ಸಿದ್ದಾಪುರ: ಕೇರಳದ ಪ್ರಮುಖ ಹಬ್ಬವಾದ ಓಣಂ ಅನ್ನು ಜಿಲ್ಲೆಯಲ್ಲೂ ಸಡಗರದಿಂದ ಆಚರಿಸಲಾಗುತ್ತಿದ್ದು, ಮನೆಯಲ್ಲಿ ಹೂವಿನ ರಂಗೋಲಿ ರಚಿಸಿ, ಓಣಂ ಹಬ್ಬದೂಟ ಸವಿದು ಸಂಭ್ರಮಿಸಲಾಗುತ್ತಿದೆ.
ಕೇರಳಕ್ಕೆ ಹೊಂದಿಕೊಂಡಿರುವ ಕೊಡಗು ಜಿಲ್ಲೆಯ ವಿವಿಧ ಭಾಗದಲ್ಲಿ ಮಲಯಾಳಂ ಭಾಷಿಕರು ಹೆಚ್ಚಾಗಿ ಇದ್ದು, ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಮನೆ, ಮನೆಗಳಲ್ಲಿ ಬಗೆಬಗೆಯ ಹೂವಿನ ರಂಗೋಲಿ ಬಿಡಿಸಿ ಮಹಾಬಲಿ ಚಕ್ರವರ್ತಿಯನ್ನು ಸ್ವಾಗತಿಸುತ್ತಾರೆ.
ಹೂವಿನ ರಂಗೋಲಿ ರಚಿಸುವುದೇ ಹಬ್ಬದ ಕೇಂದ್ರ ಬಿಂದುವಾಗಿರುವುದರಿಂದ ಜಿಲ್ಲೆಯ ವಿವಿಧೆಡೆಗಳಲ್ಲಿ ಹೂವು ಮಾರಾಟ ಜೋರಾಗಿತ್ತು. ಸಿದ್ದಾಪುರದಲ್ಲಿ ಪ್ರತಿ ಮಾರು ಸೇವಂತಿಗೆ ಮಾರಿಗೆ ₹ 50, ಚೆಂಡು ಹೂ ಪ್ರತಿ ಕೆ.ಜಿಗೆ ₹ 100ಗೆ ಮಾರಾಟವಾಯಿತು.
ಇತಿಹಾಸ: ಮಹಾಬಲಿ ಚಕ್ರವರ್ತಿ ಕೇರಳವನ್ನು ಆಳುತ್ತಿದ್ದ ಸಂದರ್ಭ ಪ್ರಜೆಗಳು ಸುಖ, ಶಾಂತಿ, ನೆಮ್ಮದಿಯಿಂದ ಜೀವನ ನಡೆಸುತ್ತಿದ್ದರು. ಇದನ್ನು ಸಹಿಸದ ಕೆಲ ದೇವತೆಗಳು ಮಹಾಬಲಿಯನ್ನು ನಿರ್ನಾಮ ಮಾಡಬೇಕೆಂದು ಉಪಾಯ ಮಾಡಿದರು. ದೇವತೆಗಳು ವಿಷ್ಣುವಿನಲ್ಲಿ ಪ್ರಾರ್ಥಿಸಿ, ವಾಮನ ರೂಪದಲ್ಲಿ ಭೂಲೋಕಕ್ಕೆ ಕಳಿಸುತ್ತಾರೆ. ಮಹಾಬಲಿಯು ತನ್ನ ಬಳಿ ಬಂದವರ ಇಚ್ಛೆಯನ್ನು ಪೂರೈಸುವ ದೊಡ್ಡ ಗುಣ ಹೊಂದಿದ್ದರು. ಜಗತ್ತಿನ ಒಳಿತಿಗಾಗಿ ಯಾಗವನ್ನು ಮಾಡುವ ಸಂದರ್ಭ ಕುಬ್ಜನಾದ ವಾಮನನು ಬಂದು ತನಗೆ 3 ಹೆಜ್ಜೆ ಇಡುವಷ್ಟು ಜಾಗ ನೀಡುವಂತೆ ಕೋರುತ್ತಾನೆ.
ಮಹಾಬಲಿಯು ಅದಕ್ಕೆ ಒಪ್ಪಿದ್ದು, ತಕ್ಷಣ ವಾಮನನು ಭೂಲೋಕದಷ್ಟು ಗ್ರಾತ್ರಕ್ಕೆ ಬೆಳೆದು, ಮೊದಲ ಹೆಜ್ಜೆಯನ್ನು ಭೂಲೋಕಕ್ಕೆ, ಎರಡನೇ ಹೆಜ್ಜೆಯನ್ನು ದೇವಲೋಕಕ್ಕೆ ಇಡುತ್ತಾನೆ. 3ನೇ ಹೆಜ್ಜೆ ಎಲ್ಲಿ ಇಡಲಿ ಎಂದು ವಾಮನನು ಕೇಳಿದಾಗ, ಮಹಾವಿಷ್ಣುವಿನ ಅವತಾರವೆಂದು ಅರಿತ ಮಹಾಬಲಿ, ತನ್ನ ಶಿರದಲ್ಲಿ ಇಡುವಂತೆ ತಿಳಿಸುತ್ತಾನೆ. ವಾಮನನು ಮಹಾಬಲಿಯ ತಲೆಯಲ್ಲಿ 3ನೇ ಹೆಜ್ಜೆ ಇಟ್ಟು, ಪಾತಳಕ್ಕೆ ತುಳಿಯುತ್ತಾನೆ.
ವರ್ಷದಲ್ಲಿ ಒಮ್ಮೆ ತನ್ನ ಪ್ರಜೆಗಳನ್ನು ನೋಡಲು ಅನುವು ಮಾಡಿಕೊಡಬೇಕೆಂದು ವಿಷ್ಣುವಿನಲ್ಲಿ ವಿನಂತಿಸಿದಾಗ ಮಹಾಬಲಿಯು ಮಲಯಾಳಂ ಕ್ಯಾಲೆಂಡರ್‌ನ ಮೊದಲ ತಿಂಗಳು (ಚಿಂಙಂ) ತನ್ನ ಪ್ರಜೆಗಳನ್ನು ನೋಡಲು ಬರುತ್ತಾರೆ ಎಂಬುದು ನಂಬಿಕೆ. ಹಾಗಾಗಿ, ಮನೆಯಲ್ಲಿ ಹೂವಿನ ರಂಗೋಲಿ ಬಿಡಿಸಿ, ಹೊಸ ಬಟ್ಟೆ ಉಟ್ಟು ಮಹಾಬಲಿಯನ್ನು ಓಣಂ ದಿನದಂದು ಸ್ವಾಗತಿಸುತ್ತಾರೆ. ಅಂದಿನ ಕಾಲದ ಮಹಾಬಲಿಯ ಆಳ್ವಿಕೆಯಲ್ಲಿ ಯಾರಿಗೂ ಹಸಿವಿರಲಿಲ್ಲ ಎಂಬುದನ್ನು ತೋರಿಸಲು 20 ಬಗೆಯ ವಿವಿಧ ಖಾದ್ಯ ತಯಾರಿಸಿ ಓಣಂ ಹಬ್ಬದ ಊಟವನ್ನು ಸವಿಯುತ್ತಾರೆ.
ಸುಂಟಿಕೊಪ್ಪದಲ್ಲಿ ಸಂಭ್ರಮ
ಸುಂಟಿಕೊಪ್ಪ: ಸುಂಟಿಕೊಪ್ಪ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಕೇರಳಿಗರು ನೆಲೆಸಿರುವ ಗ್ರಾಮಗಳಲ್ಲಿ ಭಾನುವಾರ ಸಡಗರ ಸಂಭ್ರಮದಿಂದ ಓಣಂ ಹಬ್ಬವನ್ನು ಆಚರಿಸಲಾಗುತ್ತದೆ. ಬಲಿ ಚಕ್ರವರ್ತಿ ವರ್ಷಕ್ಕೊಮ್ಮೆ ಆಗಮಿಸುತ್ತಾನೆ ಎಂಬ ನಂಬಿಕೆಯಿಂದ ಆತನನ್ನು ಬರ ಮಾಡಿಕೊಳ್ಳಲು ಮುಂಜಾನೆ ಬೇಗನೇ ಎದ್ದು ಮನೆಯ ಆವರಣವನ್ನು ಶುಚಿಗೊಳಿಸಿ ಬಣ್ಣಬಣ್ಣದ ಬೃಹತ್ ಹೂವಿನ ರಂಗೋಲಿ ಹಾಕಿ ಅದರ ಮಧ್ಯೆ ದೀಪ ಬೆಳಗಿಸಿ ಆಹ್ವಾನಿಸುವುದು ವಾಡಿಕೆ. ಇಲ್ಲಿನ ಮಲಯಾಳಿ ಧರ್ಮಿಯರು ಶನಿವಾರ ರಾತ್ರಿಯೇ ತಯಾರಿ ನಡೆಸಿ ಭಾನುವಾರ ಮುಂಜಾನೆ ವಿವಿಧ ಬಗೆಯ ಹೂವುಗಳಿಂದ ಮನೆಯ ಹಿರಿಯರಿಂದ ಹಿಡಿದು ಮಕ್ಕಳಾದಿಯಾಗಿ ಪೂಕಳಂ ಬಿಡಿಸಿ ಹಬ್ಬವನ್ನು ಆಚರಿಸುತ್ತಾರೆ. ನಂತರ ಸಾಂಪ್ರಾದಾಯಿಕ ಉಡುಗೆ ತೊಡುವ ಮಹಿಳೆಯರ ಮತ್ತು ಹೊಸ ಬಟ್ಟೆ ತೊಡುವ ಮಕ್ಕಳ ಹುರುಪು ಹಬ್ಬದ ಕಳೆಯನ್ನು ಹೆಚ್ಚಿಸುತ್ತದೆ. ದೇವಾಲಯ ಮತ್ತು ಮನೆಗಳಲ್ಲಿ ಪೂಜೆ ಸಲ್ಲಿಸಿ ನಂತರ ಮಧ್ಯಾಹ್ನ ಮನೆ ಮಂದಿ ನೆಂಟರಿಷ್ಟರು ಒಟ್ಟಾಗಿ ಕುಳಿತು ಹಬ್ಬದ ಅಂಗವಾಗಿ ಅನ್ನ ಸಾರು ಪಚ್ಚಡಿ ಕೂಟುಕರಿ ಕಿಚ್ಚಡಿ ಅವೆಲ್ ಕಾಳನ್ ಓಲನ್ ಪುಳಿಸೇರಿ ಪುದವನ್ ಉಣ್ಣಿಯಪ್ಪ ಸೇರಿದಂತೆ 21 ಬಗೆಯ ತಿಂಡಿ ತಿನಿಸುಗಳನ್ನು ಮಾಡಿ ಭೋಜನ ಸ್ವೀಕರಿಸಿ ಸಂಭ್ರಮದಿಂದ ಹಬ್ಬವನ್ನು ಆಚರಿಸಲಾಗುತ್ತದೆ. ಮುಂದಿನ ತಿಂಗಳು ವಿಜೃಂಭಣೆಯಿಂದ ಹಬ್ಬ ಆಚರಿಸಲು ಮಲಯಾಳಿ ಸಂಘ ತಯಾರಿ ನಡೆಸುತ್ತಿದೆ. ಶನಿವಾರ ಬಟ್ಟೆ ಅಂಗಡಿ ಫ್ಯಾನ್ಸಿ ದಿನಸಿ ಅಂಗಡಿಗಳಲ್ಲಿ ಹಬ್ಬದ ವಸ್ತುಗಳ ಖರೀದಿಯಲ್ಲಿ ಮಲಯಾಳಿ ಭಾಷಿಗರು ತೊಡಗಿಕೊಂಡಿದ್ದು ಕಂಡುಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.