ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಜಿನ ನಗರಿಯಲ್ಲಿ ಚೂರಾಗಲಿದೆ ಪ್ಲಾಸ್ಟಿಕ್ ಬಾಟಲಿ!

ಪ್ಲಾಸ್ಟಿಕ್ ಬಾಟಲಿಯ ವೈಜ್ಞಾನಿಕ ವಿಲೇವಾರಿಗೆ ಕ್ರಮ
Last Updated 20 ಡಿಸೆಂಬರ್ 2022, 0:30 IST
ಅಕ್ಷರ ಗಾತ್ರ

ಮಡಿಕೇರಿ: ಮಳೆ ನಿಂತ ನಂತರ ಮಂಜಿನ ನಗರಿಯಲ್ಲಿ ಪ್ರವಾಸಿಗರ ದಂಡೇ ಕಾಣಸಿಗುತ್ತಿದೆ. ಚಳಿಗಾಲದ ಪ್ರವಾಸೋದ್ಯಮ ಗರಿಗೆದರಿದ್ದು, ವಾರಾಂತ್ಯಗಳಲ್ಲಿ ಸಾವಿರಾರು ಪ್ರವಾಸಿಗರು ಇಲ್ಲಿನ ರಾಜಾಸೀಟ್ ಉದ್ಯಾನಕ್ಕೆ ಬರುತ್ತಿದ್ದಾರೆ.

ಸಾಮಾನ್ಯವಾಗಿ ಬಹುತೇಕ ಪ್ರವಾಸಿಗರು ತಮ್ಮ ಕೈಯಲ್ಲಿ ತಂದಿರುವ ನೀರಿನ ಪ್ಲಾಸ್ಟಿಕ್ ಬಾಟಲಿಯನ್ನು ಎಲ್ಲೆಂದರಲ್ಲಿ ಎಸೆಯುತ್ತಾರೆ. ಅದನ್ನು ತಡೆಯಲು ಕಸದ ಡಬ್ಬಗಳನ್ನು ಇರಿಸಿದರೂ ಅದೂ ಸಹ ತುಂಬಿ ಹೋಗಿ, ಬೀಸುವ ಗಾಳಿಗೆ ಖಾಲಿ ಬಾಟಲಿ ಹಾರಿ, ಎಲ್ಲೆಂದರಲ್ಲಿ ಬೀಳುತ್ತದೆ. ಇದರ ಸಮಸ್ಯೆ ನಿವಾರಣೆಗೆ ನಗರಸಭೆ ಮುಂದಾಗಿದೆ.

ಹೆಚ್ಚಿನ ಪ್ರವಾಸಿಗರು ಭೇಟಿ ನೀಡುವ ರಾಜಾಸೀಟ್ ಉದ್ಯಾನ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣಗಳಲ್ಲಿ ಪ್ಲಾಸ್ಟಿಕ್ ಬಾಟಲ್‌ ಕ್ರಷಿಂಗ್ ಯಂತ್ರವನ್ನು ಅಳವಡಿಸಲಾಗಿದೆ. ಇದರಿಂದ ಪ್ಲಾಸ್ಟಿಕ್ ಬಾಟಲಿಯ ವೈಜ್ಞಾನಿಕ ವಿಲೇವಾರಿ ಸುಲಭವಾಗಲಿದೆ.

ಈ ಯಂತ್ರದ ಒಳಗೆ ಬಳಸಿದ ಪ್ಲಾಸ್ಟಿಕ್ ಬಾಟಲಿಯನ್ನು ಹಾಕಿದರೆ ಅದು ತಕ್ಷಣವೇ ಬಾಟಲಿಯನ್ನು ಚೂರು ಚೂರು ಮಾಡಿ ಸಂಗ್ರಹಿಸುದೆ. ಸುಮಾರು 700ಕ್ಕೂ ಅಧಿಕ ಬಾಟಲಿಯನ್ನು ಇದು ಪುಡಿ ಮಾಡುತ್ತದೆ. 7 ಕೆ.ಜಿಯಷ್ಟು ಪ್ಲಾಸ್ಟಿಕ್ ಚೂರುಗಳು ಸಂಗ್ರಹವಾದ ನಂತರ ಅದನ್ನು ತೆಗೆದರೆ ಮತ್ತೆ ಕ್ರಷಿಂಗ್ ಮಾಡಲು ಯಂತ್ರ ಆರಂಭಿಸುತ್ತದೆ. ಇಲ್ಲಿಂದ ಬರುವ ಚೂರುಗಳನ್ನು ಕಾರ್ಖಾನೆಗಳಿಗೆ ನೀಡಿದರೆ ಅವರು ಅದನ್ನು ಮರುಬಳಕೆ ಮಾಡುತ್ತಾರೆ.

ಯಂತ್ರದಿಂದ ಪ್ರಯೋಜನ ಏನು?

ಪ್ಲಾಸ್ಟಿಕ್ ಬಾಟಲಿಯನ್ನು ಸಂಗ್ರಹಿಸಿ, ಸಾಗಾಣಿಕೆ ಮಾಡುವುದು ತುಸು ಕಷ್ಟದ ಕೆಲಸ. ಚೀಲ ಅಥವಾ ಪೆಟ್ಟಿಗೆಯಲ್ಲಿಬಾಟಲಿ ಹೆಚ್ಚು ಜಾಗವನ್ನು ಬೇಡುತ್ತದೆ. ಆದರೆ, ಅದನ್ನು ಚೂರು ಚೂರು ಮಾಡಿದಾಗ ಕಡಿಮೆ ಜಾಗದಲ್ಲಿ ಹೆಚ್ಚು ಸಂಗ್ರಹಿಸಬಹುದು. ಇದರಿಂದ ಸಾಗಾಣಿಕೆ ಸುಲಭವಾಗಲಿದೆ. ಜತೆಗೆ, ಒಮ್ಮೆಗೆ ಹೆಚ್ಚು ಹೆಚ್ಚು ಸಾಗಾಣಿಕೆಯನ್ನೂ ಮಾಡಬಹುದಾಗಿದೆ. ಹೆಚ್ಚಿನ ಪ್ರವಾಸಿಗರಿಗೆ ಈ ಬಗೆಯ ಯಂತ್ರ ಆಕರ್ಷಣೆಯ ಕೇಂದ್ರಬಿಂದುವೂ ಆಗಿದೆ.

ಬಯೊ ಕ್ರೂಕ್ಸ್ ಕಂಪನಿಗೆ ಸೇರಿದ 2 ಪ್ಲಾಸ್ಟಿಕ್ ಬಾಟಲಿ ಕ್ರಷಿಂಗ್ ಮಿಷನ್‌ ನಗರಕ್ಕೆ ಬಂದಿವೆ. ಎರಡೂ ಯಂತ್ರಗಳಿಗೆ ₹ 5 ಲಕ್ಷ ವೆಚ್ಚವಾಗಿದೆ. ರಾಜಾಸೀಟ್ ಉದ್ಯಾನ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣಗಳಲ್ಲಿ ಇವುಗಳನ್ನು ಅಳವಡಿಸಿ, ವಿದ್ಯುತ್ ಸಂಪರ್ಕವನ್ನೂ ನೀಡಲಾಗಿದೆ. ಸದ್ಯ, ಉದ್ಘಾಟನೆಯಷ್ಟೇ ಬಾಕಿ ಉಳಿದಿದೆ.

ಒಂದು ಬಾರಿ ಬಳಸುವ ಬಾಟಲಿಯನ್ನು ಮತ್ತೆ ಮತ್ತೆ ಕುಡಿಯಲು ಬಳಸುವುದು ಅಪಾಯಕಾರಿ. ಹಾಗಾಗಿ, ಒಂದು ಬಾರಿ ಬಾಟಲಿಯಲ್ಲಿ ನೀರು ಕುಡಿದ ನಂತರ ಅದನ್ನು ಈ ಕ್ರಷಿಂಗ್ ಯಂತ್ರಕ್ಕೆ ಹಾಕಿದರೆ ಅದು ಚೂರಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT