ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡವರಿಗೆ ಸಂವಿಧಾನವೊಂದೇ ಗುರುಪೀಠ; ಎನ್.ಯು.ನಾಚಪ್ಪ

ಕೊಡವ ವಿದ್ಯಾರ್ಥಿ ಸಂಘಗಳ ಒಕ್ಕೂಟ ಉದ್ಘಾಟನೆ
Published 11 ಡಿಸೆಂಬರ್ 2023, 17:08 IST
Last Updated 11 ಡಿಸೆಂಬರ್ 2023, 17:08 IST
ಅಕ್ಷರ ಗಾತ್ರ

ಮಡಿಕೇರಿ: ಈ ದೇಶದ ಸಂವಿಧಾನವೊಂದೇ ಕೊಡವರ ಗುರುಪೀಠವಾಗಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಪ್ರತಿಪಾದಿಸಿದರು.

ಮೈಸೂರಿನ ಜಯಲಕ್ಷ್ಮಿಪುರಂನ ಕೊಡವ ಸಹಕಾರ ಭವನದಲ್ಲಿ ಸೋಮವಾರ ನಡೆದ ಕೊಡವ ವಿದ್ಯಾರ್ಥಿ ಸಂಘಗಳ ಒಕ್ಕೂಟದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಕೊಡವರಿಗೆ ಕೊಡವ ಗುರುಪೀಠ ಇರಬೇಕು ಎನ್ನುವ ಅಭಿಪ್ರಾಯಗಳಿದೆ. ಆದರೆ, ಈ ಹೇಳಿಕೆಗಳು ಸಂಪೂರ್ಣವಾಗಿ ತಪ್ಪು ಮತ್ತು ಕೊಡವ ಬುಡಕಟ್ಟು ಸಮುದಾಯದ ಸಾಮಾಜಿಕ ನಂಬಿಕೆಗಳು ಹಾಗೂ ಪೂರ್ವಜರ ಆರಾಧನಾ ಮಾದರಿಗಳಿಗೆ ವಿರುದ್ಧವಾಗಿದೆ. ಈ ರೀತಿಯ ಪ್ರಸ್ತಾವಗಳು ಸಾಂವಿಧಾನಿಕ ನೈತಿಕತೆಯನ್ನು ಬುಡಮೇಲು ಮಾಡುವ ಪ್ರಯತ್ನವೂ ಆಗಿದೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯದ ವೈಫಲ್ಯ ಮತ್ತು ದುರಾಡಳಿತವನ್ನು ಮುಚ್ಚಿ ಹಾಕಲು, ಕೊಡವರ ಹಾದಿ ತಪ್ಪಿಸುವ ಪ್ರಯತ್ನಗಳು ನಡೆಯುತ್ತಿವೆ. ಸಿಎನ್‌ಸಿಯ ಸಾಂವಿಧಾನಿಕ ಬೇಡಿಕೆಗಳ ಕುರಿತು ಕೊಡವ ಜನರ ಮೂಲಕವೇ ತಪ್ಪು ಗ್ರಹಿಕೆ ಮೂಡಿಸಲಾಗುತ್ತಿದೆ ಎಂದೂ ಅಸಮಾಧಾನ ವ್ಯಕ್ತಪಡಿಸಿದರು.

ಕೂರ್ಗ್ ಪ್ರದೇಶ 1956ರಲ್ಲಿ ಕರ್ನಾಟಕದೊಂದಿಗೆ ವಿಲೀನವಾದ ನಂತರ ಕೊಡವರ ಆಶೋತ್ತರಗಳನ್ನು ಕಡೆಗಣಿಸಲಾಗಿದೆ. ಆಡಳಿತಗಾರರ ನಿರ್ಲಕ್ಷ್ಯದಿಂದ ಇಂದು ಕೊಡವ ಯುವ ಸಮೂಹ ಉದ್ಯೋಗಕ್ಕಾಗಿ ವಲಸೆ ಹೋಗುತ್ತಿದ್ದಾರೆ. ಇದರಿಂದ ಕೊಡವ ಭೂಮಿ ಮತ್ತು ಸಂಸ್ಕೃತಿಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಕೊಡವ ಯುವ ಸಮೂಹವನ್ನು ನಿರುದ್ಯೋಗದ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಅತ್ಯಂತ ಸೂಕ್ಷ್ಮವಾಗಿರುವ ಕೊಡವ ಸಮುದಾಯ ಉಳಿಯಬೇಕಾದರೆ ಯುವ ಪೀಳಿಗೆ ಹಕ್ಕುಗಳನ್ನು ಪ್ರತಿಪಾದಿಸುವ ಧೈರ್ಯ ತೋರಬೇಕು ಎಂದರು. 

ಕರ್ನಲ್ ಬಾಳೆಯಡ ಸುಬ್ರಮಣಿ, ಮೈಸೂರು ಕೊಡವ ಸಮಾಜದ ಅಧ್ಯಕ್ಷ ಪೊಂಜಂಡ ಗಪ್ಪಣ್ಣ, ಕೊಡವ ವಿದ್ಯಾರ್ಥಿ ಸಂಘಗಳ ಒಕ್ಕೂಟ ಅಧ್ಯಕ್ಷ ಮನೆಯಪಂಡ ಕಾರ್ಯಪ್ಪ, ಉಪಾಧ್ಯಕ್ಷ ಚೋಳಪಂಡ ದೇಚಮ್ಮ, ಗೌರವ ಕಾರ್ಯದರ್ಶಿ ಮುಂಡಿಯೊಳಂಡ ಮಾಚಯ್ಯ, ಜಂಟಿ ಕಾರ್ಯದರ್ಶಿ ಮೊಟ್ಟೆಯಂಡ ಇಶಾನಿ ಕುಟ್ಟಪ್ಪ, ಖಜಾಂಚಿ ಬಲ್ಯಂಡ ಮೌರ್ಯ, ಜಂಟಿ ಖಜಾಂಚಿ ನಾಯಕಂಡ ತ್ರಿಷಾ, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಮಂಡೇಟಿರ ದೇಗುಲ್, ಸಾಂಸ್ಕೃತಿಕ ಮುಖ್ಯಸ್ಥೆ (ಪೊಮ್ಮಕ್ಕ) ಚೆಟ್ಟಿರ ಗ್ರಂಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT