ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ಗಬ್ಬೆದ್ದು ನಾರುತ್ತಿದೆ ಮಾಂಸದ ಮಾರುಕಟ್ಟೆ

ವ್ಯಾಪಾರಸ್ಥರ ಪ್ರತಿಭಟನೆ, ನಗರಸಭೆ ವಿರುದ್ಧ ಆಕ್ರೋಶ
Last Updated 13 ಫೆಬ್ರುವರಿ 2020, 12:52 IST
ಅಕ್ಷರ ಗಾತ್ರ

ಮಡಿಕೇರಿ: ನಗರದ ಮಹದೇವಪೇಟೆಯ ಮಾರುಕಟ್ಟೆಯ ಮಾಂಸದ ಅಂಗಡಿಗಳು ತ್ಯಾಜ್ಯ ಸಂಗ್ರಹದ ಕೇಂದ್ರವಾಗಿ ಬದಲಾಗಿವೆ. ಇಲ್ಲಿನ ಅವ್ಯವಸ್ಥೆ ಖಂಡಿಸಿ ಜೆಡಿಎಸ್‌ ಹಾಗೂ ಮಾಂಸದ ಅಂಗಡಿ ವರ್ತಕರು ಮಾರುಕಟ್ಟೆಯ ಬಳಿ ಗುರುವಾರ ಪ್ರತಿಭಟನೆ ನಡೆಸಿದರು.

ಕೋಳಿ, ಮೀನು ಮಾಂಸದ ತ್ಯಾಜ್ಯಗಳು ಎಲ್ಲೆಂದರಲ್ಲಿ ಹಾಕಿದ ಪರಿಣಾಮ ತಿಪ್ಪೆಯಾಗಿ ಮಾರ್ಪಟ್ಟಿದೆ. ಇಲ್ಲಿನ ಈ ವಾತಾವರಣವು ಗ್ರಾಹಕರಿಗೆ ತೀವ್ರ ಕಿರಿಕಿರಿಯನ್ನು ಉಂಟು ಮಾಡುತ್ತಿದೆ. ಇಡೀ ಆವರಣ ಗಬ್ಬೆದ್ದು ನಾರುತ್ತಿದೆ. ಮಾರುಕಟ್ಟೆಯಲ್ಲಿ ತ್ಯಾಜ್ಯವನ್ನು ಸಂಗ್ರಹಿಸಲು ನಗರಸಭೆ ವ್ಯವಸ್ಥೆ ಮಾಡಿಲ್ಲ ಎಂದು ಕೋಳಿ, ಕುರಿ, ಮೀನು ಮಾಂಸದ ವ್ಯಾಪಾರಿಗಳು ಅಳಲು ತೋಡಿಕೊಂಡರು.

‘ಮಾರುಕಟ್ಟೆಯ ಅಂಗಡಿಗಳಿಗೆ ಬಾಡಿಗೆಯನ್ನೂ ಕಟ್ಟುತ್ತೇವೆ. ಆದರೆ, ಇಲ್ಲಿ ಸರಿಯಾಗಿ ಕುಡಿಯುವ ನೀರು ಹಾಗೂ ಶೌಚಾಲಯದ ವ್ಯವಸ್ಥೆಯೂ ಇಲ್ಲ. ನಿತ್ಯ ಸಾಧ್ಯವಾದಷ್ಟು ನಾವೇ ಮಾರುಕಟ್ಟೆ ಸ್ವಚ್ಛ ಮಾಡಿಕೊಂಡು, ವ್ಯಾಪಾರ ಮಾಡುತ್ತಿದ್ದೇವೆ’ ಎಂದು ವ್ಯಾಪಾರಿಗಳು ನೋವು ತೋಡಿಕೊಂಡರು.

‘ನಿತ್ಯ ಸ್ವಚ್ಛ ಮಾಡಬೇಕಾದ ಮಾರುಕಟ್ಟೆಯಲ್ಲಿ ಮಾಂಸ ಸೇರಿದಂತೆ ಹಸಿ ತ್ಯಾಜ್ಯ ಕೊಳೆತು ಗಬ್ಬು ನಾರುತ್ತಿರುತ್ತದೆ. ಮೂರು ದಿನದವರೆಗೆ ಸ್ವಚ್ಛ ಮಾಡುವುದಿಲ್ಲ. ಇದರ ನಿಯಂತ್ರಣಕ್ಕೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು’ ಎಂದು ವ್ಯಾಪಾರಿಗಳು ಒತ್ತಾಯಿಸಿದರು.

ಮಾಂಸದ ವ್ಯಾಪಾರಿ ಫಾರೂಕ್ ಮಾತನಾಡಿ, ನಗರಸಭೆಯಿಂದ ತಾತ್ಕಾಲಿಕವಾಗಿ ಮೀನು ಮಾರುಕಟ್ಟೆಯನ್ನು ತೆರೆದು ಲಕ್ಷಾಂತರ ರೂಪಾಯಿಗೆ ಹರಾಜು ಮಾಡಲಾಗುತ್ತಿದೆ. ಕಾನೂನು ವಿರುದ್ಧವಾಗಿ ನಡೆಯುವ ಇಲ್ಲಿನ ವ್ಯವಸ್ಥೆಯ ಬಗ್ಗೆ ಮಾತನಾಡಿದರೆ ವರ್ತಕರಿಗೆ ವಿನಾಕಾರಣ ತೊಂದರೆ ನೀಡಲಾಗುತ್ತಿದೆ ಎಂದು ದೂರಿದರು.

ಕಳೆದ 35 ವರ್ಷಗಳಿಂದ ಅದೇ ಜಾಗದಲ್ಲಿ ಕಸಾಯಿಖಾನೆ ಮಾಡಲಾಗಿದೆ. 8 ವರ್ಷಗಳಿಂದ ಆ ಜಾಗದಲ್ಲಿ ಕಟ್ಟಡ ನಿರ್ಮಿಸುತ್ತೇನೆಂದು ಹೇಳಿ ಇದುವರೆಗೆ ಪೂರ್ಣವಾಗಿಲ್ಲ. ತಾತ್ಕಾಲಿಕ ಮಳಿಗೆಗಳು ಕುಸಿಯುವ ಸ್ಥಿತಿಯಲ್ಲಿದ್ದು, ವರ್ತಕರು ಭಯದಲ್ಲಿ ಕಾರ್ಯ ನಿರ್ವಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರಸಭೆ ಮಾಜಿ ಸದಸ್ಯ ಕೆ.ಜೆ.ಪೀಟರ್ ಮಾತನಾಡಿ, ಮಾಂಸದ ಮಾರುಕಟ್ಟೆ ಬಳಿ ಕೆಲವು ಮಳಿಗೆಗಳು ಸಂಪೂರ್ಣವಾಗಿ ಬಿರುಕು ಬಿಟ್ಟಿವೆ. ಮಳಿಗೆಗಳು ಬೀಳುವ ಸ್ಥಿತಿಯಲ್ಲಿದ್ದು, ತ್ಯಾಜ್ಯ ಹಾಕಲು ಯಾವುದೇ ವ್ಯವಸ್ಥೆ ಇಲ್ಲ. ತ್ಯಾಜ್ಯ ಹಾಗೂ ಮಾಂಸದ ನೀರನ್ನು ಹಾಗೆ ಹರಿಯ ಬಿಟ್ಟಿರುವುದರಿಂದ ರೋಗ ಹರಡುವ ಭೀತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜೆಡಿಎಸ್ ಜಿಲ್ಲಾ ಅಧ್ಯಕ್ಷ ಕೆ.ಎಂ.ಬಿ.ಗಣೇಶ್ ಮಾತನಾಡಿ, ಹೈಟೆಕ್ ಮಾರುಕಟ್ಟೆ ಕಟ್ಟಡದ ಕೆಲಭಾಗದಲ್ಲಿ ಪಾರ್ಕಿಂಗ್ ಹಾಗೂ ಮಾಂಸ ಮಾರುಕಟ್ಟೆ ಆಗಬೇಕಿತ್ತು. ಆದರೆ, ಆ ಕೆಲಸ ಆಗದ ಹಿನ್ನೆಲೆಯಲ್ಲಿ ತಾತ್ಕಾಲಿಕ ಮಳಿಗೆಗಳಲ್ಲಿ ಮೀನು-ಮಾಂಸ ಮಾರಾಟ ಮಾಡಲು ಈ ಹಿಂದೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಇಂದಿಗೂ ಅದೇ ತಾತ್ಕಾಲಿಕ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ದೂರಿದರು.

ಮೀನು ಮಾಂಸದ ತ್ಯಾಜ್ಯಗಳನ್ನು ಪರಿಸರಕ್ಕೆ ಹರಿಯಬಿಟ್ಟಿರುವುದರಿಂದ ಸಾರ್ವಜನಿಕರಿಗೂ ಓಡಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ವರ್ತಕರ ಹೋರಾಟಕ್ಕೆ ಜಿಲ್ಲಾ ಜೆಡಿಎಸ್ ಸಂಪೂರ್ಣವಾಗಿ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ವಕ್ತಾರ ಮುನೀರ್ ಅಹ್ಮದ್, ಮಾರುಕಟ್ಟೆ ಹಿತರಕ್ಷಣಾ ಸಮಿತಿ ಅಧ್ಯಕ್ಷ ಇಸ್ಮಾಯಿಲ್, ಪ್ರಮುಖರಾದ ಯಾಕೂಬ್, ಆದರ್ಶ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT