ಕುಶಾಲನಗರ: ಸಮೀಪದ ಮುಳ್ಳುಸೋಗೆಯ ವಿನಾಯಕ ಬಡಾವಣೆಯ ಅಂಗನವಾಡಿ ಕೇಂದ್ರದಲ್ಲಿ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಹಾಗೂ ಕಲ್ಕಿ ಮಾನವ ಸೇವಾ ಸಮಿತಿಯಿಂದ ಈಚೆಗೆ ಪೋಷಣ್ ಅಭಿಯಾನ ಯೋಜನೆಯಡಿ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ನಡೆಯಿತು.
ಸೇವಾ ಸಮಿತಿ ಅಧ್ಯಕ್ಷೆ ಇನಿತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ತಾಯಿ ಆರೋಗ್ಯವಾಗಿದ್ದರೆ ಆರೋಗ್ಯವಂತ ಮಗು ಜನಿಸುತ್ತದೆ. ಗರ್ಭಿಣಿಯರು ಸಕಾರಾತ್ಮಕವಾಗಿ, ಉತ್ತಮ ಆಲೋಚನೆ ಹೊಂದಬೇಕು. ಜನಿಸುವ ಮಗುವಿನ ಮಾನಸಿಕ ಆರೋಗ್ಯ ಉತ್ತಮವಾಗಿರಲಿದೆ. ತಾಯಿಯ ಮನಸ್ಸು ಚಿಂತೆ, ದುಗುಡದಿಂದ ಕೂಡಿರಬಾರದು’ ಎಂದರು.
ಅಂಗನವಾಡಿ ಕಾರ್ಯಕರ್ತೆ ಪುಟ್ಟಮ್ಮ ಮಾತನಾಡಿ, ‘ಗರ್ಭಿಣಿಯರು ಟಿವಿ ವೀಕ್ಷಣೆಯಿಂದ ದೂರವಿರಬೇಕು. ಅದು ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಲಿದೆ. ಮಾನಸಿಕ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಕೊಡಬೇಕಿದೆ. ಪೌಷ್ಟಿಕ ಆಹಾರ ಸೇವಿಸುವುದು ಅತ್ಯಗತ್ಯವಾಗಿದೆ’ ಎಂದು ಹೇಳಿದರು.
ನಂತರ ಸರ್ಕಾರದಿಂದ ಸಿಗುವ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕರ್ತೆಯರಾದ ಸುಚಿತ್ರಾ, ನೀಲಮ್ಮ ಟಿ.ಎಸ್, ನಾಗರತ್ನ, ಸೌಮ್ಯಾ, ಸಹಾಯಕಿ ಸರಸ್ವತಿ, ಕಲ್ಕಿ ಮಾನವ ಸೇವಾ ಸಮಿತಿಯ ಪ್ರಮುಖರಾದ ವಸಂತಿ ಪೊನ್ನಪ್ಪ, ತಾರಾ ಟಿಪ್ಪು, ಕನಕ, ರಾಜಪ್ಪ, ಕುಸುಮಾ, ದರ್ಶನ್, ಸಮುದಾಯದ ಆರೋಗ್ಯ ಅಧಿಕಾರಿ ಮಮತಾ, ಆಶಾ ಕಾರ್ಯಕರ್ತೆ ಉಷಾಭಾಯಿ ಭಾಗವಹಿಸಿದ್ದರು.