ಬುಧವಾರ, ಫೆಬ್ರವರಿ 1, 2023
18 °C
ಹೌಸಿಂಗ್ ಬೋರ್ಡ್ ಕಾಲೊನಿಯ ರಸ್ತೆ ದುಃಸ್ಥಿತಿ: ಪ್ರತಿಭಟನೆ– ನಿವಾಸಿಗಳ ಎಚ್ಚರಿಕೆ

ದಶಕ ಕಳೆದರೂ ರಸ್ತೆ ದುರಸ್ತಿ ಕಂಡಿಲ್ಲ

ಡಿ.ಪಿ.ಲೋಕೇಶ Updated:

ಅಕ್ಷರ ಗಾತ್ರ : | |

Prajavani

ಸೋಮವಾರಪೇಟೆ: ಹಾನಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೌಸಿಂಗ್ ಬೋರ್ಡ್ ಕಾಲೊನಿಯ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ವಾಹನ ಸವಾರರು ಪ್ರತಿನಿತ್ಯ ಬೀಳುವಂತಾಗಿದೆ. ಕಳೆದ ಒಂದು ದಶಕಕ್ಕೂ ಹೆಚ್ಚಿನ ಕಾಲದಿಂದ ರಸ್ತೆ ದುರಸ್ತಿಪಡಿಸಲು ಸ್ಥಳೀಯ ಜನಪ್ರತಿನಿಧಿಗಳು ಮತ್ತು ಜಿಲ್ಲಾ ಪಂಚಾಯಿತಿ ಎಂಜಿನಿಯರುಗಳು ಮುಂದಾಗಿರದೇ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ತೀರಾ ಹದಗೆಟ್ಟಿರುವ ರಸ್ತೆ ಉಳಿಯಬೇಕಾದರೆ, ಕಾಂಕ್ರೀಟ್ ರಸ್ತೆ ಮಾಡಿಸಬೇಕು. ಮುಂದಿನ ಒಂದು ತಿಂಗಳಲ್ಲಿ ಕಾಮಗಾರಿ ನಡೆಸದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಹೌಸಿಂಗ್ ಬೋರ್ಡ್ ಪ್ರಾರಂಭವಾದ ಸಂದರ್ಭದಲ್ಲಿ ಒಮ್ಮೆ ಮಾತ್ರ ಸ್ಪಲ್ಪ ಡಾಂಬರು ಕಂಡಿರುವ ರಸ್ತೆಗಳು ಇದೀಗ ಸಂಪೂರ್ಣ ಹಾಳಾಗಿವೆ. ಡಾಂಬರ್ ರಸ್ತೆಗಳು ಇತ್ತೇ ಎಂಬುದೂ ತಿಳಿಯದಂತಾಗಿದ್ದು, ಡಾಂಬರಿನ ಅವಶೇಷಗಳೂ ಇಲ್ಲವಾಗಿವೆ. ಆಡಳಿತ ಪಕ್ಷದ ಇಬ್ಬರೂ ಸದಸ್ಯರು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದೂ, ಅವರು ಕೂಡ ಸತತ ಮನವಿ ಸಲ್ಲಿಸುತ್ತಿದ್ದರೂ, ಈವರೆಗೆ ರಸ್ತೆ ಕಾಮಗಾರಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಪ್ರತಿನಿತ್ಯ ದ್ವಿಚಕ್ರ ವಾಹನ ಸವಾರರಂತೂ ರಸ್ತೆಗಳಲ್ಲಿ ಸಂಚರಿಸಲು ಹರಸಾಹಸಪಡುತ್ತಿದ್ದಾರೆ.

1990ರಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಎಲ್‌ವಿ ಕಾನ್ವೆಂಟ್ ಬಳಿ ಕರ್ನಾಟಕ ಹೌಸಿಂಗ್ ಬೋರ್ಡ್ ನಿರ್ಮಿಸಿರುವ 51 ಮನೆಗಳನ್ನು  ಫಲಾನುಭವಿಗಳಿಗೆ ವಿತರಿಸಿದ ನಂತರ ಹಾನಗಲ್ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಲಾಗಿತ್ತು. ಅಲ್ಲಿಂದ ಕುಡಿಯುವ ನೀರು, ರಸ್ತೆ ನಿರ್ವಹಣೆ, ಬೀದಿದೀಪ ಸೇರಿದಂತೆ ಮೂಲಸೌಕರ್ಯಗಳನ್ನು ಗ್ರಾಮ ಪಂಚಾಯಿತಿ ನಿರ್ವಹಿಸುತ್ತಿದೆ. ಆದರೆ, ಜಿಲ್ಲಾ ಪಂಚಾಯಿತಿ ಮತ್ತು ಶಾಸಕರ ಅನುದಾನ ಸೇರಿದಂತೆ ಯಾವ ನಿಧಿಯಿಂದಲೂ ರಸ್ತೆ ದುರಸ್ತಿಗೆ ಮುಂದಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಹಲವು ಬಾರಿ ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯಪಾಲನಾ ಎಂಜಿನಿಯರ್‌ಗೆ ಮನವಿ ಸಲ್ಲಿಸಿದ್ದೇವೆ. ಕಳೆದ ಹತ್ತು ತಿಂಗಳಿಂದ ಹಣವನ್ನು 50/54 ಅಡಿಯಲ್ಲಿ ಶಾಸಕರ ನಿಧಿ ಮತ್ತು ವಿಧಾನಪರಿಷತ್ ಸದಸ್ಯರ ನಿಧಿಯಲ್ಲಿ ಮೀಸಲಿಡಲಾಗಿದೆ. ಮಳೆ ಕಳೆದ ನಂತರ ಕೆಲಸ ಆರಂಭಿಸುತ್ತೇವೆ ಎಂದು ಸಬೂಬು ಹೇಳುತ್ಹೇತಿದ್ದಾರೆ. ಆದರೆ, ಕೆಲಸ ಮಾತ್ರ ಮುಂದಾಗುತ್ತಿಲ್ಲ ಎಂದು ಕಿಡಿಕಾರುತ್ತಾರೆ.

ಮಳೆಗಾಲದಲ್ಲಂತೂ ಯಾವುದೇ ವಾಹನಗಳೂ ಕೂಡ ಇಲ್ಲಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಹೀಗಿದ್ದರೂ, ತಾಲ್ಲೂಕಿನ ಹಲವೆಡೆ ರಸ್ತೆ ಕಾಮಗಾರಿ ನಡೆಯುತ್ತಿದ್ದರೂ, ನಮ್ಮ ರಸ್ತೆ ಕಡೆ ಗಮನಹರಿಸಿಲ್ಲ ಎಂದು ಸ್ಥಳೀಯ ನಿವಾಸಿ ಸವಿತಾ ಬೇಸರ ವ್ಯಕ್ತಪಡಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು