ಸೋಮವಾರ, ಸೆಪ್ಟೆಂಬರ್ 26, 2022
22 °C
ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹ; ಪ್ರತ್ಯೇಕ ಸುದ್ದಿಗೋಷ್ಠಿ

‘ನಮ್ಮ ಅಳಲು ಕೇಳಿ...’ ಮಾಜಿ ಸೈನಿಕರ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ‘ನಮ್ಮ ಅಳಲು ಕೇಳಿ’ ಎಂದು ಮಾಜಿ ಸೈನಿಕರು ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.

ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಘಟಕ ಹಾಗೂ ಕೊಡಗು (ಕೂರ್ಗ್) ಎಕ್ಸ್‌ಸರ್ವೀಸ್‌ ಪರ್ಸನಲ್ ಅಸೋಸಿಯೇಷನ್‌ ಇಲ್ಲಿ ಬುಧವಾರ ಪ್ರತ್ಯೇಕವಾಗಿ ಸುದ್ದಿಗೋಷ್ಠಿ ನಡೆಸಿ, ಮಾಜಿ ಸೈನಿಕರ ಸಮಸ್ಯೆಗಳನ್ನು ಬಿಡಿಸಿಟ್ಟರು. ಸಮಸ್ಯೆಗಳ ನಿವಾರಣೆಗೆ ಕೂಡಲೇ ಗಮನಹರಿಸಬೇಕು ಎಂದು ಕೋರಿದರು.

ಕೊಡಗು (ಕೂರ್ಗ್) ಎಕ್ಸ್‌ಸರ್ವೀಸ್‌ ಪರ್ಸನಲ್ ಅಸೋಸಿಯೇಷನ್‌ನ ಮೇಜರ್ ಜನರಲ್ ಬಿ.ಎ. ಕಾರ್ಯಪ್ಪ ಮಾತನಾಡಿ, ‘10ರಿಂದ 15 ಸಾವಿರ ಮಾಜಿ ಸೈನಿಕರು 15ರಿಂದ 40 ವರ್ಷದವರೆಗೆ ಸೇವೆ ಸಲ್ಲಿಸಿ ವಾಪಸ್‌ ಬಂದು ಇಲ್ಲಿಯೇ ನೆಲೆಸಿದ್ದಾರೆ. ಇವರೆಲ್ಲ ಹಲವು ಸರ್ಕಾರಿ ಸವಲತ್ತುಗಳಿಂದ ವಂಚಿತರಾಗಿದ್ದಾರೆ’ ಎಂದು ಅಳಲು ತೋಡಿಕೊಂಡರು.

ಮಾಜಿ ಸೈನಿಕರಿಗೆ ಸರ್ಕಾರಿ ಜಾಗ ಮಂಜೂರು ಮಾಡುವ ವಿಷಯದಲ್ಲಿ ರಾಜ್ಯಸರ್ಕಾರ ಹಾಗೂ ಹೈಕೋರ್ಟ್‌ನ ಹಲವು ಆದೇಶಗಳಿದ್ದರೂ 500 ಅರ್ಜಿಗಳು ವಿಲೇವಾರಿಯಾಗದೇ ಬಾಕಿ ಉಳಿದಿವೆ. ಕೂಡಲೇ, ಕಂದಾಯ ಇಲಾಖೆ ಈ ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂದು ಮನವಿ ಮಾಡಿದರು.

ನಿವೇಶನ ಇಲ್ಲದ ಮಾಜಿ ಸೈನಿಕರು ಹಾಗೂ ವಿಧವೆಯವರಿಗೆ ಗ್ರಾಮ ಪಂಚಾಯಿತಿಯಲ್ಲಿ ಒಂದು ನಿವೇಶನವನ್ನು ನೀಡುವಂತೆ ಸರ್ಕಾರದ ಆದೇಶವಿದ್ದರೂ ಈವರೆಗೆ ಯಾವುದೇ ಒಂದು ಮನೆಯನ್ನೂ ಮಂಜೂರಾತಿ ಮಾಡಿಲ್ಲ. ಜಿಲ್ಲಾಡಳಿತ ಕೂಡಲೇ ಈ ಬೇಡಿಕೆಯನ್ನು ಪರಿಗಣಿಸಬೇಕು ಎಂದು ಆಗ್ರಹಿಸಿದರು.

ಕೆಲವು ಮಾಜಿ ಸೈನಿಕರಿಗೆ ನೀಡಿರುವ ಸ್ಥಳಕ್ಕೆ ಹೋಗುವ ದಾರಿಯನ್ನು ಸ್ಥಳೀಯರು ಆಕ್ರಮಿಸಿಕೊಂಡು ತೊಂದರೆ ಕೊಡುತ್ತಿದ್ದಾರೆ ಎಂದೂ ದೂರಿದರು.

ಕೃಷಿಸಾಲ ಮನ್ನಾ ಯೋಜನೆಯಡಿ ಎಲ್ಲ ರೈತರಿಗೆ ದೊರಕುವ ₹ 1 ಲಕ್ಷದವರೆಗಿನ ಸಾಲಮನ್ನಾ ಯೋಜನೆಯಲ್ಲಿ ಮಾಜಿ ಸೈನಿಕರಿಗೆ ವಂಚನೆಯಾಗಿದೆ. ಇದನ್ನು ಸರಿಪಡಿಸಿಕೊಡಬೇಕು ಹಾಗೂ ಮಾಜಿ ಸೈನಿಕರಿಗೆ ಹಾಗೂ ಅವರ ಅವಲಂಬಿತರಿಗಾಗಿ ಸಮುದಾಯ ಭವನವೊಂದನ್ನು ನಿರ್ಮಿಸಬೇಕು ಎಂದರು.

ಸಂಘದ ಪದಾಧಿಕಾರಿಗಳಾದ ಮೇಜರ್ ಓ.ಎಸ್.ಚಿಂಗಪ್ಪ, ಚಂದ್ರಪ್ಪ, ಮಾದಪ್ಪ, ಗಂಗಾಧರ ಹಾಗೂ ಕರ್ನಲ್ ಚಿನ್ನಪ್ಪ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.