ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿಯಲ್ಲಿ ಅರಣ್ಯ ಕಾಲೇಜಿನ ವಿದ್ಯಾರ್ಥಿಗಳ ಪ್ರತಿಭಟನೆ

Published 16 ಫೆಬ್ರುವರಿ 2024, 16:16 IST
Last Updated 16 ಫೆಬ್ರುವರಿ 2024, 16:16 IST
ಅಕ್ಷರ ಗಾತ್ರ

ಮಡಿಕೇರಿ: ವಿವಿಧ ಬೇಡಿಕೆಗಳನ್ನಿರಿಸಿ ತರಗತಿಗಳನ್ನು ಬಹಿಷ್ಕರಿಸಿ ಇಲ್ಲಿನ ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ 8ನೇ ದಿನಕ್ಕೆ ಕಾಲಿಟ್ಟಿದೆ.

ಕಾಲೇಜು ಆವರಣ, ಹೋಬಳಿ ಕೇಂದ್ರ, ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಶುಕ್ರವಾರ ಜಿಲ್ಲಾಕೇಂದ್ರಕ್ಕೆ ಬಂದು ದಿನವಿಡೀ ಪ್ರತಿಭಟನೆ ನಡೆಸಿದರು.

ಸುಮಾರು 250 ವಿದ್ಯಾರ್ಥಿಗಳು ಬಿರುಬಿಸಿಲಿನಲ್ಲಿ ಘೋಷಣೆಗಳನ್ನು ಕೂಗುತ್ತಾ ನಿಧಾನಗತಿಯಲ್ಲಿ ನಡೆಯುತ್ತಾ ಸಾರ್ವಜನಿಕರು ತಮ್ಮತ್ತ ನೋಡುವಂತೆ ಮಾಡಿದರು. ಜನರಲ್ ತಿಮ್ಮಯ್ಯ ವೃತ್ತದಲ್ಲಿ ಬೀದಿನಾಟಕವೊಂದನ್ನು ಪ್ರದರ್ಶಿಸಿ, ಸರ್ಕಾರದ ನಿರ್ಧಾರದಿಂದ ತಮಗಾಗಿರುವ ನೋವನ್ನು ಸಾರ್ವಜನಿಕರ ಮುಂದೆ ಬಿಡಿಸಿಟ್ಟರು. ಇವರ ಬೆವರಿನ ಆರ್ತನಾದಕ್ಕೆ ಪೊಲೀಸರು, ಸಾರ್ವಜನಿಕರು ಮೌನ ವೀಕ್ಷಕರಾದರು.

ಹಳೆಯ ಖಾಸಗಿ ಬಸ್‌ನಿಲ್ದಾಣದಿಂದ ಜಿ.ಟಿ.ವೃತ್ತ, ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಭಾರಿ ಪ್ರಮಾಣದಲ್ಲೇ ಘೋಷಣೆಗಳನ್ನು ಕೂಗಿದರು.

‘ಕಾಡಿನ ಮಕ್ಕಳು ಬೀದಿಗೆ ಬಿದ್ದರು’ ಎಂಬ ಘೋಷಣೆಗಳು ಅಧಿಕಾರಿಗಳ ಹಾಗೂ ಸಿಬ್ಬಂದಿಯ ಗಮನ ಸೆಳೆಯಿತು.

ವಲಯ ಅರಣ್ಯಾಧಿಕಾರಿ, ಉಪವಲಯ ಅರಣ್ಯಾಧಿಕಾರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಳನ್ನು ಸಂಪೂರ್ಣವಾಗಿ ಬಿಎಸ್ಸಿ ಅರಣ್ಯಶಾಸ್ತ್ರ ಪದವೀಧರರಿಗೆ ಮೀಸಲಿರಿಸಬೇಕು’ ಎಂಬುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಅವರು ಒತ್ತಾಯಿಸಿದರು.

ಸರ್ಕಾರ 2018ರಲ್ಲಿ ವಲಯ ಅರಣ್ಯಧಿಕಾರಿ ಹುದ್ದೆಗಳ ನೇರ ನೇಮಕಾತಿಯಲ್ಲಿ ಅರಣ್ಯ ಪದವೀಧರರಿಗೆ ಇದ್ದ ಶೇ 75ರಷ್ಟು ಮೀಸಲಾತಿಯನ್ನು ಕಡಿತಗೊಳಿಸಿ ಶೇ 50ಕ್ಕೆ ಇಳಿಸಲಾಯಿತು. ಇದು ಅರಣ್ಯ ಕಾಲೇಜಿನ ವಿದ್ಯಾರ್ಥಿಗಳ ಪಾಲಿಗೆ ಮಾರಕವಾಗಿದೆ ಎಂದು ಕಿಡಿಕಾರಿದರು.

ಈ ವೇಳೆ ಮಾತನಾಡಿದ ವಿದ್ಯಾರ್ಥಿಗಳಾದ ಸುಹಾಸ್, ಸೌಮ್ಯಾ, ಕೀರ್ತನಾ, ‘2018ರಿಂದ ಈಚೆಗೆ ಅರಣ್ಯ ಇಲಾಖೆಯಲ್ಲಿ ನೇಮಕಾತಿ ನಡೆದಿಲ್ಲ. ಕಳೆದ ಆರೇಳು ವರ್ಷಗಳಿಂದ ಪದವಿ ಪಡೆದು ಹೊರಬಂದಿರುವ ಪದವೀಧರರು ನಿರುದ್ಯೋಗಿಗಳಾಗಿದ್ದಾರೆ. ಈ ವಿದ್ಯಾರ್ಹತೆಗೆ ತಕ್ಕ ಉದ್ಯೋಗಗಳು ಸಿಗುವುದಿಲ್ಲ ಎಂದಾದರೆ ಅರಣ್ಯ ಮಹಾವಿದ್ಯಾಲಯ ಏಕಾದರೂ ಬೇಕು?’ ಎಂದು ಪ್ರಶ್ನಿಸಿದರು.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಶುಕ್ರವಾರ ಮಡಿಕೇರಿಯಲ್ಲಿ ಬೀದಿನಾಟಕ ಪ್ರದರ್ಶಿಸಿದರು
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಶುಕ್ರವಾರ ಮಡಿಕೇರಿಯಲ್ಲಿ ಬೀದಿನಾಟಕ ಪ್ರದರ್ಶಿಸಿದರು
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ಕಾರ್ಯಕರ್ತರು ಶುಕ್ರವಾರ ಮಡಿಕೇರಿಯ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ಕಾರ್ಯಕರ್ತರು ಶುಕ್ರವಾರ ಮಡಿಕೇರಿಯ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು

ಜಿಲ್ಲೆಯಲ್ಲಿ 4 ಕಡೆ ಪ್ರತಿಭಟನೆ ನಡೆಸಿದ ಸಿಐಟಿಯು

ಮಡಿಕೇರಿ: ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಕರ್ನಾಟಕ ಪ್ರಾಂತ ರೈತ ಸಂಘ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ವತಿಯಿಂದ ಕೊಡಗು ಜಿಲ್ಲೆಯ ಕುಶಾಲನಗರ ವಿರಾಜಪೇಟೆ ಪೊನ್ನಂಪೇಟೆ ಹಾಗೂ ಮಡಿಕೇರಿ ತಾಲ್ಲೂಕು ಕೇಂದ್ರಗಳಲ್ಲಿ ಶುಕ್ರವಾರ ಪ್ರತಿಭಟನೆಗಳು ನಡೆದವು. ಮಡಿಕೇರಿಯ ತಾಲ್ಲೂಕು ಕಚೇರಿಯ ಮುಂದೆ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅಂಗನವಾಡಿ ಕಾರ್ಯಕರ್ತೆ ಸರೋಜಾ ‘ನಮ್ಮ ಕೆಲಸಕ್ಕೆ ಸರಿಯಾದ ಗೌರವಧನ ಸಿಗುತ್ತಿಲ್ಲ. ₹ 31 ಸಾವಿರ ಕನಿಷ್ಠ ವೇತನ ನೀಡಬೇಕು’ ಎಂದು ಒತ್ತಾಯಿಸಿದರು. ಮುಖಂಡರಾದ ಕೆ.ಎಸ್.ರಮೇಶ್ ಮಾತನಾಡಿ ‘ಕಾರ್ಮಿಕರನ್ನು ಸರ್ಕಾರ ಪ್ರಾಣಿಗಳಂತೆ ಕಾಣುತ್ತಿದೆ’ ಎಂದು ಕಿಡಿಕಾರಿದರು. ನಿರುದ್ಯೋಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದಾರೆ. ಜನಸಾಮಾನ್ಯರ ಖರೀದಿಸುವ ಶಕ್ತಿ ಕುಗ್ಗುತ್ತಿದೆ. ಖಾಸಗೀಕರಣ ಭರದಿಂದ ಸಾಗುತ್ತಿದೆ. ಹೋರಾಟಗಳನ್ನು ಹತ್ತಿಕ್ಕಲಾಗುತ್ತಿದೆ. ಮಾಲೀಕರ ಪರವಾಗಿ ಕಾನೂನುಗಳನ್ನು ರೂಪಿಸಲಾಗುತ್ತಿದೆ ಎಂದು ಆರೋಪಿಸಿದರು. ಮುಖಂಡರಾದ ರಾಚಪ್ಪಾಜಿ ಇಂದಿರಾ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT