ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶೈವ, ವೈಷ್ಣವರ ಸಂಗಮ ತಾಣ

ಮುತ್ತಪ್ಪಸ್ವಾಮಿ, ಅಯ್ಯಪ್ಪಸ್ವಾಮಿಯ ವಿಜೃಂಭಣೆಯ ಜಾತ್ರೋತ್ಸವಕ್ಕೆ ಸಿದ್ಧತೆ
ಲೋಕೇಶ್ ಡಿ.ಪಿ.
Published 17 ಮಾರ್ಚ್ 2024, 6:14 IST
Last Updated 17 ಮಾರ್ಚ್ 2024, 6:14 IST
ಅಕ್ಷರ ಗಾತ್ರ

ಸೋಮವಾರಪೇಟೆ: ಇಲ್ಲಿನ ಮುತ್ತಪ್ಪಸ್ವಾಮಿ ಹಾಗೂ ಅಯ್ಯಪ್ಪಸ್ವಾಮಿ ದೇವಾಲಯಗಳು ಪ್ರಮುಖವಾಗಿದ್ದು, ಶೈವರು ಪೂಜಿಸುವ ಶಿವ ಇಲ್ಲಿ  ಮುತ್ತಪ್ಪ (ಮುತ್ತಪ್ಪೇಶ್ವರ) ನಾಗಿ ಹಾಗೂ ವೈಷ್ಣವರು ಪೂಜಿಸುವ ವಿಷ್ಣು ಇಲ್ಲಿ ವಿಷ್ಣುಮೂರ್ತಿ ಹಾಗೂ ಸಹದೈವಗಳಾಗಿ ಪೂಜಿಸಲಾಗುತ್ತಿದೆ. ಹಾಗಾಗಿ, ಈ ದೇವಾಲಯ ಶೈವ ಹಾಗೂ ವೈಷ್ಣವರ ಸಂಗಮ ತಾಣವಾಗಿಯೂ ಬಿಂಬಿತವಾಗಿದೆ.

ವರ್ಷಪೂರ್ತಿ ವಿಶೇಷ ಪೂಜೆಗಳನ್ನು ನಡೆಸಲಾಗುತ್ತಿದ್ದು, ಮಾರ್ಚ್ 17ರಿಂದ 3 ವಿಜೃಂಭಣೆಯ ಜಾತ್ರೋತ್ಸವ ನಡೆಯುತ್ತದೆ. ಧಾರ್ಮಿಕ ಉತ್ಸವದಲ್ಲಿ ಎಲ್ಲಾ ಜಾತಿ ಜನಾಂಗ ಮಾತ್ರವಲ್ಲದೆ, ಎಲ್ಲಾ ಧರ್ಮಿಯರೂ ಭಾಗವಹಿಸುವುದು ವಿಶೇಷವಾಗಿದೆ. ನಂಬಿದವರಿಗೆ ಇಂಬು ಕೊಡುವ ಹಾಗೂ ಸಮಸ್ತ ಭಕ್ತಾದಿ ಜನರ ಧಾರ್ಮಿಕ, ಭಕ್ತಿ- ಭಾವಗಳಿಗೆ ಶಕ್ತಿ ತುಂಬುವ ತಾಣ ಎನಿಸಿಕೊಂಡಿದೆ.

ಈ ದೇವಾಲಯಕ್ಕೆ ಸುಮಾರು 300ಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ. ದೇವಾಲಯವಿರುವ ಜಾಗ ಯಜ್ಞ-ಯಾಗಾದಿಗಳು ನಡೆದ ಸ್ಥಳ ಮಾತ್ರವಲ್ಲ, ಪೂರ್ವದಲ್ಲಿ ಈ ಪ್ರದೇಶ ಕಾಡುಗಳಿಂದ ಆವೃತವಾಗಿದ್ದು ಇಲ್ಲಿ ಋಷಿ- ಮುನಿಗಳು ತಪಸ್ಸಿಗೆ ಕುಳಿತು ಇಡೀ ಭುವನವನ್ನೇ ತನ್ನ ಅಧೀನದಲ್ಲಿಟ್ಟುಕೊಂಡಿದ್ದ ಶಕ್ತಿದೇವತೆ ಭುವನೇಶ್ವರಿಯ ವರಸಿದ್ಧಿಗಾಗಿ ತಪಸ್ಸು ಮಾಡಿ ಯಶಸ್ಸು ಕಂಡ ಪವಿತ್ರ ಸ್ಥಳ ಇದಾಗಿದೆ. ಈ ವಿಷಯ ಬಹಿರಂಗಗೊಳ್ಳುವ ಮೂಲಕ ಸ್ಥಾನದ ಪಾವಿತ್ರ್ಯತೆ ತಿಳಿದಿದ್ದು 1999ರ ಫೆ. 24 ಹಾಗೂ 25ರಂದು ದೇವಾಲಯದಲ್ಲಿ ಇರಿಸಿದ್ದ ಅಷ್ಟಮಂಗಲ ಪ್ರಶ್ನೆಯಿಂದ. ಈ ಹಿನ್ನೆಲೆಯಂತೆ ಸುಮಾರು 300ಕ್ಕೂ ಅಧಿಕ ವರ್ಷಗಳಿಂದ ಇಲ್ಲಿ ಭುವನೇಶ್ವರಿ ನೆಲೆಸಿರುವುದರಿಂದ ಈ ದೇವಾಲಯದ ಅಧಿದೇವತೆ ಭುವನೇಶ್ವರಿಯಾಗಿದ್ದಾಳೆ.

ಪ್ರತಿನಿತ್ಯ ಪ್ರಾತಃಕಾಲ ಹಾಗೂ ಸಂಧ್ಯಾಕಾಲ ಪೂಜಿಸಲಾಗುವ ದೈವಗಳಾದ ಮುತ್ತಪ್ಪ, ತಿರುವಪ್ಪ, ವಿಷ್ಣುಮೂರ್ತಿ, ಭಗವತಿ, ರಕ್ತಚಾಮುಂಡಿ, ಕಂಡಕರ್ಣ, ಕರಿಂಗುಟ್ಟಿ ಶಾಸ್ತಾವು, ಪೊಟ್ಟನ್ ಹಾಗೂ ಗುಳಿಗನ್ ದೈವಗಳು ಪ್ರತಿನಿತ್ಯ ಪೂಜೆ ಪಡೆಯುತ್ತಿವೆ.  ಮುತ್ತಪ್ಪಸ್ವಾಮಿ ದೇವಾಲಯದ ಆವರಣದಲ್ಲಿ ಸ್ಥಾಪಿತವಾಗಿರುವ 9 ದೈವಗಳಿದ್ದು, ಇವರಿಗೆ ವರ್ಷದ ಮಾರ್ಚ್ ತಿಂಗಳಲ್ಲಿ ವಿಶೇಷ ವೇಷ-ಭೂಷಣ ಹಾಗೂ ಚಂಡೆ ಸದ್ದಿನೊಂದಿಗೆ ವೆಳ್ಳಾಟಂ ಹಾಗೂ ಕೋಲಗಳು ಪ್ರತ್ಯೇಕವಾಗಿ ಹಗಲಿರುಳೆನ್ನದೆ ಎರಡು ದಿನ ಶ್ರದ್ಧಾ-ಭಕ್ತಿಯಿಂದ ಭಕ್ತ ಸಾಗರದ ಸಮ್ಮುಖದಲ್ಲಿ ಜರುಗುತ್ತದೆ.

ಇಲ್ಲಿ ಜಾತ್ರೆಗೆ ಅತೀ ಹೆಚ್ಚಿನ ಭಕ್ತರು ಸೇರುತ್ತಿದ್ದು ಈ ಜಾತ್ರೋತ್ಸವ ಜಿಲ್ಲೆಗೆ ಮಾದರಿಯಾಗಿ ಪ್ರಖ್ಯಾತಿ ಪಡೆದಿದೆ. ಪ್ರತಿವರ್ಷ ಜಾತ್ರೋತ್ಸವ ಸಂದರ್ಭ ಬರುವ ಭಕ್ತರಿಗೆ ಅನ್ನಸಂತರ್ಪಣೆ ಇರುತ್ತದೆ. ಇಲ್ಲಿನ ದೈವಗಳ ವೇಷ-ಭೂಷಣ ಹಾಗೂ ನರ್ತನಗಳು ಮಲಬಾರ್ ಹಾಗೂ ತುಳುನಾಡ ಜಾನಪದ ಸಂಪತ್ತು ಎಂದೇ ಬಿಂಬಿತವಾಗಿದೆ.

ಇಲ್ಲಿ ಬರುವ ಭಕ್ತರು ಭಯ-ಭಕ್ತಿಯಿಂದ ಈ ದೈವಗಳನ್ನು ನಿತ್ಯ ಸ್ಮರಿಸಿಕೊಂಡು ತಮ್ಮ ಬೇಡಿಕೆಯಿಟ್ಟು ಪ್ರಾರ್ಥಿಸಿದಲ್ಲಿ ಅದು ಈಡೇರುತ್ತದೆ. ತಮ್ಮ ಮನೆಯಲ್ಲಿನ ದನ-ಕರುಗಳಿಗೆ ಅಥವಾ ಸಾಕು ಪ್ರಾಣಿಗಳಿಗೆ ಆನಾರೋಗ್ಯ ಕಾಡಿದಲ್ಲಿ ಈ ದೈವಕ್ಕೆ ಹರಕೆ ಹೊತ್ತಲ್ಲಿ ಕೂಡಲೇ ಆರೋಗ್ಯವಾಗುತ್ತದೆ ಎಂಬುದು ಕೂಡ ದೈವವನ್ನು ನಂಬಿ ಯಶಸ್ಸು ಕಂಡವರ ಆನಿಸಿಕೆಯಾಗಿದೆ.

ಸೋಮವಾರಪೇಟೆ ಮುತ್ತಪ್ಪ ದೇವಾಲಯದಲ್ಲಿ ನಡೆಯುವ ಜಾತ್ರೋತ್ಸವಕ್ಕೆ ದೇವಾಲಯ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿರುವುದು.
ಸೋಮವಾರಪೇಟೆ ಮುತ್ತಪ್ಪ ದೇವಾಲಯದಲ್ಲಿ ನಡೆಯುವ ಜಾತ್ರೋತ್ಸವಕ್ಕೆ ದೇವಾಲಯ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿರುವುದು.

ಜಾತ್ರೋತ್ಸವ ಸಂಭ್ರಮ ಇಂದಿನಿಂದ

ಮುತ್ತಪ್ಪಸ್ವಾಮಿ ಮತ್ತು  ಅಯ್ಯಪ್ಪಸ್ವಾಮಿ ದೇವಾಲಯದ ಜಾತ್ರಾ ಮಹೋತ್ಸವವು ಮಾ. 17ರಿಂದ 19ರ ವರೆಗೆ 3 ದಿನಗಳು ವಿಜೃಂಭಣೆಯಿಂದ ಜರುಗಲಿದೆ. ಭಾನುವಾರ ಬೆಳಿಗ್ಗೆ 5.30ಕ್ಕೆ ಗಣಪತಿ ಹೋಮದೊಂದಿಗೆ ಪೂಜೆ ಆರಂಭವಾಗಲಿದ್ದು 6.30ಕ್ಕೆ ಧ್ವಜಾರೋಹಣ ನೆರವೇರಲಿದೆ. ಸಂಜೆ 6.30ಕ್ಕೆ ಕೊಳಪುರಂ ಮನಹಿಲ್ಲಂ ತಂತ್ರಿಗಳಾದ ಶ್ರೀಕೃಷ್ಣಕುಮಾರ್‌ ಅವರಿಂದ ವರ್ಷಕ್ಕೊಂದು ಬಾರಿ ಜರುಗುವ ವಿಶೇಷ ಆಶ್ಲೇಷ ಬಲಿ ಪೂಜೆಯು ನಡೆಯಲಿದೆ. ಸೋಮವಾರ ಮಧ್ಯಾಹ್ನ 1.30ಕ್ಕೆ ಕ್ಷೇತ್ರದ ಪ್ರಧಾನ ಅರ್ಚಕರಾದ ಮಣಿಕಂಠನ್‌ ನಂಬೂದರಿ ಅವರು ಕಳಸ ಪೂಜೆ ನೆರವೇರಿಸುವರು. ನಂತರ ಮುತ್ತಪ್ಪನ್‌ ದೇವರ ವೆಳ್ಳಾಟಂ ಆರಂಭವಾಗಲಿದ್ದು ಸಂಜೆ 4.30ಕ್ಕೆ ಕೇರಳದ ಖ್ಯಾತ ಸಿಂಗಾರಿಮೇಳದೊಂದಿಗೆ ಕಳಸದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ತೆರಳಿ ನಂತರ ದೇವಾಲಯಕ್ಕೆ ಹಿಂತಿರುಗುವುದು. ಸಂಜೆ 6-30ಕ್ಕೆ ವಿಷ್ಣುಮೂರ್ತಿ ದೇವರ ವೆಳ್ಳಾಟಂ 7ಕ್ಕೆ ಕರಿಂಗುಟ್ಟಿ ಚಾತನ್‌ ದೇವರ ವೆಳ್ಳಾಟಂ 7.30ಕ್ಕೆ ಕಂಡಕರ್ಣ ದೇವರ ವೆಳ್ಳಾಟಂ ನಡೆಯಲಿದೆ. ನಂತರ ಭಕ್ತಾದಿಗಳಿಗೆ ಅನ್ನದಾನವನ್ನು ಏರ್ಪಡಿಸಲಾಗಿದೆ. ನಂತರ ಪಟಾಕಿ ಸಿಡಿಮದ್ದುಗಳ ಪ್ರದರ್ಶನ ನೆರವೇರಲಿದೆ. ರಾತ್ರಿ 8.30ಕ್ಕೆ ಭಗವತಿ ದೇವಿಯ ವೆಳ್ಳಾಟಂ ರಾತ್ರಿ 9.30ಕ್ಕೆ ರಕ್ತಚಾಮುಂಡಿ ದೇವಿಯ ವೆಳ್ಳಾಟಂ ರಾತ್ರಿ 10.30ಕ್ಕೆ ಪೊಟ್ಟನ್‌ ದೇವರ ವೆಳ್ಳಾಟಂ ರಾತ್ರಿ 11.30ಕ್ಕೆ ದೇವರ ಕಳಿಕ್ಕಾಪಾಟ್‌ ನೆರವೇರಲಿದೆ. 1 ಗಂಟೆಗೆ ಭಗವತಿ ದೇವರ ಕೋಲ 2 ಗಂಟೆಗೆ ಕಂಡಕರ್ಣ ದೇವರ ಕೋಲ ಬೆಳಗಿನ ಜಾವ 3 ಗಂಟೆಗೆ ಪೊಟ್ಟನ್‌ ದೇವರ ಕೋಲ 4 ಗಂಟೆಗೆ ಕರಿಂಗುಟ್ಟಿ ಚಾತನ್‌ ದೇವರ ಕೋಲ 4.30ಕ್ಕೆ ಪೊಟ್ಟನ್‌ ದೇವರು ಅಗ್ನಿಗೇರುವುದು 5ಕ್ಕೆ ಶ್ರೀ ಮುತ್ತಪ್ಪನ್‌ ಮತ್ತು ತಿರುವಪ್ಪನ್‌ ದೇವರ ಕೋಲಗಳು ನಡೆಯಲಿದೆ. ಮಂಗಳವಾರ ಬೆಳಿಗ್ಗೆ 7 ಗಂಟೆಗೆ ರಕ್ತಚಾಮುಂಡಿ ದೇವಿಯ ಕೋಲ ನಡೆಯಲಿದೆ. 9ಕ್ಕೆ ವಿಷ್ಣುಮೂರ್ತಿ ದೇವರ ಕೋಲ 10ಕ್ಕೆ ಕಂಡಕರ್ಣದೇವರ ಗುರು ಶ್ರೀದರ್ಪಣ ನೆರವೇರಲಿದೆ. ಮಧ್ಯಾಹ್ನ 12 ಗಂಟೆಗೆ ಗುಳಿಗ ದೇವರ ಕೋಲ ಮಧ್ಯಾಹ್ನ 3 ಗಂಟೆಗೆ ಕೋಲಗಳ ಮುಕ್ತಾಯ ಕಾರ್ಯಕ್ರಮದೊಂದಿಗೆ ಜಾತ್ರೋತ್ಸವಕ್ಕೆ ತೆರೆ ಬೀಳಲಿದೆ ಎಂದು ಕ್ಷೇತ್ರದ ಅಧ್ಯಕ್ಷ ಎನ್‌.ಡಿ.ವಿನೋದ್‌ಕುಮಾರ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT