ಬುಧವಾರ, ಅಕ್ಟೋಬರ್ 21, 2020
24 °C
ಜಿಲ್ಲಾ ಹೊಟೇಲ್, ರೆಸಾರ್ಟ್, ಹೋಂಸ್ಟೇ ಅಸೋಸಿಯೇಷನ್ ಮನವಿ

‘ಕೊಡಗು ಅಪಾಯದಲ್ಲಿದೆ’ ಎಂದು ವದಂತಿ ಹಬ್ಬಿಸಿದರೆ ಕ್ರಮ ಕೈಗೊಳ್ಳಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ‘ಕೊಡಗು ಅಪಾಯದಲ್ಲಿದೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ವದಂತಿ ಹಬ್ಬಿಸುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಹೊಟೇಲ್, ರೆಸಾರ್ಟ್, ಹೋಂಸ್ಟೇ ಅಸೋಸಿಯೇಷನ್ ಸಲಹೆಗಾರ ಚಿದ್ವಿಲಾಸ್ ಆಗ್ರಹಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಸಂಬಂಧ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಕಳೆದ ವರ್ಷ ಕೊಡಗಿನಲ್ಲಿ ಸೃಷ್ಟಿಯಾದ ಪ್ರಾಕೃತಿಕ ವಿಕೋಪದಿಂದ ಜಿಲ್ಲೆಯ ಪ್ರವಾಸೋದ್ಯಮವು ನೆಲಕಚ್ಚಿತ್ತು. ಜಿಲ್ಲಾಡಳಿತ ಕೂಡ ಪ್ರವಾಸೋದ್ಯಮವನ್ನು ಕೆಲವು ದಿನಗಳ ಮಟ್ಟಿಗೆ ಸ್ಥಗಿತಗೊಳಿಸಿತ್ತು. ಇದೇ ರೀತಿಯ ವಿಕೋಪ ಮತ್ತೆ ಬರಲಿದೆ ಎಂಬ ಸುಳ್ಳು ವದಂತಿಗಳು ಸಾಮಾಜಿಕ ತಾಣಗಳಲ್ಲಿ ಬರುತ್ತಿದ್ದು ಇದರ ವಿರುದ್ಧ ಕ್ರಮ ಆಗಬೇಕು ಎಂದು ಮನವಿ ಮಾಡಿದರು.

ವಿಕೋಪವಾದರೂ ಪ್ರವಾಸೋದ್ಯಮ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಆನೇಕ ಕಾರ್ಯಕ್ರಮ ರೂಪಿಸಿ, ಸಹಜ ಸ್ಥಿತಿಗೆ ತರುವ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ. ಆದರೆ, ಸುಳ್ಳು ವದಂತಿಗಳಿಂದ ಪ್ರವಾಸಿಗರಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆ. ಈಚೆಗೆ ಪ್ರವಾಸಿಗರ ಸಂಖ್ಯೆಯೂ ಕಡಿಮೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರವಾಸೋದ್ಯಮವನ್ನೇ ನಂಬಿದ ಹೋಟೆಲ್, ಹೋಂಸ್ಟೇ, ವ್ಯಾಪಾರಸ್ಥರಿಗೆ ಕಳೆದ 8 ತಿಂಗಳಿಂದ ಸಮಸ್ಯೆ ಎದುರಾಗಿದೆ. ಪ್ರವಾಸಿಗರ ಸಂಖ್ಯೆ ಹೆಚ್ಚಳ ಸೇರಿದಂತೆ ಕೊಡಗು ಸುರಕ್ಷಿತವಾಗಿದೆ ಎಂಬುದರ ಬಗ್ಗೆ ಜಾಗೃತಗೊಳಿಸಬೇಕು ಎಂದು ಹೇಳಿದರು.

ಉಪಾಧ್ಯಕ್ಷ ಜಾಹೀರ್ ಮಾತನಾಡಿ, ಜಿಲ್ಲೆಯಲ್ಲಿ 1 ಲಕ್ಷಕ್ಕೂ ಹೆಚ್ಚಿನ ಜನರು ಪ್ರವಾಸೋದ್ಯಮ ನಂಬಿ ಜೀವನ ಸಾಗಿಸುತ್ತಿದ್ದು ಸುಳ್ಳು ವದಂತಿಗಳಿಗೆ ಪ್ರವಾಸಿಗರು ಕಿವಿಗೊಡಬಾರದು. ಮಾಂದಲ್‌ಪಟ್ಟಿ, ತಂಡಿಯಂಡಮೋಳ್‌ ಬೆಟ್ಟಕ್ಕೆ ಚಾರಣ ಹಾಗೂ ದುಬಾರೆಯಲ್ಲಿ ರ‍್ಯಾಫ್ಟಿಂಗ್‌ಗೆ ಅವಕಾಶ ಕಲ್ಪಿಸಬೇಕು ಎಂದು ಕೋರಿದರು.

ಸಂಘದ ನಿರ್ದೇಶಕ ಗಿರೀಶ್ ಮಾತನಾಡಿ, ಹೋಂಸ್ಟೇ ಕಲ್ಪನೆ ಈಗ ಕಂಪನಿ ರೀತಿಯಲ್ಲಿ ಬದಲಾಗುತ್ತಿದೆ. ಪ್ರವಾಸಿಗರನ್ನು ಸೆಳೆಯುವುದಕ್ಕಾಗಿ ಮನೆಗಳನ್ನೇ ಬಾಡಿಗೆ ರೂಪದಲ್ಲಿ ನೀಡುತ್ತಿದ್ದಾರೆ. ಅನಧಿಕೃತ ಹೋಂಸ್ಟೇಗಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ಆಸೀಫ್ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು