ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚತುಷ್ಪಥ ರಸ್ತೆಯಿಂದ ಪರಿಸರ ನಾಶ; ಆತಂಕ

ರಸ್ತೆ ಹಾಗೂ ರೈಲು ಯೋಜನೆ ವಿರೋಧಿಸಿ ರ‍್ಯಾಲಿ ನಡೆಸಿದ ಪರಿಸರ ಪ್ರೇಮಿಗಳು
Last Updated 8 ಡಿಸೆಂಬರ್ 2018, 17:07 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗಿನ ನಾಲ್ಕು ಪಥದ ರಸ್ತೆ ಯೋಜನೆ ವಿರೋಧಿಸಿ ‘ಕೊಡಗು ಮಾರಕ ಯೋಜನೆ ವಿರೋಧಿ ವೇದಿಕೆ’ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಿಂದ ಗಾಂಧಿ ಮೈದಾನ ದವರೆಗೆ ಪ್ರತಿಭಟನಾ ರ‍್ಯಾಲಿ ನಡೆಯಿತು.

ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡ ಪ್ರತಿಭಟನಕಾರರು, ‘ನಾಲ್ಕು ಪಥದ ರಸ್ತೆ ಹಾಗೂ ರೈಲಿನಿಂದ ಕೊಡಗನ್ನು ರಕ್ಷಿಸಿ’ ಎಂದು ಘೋಷಣೆ ಕೂಗುತ್ತಾ ಪ್ರಮುಖ ರಸ್ತೆಗಳಲ್ಲಿ ಸಾಗಿದರು.

ನಂತರ, ಗಾಂಧಿ ಮೈದಾನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ವೇದಿಕೆ ಅಧ್ಯಕ್ಷ ರಾಜೀವ್ ಬೋಪಯ್ಯ ಮಾತನಾಡಿ, ‘ಬೃಹತ್ ರಸ್ತೆ ನಿರ್ಮಾಣ ಹಾಗೂ ರೈಲು ಯೋಜನೆಗಳನ್ನು ಕೊಡಗಿ ನಲ್ಲಿ ಪ್ರಾರಂಭಿಸಬಾರದು. ಇದರಿಂದಲೇ ಇಲ್ಲಿನ ಪರಿಸರಕ್ಕೆ ಧಕ್ಕೆಯಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಭೂಕುಸಿತದಿಂದ ಸಾವು– ನೋವಿಗೆ ಪ್ರಮುಖ ಕಾರಣ ಪರಸರ ನಾಶ. ಮತ್ತೆ ಪರಿಸರ ನಾಶಕ್ಕೆ ಮುಂದಾಗುತ್ತಿರುವ ಮಾರ್ಗ ಸರಿಯಲ್ಲ. ಬೃಹತ್ ಯೋಜನೆಯಿಂದ ಜಿಲ್ಲೆಯ ಜನರಿಗೆ ಯಾವುದೇ ಪ್ರಯೋಜನ ಇಲ್ಲ. ಇದರಿಂದ ಅಪಾಯಗಳೇ ಹೆಚ್ಚು. ಕೊಡಗಿನ ಅತ್ಯಮೂಲ್ಯ ಭೂಭಾಗದ ವಿನಾಶಕ್ಕೆ ಯಾರೂ ಅವಕಾಶ ನೀಡ ಬಾರದು ಎಂದು ಮನವಿ ಮಾಡಿದರು.

‘ಕೆಲವು ರಾಜಕೀಯ ವ್ಯಕ್ತಿಗಳ ಬೆಂಬಲಿಗರು ಈ ಯೋಜನೆ ವಿರುದ್ಧ ಧ್ವನಿಯೆತ್ತದಂತೆ ಹಾಗೂ ನಮ್ಮ ಹೋರಾಟವನ್ನು ತಡೆಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಆದರೆ, ನಮ್ಮ ನಿಜವಾದ ಹೋರಾಟ ಇಂದಿನಿಂದ ಪ್ರಾರಂಭವಾಗಲಿದೆ’ ಎಂದು ಹೇಳಿದರು.

‘ಈ ಯೋಜನೆಯನ್ನು ಜಾರಿ ಗೊಳಿಸಲು ಪ್ರಯತ್ನಿಸುವವರು ರಾಜಕೀಯ ಪ್ರತಿನಿಧಿಗಳು ಎಸೆದ ಬಿಸ್ಕೆಟ್‌ಗಳನ್ನೇ ತಿನ್ನುವವರು. ಇಲ್ಲಿಯ ಪರಿಸರದ ಬಗ್ಗೆ ಕಾಳಜಿ ಇಲ್ಲದ ಅವರು, ಸುಮಾರು ₹10 ಸಾವಿರ ಕೋಟಿ ವೆಚ್ಚದ ಯೋಜನೆಯ ಹಣವನ್ನು ನುಂಗಲು ಪ್ರಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ಈ ಯೋಜನೆಯನ್ನು ಬೆಂಬಲಿಸು ವವರು ಮರಳು, ಟಿಂಬರ್‌ ಮಾಫಿಯಾ ದಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಒಂದು ಪಕ್ಷದ ಏಜೆಂಟರಾಗದೆ ಕಾವೇರಿ ಮಾತೆಯ ಉಳಿವಿಗಾಗಿ ಕೈಜೋಡಿಸಬೇಕಾಗಿದೆ ಎಂದು ಮನವಿ ಮಾಡಿದರು.

ವೈಲ್ಡ್‌ಲೈಫ್‌ ಸಂಘಟನೆಯ ಅಧ್ಯಕ್ಷ ಸಿ.ಪಿ.ಮುತ್ತಣ್ಣ ಮಾತನಾಡಿ, ‘ವಿನಾಶದ ವಿರುದ್ಧ ಧ್ವನಿ ಎತ್ತಲು ಪ್ರತಿಯೊಬ್ಬರ ಕೈಜೋಡಿಸಬೇಕಾಗಿದೆ. ಇಲ್ಲಿನ ಕೆಲವು ರಾಜಕೀಯ ಪುಢಾರಿಗಳು ಕೊಡಗನ್ನು ಮಾರಲು ಹೊರಟಿದ್ದಾರೆ. ಇದಕ್ಕೆ ಅವಕಾಶ ನೀಡದೆ ಪ್ರತಿಯೊಬ್ಬರು ಜಾಗೃತರಾಗಬೇಕು’ ಎಂದು ಕರೆನೀಡಿದರು.

ಯುಕೋ ಸಂಘಟನೆಯ ಮಂಜು ಚಿಣ್ಣಪ್ಪ ಮಾತನಾಡಿ, ‘ರಾಜಕೀಯ ಲಾಭವನ್ನು ಪಡೆಯುವುದಕ್ಕೆ ವಿನಾಶಕಾರಿ ಯೋಜನೆಗಳನ್ನು ಜಿಲ್ಲೆಯಲ್ಲಿ ಚಾಲನೆ ತರುವುದನ್ನು ಪ್ರತಿಯೊಬ್ಬರೂ ವಿರೋಧಿಸಬೇಕು. ನಮ್ಮ ಮಣ್ಣಿನ ಉಳಿವಿಗಾಗಿ ಯಾವುದೇ ದೊಣೆ ನಾಯಕನ ಅಪ್ಪಣೆ ಬೇಕಾಗಿಲ್ಲ. ಶಾಂತಿಯುತ ಮೆರವಣಿಗೆಗೆ ಭಂಗ ತಂದವರನ್ನು ಕಾನೂನಿನಡಿ ಶಿಕ್ಷೆಗೆ ಗುರಿಯಾಗಿಸಬೇಕು’ ಎಂದು ಅವರು ಆಗ್ರಹಿಸಿದರು.

ಕಾವೇರಿ ಸೇನೆಯ ರವಿ ಚಂಗಪ್ಪ ಮಾತನಾಡಿ, ‘ನಮ್ಮ ಹೋರಾಟವನ್ನು ವಿರೋಧಿಸುವವರನ್ನು ಎಂದಿಗೂ ಕ್ಷಮಿಸಬಾರದು. ನಮ್ಮ ಹೋರಾಟವನ್ನು ಹತ್ತಿಕ್ಕಲು ಬಿಡುವುದಿಲ್ಲ’ ಎಂದು ಹೇಳಿದರು.

ಬಿಜೆಪಿ ಮುಖಂಡರ ಆಕ್ರೋಶ
ಮಡಿಕೇರಿ:
ಇಲ್ಲಿನ ಗಾಂಧಿ ಮೈದಾನಕ್ಕೆ ರ‍್ಯಾಲಿ ಬರುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ಹಾಗೂ ಪರಿಸರ ಪ್ರೇಮಿಗಳ ನಡುವೆ ಆರೋಪ– ಪ್ರತ್ಯಾರೋಪ ನಡೆಯಿತು. ಧಿಕ್ಕಾರ, ಜೈಕಾರದ ಘೋಷಣೆಗಳು ಮೊಳಗಿದವು. ಪರಸ್ಪರ ತಳ್ಳಾಟ ನಡೆದು ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

‘ಯೋಜನೆ ವಿರೋಧಿಸುತ್ತಿರುವವರು ಡೋಂಗಿ ಪರಿಸರವಾದಿಗಳು. ಈ ಹೋರಾಟದಲ್ಲಿ ಪಾಲ್ಗೊಂಡವರು ಜಿಲ್ಲೆಯವರಲ್ಲ. ಅವರು ಅಭಿವೃದ್ಧಿ ವಿರೋಧಿಗಳು. ರಸ್ತೆಯ ಅಭಿವೃದ್ಧಿ ಆಗದಿದ್ದರೆ ನಾವು ಬದುಕುವುದು ಬೇಡವೇ’ ಎಂದು ಬಿಜೆಪಿ ಕಾರ್ಯಕರ್ತರು ಪ್ರಶ್ನಿಸಿದರು. ‘ಕೊಡಗು ಮಾರಕ ಯೋಜನೆ ವಿರೋಧಿ ವೇದಿಕೆ’ ಅಧ್ಯಕ್ಷ ರಾಜೀವ್‌ ಬೋಪಯ್ಯ ಸೇರಿದಂತೆ ಹಲವರನ್ನು ನಿಂದಿಸಲಾಯಿತು.

ವೇದಿಕೆ ಮುಂಭಾಗದಲ್ಲಿ ಯೋಜನೆಯ ಪರ–ವಿರುದ್ಧ ಹೋರಾಟ ಹೆಚ್ಚಾದಂತೆ ಸ್ಥಳದಲ್ಲಿದ್ದ ಪೊಲೀಸರು ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿ, ಅಲ್ಲಿಂದ ತೆರಳುವಂತೆ ಸೂಚಿಸಿದರು. ಅನುಮತಿ ಪಡೆದು ರ‍್ಯಾಲಿ ಆಯೋಜಿಸಿದ್ದಾರೆ. ಅಡ್ಡಿಪಡಿಸಿದರೆ ಬಂಧಿಸುವ ಎಚ್ಚರಿಕೆ ನೀಡಿದ ಬಳಿಕ, ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗುತ್ತಾ ಹೊರನಡೆದರು. ಬಳಿಕ ಪೊಲೀಸ್‌ ಬಂದೋಬಸ್ತ್‌ನಲ್ಲಿ ಕಾರ್ಯಕ್ರಮ ನಡೆಸಲಾಯಿತು.

ಬಿಜೆಪಿ ರಾಜ್ಯ ಕಾರ್ಯದರ್ಶಿ ಮನು ಮುತ್ತಪ್ಪ ಮಾತನಾಡಿ, ‘ಪರಿಸರವಾದಿ ಗಳು ವಿದೇಶಿ ಹಣದ ವ್ಯಾಮೋಹಕ್ಕೆ ತುತ್ತಾಗಿ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿದ್ದಾರೆ. ಪರಿಸರ ನಾಶವಾಗುತ್ತಿದೆ ಎಂದು ಆರೋಪಿಸಿ ದಿನಕ್ಕೆ 10 ಪತ್ರಗಳನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸುತ್ತಿದ್ದಾರೆ. ಕಾಫಿತೋಟ ಮಾರಿ ಬೆಂಗಳೂರಿನಲ್ಲಿ ನೆಲೆಸಿರುವ ವ್ಯಕ್ತಿಗಳು ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ’ ಎಂದು ಆಪಾದಿಸಿದರು.

ಮುಖಂಡ ಮಧು ಬೋಪಣ್ಣ ಪ್ರತಿಕ್ರಿಯಿಸಿ, ‘ಜನಾಭಿಪ್ರಾಯ ಸಂಗ್ರಹಿಸದೇ ರ‍್ಯಾಲಿ ಆಯೋಜಿಸಿದ್ದಾರೆ. ಪರಿಸರ ನಾಶವಾಗಿದ್ದರೆ ಈ ವರ್ಷ ದಾಖಲೆ ಮಳೆ ಸುರಿಯುತ್ತಿತ್ತೇ’ ಎಂದು ಪ್ರಶ್ನಿಸಿದರು. ಬಿಜೆಪಿ ಮುಖಂಡರಾದ ಕಾಳನ ರವಿ, ಕುದುಕುಳಿ ಭರತ್‌, ಮಧು, ತಳ್ಳೂರು ಕಿಶೋರ್‌ಕುಮಾರ್‌, ತೆಕ್ಕಡೆ ಶೋಭಾ ಮೋಹನ್‌, ಬಿ.ಟಿ. ದಿನೇಶ್‌, ಮೇದಪ್ಪ ಹಾಜರಿದ್ದರು.

ಮುಖ್ಯಮಂತ್ರಿ ಜೊತೆ ಚರ್ಚೆ; ಭರವಸೆ
‘ಕೊಡಗು ಮಾರಕ ಯೋಜನೆ ವಿರೋಧಿ ವೇದಿಕೆ’ ಸದಸ್ಯರು ಜೆಡಿಎಸ್ ಮುಖಂಡರಾದ ಪದ್ಮಿನಿ ಪೊನ್ನಪ್ಪ ಅವರಿಗೆ ಮನವಿ ಸಲ್ಲಿಸಿದರು.

ನಂತರ ಮಾತನಾಡಿದ ಪದ್ಮಿನಿ, ‘ಚತುಷ್ಪಥ ರಸ್ತೆ ಕೊಡಗಿನ ಜನರಿಗೆ ಬೇಡದಿದ್ದರೂ ಒತ್ತಾಯಪೂರ್ವಕವಾಗಿ ಯೋಜನೆ ಜಾರಿಗೊಳಿಸುತ್ತಿರುವುದು ಸರಿಯಲ್ಲ. ಇದರ ಸಾಧಕ– ಬಾಧಕಗಳ ಬಗ್ಗೆ ಮುಖ್ಯಮಂತ್ರಿಎಚ್‌.ಡಿ.ಕುಮಾರಸ್ವಾಮಿ ಜತೆ ಚರ್ಚಿಸಲಾಗುವುದು’ ಎಂದರು.

ಮುಖಂಡ ಚಂದ್ರಮೋಹನ್ ಮಾತನಾಡಿ, ‘ಆಧುನಿಕತೆ ಹೆಚ್ಚಿದಂತೆ ಪ್ರಕೃತಿ ನಾಶ ಆಗುತ್ತಲೇ ಇದೆ. ಇಲ್ಲಿರುವ ಹಸಿರು ಪರಿಸರ ಹೆಸರುವಾಸಿಯಾಗಿದೆ. ಕಾವೇರಿ ನೀರು ಕೂಡ ಯೋಜನೆಯಿಂದ ಕಲುಷಿತಗೊಳ್ಳುವುದರಿಂದ ಈ ಯೋಜನೆಯನ್ನು ಕೈಬಿಡಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT