ಭಾನುವಾರ, ಜುಲೈ 25, 2021
22 °C
ಮುಂಗಾರು ಮಳೆ: ಜಿಲ್ಲೆಯಲ್ಲೇ ಮೂರು ತಿಂಗಳು ರಕ್ಷಣಾ ಸಿಬ್ಬಂದಿಯ ವಾಸ್ತವ್ಯ

ಕೊಡಗು ಜಿಲ್ಲೆಗೆ ಎನ್‌ಡಿಆರ್‌ಎಫ್‌ ಆಗಮನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ಮುಂಗಾರು ಮಳೆಯ ವೇಳೆ ಪ್ರವಾಹ ಹಾಗೂ ಭೂಕುಸಿತ ಉಂಟಾದರೆ ರಕ್ಷಣಾ ಕಾರ್ಯಾಚರಣೆಗೆಂದು ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆಯ (ಎನ್‌ಡಿಆರ್‌ಎಫ್‌) 25 ಮಂದಿಯ ಒಂದು ತಂಡ ಮಂಗಳವಾರ ಕೊಡಗು ಜಿಲ್ಲೆಗೆ ಆಗಮಿಸಿತು.

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ 10ನೇ ಬೆಟಾಲಿಯನ್‌ ಸಿಬ್ಬಂದಿಯು ಕಮಾಂಡರ್‌ ಆರ್‌.ಕೆ.ಉಪಾಧ್ಯ ಅವರ ನೇತೃತ್ವದಲ್ಲಿ ‌ಅಗತ್ಯ ರಕ್ಷಣಾ ಸಲಕರಣೆಗಳ ಜತೆಗೆ ಜಿಲ್ಲೆಗೆ ಬಂದರು.

ನಗರದ ಮೈತ್ರಿ ಹಾಲ್‌ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದ್ದು ಈ ತಂಡವು ಇನ್ನು ಮೂರು ತಿಂಗಳು ಜಿಲ್ಲೆಯಲ್ಲೇ ಠಿಕಾಣಿ ಹೂಡಲಿದೆ. ಕಳೆದ ಎರಡು ವರ್ಷಗಳಂತೆಯೇ ಪ್ರವಾಹ ಹಾಗೂ ಭೂಕುಸಿತವಾದರೆ ಜನ– ಜಾನುವಾರುಗಳ ರಕ್ಷಣೆಗೆ ಎನ್‌ಡಿಆರ್‌ಎಫ್‌ ಬಳಕೆಗೆ ಜಿಲ್ಲಾಡಳಿತ ಉದ್ದೇಶಿಸಿದೆ.

ಜೂನ್‌ 4ರ ಬಳಿಕ ಜಿಲ್ಲೆಗೂ ಮುಂಗಾರು ಪ್ರವೇಶಿಸುವ ನಿರೀಕ್ಷೆಯಿದೆ. ಜಿಲ್ಲೆಯಲ್ಲಿ ದಟ್ಟ ಮೋಡ ಕವಿದ ವಾತಾವರಣವಿದ್ದು, ಆಗಾಗ್ಗೆ ತುಂತುರು ಸುರಿದು ಮಳೆಗಾಲದ ವಾತಾವರಣ ಕಾಣಿಸುತ್ತಿದೆ. ಜಿಲ್ಲಾಡಳಿತವು ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿದ್ದು ಅಲ್ಲಿ ನಿಗಾ ವಹಿಸಿದೆ.

ಎನ್‌ಡಿಆರ್‌ಎಫ್‌ ಸಿಬ್ಬಂದಿಯು ಲೈಫ್‌‌ ಜಾಕೆಟ್‌, ರೋಪ್‌, ವುಡ್ ‌ಕಟರ್‌, ಟಾರ್ಚ್‌ ಸೇರಿದಂತೆ ಹಲವು ರಕ್ಷಣಾ ಸಲಕರಣೆಗಳೊಂದಿಗೆ ಜಿಲ್ಲೆಗೆ ಬಂದಿದ್ದಾರೆ. ಮುಂಗಾರು ಅಬ್ಬರಕ್ಕೂ ಮೊದಲೇ ರಕ್ಷಣಾ ಸಿಬ್ಬಂದಿ ಆಗಮಿಸಿರುವುದು ಜನರಿಗೂ ಧೈರ್ಯ ಬಂದಿದೆ.

‘ಕಳೆದ ವರ್ಷವೂ ಇದೇ ತಂಡ ಜಿಲ್ಲೆಗೆ ಬಂದಿದ್ದು ಇಲ್ಲಿನ ಪರಿಸ್ಥಿತಿಯ ಅರಿವಿದೆ. ಒಂದು ವೇಳೆ ಅನಾಹುತ ಸಂಭವಿಸಿದರೆ, ರಕ್ಷಣೆಗೆ ಸಜ್ಜಾಗಿದ್ದೇವೆ. ಇತ್ತೀಚೆಗೆ ಒಡಿಶಾದಲ್ಲಿ ಉಂಟಾಗಿದ್ದ ಚಂಡಮಾರುತದ ವೇಳೆಯೂ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದೆವು. ಅದಾದ ಮೇಲೆ ಕೊಡಗಿಗೆ ನೇರವಾಗಿ ಬಂದಿದ್ದೇವೆ’ ಎಂದು ಬೆಟಾಲಿಯನ್‌ ಸಿಬ್ಬಂದಿ ಮಂಜುನಾಥ್‌ ಹೇಳಿದರು.

‘ರಾಜ್ಯಕ್ಕೆ ಬಂದಿರುವ ನಾಲ್ಕು ಬೆಟಾಲಿಯನ್‌ಗಳ ಪೈಕಿ ಜಿಲ್ಲೆಗೂ ಒಂದು ತಂಡ ಆಗಮಿಸಿದೆ. ಮುಂಜಾಗ್ರತಾ ಕ್ರಮವಾಗಿ ಮಳೆಗಾಲಕ್ಕೂ ಮೊದಲೇ ರಕ್ಷಣಾ ಸಿಬ್ಬಂದಿ ಕರೆಸಿಕೊಳ್ಳಲಾಗಿದೆ’ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ವಿಭಾಗದ ಅಧಿಕಾರಿ ಅನನ್ಯ ವಾಸುದೇವ್‌ ಮಾಹಿತಿ ನೀಡಿದರು.

ಕಳೆದ ವರ್ಷ ವಿರಾಜಪೇಟೆ ತಾಲ್ಲೂಕಿನ ತೋರ ಗ್ರಾಮದಲ್ಲಿ ಸಂಭವಿಸಿದ್ದ ಭೂಕುಸಿತದಿಂದ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದವರ ರಕ್ಷಣಾ ಕಾರ್ಯಾಚರಣೆಯಲ್ಲಿ ಎನ್‌ಡಿಆರ್‌ಎಫ್‌, ಅಗ್ನಿಶಾಮಕ ದಳ, ಭಾರತೀಯ ಸೇನೆ ಹಾಗೂ ಸ್ಥಳೀಯ ಪೊಲೀಸರು ಮಹತ್ವದ ಪಾತ್ರ ವಹಿಸಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು