ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನಲ್ಲಿ 3ನೇ ಎಎನ್‌ಎಫ್‌ ಕ್ಯಾಂಪ್‌

ಅಕ್ರಮವಾಗಿ ಗೋಹತ್ಯೆ ನಡೆಸುವವರ ವಿರುದ್ಧ ಕ್ರಮಕ್ಕೆ ‘ವಿಶೇಷ ಕಾರ್ಯಪಡೆ’
Last Updated 6 ನವೆಂಬರ್ 2020, 10:45 IST
ಅಕ್ಷರ ಗಾತ್ರ

ಮಡಿಕೇರಿ: ‘ತಮಿಳುನಾಡು, ಕೇರಳಕ್ಕೆ ಹೊಂದಿಕೊಂಡಿರುವ ರಾಜ್ಯದ ಗಡಿಪ್ರದೇಶದಲ್ಲಿ ನಕ್ಸಲ್‌ ಚಟುವಟಿಕೆ ಕಂಡುಬಂದಿದ್ದು ರಾಜ್ಯದಲ್ಲೂ ಸಾಕಷ್ಟು ಮುಂಜಾಗ್ರತೆ ವಹಿಸಲಾಗಿದೆ. ಕೊಡಗಿನಲ್ಲಿ ಎರಡು ನಕ್ಸಲ್‌ ನಿಗ್ರಹ ಪಡೆಯ (ಎಎನ್‌ಎಫ್‌) ಎರಡು ಕ್ಯಾಂಪ್‌ಗಳಿದ್ದು ಶೋಧ ಕಾರ್ಯಕ್ಕೆ ನೆರವಾಗಲು ಮತ್ತೊಂದು ಎಎನ್‌ಎಫ್‌ ಕ್ಯಾಂಪ್‌ಗೆ ಅನುಮತಿ ನೀಡಲಾಗಿದೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಇಲ್ಲಿ ಶುಕ್ರವಾರ ಹೇಳಿದರು.

‘ಗಡಿಯಾಚೆಗೆ ನಡೆಯುತ್ತಿರುವ ನಕ್ಸಲ್‌ ಚಟುವಟಿಕೆಯ ಪರಿಣಾಮ ರಾಜ್ಯದ ಮೇಲೂ ಆಗುತ್ತಿದ್ದು, ನಿಗಾ ವಹಿಸಲು ಗಡಿ ಜಿಲ್ಲೆಗಳ ಪೊಲೀಸರಿಗೆ ಸೂಚಿಸಲಾಗಿದೆ. ಕೊಡಗಿನಲ್ಲಿ 3ನೇ ಕ್ಯಾಂಪ್‌ ಸ್ಥಾಪನೆಗೆ ಕೂಡಲೇ ಅನುದಾನ ಬಿಡುಗಡೆ ಮಾಡಲಾಗುವುದು. ನ.3ರಂದು ವಯನಾಡು ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆದಿದ್ದು, ಕೊಡಗಿನ ಗಡಿಯಲ್ಲಿ ಶೋಧ ಕಾರ್ಯ ಚುರುಕು ಮಾಡಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಅಕ್ರಮ ಗೋವು ಸಾಗಣೆ ಹಾಗೂ ಗೋಹತ್ಯೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ‘ವಿಶೇಷ ಕಾರ್ಯಪಡೆ’ ರಚಿಸಲು ಚಿಂತಿಸಲಾಗಿದೆ’ ಎಂದು ಗೃಹ ಸಚಿವರು ಹೇಳಿದರು.

ತಜ್ಞರೊಂದಿಗೆ ಚರ್ಚೆ:‘ಮದುವೆಗಾಗಿ ಮತಾಂತರ ಆಗುತ್ತಿರುವುದು ಸಾಮಾಜಿಕ ಪಿಡುಗಾಗಿದೆ. ಅದನ್ನು ತಡೆಯಲು ರಾಜ್ಯದಲ್ಲೂ ಕಾನೂನಿನ ಅಗತ್ಯವಿದ್ದು ಸಂವಿಧಾನ ತಜ್ಞರೊಂದಿಗೆ ಚರ್ಚಿಸಿ ಕಾನೂನು ಜಾರಿಗೆ ತರಲಾಗುವುದು. ಅದರಲ್ಲಿ ಹಿಂದೇಟು ಹಾಕುವ ಪ್ರಶ್ನೆಯೇ ಇಲ್ಲ’ ಎಂದು ಸಚಿವರು ಪ್ರತಿಕ್ರಿಯಿಸಿದರು.

ಧ್ವನಿವರ್ಧಕದ ನಿಷೇಧ ಆದೇಶ: ಡಿಜಿಪಿಯೊಂದಿಗೆ ಚರ್ಚೆ

‘ಮಸೀದಿಗಳಲ್ಲಿ ಧ್ವನಿವರ್ಧಕ ನಿಷೇಧಕ್ಕೆ ಸಂಬಂಧಿಸಿದಂತೆ ಡಿಜಿಪಿ ಕಚೇರಿಯಿಂದ ಆದೇಶ ಹೊರಡಿಸಲಾಗಿದೆ ಎಂಬ ಚರ್ಚೆ ನಡೆಯುತ್ತಿದೆ. ಕೊಡಗಿಗೆ ಬಂದ ಬಳಿಕ ನನಗೆ ಈ ಮಾಹಿತಿ ತಿಳಿಯಿತು. ಯಾವುದೇ ಆದೇಶ ಮಾಡಿಲ್ಲ. ಬೆಂಗಳೂರಿಗೆ ತೆರಳಿದ ಬಳಿಕ ಪೊಲೀಸ್‌ ಮಹಾನಿರ್ದೇಶಕರ ಜೊತೆಗೆ ಚರ್ಚಿಸುತ್ತೇನೆ’ ಎಂದು ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಡಿ.ಜೆ ಹಳ್ಳಿ ಪ್ರಕರಣ ಸಂಬಂಧ ತಲೆಮರೆಸಿಕೊಂಡಿರುವ ಸಂಪತ್‌ರಾಜ್‌ ಬಂಧನಕ್ಕೆ ತಂಡ ರಚಿಸಲಾಗಿದೆ. ಶೀಘ್ರವೇ ಅವರ ಬಂಧನವಾಗಲಿದೆ ಎಂದುನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT