ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಪೋಕ್ಲು: ಬಿರುಸುಗೊಂಡ ಕೃಷಿ ಚಟುವಟಿಕೆ

Published 31 ಜುಲೈ 2023, 6:28 IST
Last Updated 31 ಜುಲೈ 2023, 6:28 IST
ಅಕ್ಷರ ಗಾತ್ರ

ಕೆ.ಎಸ್.ಗಿರೀಶ/ಸಿ.ಎಸ್.ಸುರೇಶ್

ನಾಪೋಕ್ಲು: ಕೊಡಗು ಜಿಲ್ಲೆಯಲ್ಲಿ ವಾಡಿಕೆಯಷ್ಟು ಮಳೆ ಬೀಳದೇ ಹೋದರೂ ಒಂದು ವಾರದಿಂದ ಸುರಿದಿರುವ ಮಳೆಗೆ ಗದ್ದೆಗಳಲ್ಲಿ ನೀರು ನಿಂತಿದೆ. ಮಳೆ ತಗ್ಗಿ, ಎಳೆ ಬಿಸಿಲು ಕಾಣುತ್ತಿದ್ದಂತೆ ಜಿಲ್ಲೆಯಾದ್ಯಂತ ರೈತರು ಕೃಷಿ ಚಟುವಟಿಕೆಗಳಲ್ಲಿ ಮಗ್ನರಾಗಿದ್ದಾರೆ.

ಈಗ ಬಿದ್ದಿರುವ ಮಳೆಯು ಭತ್ತದ ಕೃಷಿಗೆ ಪೂರಕ ಎನಿಸಿದೆ. ಜಿಲ್ಲೆಯಲ್ಲಿ ಸುಮಾರು 30 ಸಾವಿರ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯುವ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ. ಈಗಾಗಲೇ ಎಲ್ಲೆಡೆ ರೈತರು ಸಸಿಮಡಿ ಮಾಡುತ್ತಿದ್ದು, ಶೇ 10ರಷ್ಟು ನಾಟಿ ಆಗಿದೆ. ಈಗ ಎರಡು ಬಾರಿ ಉಳುಮೆ ಮಾಡಿದರೆ ನಾಟಿ ಮಾಡಬಹುದಾಗಿದೆ. ಸದ್ಯ, 15– 20 ದಿನಗಳ ಪೈರು ಇದೆ. ನಾಪೋಕ್ಲು, ಸಂಪಾಜೆ ಭಾಗದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಶಬನಾ ಎಂ ಶೇಖ್, ‘ಆಗಸ್ಟ್ 1 ಅಥವಾ 2 ವಾರದಲ್ಲಿ ನಾಟಿ ಆಗುತ್ತದೆ. ಇಷ್ಟು ಮಳೆ ಇದ್ದರೆ ಸಾಕು. ನೆಲ ನೀರು ಕುಡಿದಿದೆ. ಕೆಲವರು ದೀರ್ಘಾವಧಿ, ಮತ್ತೆ ಕೆಲವರು ಮಧ್ಯಮಾವಧಿ, ಅಲ್ಪಾವಧಿ ತಳಿಯ ಭತ್ತವನ್ನು ಹಾಕಿದ್ದಾರೆ’ ಎಂದು ಹೇಳಿದರು.

ನಾಪೋಕ್ಲು ಹೊರವಲಯ ಸೇರಿದಂತೆ ಪಾರಾಣೆ, ಬಲಮುರಿ, ಮೂರ್ನಾಡು, ಬಾಡಗ ಮತ್ತಿತರ ಭಾಗಗಳಲ್ಲಿ ಕಾರ್ಮಿಕರು ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಜಿಲ್ಲೆಯ ಎಲ್ಲೆಡೆ ಕಳೆದ ಕೆಲವು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿದು ಹಾನಿ ಸಂಭವಿಸಿತ್ತು. ಕಾವೇರಿ ನದಿ ತಟದ ಪ್ರದೇಶಗಳು ಜಲಾವೃತವಾಗಿದ್ದವು. ರಸ್ತೆ ಸಂಪರ್ಕ ಕಡಿತಗೊಂಡಿದ್ದವು. ಇದೀಗ ಮಳೆ ಇಳಿಮುಖಗೊಂಡಿದ್ದು, ಕಾವೇರಿ ನದಿ ನೀರಿನ ಹರಿವಿನ ಬಿರುಸು ತಗ್ಗಿದೆ. ಜಲಾವೃತ ಸ್ಥಳಗಳಲ್ಲಿ ನೀರು ಇಳಿಮುಖಗೊಂಡಿದೆ. ಕಾವೇರಿ ನದಿಯಲ್ಲಿ ನೀರು ಬಿರುಸಿನಿಂದ ಹರಿಯುತ್ತಿದ್ದು, ಗದ್ದೆಗಳಲ್ಲಿ ಸಂಗ್ರಹವಾಗಿದ್ದ ನೀರು ಇಳಿಮುಖಗೊಂಡಿದೆ. ಸಮೀಪದ ಬಲಮುರಿಯಲ್ಲಿ ಕಾವೇರಿ ನದಿ ನೀರು ರಭಸದಿಂದ ಹರಿಯುತ್ತಿದೆ. ಜಲಾವೃತವಾಗಿದ್ದ ಕಿರು ಸೇತುವೆಯಿಂದ ನೀರು ಇಳಿದಿದ್ದು ವಾಹನಗಳ ಸಂಚಾರ ಸಾಧ್ಯವಾಗಿದೆ.

ಬಲಮುರಿ ಹಾಗೂ ಎಂ.ಬಾಡದ ಗ್ರಾಮ ವ್ಯಾಪ್ತಿಯಲ್ಲಿ ನಾಟಿ ಕೆಲಸಕ್ಕೆ ರೈತರು ಅಣಿಯಾಗಿದ್ದಾರೆ. ಬಾಡಗ ಗ್ರಾಮದ ರೈತ ಮಾದಪ್ಪ ಅವರ ಭತ್ತದ ಗದ್ದೆಯಲ್ಲಿ ನಾಟಿ ಕೆಲಸ ಶನಿವಾರ ಬಿರುಸಿನಿಂದ ನಡೆದವು. ಮಹಿಳಾ ಕಾರ್ಮಿಕರು ಅಗೆ ತೆಗೆಯುವ ಕೆಲಸದಲ್ಲಿ ನಿರತರಾಗಿದ್ದರೆ, ಪುರುಷರು ನಾಟಿ ಕೆಲಸ ನಿರ್ವಹಿಸುತ್ತಿದ್ದರು. ಟ್ರಾಕ್ಟರ್ ಮತ್ತು ಟಿಲ್ಲರ್‌ನಿಂದ ಉಳುಮೆ ಕಾರ್ಯಗಳು ನಡೆದವು. ಗದ್ದೆ ಬದಿಯ ತೋಡುಗಳಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ಸರಿಪಡಿಸುವ ಕೆಲಸವು ಅಲ್ಲಲ್ಲಿ ನಡೆಯಿತು.

ಮಳೆ ಬಿಡುವು ಕೊಟ್ಟಿರುವುದರಿಂದ ಕಾಫಿ ತೋಟಗಳಲ್ಲಿ ಕಳೆ ನಿರ್ಮೂಲನಾ ಕೆಲಸ ಭರದಿಂದ ಸಾಗುತ್ತಿದೆ. ಈಚೆಗೆ ಕಾಳು ಮೆಣಸಿನ ದರದಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ಬೆಳೆಗಾರರು ಕಾಳುಮೆಣಸಿನ ಆರೈಕೆಯತ್ತ ಚಿತ್ತ ಹರಿಸಿದ್ದಾರೆ. ಈ ವರ್ಷ ಉತ್ತಮ ಇಳುವರಿ ಲಭಿಸುವ ಸಾಧ್ಯತೆ ಇದೆ. ಮಳೆ ಬಿಡುವು ನೀಡಿರುವುದರಿಂದ ಕಾಳು ಮೆಣಸಿನ ಬಳ್ಳಿಗಳಿಗೆ ಗೊಬ್ಬರ ಸಿಂಪಡಣೆ ಮಾಡುವುದಾಗಿ ಮಾಡಲು ತಯಾರಿ ನಡೆಸಿರುವುದಾಗಿ ಗ್ರಾಮದ ಬೆಳೆಗಾರ ರಾಜಶೇಖರ್ ಹೇಳಿದರು.

ಬಿಡುವು ಕೊಟ್ಟ ಮಳೆಯಿಂದಾಗಿ ಕೃಷಿ ಕೆಲಸಗಳನ್ನು ನಡೆಸಲು ಅನುಕೂಲಕರವಾಗಿದೆ. ಕಾಫಿ ತೋಟದ ಕಳೆ ನಿರ್ಮೂಲನೆ ಕೆಲಸ ಇದೀಗ ತುರ್ತಾಗಿ ಆಗಬೇಕಾಗಿರುವ ಕೆಲಸ ಎಂದು ಬಲಮುರಿ ಗ್ರಾಮದ ಪೊನ್ನಪ್ಪ ಅಭಿಪ್ರಾಯಪಟ್ಟರು.

ಮುಸುಕಿನಜೋಳ ಬಿತ್ತನೆ

ಜಿಲ್ಲೆಯಲ್ಲಿ ಸುಮಾರು 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನಜೋಳವನ್ನು ಬಿತ್ತನೆ ಮಾಡಲಾಗಿದೆ. ಈಗ ಬಂದಿರುವ ಮಳೆಯಿಂದ ಎಲ್ಲೂ ಹಾನಿಯಾಗಿರುವ ಮಾಹಿತಿ ಇಲ್ಲ. ಈಗ ಜಮೀನಿನಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನೀರು ಬಸಿದು ಹೋಗುವ ಹಾಗೆ ವ್ಯವಸ್ಥೆ ಮಾಡಬೇಕು ಎಂದು   ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಶಬನಾ ಎಂ ಶೇಖ್ ಸಲಹೆ ನೀಡಿದರು.

ಅಧಿಕ ನಿರ್ವಹಣೆ ವೆಚ್ಚ

ಅಧಿಕ ನಿರ್ವಹಣಾ ವೆಚ್ಚದಿಂದಾಗಿ ಈಚೆಗೆ ಭತ್ತದ ಕೃಷಿಯಿಂದ ರೈತರು ವಿಮುಖರಾಗುತ್ತಿದ್ದಾರೆ. ಕಾರ್ಮಿಕರ ಕೊರತೆಯೂ ಬಹುವಾಗಿ ಕಾಡುತ್ತಿದೆ. ‘ನಾಟಿ ಮಾಡುವ ಕಾರ್ಮಿಕರಿಗೆ ₹ 700 ಕೂಲಿ ಪಾವತಿಸಬೇಕು. ಅಗೆ ತೆಗೆಯಲು ಮಹಿಳೆಯರಿಗೆ ₹ 500 ಕೂಲಿ ನೀಡಬೇಕಿದೆ. ಜೊತೆಗೆ ಅವರನ್ನು ಕರೆತರಲು ವಾಹನಗಳ ಬಾಡಿಗೆಯನ್ನು ನೀಡಬೇಕಾಗಿದೆ. ಖರ್ಚು ಹೆಚ್ಚಾಗುತ್ತಿರುವುದರಿಂದ ಕಷ್ಟಕರವಾಗಿ ಭತ್ತದ ಕೃಷಿ ಸಾಗುತ್ತಿದೆ’ ಎಂದು ರೈತ ಮಾದಪ್ಪ ಅಳಲು ತೋಡಿಕೊಂಡರು. ಅವರು ದೊಡ್ಡಿ ಭತ್ತವನ್ನು ನಾಟಿ ಮಾಡುತ್ತಿದ್ದು ಉತ್ತಮ ಇಳುವರಿ ಲಭಿಸುತ್ತಿದೆ. ಆರಂಭಿಕ ತೊಡಕಾದರೂ ಭತ್ತದ ಕೃಷಿ ಲಾಭದಾಯಕ ಎಂದರು.

ನಾಪೋಕ್ಲು ಸಮೀಪದ ಮೂರ್ನಾಡಿನ  ಎಂ.ಬಾಡಗ ಗ್ರಾಮದಲ್ಲಿ ಶನಿವಾರ ಭತ್ತದ ನಾಟಿ ಕೆಲಸ ಬಿರುಸಿನಿಂದ ಸಾಗಿತು.
ನಾಪೋಕ್ಲು ಸಮೀಪದ ಮೂರ್ನಾಡಿನ  ಎಂ.ಬಾಡಗ ಗ್ರಾಮದಲ್ಲಿ ಶನಿವಾರ ಭತ್ತದ ನಾಟಿ ಕೆಲಸ ಬಿರುಸಿನಿಂದ ಸಾಗಿತು.
ನಾಪೋಕ್ಲು ಸಮೀಪದ ಮೂರ್ನಾಡಿನ ಎಂ.ಬಾಡಗ ಗ್ರಾಮದಲ್ಲಿ ಶನಿವಾರ ಭತ್ತದ ಗದ್ದೆಯ  ಉಳುಮೆ ಕಾರ್ಯದಲ್ಲಿ ನಿರತನಾಗಿದ್ದ ಕಾರ್ಮಿಕ.
ನಾಪೋಕ್ಲು ಸಮೀಪದ ಮೂರ್ನಾಡಿನ ಎಂ.ಬಾಡಗ ಗ್ರಾಮದಲ್ಲಿ ಶನಿವಾರ ಭತ್ತದ ಗದ್ದೆಯ  ಉಳುಮೆ ಕಾರ್ಯದಲ್ಲಿ ನಿರತನಾಗಿದ್ದ ಕಾರ್ಮಿಕ.
ನಾಪೋಕ್ಲು ಸಮೀಪದ ಬಲಮುರಿಯಲ್ಲಿ ಶನಿವಾರ ಕಂಡು ಬಂದ ಕಾವೇರಿ ನದಿನೀರಿನ ಹರಿವು. 
ನಾಪೋಕ್ಲು ಸಮೀಪದ ಬಲಮುರಿಯಲ್ಲಿ ಶನಿವಾರ ಕಂಡು ಬಂದ ಕಾವೇರಿ ನದಿನೀರಿನ ಹರಿವು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT