ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಪಂಚಾಯಿತಿಯಿಂದ ಕಟ್ಟುನಿಟ್ಟಿನ ಕ್ರಮ

ಕೊರೊನಾ: ಜನ ದಟ್ಟಣೆ ನಿಯಂತ್ರಣಕ್ಕೆ ಶಿಸ್ತು ಅಳವಡಿಕೆ
Last Updated 26 ಮಾರ್ಚ್ 2020, 14:12 IST
ಅಕ್ಷರ ಗಾತ್ರ

ನಾಪೋಕ್ಲು: ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದು, ನಾಪೋಕ್ಲು ಪಟ್ಟಣದಲ್ಲೂ ಜನರು ಗುಂಪುಗೂಡುವುದನ್ನು ನಿರ್ಬಂಧಿಸಲಾಗಿತ್ತು.

ಜನರು ಗುಂಪುಗೂಡುವುದನ್ನು ತಪ್ಪಿಸುವ ಹಿನ್ನೆಲೆಯಲ್ಲಿ ಗುರುವಾರ ನಿರ್ಬಂಧ ಸಡಿಲಿಸಲಾಗಿದ್ದು ವ್ಯಾಪಾರ ವಹಿವಾಟಿಗೆ ಹೆಚ್ಚಿನ ಸಮಯ ನಿಗದಿಗೊಳಿಸಿದ್ದರಿಂದ ಜನಸಂಚಾರ ಕಡಿಮೆ ಇತ್ತು.

ದಿನಸಿ ಅಂಗಡಿಗಳಲ್ಲಿ ಹಾಗೂ ಔಷಧಿ ಅಂಗಡಿಗಳಲ್ಲಿ ಮಧ್ಯಾಹ್ನದವರೆಗೆ ಜನರು ದಿನಸಿ ಹಾಗೂ ಔಷಧಿಗಳನ್ನು ಖರೀದಿಸಿದರು.

ಜನರು ಗುಂಪು ಸೇರದಂತೆ ಗ್ರಾಮಪಂಚಾಯಿತಿ ವತಿಯಿಂದ ನಿರ್ಬಂಧ ಹೇರಲಾಗಿತ್ತು.

ದಿನಸಿ ಅಂಗಡಿಗಳಲ್ಲಿ ಅಗತ್ಯವಸ್ತುಗಳ ಬೆಲೆ ಏರಿಕೆ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಗ್ರಾಮಪಂಚಾಯಿತಿ ಪಿಡಿಒ ಚೋಂದಕಿ ಹಾಗೂ ಗ್ರಾಮಪಂಚಾಯಿತಿ ಸದಸ್ಯರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಪಟ್ಟಣದ ಪ್ರಮುಖ ದಿನಸಿ ಅಂಗಡಿಗಳ ಎದುರು ವೃತ್ತಗಳನ್ನು ಅಳವಡಿಸಲಾಗಿದ್ದು ಜನರು ಅಂತರ ಕಾಯ್ದುಕೊಂಡು ಸಾಮಗ್ರಿಗಳನ್ನು ಖರೀದಿಸುವಂತೆ ಸೂಚಿಸಲಾಯಿತು.

ಜಿಲ್ಲಾಡಳಿತದ ಸೂಚನೆ ಮೇರೆಗೆ ಬೆಳಿಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ವ್ಯಾಪಾರ ವಹಿವಾಟು ನಡೆಸಲಾಯಿತು. ಬಳಿಕ ಜನ ಸಂಚಾರ ಹಾಗೂ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಮಧ್ಯಾಹ್ನದ ವೇಳೆಗೆ ಪಟ್ಟಣದಲ್ಲಿ ಜನಸಂಚಾರ ಹಾಗೂ ವಾಹನ ಸಂಚಾರವಿಲ್ಲದೇ ಬಿಕೋ ಎನ್ನುತ್ತಿತ್ತು.

ಪಟ್ಟಣದ ಔಷಧಿ ಅಂಗಡಿಗಳಲ್ಲಿ ಔಷಧಿಗಳ ಕೊರತೆ ಕಂಡುಬಂತು. ವಿವಿಧ ಔಷಧಿ ಅಂಗಡಿಗಳ ಮಾಲೀಕರು ಜನರಿಗೆ ಅಗತ್ಯವಿರುವ ಔಷಧಿಗಳನ್ನು ಯಾವುದೇ ಸಮಯದಲ್ಲಿ ಪೂರೈಕೆ ಮಾಡುವುದಾಗಿ ಹೇಳಿದರು.

ಗುರುಕೃಪ ಮೆಡಿಕಲ್ಸ್ ನ ಮಾಲೀಕ ಎನ್.ಎಸ್.ದಿನೇಶ್ ಮಾತನಾಡಿ, ಔಷಧಿಗಳ ದಾಸ್ತಾನು ಬಾರದ ಕಾರಣ, ತೊಂದರೆಯಾಗಿದೆ. ನಾಪೋಕ್ಲು ವ್ಯಾಪ್ತಿಯ ಜನರಿಗೆ ಔಷಧಿಗಳನ್ನು ಯಾವುದೇ ಸಮಯದಲ್ಲಿ ಪೂರೈಸಲು ಸಿದ್ದರಿದ್ದೇವೆ. ಅಗತ್ಯ ಔಷಧಿಗಳನ್ನು ಕಳುಹಿಸಲು ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ನಾಪೋಕ್ಲು ಪಟ್ಟಣದ ಅಂಗಡಿಗಳಲ್ಲಿ ವಸ್ತುಗಳಿಗೆ ಅಧಿಕ ಹಣ ಪಡೆಯದಂತೆ ಮತ್ತು ಅಂತರ ಕಾಯ್ದುಕೊಳ್ಳುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಕೈಜೋಡಿಸಬೇಕು ಎಂದು ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ಶಮ ಮೆಡಿಕಲ್ಸ್ ನ ಮಾಲೀಕ ಮನ್ಸೂರ್ ಆಲಿ ಮತ್ತಿತರರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT