ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿಗೆ ಬಿದ್ದ ಕಾರ್ಮಿಕರ ಬದುಕು

ಕೆಲಸ ಕಸಿದ ಕೊರೊನಾ ವೈರಸ್: ತವರಿಗೆ ಮರಳಲು ಸಾರಿಗೆ ಕೊರತೆ
Last Updated 24 ಮಾರ್ಚ್ 2020, 11:46 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಕೊರೊನಾ ವೈರಸ್ ವ್ಯಪಕವಾಗಿ ಹರಡುತ್ತಿದ್ದು, ಕೂಲಿಯನ್ನೇ ನಂಬಿದ್ದ ಕಾರ್ಮಿಕರ ಬದುಕಿಗೆ ಕತ್ತಲು ಕವಿದಿದೆ.

ಎರಡೂ ದಿನದಿಂದ ಇಡೀ ಕೊಡಗು ಬಂದ್ ಆಗಿರುವುದರಿಂದ ಹೊಟೇಲ್, ಜವಳಿ ಅಂಗಡಿ, ಮೊಬೈಲ್ ಶಾಪ್, ಆಟೋ ಮೊಬೈಲ್, ವರ್ಕ್ ಶಾಪ್, ದಿನಸಿ ಅಂಗಡಿ, ಖಾಸಗಿ ಬಸ್ ಡ್ರೈವರ್, ಕಂಡಕ್ಟರ್, ಕ್ಲೀನರ್ ಮೊದಲಾದ ಉದ್ಯೋಗ ಅವಲಂಬಿತರು ಕೆಲಸವಿಲ್ಲದೆ ಕೈಕಟ್ಟಿ ಕುಳಿತಿದ್ದಾರೆ. ದಿನನಿತ್ಯದ ಉದ್ಯೋಗವನ್ನು ಅವಲಂಬಿಸಿರುವ ಕುಟುಂಬಗಳು ಕೂಡ ಈಗ ಸಂಕಷ್ಟಕ್ಕೆ ಸಿಲುಕಿವೆ.

ಮತ್ತೊಂದು ಕಡೆ, ಕಾಫಿ ತೋಟದಲ್ಲಿ ಕೆಲಸವಿಲ್ಲದೆ ಕಾರ್ಮಿಕರು ಅತಂತ್ರರಾಗಿದ್ದಾರೆ. ಆರೋಗ್ಯದ ದೃಷ್ಟಿಯಿಂದ 5 ಕ್ಕಿಂತ ಹೆಚ್ಚಿನ ಜನರು ಒಂದೆಡೆ ಸೇರಬಾರದು ಎಂಬ ಜಿಲ್ಲಾಡಳಿತ ಸೂಚನೆಯಂತೆ ತೋಟದ ಮಾಲೀಕರು ಕೆಲಸವನ್ನು ಮುಂದೂಡಿದ್ದಾರೆ. ಕಾಫಿ ಬೆಳೆಗಾರರೂ ಕೊರೊನಾ ವೈರಸ್ ಆತಂಕದಲ್ಲಿ ಮುಳುಗಿ ತೋಟದ ಕೆಲಸವನ್ನೂ ಮರೆತಿದ್ದಾರೆ. ಇದು ಕಾರ್ಮಿಕರ ಹೊಟ್ಟೆ ಮೇಲೆ ಬರೆ ಎಳೆದಂತಾಗಿದೆ.

ಅಸ್ಸಾಂ, ಬಿಹಾರ್, ತಮಿಳುನಾಡು, ಚಾಮರಾಜನಗರ ಮೊದಲಾದ ಕಡೆಯಿಂದ ಕಾಫಿ ತೋಟದ ಕೆಲಸಕ್ಕಾಗಿ ಬಂದ ಕಾರ್ಮಿಕರು ಇತ್ತ ಕೆಲಸವಿಲ್ಲದೆ ಕುಳಿತರೆ, ಅತ್ತ ತಮ್ಮ ತವರಿಗೆ ತೆರಳಲು ಬಸ್ ಸೌಲಭ್ಯವೂ ಇಲ್ಲದೆ ಪರದಾಡುವ ಸ್ಥಿತಿ ಎದುರಾಗಿದೆ.

ತಿತಿಮತಿ, ರೇಷ್ಮೆ ಹಡ್ಲು, ಜಂಗಲ್ ಹಾಡಿ, ಮರಪಾಲ, ಮರೂರು, ಮಜ್ಜಿಗೆಹಳ್ಳ ಮೊದಲಾದ ಕಡೆ ಸೋಮವಾರ ಬುಡಕಟ್ಟು ಜನರು ಕೆಲಸವಿಲ್ಲದೇ ಮುಖ ಸಣ್ಣ ಮಾಡಿಕೊಂಡು ಕುಳಿತಿದ್ದು ಕಂಡು ಬಂದಿತು.

ತಿತಿಮತಿ ಬಳಿಯ ಕಾಫಿ ಎಸ್ಟೇಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ತಮಿಳುನಾಡಿನ ಐದಾರು ಕುಟುಂಬಗಳು ಕೆಲಸವಿಲ್ಲದೆ, ತವರಿಗೆ ಮರಳಲು ಸೋಮವಾರ ಮಕ್ಕಳನ್ನು ಕಟ್ಟಿಕೊಂಡು ರಸ್ತೆ ಬದಿಯಲ್ಲಿ ಬಸ್ ಕಾಯುತ್ತಾ ಕುಳಿತಿದ್ದರು. ಬೆಳಗಿನಿಂದ ಸಂಜೆವರೆಗೆ ಊಟ, ಉಪಾಹಾರವಿಲ್ಲದೆ ಭದ್ರಗೋಳದ ಹೆದ್ದಾರಿ ಬದಿಯಲ್ಲಿ ಕುಳಿತಿದ್ದ ದೃಶ್ಯ ನೋಡುಗರ ಮನಕಲುಕಿತು. ಪುಟಾಣಿ ಮಕ್ಕಳು ತಮ್ಮ ತಾಯಂದಿರ ಮಡಿಲಲ್ಲಿ ಕುಳಿತು ನೀರು, ಊಟಕ್ಕಾಗಿ ಪೀಡಿಸುತ್ತಿದ್ದುದು ಮರುಕು ಉಂಟುಮಾಡಿತು.

ಮರಪಾಲದ ಜಂಗಲ್ ಹಾಡಿಯ ಯರವ ಜನಾಂಗದ ಯುವಕರು ಕೂಡ ಕೆಲಸವಿಲ್ಲದ್ದರಿಂದ ಮೌನ ವಹಿಸಿದ್ದರು. ಮಕ್ಕಳು ಮಾತ್ರ ಯಾವುದೇ ಅರಿವಿಲ್ಲದೆ ಆಟವಾಡುತ್ತಿದ್ದರು.

ಉಪಾಹಾರ, ಊಟಕ್ಕಾಗಿ ಹೊಟೇಲ್, ಅಂಗಡಿಗಳನ್ನೇ ಅವಲಂಬಿಸಿದ್ದ ಹೊರ ಜಿಲ್ಲೆಯ ಕಟ್ಟಡ ಮತ್ತು ತೋಟದ ಕಾರ್ಮಿಕರು ಕಾಫಿ, ಟೀ, ಬೀಡಿ ಸಿಗರೇಟ್ ಕೂಡ ಸಿಗದೆ ಪರದಾಡುತ್ತಿದ್ದ ದೃಶ್ಯ ಎಲ್ಲೆಡೆ ಕಂಡು ಬಂದಿತು.

ಗೋಣಿಕೊಪ್ಪಲು ಬಳಿಯ ತಿತಿಮತಿ ಜಂಗಲ್ ಹಾಡಿಯ ಯರವ ಜನಾಂಗದ ಯುವಕರು ಕೆಲಸವಿಲ್ಲದೆ ಮರದ ನೆರಳಲ್ಲಿ ಮುಖಬಾಡಿಸಿಕೊಂಡು ಕುಳಿತಿದ್ದ ದೃಶ್ಯ ಸೋಮವಾರ ಕಂಡು ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT