ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನಲ್ಲಿ ಮಳೆ; ಕಾಫಿ, ಭತ್ತಕ್ಕೆ ಹಾನಿ

Published 4 ಜನವರಿ 2024, 15:51 IST
Last Updated 4 ಜನವರಿ 2024, 15:51 IST
ಅಕ್ಷರ ಗಾತ್ರ

ಮಂಗಳೂರು/ ಮೈಸೂರು: ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗದ ವಿವಿಧೆಡೆ ಗುರುವಾರ ಮಳೆಯಾಗಿದೆ. ಕೆಲವೆಡೆ ಜಿಟಿಜಿಟಿ ಮಳೆಯಾಗಿದ್ದು, ಇಡೀ ದಿನ ಶೀತ ಗಾಳಿ ಬೀಸಿದೆ.

ಉಡುಪಿ ಜಿಲ್ಲೆಯ‌ ಕೋಡಿಯಲ್ಲಿ 8.5 ಸೆಂ.ಮೀ, ಪಾಂಡೇಶ್ವರದಲ್ಲಿ 5.7, ವಡ್ಡರ್ಸೆಯಲ್ಲಿ 5, ದಕ್ಷಿಣ ಕನ್ನಡ ಜಿಲ್ಲೆಯ ಸರಪಾಡಿಯಲ್ಲಿ 5 ಸೆಂ.ಮೀ. ಮಳೆಯಾಗಿದೆ. ಮೈಸೂರು ಭಾಗದ ಮೈಸೂರು, ಹಾಸನ, ಮಂಡ್ಯ, ಚಾಮರಾಜನಗರ ಹಾಗೂ ಕೊಡಗಿನಲ್ಲಿ ಮಳೆ ಸುರಿದಿದೆ.

‘ಅರಬ್ಬಿ ಸಮುದ್ರದ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಕೊಡಗು ಸೇರಿದಂತೆ, ದಕ್ಷಿಣಕನ್ನಡ, ಚಿಕ್ಕಮಗಳೂರು ಜಿಲ್ಲೆ ಹಾಗೂ ಚಾಮರಾಜನಗರ, ಶಿವಮೊಗ್ಗ, ಮಂಡ್ಯ, ಮೈಸೂರಿನ ಕೆಲವು ಭಾಗಗಳಲ್ಲಿ ಮುಂದಿನ 5 ದಿನ ಮಳೆ ಸುರಿಯುವ ಸಾಧ್ಯತೆ ಇದೆ’ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮಡಿಕೇರಿ, ಹಾಸನ, ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಕಾಫಿ ಕೊಯ್ಲು ನಡೆದಿದ್ದು, ಕಣದಲ್ಲಿ ಹರಡಿದ್ದ ಕಾಫಿಹಣ್ಣುಗಳು ಹಾಳಾಗಿವೆ. ಗಿಡದಲ್ಲೇ ಇರುವ ಹಣ್ಣುಗಳು ಉದುರುತ್ತಿವೆ. ಬೆಳೆಗಾರರು ಅಪಾರ ನಷ್ಟಕ್ಕೆ ತುತ್ತಾಗಿದ್ದಾರೆ.

50 ಕೆ.ಜಿ ಕಾಫಿಯ ಚೀಲವೊಂದಕ್ಕೆ ₹ 7,000ಕ್ಕೂ ಅಧಿಕ ದರವಿದೆ. ಈ ವರ್ಷದ ಅತಿ ಹೆಚ್ಚಿನ ದರವಿದು. ಆದರೆ, ಈಗ ಬೀಳುತ್ತಿರುವ ಮಳೆ ಬೆಳೆಗಾರರ ನಿರೀಕ್ಷೆ ಕಮರುವಂತೆ ಮಾಡಿದೆ.

‘ಅಡಿಕೆ ಕೊಯಿಲು ನಡೆಯುತ್ತಿದ್ದು, ಸುಲಿದ ಅಡಿಕೆಯನ್ನು ಬೇಯಿಸಲು ಮತ್ತು ಒಣಗಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ನಿರೀಕ್ಷಿಸಿದ ಬೆಲೆ ಸಿಗುವುದು ಕಷ್ಟ’ ಎಂದು ರೈತರು ಅಸಹಾಯಕತೆ ತೋಡಿಕೊಂಡಿದ್ದಾರೆ. 

ನಾಪೋಕ್ಲು ಸಮೀಪದ ನೆಲಜಿ ಗ್ರಾಮದ ಕಾಫಿ ತೋಟವೊಂದರಲ್ಲಿ ರೊಬಸ್ಟಾ ಕಾಫಿ ಹಣ್ಣಾಗಿರುವುದು.
ನಾಪೋಕ್ಲು ಸಮೀಪದ ನೆಲಜಿ ಗ್ರಾಮದ ಕಾಫಿ ತೋಟವೊಂದರಲ್ಲಿ ರೊಬಸ್ಟಾ ಕಾಫಿ ಹಣ್ಣಾಗಿರುವುದು.

ದ.ಕ ಉಡುಪಿ ‘ಯೆಲ್ಲೊ ಅಲರ್ಟ್‌’

ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳು ಸೇರಿದಂತೆ ಕರಾವಳಿಯಲ್ಲಿ ಬುಧವಾರದಿಂದ ಮಳೆಯಾಗುತ್ತಿದೆ. ಈ ಎರಡು ಜಿಲ್ಲೆಗಳಿಗೆ ಇದೇ 5ರಂದು ಸಹ ‘ಯೆಲ್ಲೊ ಅಲರ್ಟ್‌’ ಘೋಷಿಸಲಾಗಿದ್ದು ಗುಡುಗಿನಿಂದ ಕೂಡಿದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT