ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಳ್ಮೆ ಇದ್ದರೆ 'ತಾಳೆ' ಕೃಷಿ ಯಶಸ್ಸು: ಕೊಡಗಿನ ರೈತನ ಯಶೋಗಾಥೆ

ಮಿತವ್ಯಯ, ಕಡಿಮೆ ಶ್ರಮ, ನಿರಂತರ ಆದಾಯ: ಹೆಬ್ಬಾಲೆ ರೈತ ಬಸವಣ್ಣ
Last Updated 16 ಡಿಸೆಂಬರ್ 2022, 6:46 IST
ಅಕ್ಷರ ಗಾತ್ರ

ಕುಶಾಲನಗರ: ಕಾಫಿ, ಕಿತ್ತಳೆಯ ನಾಡು ಕೊಡಗು ಜಿಲ್ಲೆಯಲ್ಲಿ ತಾಳೆ ಕೃಷಿ ಕಡೆಗೆ ಗಮನ ಹರಿಸಿದವರು ತೀರ ವಿರಳ. ಈ ವಿರಳರಲ್ಲಿ ಹೆಬ್ಬಾಲೆ ಗ್ರಾಮದ ಪ್ರಗತಿಪರ ರೈತ ಬಸವಣ್ಣ ಸಹ ಒಬ್ಬರು.

ಬರಡು ಭೂಮಿಯಾಗಿದ್ದ ಜಮೀನನ್ನು ಸಮತಟ್ಟು ಮಾಡಿ 10 ಎಕರೆ ಪ್ರದೇಶದಲ್ಲಿ ಕಳೆದ 15 ವರ್ಷಗಳ ಹಿಂದೆ ತಾಳೆ ಹಾಕಿದ್ದರು. 3 ವರ್ಷದಲ್ಲಿ ಹಣ್ಣು ಬರಲು ಆರಂಭಗೊಂಡರೂ ಪೂರ್ಣಪ್ರಮಾಣದಲ್ಲಿ ಹಣ್ಣು ಬರುವುದು 5 ವರ್ಷದಿಂದ ಪ್ರಾರಂಭವಾಯಿತು. ಈಗ ಪ್ರತಿ ತಿಂಗಳು ₹ 1 ಲಕ್ಷಕ್ಕಿಂತ ಅಧಿಕ ಆದಾಯ ಪಡೆಯುತ್ತಿದ್ದಾರೆ.

ಕೇಬಲ್ ಉದ್ಯಮಿಯಾಗಿದ್ದ ಅವರು ಇದೀಗ ಸಂಪೂರ್ಣ ಕೃಷಿ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ವಿಶೇಷ.

‘ನಾನು ತಾಳೆ ಗಿಡ ಹಾಕಿದಾಗ ಬೇರೆಯವರೂ ಹಾಕಿದ್ದರು. 3 ವರ್ಷಕ್ಕೆ ಸ್ವಲ್ಪ ಹಣ್ಣು ಬಂತು. ಇಷ್ಟು ಕಡಿಮೆ ಬಂದರೆ ಬದುಕೋದು ಹೇಗೆ ಎಂದು ಹೆಚ್ಚಿನವರು ಕಡಿದು ಬಿಟ್ಟರು. ಮತ್ತೆರಡು ವರ್ಷದ ನಂತರ ಹಣ್ಣು ಚೆನ್ನಾಗಿ ಬಂತು. ನೀರು ಕಟ್ಟೋದು, ಗೊಬ್ಬರ ಹಾಕೋದು, ಕಾಯಿ ಕೊಯ್ಯೋದು ಮೂರೇ ಕೆಲಸ ಇದರಲ್ಲಿರುವುದು. ಭೂಮಿ ಹದ ಮಾಡುವುದು, ಉಳುಮೆ, ಮತ್ತಿತರ ಯಾವ ಕೆಲಸವೂ ಇಲ್ಲ. ಬರಗಾಲ ಬಂದರೂ ನಡೆಯುತ್ತದೆ’ ಬಸವಣ್ಣ ಹೇಳುತ್ತಾರೆ.

ತಾಳೆ ಬೆಳೆಯು ಖಾದ್ಯ ತೈಲ ಬೆಳೆಗಳಲ್ಲಿ ಹೆಚ್ಚು ತೈಲದ ಇಳುವರಿ ನೀಡುವ ಬೆಳೆ. ಪ್ರತಿ ಹೆಕ್ಟೇರ್‌ಗೆ ಪ್ರತಿ ವರ್ಷ 4 ರಿಂದ 5 ಟನ್‌ಗಳಷ್ಟು ತೈಲದ ಇಳುವರಿ ನೀಡುವ ಸಾಮರ್ಥ್ಯವನ್ನು ಹೊಂದಿದ್ದು, ಜಾಗತಿಕ ಖಾದ್ಯ ತೈಲ ಮಾರುಕಟ್ಟೆಯಲ್ಲಿ ಪ್ರಮುಖ ಸ್ಥಾನ ಹೊಂದಿದೆ. ತಾಳೆಎಣ್ಣೆಯಲ್ಲಿ ಹೆಚ್ಚು ಕ್ಯಾರೋಟಿನ್ ಅಂಶವಿದ್ದು, ಇದು ಆರೋಗ್ಯಕ್ಕೆ ಉತ್ತಮ. ಆಂಧ್ರಪ್ರದೇಶ, ಕರ್ನಾಟಕ ಹಾಗೂ ತಮಿಳುನಾಡು ರಾಜ್ಯದಲ್ಲಿ ಹೆಚ್ಚು ತಾಳೆ ಬೆಳೆಯಲಾಗುತ್ತದೆ.

ತಾಳೆ ಕೃಷಿ ಮಾಡುವವರಿಗೆ ತೋಟಗಾರಿಕೆ ಇಲಾಖೆಯು ಪ್ರೋತ್ಸಾಹ ನೀಡುತ್ತದೆ. ಎಕರೆಗೆ ತಾಳೆ ಸಸಿಗೆ ಸಹಾಯಧನ ₹ 8,000, ಮೊದಲ ವರ್ಷ ₹ 2,100, ಎರಡನೇ ವರ್ಷ ₹ 2,100, ಮೂರನೇ ವರ್ಷ ₹ 2,100 ಮೊತ್ತದ ಗೊಬ್ಬರ ನೀಡಲಾಗುತ್ತದೆ. ಕಟ್ಟಿಂಗ್‌ ಮೆಶಿನ್‌ಗೆ ಸಹಾಯಧನ ಇದೆ. ಪಂಪ್‌ಸೆಟ್, ಬೋರ್‌ವೆಲ್‌ ತೆಗೆಯಲು ಸಹಾಯಧನ ನೀಡಲಾಗುತ್ತದೆ. ತಾಳೆ ಬೆಳೆಗೆ ಸರ್ಕಾರದಿಂದ ಆಗ್ಗಿಂದಾಗ್ಗೆ ಕನಿಷ್ಠ ಬೆಂಬಲ ಬೆಲೆಯೂ ಘೋಷಣೆ ಆಗುತ್ತದೆ. ಆದ್ದರಿಂದ ರೈತರಿಗೆ ಮಾರುಕಟ್ಟೆ ಅಸ್ಥಿರತೆಯ ಆತಂಕವಿಲ್ಲ ಎನ್ನುತ್ತಾರೆ ಸೋಮವಾರಪೇಟೆ ತಾಲ್ಲೂಕು ತೋಟಗಾರಿಕೆ ಇಲಾಖೆ ಹಿರಿಯ ನಿರ್ದೇಶಕ (ತಾಳೆಬೆಳೆ) ಡಾ.ಮಂಜುನಾಥ್ ಜೆ.ಶೆಟ್ಟಿ.

ತಾಳೆಹಣ್ಣು ಸಂಗ್ರಹಿಸಿ ಅದರಿಂದ ಎಣ್ಣೆ ತೆಗೆಯುವ ಫ್ಯಾಕ್ಟರಿಗಳು ರಾಜ್ಯದಲ್ಲಿ 3 ಇವೆ. ಅದರಲ್ಲಿ ದಾವಣಗೆರೆ ಜಿಲ್ಲೆಯ ಹರಿಹರದಲ್ಲಿರುವ ಕಲ್ಪವೃಕ್ಷ ಆಯಿಲ್‌ ಪಾಮ್‌ ಲಿಮಿಟೆಡ್‌ ರೈತರ ತೋಟದ ಬಳಿ ಹೋಗಿ ಹಣ್ಣು ಖರೀದಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT