಸಿದ ಅನಾಹುತಗಳ ಪ್ರದೇಶಗಳನ್ನು ಗಮನದಲ್ಲಿಟ್ಟುಕೊಂಡು, ಅಲ್ಲಿ ಯಾವ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಸಭೆಯಲ್ಲಿ ಸೂಚಿಸಿದ್ದಾರೆ. ಅದರಂತೆ ಇಲಾಖೆ ಕ್ರಮ ತೆಗೆದುಕೊಳ್ಳಲು ಮುಂದಾಗಿದೆ.

ಮಳೆಗಾಲದಲ್ಲಿ ಏನಾದರೂ ಅನಾಹುತಗಳು ಸಂಭವಿಸಿದಲ್ಲಿ ನಿಯಂತ್ರಣ ಕಚೇರಿಗಳನ್ನು ಪ್ರಾರಂಭಿಸಿ ವ್ಯವಸ್ಥೆ ಕೈಗೊಳ್ಳಲು ತಾಲ್ಲೂಕು ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ತಾಲ್ಲೂಕಿನ ತುರ್ತು ಸಂದರ್ಭ ಬಂದಲ್ಲಿ ಕಾಳಜಿ ಕೇಂದ್ರಗಳನ್ನು ತೆರೆದು ಜನರಿಗೆ ಆಶ್ರಯ ನೀಡಲು ಹಾಗೂ ದಿನ ಬಳಕೆಯ ಆಹಾರದ ಕಿಟ್‌ಗಳನ್ನು ವಿತರಿಸಲು ಯೋಜನೆ ರೂಪಿಸಲಾಗಿದೆ. ರಕ್ಷಣಾ ತಂಡಗಳನ್ನು ನೇಮಕ ಮಾಡಲಾಗಿದೆ. ಅವಶ್ಯವಿದ್ದಲ್ಲಿ ಜೆಸಿಬಿಗಳನ್ನು ಕಾಯ್ದಿರಿಸಲಾಗುವುದು ಎಂದು ತಹಶೀಲ್ದಾರ್ ಎಸ್.ಎನ್. ನರಗುಂದ ತಿಳಿಸಿದರು.

ನಿರ್ವಹಣೆ; ಕೆ.ಎಸ್.ಗಿರೀಶ

ಮಾಹಿತಿ: ಸೋಮಣ್ಣ, ಸಿ.ಎಸ್.ಸುರೇಶ್, ಡಿ.ಪಿ.ಲೋಕೇಶ್, ರಘು ಹೆಬ್ಬಾಲೆ, ರೆಜಿತ್‌ಕುಮಾರ್ ಗುಹ್ಯ, ಎಂ.ಎಸ್.ಸುನಿಲ್, ಎಂ.ಎನ್.ಹೇಮಂತ್.

ಮಡಿಕೇರಿ ನಗರಸಭಾ ವ್ಯಾಪ‍್ತಿಯ ರಾಜಕಾಲುವೆಗಳನ್ನು ಈಚೆಗೆ ಸ್ವಚ್ಛಗೊಳಿಸಲಾಯಿತು
ಮಡಿಕೇರಿ ನಗರಸಭಾ ವ್ಯಾಪ‍್ತಿಯ ರಾಜಕಾಲುವೆಗಳನ್ನು ಈಚೆಗೆ ಸ್ವಚ್ಛಗೊಳಿಸಲಾಯಿತು
ವಿರಾಜಪೇಟೆಯಲ್ಲಿ ಚರಂಡಿ ಸ್ವಚ್ಛತೆಗೊಳಿಸುತ್ತಿರುವುದು
ವಿರಾಜಪೇಟೆಯಲ್ಲಿ ಚರಂಡಿ ಸ್ವಚ್ಛತೆಗೊಳಿಸುತ್ತಿರುವುದು
ಸಿದ್ದಾಪುರದ ಚರಂಡಿಗಳಲ್ಲಿ ಗಿಡಗಂಟಿಗಳು ಬೆಳೆದಿವೆ
ಸಿದ್ದಾಪುರದ ಚರಂಡಿಗಳಲ್ಲಿ ಗಿಡಗಂಟಿಗಳು ಬೆಳೆದಿವೆ
ಸಿದ್ದಾಪುರದ ಚರಂಡಿಗಳಲ್ಲಿ ಗಿಡಗಂಟಿಗಳು ಬೆಳೆದಿವೆ
ಸಿದ್ದಾಪುರದ ಚರಂಡಿಗಳಲ್ಲಿ ಗಿಡಗಂಟಿಗಳು ಬೆಳೆದಿವೆ
ಗೌತಮ್ ಕಿರಗಂದೂರು
ಗೌತಮ್ ಕಿರಗಂದೂರು
ಸಿ.ಅರುಣ್‌
ಸಿ.ಅರುಣ್‌
ಟಿ.ಆರ್.ಪ್ರಭಾಕರ್ ಗೌಡ ಸಮಾಜ ರಸ್ತೆ ಕುಶಾಲನಗರ
ಟಿ.ಆರ್.ಪ್ರಭಾಕರ್ ಗೌಡ ಸಮಾಜ ರಸ್ತೆ ಕುಶಾಲನಗರ
ಟಿ.ಸಿ.ನಾಗರಾಜ್ ಮೂರ್ನಾಡು
ಟಿ.ಸಿ.ನಾಗರಾಜ್ ಮೂರ್ನಾಡು
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ
ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ
ಅನಿತಾಬಾಯಿ ಸೆಸ್ಕ್‌ನ ಕೊಡಗು ಜಿಲ್ಲಾ ಕಾರ್ಯನಿರ್ವಾಹಕ ಎಂಜಿನಿಯರ್
ಅನಿತಾಬಾಯಿ ಸೆಸ್ಕ್‌ನ ಕೊಡಗು ಜಿಲ್ಲಾ ಕಾರ್ಯನಿರ್ವಾಹಕ ಎಂಜಿನಿಯರ್

ಎಷ್ಟೇ ಸಿದ್ಧತೆ ಕೈಗೊಂಡರೂ ತಪ್ಪದ ಅನಾಹುತ ಕಾಳಜಿ ಕೇಂದ್ರಗಳನ್ನು ತೆರೆಯಲೂ ಸಿದ್ಧತೆ ಕೆಲವೇ ದಿನಗಳಲ್ಲಿ ಬರಲಿದೆ ಎನ್‌ಡಿಆರ್‌ಎಫ್ ತಂಡ

ವಿದ್ಯುತ್ ಕಂಬಗಳು ಹಾಗೂ ವಿದ್ಯುತ್ ಪರಿವರ್ತಕಗಳ ದಾಸ್ತಾನು ಈಗಾಗಲೇ ಸಾಕಷ್ಟು ಇದೆ. ಮುಂಗಾರಿಗಾಗಿಯೇ ನಿಗಮದಿಂದ ಗ್ಯಾಂಗ್‌ಮೆನ್‌ಗಳ ನಿಯೋಜನೆ ನಡೆದಿದೆ.

-ಅನಿತಾ ಬಾಯಿ ಸೆಸ್ಕ್‌ನ ಕಾರ್ಯಪಾಲಕ ಎಂಜಿನಿಯರ್.

ಎಲ್ಲ ಸಿದ್ಧತೆಗಳೂ ನಡೆದಿವೆ; ಜಿಲ್ಲಾಧಿಕಾರಿ ಮುಂಗಾರಿಗೆ ಸಿದ್ಧತೆ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ‘ಎಲ್ಲ ಬಗೆಯ ಸಿದ್ದತಾ ಕಾರ್ಯಗಳು ನಡೆದಿವೆ’ ಎಂದು ಹೇಳಿದರು. ಜಿಲ್ಲಾ ವಿಪತ್ತು ನಿರ್ವಹಣಾ ಸಭೆ ನಡೆಸಿ ಸೂಚನೆಗಳನ್ನು ನೀಡಲಾಗಿದೆ. ತಾಲ್ಲೂಕುಗಳ ಮಟ್ಟದಲ್ಲೂ ಸಭೆಗಳು ನಡೆದಿವೆ. ಪ್ರತಿ ಹೋಬಳಿ ಹಾಗೂ ತಾಲ್ಲೂಕುಗಳ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಎನ್‌ಡಿಆರ್‌ಎಫ್ ತಂಡ ಕೆಲ ದಿನಗಳಲ್ಲೇ ಬರಲಿದೆ ಎಂದು ಅವರು ತಿಳಿಸಿದರು. ಅರಣ್ಯ ಇಲಾಖೆ ಹಾಗೂ ಸೆಸ್ಕ್ ಇಲಾಖೆಯ ತಂಡಗಳು ವಿದ್ಯುತ್ ಲೈನ್‌ಗೆ ಹೊಂದಿಕೊಂಡಿರುವ ಮರಗಳನ್ನು ತೆರವುಗೊಳಿಸುತ್ತಿದ್ದಾರೆ. ರಾಜಕಾಲುವೆಗಳಲ್ಲಿರುವ ಹೂಳನ್ನು ತೆಗೆಯಲಾಗುತ್ತಿದೆ ಎಂದರು. ಈಗಾಗಲೇ ಒಂದು ಸುತ್ತಿನ ಅಣಕು ಕಾರ್ಯಾಚರಣೆ ನಡೆದಿದೆ. ಎನ್‌ಡಿಆರ್‌ಎಫ್ ತಂಡ ಬಂದ ಮೇಲೆ ಮತ್ತೊಂದು ಬಾರಿ ಅಣಕು ಕಾರ್ಯಾಚರಣೆ ನಡೆಯಲಿದೆ. ಹಾರಂಗಿ ಜಲಾಶಯದ ಒಳ ಹರಿವಿನ ಮೇಲೆ ತೀವ್ರ ನಿಗಾ ವಹಿಸಲಾಗುತ್ತಿದೆ. ಸಾಧ್ಯವಿರುವ ಎಲ್ಲ ಬಗೆಯ ರಕ್ಷಣಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

ಜನಾಭಿಪ್ರಾಯ ಗಿಡ ಕತ್ತರಿಸಬೇಕು ಮಳೆಗಾಲ ಪ್ರಾರಂಭವಾಗುತ್ತಿದ್ದರೂ ರಾಜ್ಯ ಹೆದ್ದಾರಿ ಮತ್ತು ಗ್ರಾಮೀಣ ರಸ್ತೆಗಳ ಬದಿಗಳಲ್ಲಿ ಚರಂಡಿ ಸ್ವಚ್ಛಗೊಳಿಸುವುದು ಮತ್ತು ರಸ್ತೆ ಬದಿಯ ಕಾಡು ಕಡಿಯುವ ಕೆಲಸವನ್ನು ಇಲಾಖೆಗಳು ಮಾಡುತ್ತಿಲ್ಲ. ಮೊದಲು ಆ ಕೆಲಸ ಮಾಡಬೇಕು. ಸರ್ಕಾರ ಮುಂಗಾರು ಪೂರ್ವ ಮತ್ತು ಮುಂಗಾರು ನಂತರದ ರಸ್ತೆ ನಿರ್ವಹಣೆಗಾಗಿ ಹಣ ಬಿಡುಗಡೆ ಮಾಡುತ್ತದೆ. ಆದರೆ ವರ್ಷಕ್ಕೆ ಒಮ್ಮೆ ಮಾತ್ರ ಕೆಲಸ ಮಾಡುತ್ತಿದ್ದಾರೆ. ಗೌತಮ್ ಕಿರಗಂದೂರು ಕೃಷಿಕ. ಒತ್ತುವರಿ ತೆರವುಗೊಳಿಸಿ ವಿರಾಜಪೇಟೆ ಪಟ್ಟಣದ ಮಠದ ಗದ್ದೆಯ ಇಳಿಜಾರಿನ ರಸ್ತೆಯ ಬದಿಗಳಲ್ಲಿ‌ ಚರಂಡಿ ನಿರ್ಮಿಸಿ ರಸ್ತೆಯ ಇಕ್ಕೆಲವನ್ನು ಸರಿಪಡಿಸಬೇಕು. ಪಟ್ಟಣದ ವ್ಯಾಪ್ತಿಯಲ್ಲಿನ ಎಲ್ಲಾ ರಾಜಕಾಲುವೆಯ ಹೂಳನ್ನು ಹಾಗೂ ಒತ್ತುವರಿಯನ್ನು ತೆರವುಗೊಳಿಸಬೇಕು. ಸಿ.ಅರುಣ್ ವಿರಾಜಪೇಟೆ ನಿವಾಸಿ. ಅತಿಕ್ರಮಣ ಹೂಳು ಸಮಸ್ಯೆ ಕುಶಾಲನಗರದ ಕೆಲವು ಕಡೆ ಚರಂಡಿಯ ಬಹುಭಾಗ ಅತಿಕ್ರಮಣಗೊಂಡಿದೆ. ಚರಂಡಿಯಲ್ಲಿ ಗಿಡಗಂಟಿಗಳು ಬೆಳೆದು ನಿಂತಿದ್ದು ತ್ಯಾಜ್ಯ ಚರಂಡಿಗಳಲ್ಲಿ ಶೇಖರಣೆಗೊಂಡಿದೆ. ಪ್ರತಿವರ್ಷ ಮಳೆಗಾಲದ ಸಮಯದಲ್ಲಿ ಕಾಡುತ್ತಿರುವ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸ್ಥಳೀಯಾಡಳಿತ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮುಂದಾಗಬೇಕು. ಚರಂಡಿಯಲ್ಲಿರುವ ಹೂಳು ತೆಗೆದು ಮಳೆನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಿಕೊಡಬೇಕು ಪ್ರಭಾಕರ್ ಕುಶಾಲನಗರ. *** ವಿದ್ಯುತ್ ವ್ಯತ್ಯಯ ಉಂಟಾಗದಂತೆ ಗಮನ ಹರಿಸಿ ಮಳೆಗಾಲ ಆರಂಭಗೊಂಡಿದ್ದು ಗ್ರಾಮೀಣ ಪ್ರದೇಶದಲ್ಲಿ ಪದೇ ಪದೇ ವಿದ್ಯುತ್ ಕಡಿತ ಉಂಟಾಗುತ್ತಿದೆ. ಮುಂಗಾರಿನಲ್ಲಿ ವಿದ್ಯುತ್ ಸಮಸ್ಯೆ ಗ್ರಾಮೀಣರನ್ನು ತೀವ್ರವಾಗಿ ಬಾಧಿಸುತ್ತದೆ. ಮಳೆಗಾಲಕ್ಕೆ ಮುರಿದು ಬೀಳುವ ರೆಂಬೆ ಕೊಂಬೆಗಳನ್ನು ಕಡಿದು ವಿದ್ಯುತ್ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳಬೇಕು. ಟಿ.ಸಿ.ನಾಗರಾಜ್ ಮೂರ್ನಾಡು. *** ಭತ್ತದ ಕೃಷಿಗೆ ಪರಿಹಾರ ನೀಡಬೇಕು ಪ್ರತಿ ಮುಂಗಾರಿನಲ್ಲೂ ಲಕ್ಷ್ಮಣತೀರ್ಥ ನದಿಯು ಕಾನೂರು ಹರಿಹರ ಬೆಕ್ಕೆ ಸೊಡ್ಲೂರು ಕಾನೂರು ಕೊಟ್ಟಗೆರಿ ಬಾಳೆಲೆ ನಿಟ್ಟೂರು ಭಾಗಗಳಲ್ಲಿ ಪ್ರವಾಹ ಉಂಟುಮಾಡಿ ಭತ್ತದ ಕೃಷಿಗೆ ಮತ್ತು ಜನರ ಓಡಾಟಕ್ಕೆ ತುಂಬಾ ತೊಂದರೆ ಉಂಟು ಮಾಡುತ್ತಿದೆ. ಕಾನೂರು ಭಾಗದಲ್ಲಿ ನಿಡುಗುಂಬ ಗ್ರಾಮ ದ್ವೀಪವಾಗುತ್ತದೆ. ಈ ಸಂದರ್ಭದಲ್ಲಿ ಜನರ ಓಡಾಟಕ್ಕೆ ಸಮಸ್ಯೆಯಾಗದಂತೆ ಜಿಲ್ಲಾಡಾಳಿತ ನೋಡಿಕೊಳ್ಳಬೇಕು. ಭತ್ತದ ಕೃಷಿಗೆ ಪ್ರವಾಹದಿಂದ ಆಗುವ ಹಾನಿ ಪರಿಹಾರವನ್ನು ರೈತರಿಗೆ ನೀಡಬೇಕು. ಪಡಿಕಲ್ ಕುಸುಮಾವತಿ ಸಾಮಾಜಿಕ ಹೋರಾಟಗಾರ್ತಿ ಗೋಣಿಕೊಪ್ಪಲು.

ಸಿದ್ದಾಪುರ; ಪಂಚಾಯಿತಿ ಎಚ್ಚೆತ್ತುಕೊಳ್ಳಬೇಕಿದೆ ಸಿದ್ದಾಪುರ: ಇಲ್ಲಿನ ಬಹುತೇಕ ಚರಂಡಿಗಳು ಸ್ವಚ್ಚತೆ ಕಂಡಿಲ್ಲ. ಕರಡಿಗೋಡು ರಸ್ತೆಯ ವಿ ಸೆವೆನ್ ಕ್ಲಬ್ ಬಳಿ ಇರುವ ಚರಂಡಿ ಶುಚಿಗೊಳಿಸದೇ ದುರ್ವಾಸನೆ ಬೀರುತ್ತಿದೆ. ಚರಂಡಿಯ ಬಳಿ ಇರುವ ಕುರುಚಲು ಗಿಡಗಳನ್ನು ಕಡಿಯದೇ ಬಿಟ್ಟಿದ್ದು ಚರಂಡಿಯಲ್ಲಿ ತ್ಯಾಜ್ಯದ ನೀರು ನಿಂತಿದೆ. ಚರಂಡಿ ಬದಿ ಸ್ವಚ್ಚಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಗ್ರಾಮ ಪಂಚಾಯಿತಿ ಕ್ರಮ ವಹಿಸಬೇಕಿದೆ. ಮಡಿಕೇರಿ ರಸ್ತೆಯ ಚರಂಡಿಯ ಮೂಲಕ ಕೊಳಚೆ ತ್ಯಾಜ್ಯದ ನೀರು ಕಾವೇರಿ ನದಿ ಸೇರುತ್ತಿದೆ. ಮೈಸೂರು ರಸ್ತೆಯ ಬಡಾವಣೆಯ ನೀರು ಕೂಡ ಸಮೀಪದ ತೋಡಿನ ಮೂಲಕ ಹರಿದು ಕಾವೇರಿ ನದಿ ಸೇರುತ್ತಿದ್ದು ತ್ಯಾಜ್ಯ ನೀರು ತೋಡಿಗೆ ಹರಿಯದಂತೆ ಗ್ರಾಮ ಪಂಚಾಯಿತಿ ಕ್ರಮ ಕೈಗೊಳ್ಳಬೇಕಿದೆ.

ಸೂಚನೆಗಷ್ಟೇ ಸೀಮಿತವಾದ ಸಿದ್ಧತೆ ಸುಂಟಿಕೊಪ್ಪ: 2017 ರಲ್ಲಿ ಸಂಭವಿಸಿದ ಭೂಕುಸಿತಕ್ಕೆ ಸುಂಟಿಕೊಪ್ಪ ಸಮೀಪದ ಕೆದಕಲ್ ಗ್ರಾಮ ಪಂಚಾಯತಿಯ ಹಾಲೇರಿ ಗ್ರಾಮದಲ್ಲಿ ದೊಡ್ಡ ಮಟ್ಟದ ಹಾನಿ ಸಂಭವಿಸಿತ್ತು. ಈ ಬಾರಿಯೂ ವಿಪತ್ತು ನಿರ್ವಹಣಾ ತಂಡದ ವರದಿಯಲ್ಲಿ ಹೋಬಳಿ ವ್ಯಾಪ್ತಿಯ ಈ ಭಾಗವು ಸಹ ಸೇರಿರುವುದರಿಂದ ಜಿಲ್ಲಾಡಳಿತ ಮತ್ತು ಸ್ಥಳೀಯ ಸರ್ಕಾರ ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಇದೆ‌. ಈ‌ ಬಗ್ಗೆ ಕೆದಕಲ್ ಗ್ರಾಮ ಪಂಚಾಯತಿ ಪಿಡಿಒ ರಾಜಶೇಖರ್ ಅವರು ಮಾಹಿತಿ ನೀಡಿ ‘ಹಾಲೇರಿ ಗ್ರಾಮದ ಮನೆಗಳಿಗೆ ಭೇಟಿ ನೀಡಿ ಎಚ್ಚರಿಕೆಯಲ್ಲಿರುವಂತೆ ಸೂಚನೆ ನೀಡಲಾಗಿದೆ‌‌. ಅಪಾಯ ಉಂಟಾದಲ್ಲಿ ಅಲ್ಲಿನ ನಿವಾಸಿಗಳನ್ನು ಬೇರೆಡೆಗೆ ಕಳುಹಿಸುವ ಯೋಜನೆ ರೂಪಿಸಲಾಗುವುದು’ ಎಂದರು. ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಮಳೆಗಾಲಕ್ಕೆ ಸಂಬಂಧಿಸಿದಂತೆ ಪೂರ್ವ ಯೋಜಿತ ಸಿದ್ಧತೆಗಳು ಇನ್ನೂ ನಡೆದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT