ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಿವೃತ್ತ ಸೈನಿಕರಿಗೆ ಸರ್ಕಾರದಿಂದ ಸವಲತ್ತು’

ಮಡಿಕೇರಿಯ ‘ಮೈತ್ರಿ’ ಭವನದಲ್ಲಿ ಮಾಜಿ ಸೈನಿಕರ ಸಮಾವೇಶ
Last Updated 11 ಡಿಸೆಂಬರ್ 2019, 14:30 IST
ಅಕ್ಷರ ಗಾತ್ರ

ಮಡಿಕೇರಿ: ‘ಕೊಡಗು ಜಿಲ್ಲೆಯು ಸೇನೆಗೆ ತನ್ನದೇ ಆದ ಕೊಡುಗೆ ನೀಡಿದ್ದು, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಮತ್ತು ಹಲವು ಕೊಡಗಿನ ಸಿಪಾಯಿಗಳು ಭಾರತೀಯ ಸೇನೆಯಲ್ಲಿ ಅತ್ಯುನ್ನತ ಸೇವೆ ಸಲ್ಲಿಸಿದ್ದಾರೆ’ ಎಂದು ದಕ್ಷಿಣ ವಲಯ ಆರ್ಮಿ ಕಮಾಂಡರ್ ಲೆಫ್ಟಿನೆಂಟ್‌ ಜನರಲ್ ಎಸ್.ಕೆ.ಸಾನಿ ಅವರು ಶ್ಲಾಘಿಸಿದರು.

ನಗರದ ಪೊಲೀಸ್ ಮೈತ್ರಿ ಭವನದಲ್ಲಿ ಬುಧವಾರ ನಡೆದ ಮಾಜಿ ಸೈನಿಕರ ಸಮಾವೇಶದಲ್ಲಿ ಅವರು ಮಾತನಾಡಿದರು.

‘ನಿವೃತ್ತ ಸೈನಿಕರಿಗೆ ಸರ್ಕಾರವು ಹಲವು ಸವಲತ್ತುಗಳನ್ನು ನೀಡುತ್ತಿದ್ದು, ‘ಒಂದು ಶ್ರೇಣಿ ಒಂದು ಪಿಂಚಣಿ ಯೋಜನೆ’ ಜಾರಿ ಮಾಡಿದ್ದು, ಇದರಿಂದ ನಿವೃತ್ತ ಸೈನಿಕರಿಗೆ ಹೆಚ್ಚಿನ ಲಾಭವಾಗಿದೆ’ ಎಂದು ತಿಳಿಸಿದರು.

‘ನಿವೃತ್ತ ಸೈನಿಕರು ಹಾಗೂ ಹುತಾತ್ಮ ಸೈನಿಕರ ಕುಟುಂಬ ವರ್ಗದವರಿಗೆ ವಿಶೇಷ ಸವಲತ್ತುಗಳನ್ನು ಸರ್ಕಾರ ನೀಡುತ್ತಿದ್ದು, ಇದರಿಂದ ಹೆಚ್ಚಿನ ಪ್ರಯೋಜನವಾಗಲಿದೆ’ ಎಂದು ಹೇಳಿದರು.

ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಕರ್ನಲ್ ಗೀತಾ ಅವರು, ಸರ್ಕಾರವು ಮಾಜಿ ಸೈನಿಕರಿಗೆ ಹಾಗೂ ಹುತಾತ್ಮ ಸೈನಿಕರ ಕುಟುಂಬದವರಿಗೆ ಒದಗಿಸುತ್ತಿರುವ ಸೇವೆಗಳ ಕುರಿತು ಮಾಹಿತಿ ನೀಡಿ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದೂ ಅವರು ತಿಳಿಸಿದರು.

ಸೇನೆಯ ದಕ್ಷಿಣ ವಲಯದ ಮುಖ್ಯ ದಾಖಲೆ ಅಧಿಕಾರಿ ಪಿ.ಎಸ್.ರಾವತ್ ಅವರು ಮಾಜಿ ಸೈನಿಕರಿಗೆ ಇರುವಂತಹ ಪಿಂಚಣಿ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.

ಮಡಿಕೇರಿ ವೈದ್ಯಕೀಯ ಕಾಲೇಜಿನ ಡಾ.ಶಿವಕುಮಾರ್ ಅವರು ಮಾತನಾಡಿ, 30 ವರ್ಷದ ನಂತರ ಆರೋಗ್ಯ ತಪಾಸಣೆಯನ್ನು ಕಡ್ಡಾಯವಾಗಿ ಮಾಡಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ತಿಳಿಸುತ್ತದೆ. ಆದ್ದರಿಂದ, ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದರು.

ಲೆಫ್ಟಿನೆಂಟ್ ಕರ್ನಲ್ ಅಯ್ಯಪ್ಪ ಮಾತನಾಡಿ, ಮಾಜಿ ಸೈನಿಕರಿಗೆ ಆರೋಗ್ಯ ಯೋಜನೆಯು ಮೈಸೂರು, ಬೆಂಗಳೂರು ಮತ್ತು ಮಂಗಳೂರಿನಲ್ಲಿ ಆಸ್ಪತ್ರೆಗಳಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಸಮಾರಂಭದಲ್ಲಿ ನಿವೃತ್ತ ಸೈನಿಕರಿಗೆ, ಹುತಾತ್ಮ ಸೈನಿಕರ ಕುಟುಂಬದವರಿಗೆ ಹಾಗೂ ಹುತಾತ್ಮ ಸೈನಿಕರ ಮಕ್ಕಳ ಶೈಕ್ಷಣಿಕ ಹಾಗೂ ಇತರೆ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗೌರವಿಸಲಾಯಿತು.

ನಿವೃತ್ತ ಏರ್ ಮಾರ್ಷಲ್ ಕೆ.ಸಿ.ಕಾರ್ಯಪ್ಪ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕೇರಳ- ಕರ್ನಾಟಕ ವಲಯದ ಜನರಲ್ ಆಫೀಸರ್ ಕಮಾಂಡೆಂಟ್ ಕೆ.ಜೆ.ಬಾಬು ಅವರು ವಂದಿಸಿದರು. ರ್‍ಯಾಲಿಯಲ್ಲಿ ವೈದ್ಯಕೀಯ ಶಿಬಿರ, ಬ್ಯಾಂಕಿಂಗ್ ಸೇವೆಗಳು, ಪಿಎಸ್‌ಎಂ, ಪಿಂಚಣಿ ಸೇವೆಗಳನ್ನು ಕಲ್ಪಿಸಲಾಗಿತ್ತು. ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT