ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಡಿಕೇರಿ: ಶಂಕಿತ ನಕ್ಸಲರ ಚಲನವಲನ- ಕಡಮಕಲ್ಲು ಭಾಗದಲ್ಲಿ ಆತಂಕ

ಕಳೆದು ಲೋಕಸಭಾ ಚುನಾವಣೆಯಲ್ಲೂ ಕಾಣಿಸಿಕೊಂಡಿದ್ದ ಶಂಕಿತರು!
Published 19 ಮಾರ್ಚ್ 2024, 5:35 IST
Last Updated 19 ಮಾರ್ಚ್ 2024, 5:35 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನಲ್ಲಿ ಹಲವು ವರ್ಷಗಳ ನಂತರ ಮತ್ತೆ ಶಂಕಿತ ನಕ್ಸಲರ ಚಲನವಲನಗಳು ಕಂಡು ಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಆದರೆ, ಇದುವರೆಗೂ ನಕ್ಸಲರ ಓಡಾಟದ ಕುರಿತು ಅಧಿಕೃತವಾದ ಮಾಹಿತಿ ಲಭಿಸಿಲ್ಲ. ಜಿಲ್ಲಾ ಪೊಲೀಸರು ಕಟ್ಟೆಚ್ಚರದಿಂದಿದ್ದು, ಎಲ್ಲೆಡೆ ತೀವ್ರ ನಿಗಾ ಇರಿಸಿದ್ದಾರೆ.

ವಿಚಿತ್ರ ಎಂದರೆ, ಕಳೆದ ಲೋಕಸಭಾ ಚುನಾವಣೆಗೂ ಮುನ್ನ ನಕ್ಸಲರ ಹೆಜ್ಜೆ ಗುರುತುಗಳು ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದವು. ನಾಪೋಕ್ಲು ಸಮೀಪದ ಯವಕಪಾಡಿ ಗ್ರಾಮಕ್ಕೆ 2019 ಏಪ್ರಿಲ್‌ ತಿಂಗಳಿನಲ್ಲಿ ಬಂದಿದ್ದ ಪುರುಷ ಹಾಗೂ ಮಹಿಳೆ ಮನೆಯೊಂದಕ್ಕೆ ನುಗ್ಗಿ ಅಕ್ಕಿಯನ್ನೂ ಕೊಂಡೊಯ್ದಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದರು. ಈ ಸುಳಿವಿನ ಆಧಾರದ ಮೇಲೆ ಆಗಲೂ ಈ ಭಾಗದಲ್ಲಿ ಸಾಕಷ್ಟು ಶೋಧ ಕಾರ್ಯ ಮಾಡಲಾಗಿತ್ತು. ಆದರೆ, ನಕ್ಸಲರ ಸುಳಿವು ಸಿಕ್ಕಿರಲಿಲ್ಲ. ಮತ್ತೆ ಈ ಬಾರಿ ಲೋಕಸಭಾ ಚುನಾವಣೆಯ ವೇಳೆ ಅದೇ ರೀತಿಯ ಘಟನೆ ನಡೆದಿದೆ.

ತಾಲ್ಲೂಕಿನ ಕಡಮಕಲ್ಲು ಸಮೀಪದ ಕೂಜಿಮಲೆ ಎಂಬಲ್ಲಿ ರಾಮಲಿಂಗಂ ಎನ್ನುವವರ ಅಂಗಡಿಗೆ ಶನಿವಾರ ರಾತ್ರಿ ಬಂದ ನಾಲ್ವರು ಅಪರಿಚಿತರು ₹ 3,192ಕ್ಕೆ ದಿನಸಿ ಖರೀದಿಸಿ ಹೊರಟ ಸುದ್ದಿ ಹರಡುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು, ನಕ್ಸಲ್ ನಿಗ್ರಹ ಪಡೆಯ ಯೋಧರು ಧಾವಿಸಿ ಕೂಂಬಿಂಗ್ ಆರಂಭಿಸಿದ್ದರೂ ಸ್ಥಳೀಯರಲ್ಲಿ ಆತಂಕ ದೂರವಾಗಿಲ್ಲ.

ಕಡಮಕಲ್ಲು, ಕೂಜಿಮಲೆ ಪ್ರದೇಶಗಳು ಮಡಿಕೇರಿಗೆ ಕೂಗಳತೆ ದೂರದಲ್ಲಿರುವ ಗಾಳಿಬೀಡು ಗ್ರಾಮ ಪಂಚಾಯಿತಿಗೆ ಸೇರುತ್ತವೆ. ಕಾಡಿನೊಳಗಿನ ಹಾದಿಯಲ್ಲಿ ಈ ಪ್ರದೇಶಗಳು ಹತ್ತಿರ ಇದೆ. ಆದರೆ, ರಸ್ತೆಯಲ್ಲಿ ವಾಹನದಲ್ಲಿ ಹೋಗಬೇಕಾದರೆ ಬರೋಬರಿ 80 ಕಿ.ಮೀಗೂ ಅಧಿಕವಾಗುತ್ತವೆ.

ಕಡಮಕಲ್ ಮೂಲಕವಾಗಿ ಕಾಡಿನೊಳಗೆ ಮಡಿಕೇರಿಗೆ ಸಮೀಪ ಇರುವ ವಣಚಲು, ಗಾಳಿಬೀಡು, ಕಾಲೂರು ಗ್ರಾಮಗಳು ಸಮೀಪ ಇವೆ. ಹೀಗಾಗಿ, ಈ ಭಾಗದಲ್ಲಿ ಆತಂಕ ಇನ್ನಷ್ಟು ಅಧಿಕವಾಗಿದೆ.

ಕಾರ್ಯಾಚರಣೆ ಹೇಗಿದೆ?

ನಕ್ಸಲ್ ನಿಗ್ರಹ ಪಡೆಯು ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, 5 ತಂಡಗಳನ್ನು ಕಾರ್ಯಾಚರಣೆಗೆ ನಿಯೋಜಿಸಿದೆ. ಪುಷ್ಪಗಿರಿ ವನ್ಯಜೀವಿ ವಲಯಾದ್ಯಂತ ಬಿರುಸಿನ ಕೂಂಬಿಂಗ್ ನಡೆಸಿವೆ. ಒಂದು ತಂಡ ಸುಬ್ರಹ್ಮಣ್ಯ ಭಾಗದಿಂದಲೂ ಕೂಂಬಿಂಗ್ ನಡೆಸಿವೆ. ಭಾಗಮಂಡಲ ಭಾಗದಲ್ಲೂ ಹುಡುಕಾಟ ನಡೆದಿದೆ. ಆದರೆ, ನಕ್ಸಲರ ಸುಳಿವು ಮಾತ್ರ ಪತ್ತೆಯಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT