ನಾಪೋಕ್ಲು: ಅವೈಜ್ಞಾನಿಕವಾದ ಬೃಹತ್ ಭೂಪರಿವರ್ತನೆಗಳು ಹಾಗೂ ವಿಲೇವಾರಿಗಳು ಕೊಡಗಿನ ಪರಿಸರಕ್ಕೆ ಹಾಗೂ ಕೊಡವರ ಅಸ್ತಿತ್ವಕ್ಕೆ ಭಾರಿ ಬೆದರಿಕೆಗಳನ್ನು ಒಡ್ಡಿವೆ. ಜಿಲ್ಲೆಯಲ್ಲಿ ಇಂತಹ ಕೃತ್ಯಗಳಿಗೆ ಅವಕಾಶ ಮಾಡಿಕೊಡಬಾರದು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದರು.
ಇಲ್ಲಿನ ನಾಪೋಕ್ಲುವಿನಲ್ಲಿ ಸೋಮವಾರ ಈ ಕುರಿತು ಅವರು ಜನಜಾಗೃತಿ ಮಾನವ ಸರಪಳಿ ರಚಿಸಿ ಮಾತನಾಡಿದರು.
ನಗರೀಕರಣ, ವಿಲ್ಲಾ, ರೆಸಾರ್ಟ್‌ಗಳ ನಿರ್ಮಾಣದಿಂದ ಕೊಡಗಿನಲ್ಲಿ ಜನಸಂಖ್ಯೆ ಹೆಚ್ಚಾಗಲಿದ್ದು, ಇದನ್ನು ತಡೆದೊಳ್ಳುವ ಶಕ್ತಿ ಇಲ್ಲಿನ ಭೂಪ್ರದೇಶಕ್ಕೆ ಇಲ್ಲ. ಹಾಗಾಗಿ, ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯನ್ನು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಕೊಡಗು ಬೆಟ್ಟಗುಡ್ಡ, ನದಿ, ತೊರೆಗಳಿಂದ ಕೂಡಿದ್ದು, ಅತ್ಯಂತ ಸೂಕ್ಷ್ಮತೆಯನ್ನು ಹೊಂದಿದೆ. ಆದ್ದರಿಂದ ಬಯಲುಸೀಮೆಯಂತೆ ಕೊಡಗಿನ ಭೌಗೋಳಿಕ ಸ್ಥಿತಿಗತಿಯನ್ನು ಪರಿಗಣಿಸಬಾರದು ಎಂದು ಆಗ್ರಹಿಸಿದರು.
ಆದಿಮಸಂಜಾತ ಕೊಡವ ಬುಡಕಟ್ಟಿನ ಜನರು ಇಲ್ಲಿಯವರೆಗೆ ಹಸಿರಿನ ಕೊಡವ ಭೂಮಿಯನ್ನು ಉಳಿಸಿ, ಬೆಳೆಸಿಕೊಂಡು ಬಂದಿದ್ದಾರೆ. ಆದರೆ, ಇಂದು ಭೂಮಾಫಿಯಾ, ರೆಸಾರ್ಟ್ ಮಾಫಿಯಾ, ವಿಲ್ಲಾ, ಟೌನ್ ಶಿಪ್, ಬೃಹತ್ ಭೂಪರಿವರ್ತನೆ, ಭೂವಿಲೇವಾರಿ ಮಾಫಿಯಾಗಳು ಹಾಗೂ ಕಪ್ಪುಹಣದ ಬಂಡವಾಳಶಾಹಿಗಳು ಕೊಡವಲ್ಯಾಂಡ್ ಅನ್ನು ನಾಶ ಮಾಡುತ್ತಿದ್ದಾರೆ ಮತ್ತು ಕೊಡವರನ್ನು ಬಲಿಪಶು ಮಾಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಆರ್ಥಿಕವಾಗಿ ಹಿಂದುಳಿದಿರುವ ಕೊಡವರು ಸ್ವಾಭಿಮಾನದಿಂದ ಜೀವನ ಸಾಗಿಸಲು ಬ್ಯಾಂಕ್ ಮತ್ತು ಸಹಕಾರ ಸಂಘಗಳು ಸಾಲದ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದರು.
ಬಂಡವಾಳಶಾಹಿಗಳಿಗೆ 99 ವರ್ಷಗಳಿಗೆ ಗುತ್ತಿಗೆ ಆಧಾರದಲ್ಲಿ ನೀಡಿರುವ ಸಾವಿರಾರು ಎಕರೆ ಭೂಮಿಯನ್ನು ಸರ್ಕಾರ ಮೊದಲು ವಶಕ್ಕೆ ಪಡೆಯಲಿ. ಜಿಲ್ಲೆಯಲ್ಲಿ ನಡೆದಿರುವ ಬೃಹತ್ ಭೂಪರಿವರ್ತನೆಗಳ ಕುರಿತು ಶ್ವೇತಪತ್ರ ಹೊರಡಿಸಲಿ ಎಂದೂ ಸವಾಲೆಸೆದರು.
ಕರ್ನಾಟಕ ಭೂಸುಧಾರಣಾ ತಿದ್ದುಪಡಿ ಕಾಯ್ದೆ 79ಎ ಮತ್ತು 79ಬಿಯನ್ನು ದುರ್ಲಾಭಪಡಿಸಿಕೊಂಡು ಕೃಷಿ ಜಮೀನು, ಭತ್ತದ ಗದ್ದೆಗಳು ಮತ್ತು ಕಾಫಿ ತೋಟಗಳನ್ನು ಪರಿವರ್ತನೆ ಮಾಡಲಾಗುತ್ತಿದೆ.
ನಾಪೋಕ್ಲುವಿನಲ್ಲಿ ನಡೆದ ಜನಜಾಗೃತಿ ಮನವ ಸರಪಳಿಯಲ್ಲಿ ಕಲಿಯಂಡ ಮೀನಾ, ಅಪ್ಪಚ್ಚಿರ ರೀನಾ, ನೆರವಂಡ ಮೀರಾ, ಪುಲ್ಲೇರ ಪದ್ಮಿನಿ, ಕರವಂಡ ಸರ್ಸು, ಕಲಿಯಂಡ ಪ್ರಕಾಶ್, ಅಪ್ಪಚ್ಚಿರ ರಮ್ಮಿ ನಾಣಯ್ಯ, ಕಾಟುಮಣಿಯಂಡ ಉಮೇಶ್, ಆಳ್‍ಮಂಡ ಜೈ, ಪಟ್ಟಮಾಡ ಕುಶ, ಅರೆಯಡ ಗಿರೀಶ್, ಅಪ್ಪಾರಂಡ ಪ್ರಸಾದ್, ಮಣೋಟೀರ ಜಗದೀಶ್, ಮಣೋಟೀರ ಸ್ವರೂಪ್, ಪಟ್ಟಮಾಡ ಅಶೋಕ್, ಕರವಂಡ ಲವ, ಕೇಟೋಳಿರ ಹರೀಶ್, ಅರೆಯಡ ರತ್ನ ಭಾಗವಹಿಸಿದ್ದರು.
ಚೇರಂಬಾಣೆಯಲ್ಲಿ ಇಂದು ಜನಜಾಗೃತಿ 16ರಂದು ಹುದಿಕೇರಿಯಲ್ಲಿ ಶಾಂತಿಯುತ ಮಾನವ ಸರಪಳಿ ಜಿಲ್ಲೆಯಲ್ಲಿ ಮುಂದುವರಿದ ಬೃಹತ್ ಪರಿವರ್ತನೆಗೆ ವಿರೋಧ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.