ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಏಕರೂಪದ ಜಾತಿ ದೃಢೀಕರಣ ಪತ್ರಕ್ಕೆ ಒತ್ತಾಯ

Published 29 ಜನವರಿ 2024, 16:26 IST
Last Updated 29 ಜನವರಿ 2024, 16:26 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿರುವ ಎಲ್ಲ ಆದಿ ದ್ರಾವಿಡರಿಗೆ ಏಕರೂಪದ ಜಾತಿ ದೃಢೀಕರಣ ಪತ್ರ ನೀಡಬೇಕು ಎಂದು ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಚ್.ಎಂ.ಸೋಮಪ್ಪ ಒತ್ತಾಯಿಸಿದರು.

ಆದಿ ದ್ರಾವಿಡ ಸಮಾಜದ ಹಲವರಿಗೆ 8 ಬೇರೆ ಬೇರೆ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ನೀಡಲಾಗಿದೆ. ಇದರಿಂದ ಗೊಂದಲಗಳು ಸೃಷ್ಟಿಯಾಗಿವೆ. ಹಾಗಾಗಿ, ಎಲ್ಲ ಆದಿ ದ್ರಾವಿಡರಿಗೂ ಆದಿ ದ್ರಾವಿಡ ಎಂಬ ಪ್ರಮಾಣಪತ್ರ ನೀಡಬೇಕು ಎಂದು ಅವರು ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

‘ಇದು ನಮ್ಮ ಅಳಿವು ಉಳಿವಿನ ಪ್ರಶ್ನೆಯಾಗಿದೆ‌. ತಪ್ಪು ಜಾತಿ ನಮೂದಿನಿಂದ ನಮ್ಮ ಏಳಿಗೆಗೆ ತೊಡಕಾಗಿದೆ‌. 2016 ರಿಂದಲೂ ಸಂಬಂಧಪಟ್ಟ ಸಚಿವರಿಗೆ, ಅಧಿಕಾರಿಗೆ ಮನವಿಯನ್ನು ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಕೊಡಗು ಜಿಲ್ಲೆಯಲ್ಲಿ 30 ಸಾವಿರಕ್ಕೂ ಅಧಿಕ ಆದಿ ದ್ರಾವಿಡ ಸಮುದಾಯದವರು ಇದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಕೊಡಗಿಗೆ ಬಂದು ನೆಲೆಸಿದ ತುಳು ಭಾಷಿಕರಾದ ಆದಿ ದ್ರಾವಿಡರು ಇದ್ದಾರೆ. ಮಂಗಳೂರಿನಲ್ಲಿ ಆದಿ ದ್ರಾವಿಡ ಎಂದು ಜಾತಿ ಪ್ರಮಾಣ ಪತ್ರ ನೀಡಿದರೆ, ಇಲ್ಲಿ ಮಾತ್ರ ಬೇರೆ ಬೇರೆ ಜಾತಿ ನಮೂದಿಸಿ ಪ್ರಮಾಣಪತ್ರ ನೀಡುತ್ತಿದ್ದಾರೆ. ಒಂದೇ ತಂದೆಯ ಇಬ್ಬರು ಮಕ್ಕಳಿಗೆ ಬೇರೆ ಬೇರೆ ಜಾತಿಗಳನ್ನು ನಮೂದಿಸಿ ಜಾತಿ ಪ್ರಮಾಣಪತ್ರ ನೀಡಿದ್ದಾರೆ’ ಎಂದು ಅವರು ದಾಖಲೆಗಳನ್ನು ಬಿಡುಗಡೆ ಮಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಕುರಿತು ಮಾತನಾಡಲು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಕೇವಲ ಮನವಿಪತ್ರ ಮಾತ್ರ ಕೊಟ್ಟೆವು ಎಂದರು.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲಾಗಿದೆ. ಆದರೆ, ಕೊಡಗು ಜಿಲ್ಲೆಯಲ್ಲಿ ಇಲ್ಲ. ಅಂಬೇಡ್ಕರ್ ಭವನದ ಆವರಣದಲ್ಲಿ ಜಾಗವಿದ್ದು, ಅಲ್ಲಿ ಪ್ರತಿಮೆಯನ್ನು ಸ್ಥಾಪಿಸಬಹುದು ಎಂದು ಹೇಳಿದರು.

ಕೊಡಗಿನಲ್ಲಿ ಹೊರರಾಜ್ಯದವರು ಮಾಡಿಕೊಂಡಿರುವ ಒತ್ತುವರಿಯನ್ನು ತೆರವುಗೊಳಿಸಿ ಕೊಡಗಿನ ಬುಡಕಟ್ಟು ಜನರು, ಭೂರಹಿತ ಸೈನಿಕರು, ವಿಧವೆಯರಿಗೆ ಮತ್ತಿತರ ಅರ್ಹರಿಗೆ ಹಂಚಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT