ಮಡಿಕೇರಿ: ಇಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ರೋಟರಿ ಮಿಸ್ಟಿ ಹಿಲ್ಸ್‌ನ ನೂತನ ಅಧ್ಯಕ್ಷರಾಗಿ ಪ್ರಮೋದ್ ಕುಮಾರ್ ರೈ, ಕಾರ್ಯದರ್ಶಿ ರತ್ನಾಕರ್ ರೈ ಮತ್ತು ತಂಡದವರು ಪದಗ್ರಹಣ ಮಾಡಿದರು.
ಈ ವೇಳೆ ಮಾತನಾಡಿದ ರೋಟರಿ ಜಿಲ್ಲೆ 3181ನ ನಿಯೋಜಿತ ಗವರ್ನರ್ ವಿಕ್ರಂ ದತ್ತ, ‘ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಜನಸೇವೆಗೆ ಮುಂದಾಗಬೇಕು’ ಎಂದು ಹೇಳಿದರು.
‘ಎಲ್ಲರೂ ಸ್ವಾಮಿ ವಿವೇಕಾನಂದ, ಮದರ್ ಥೆರೆಸಾ ಅವರಂತೆ ಮಹಾನ್ ವ್ಯಕ್ತಿಯಾಗಲು ಸಾಧ್ಯವಿಲ್ಲ. ಹೀಗಿದ್ದರೂ, ಪ್ರತಿಯೊಬ್ಬರೂ ರೋಟರಿಯಂತಹ ಸಮಾಜ ಸೇವಾ ಸಂಸ್ಥೆಗಳ ಮೂಲಕ ತಮ್ಮ ಕೈಲಾದಷ್ಟು ಸಹಾಯವನ್ನು ಸಮಾಜದಲ್ಲಿ ಅಗತ್ಯವುಳ್ಳವರಿಗೆ ನೀಡಬಹುದು’ ಎಂದರು.
ರೋಟರಿಯ ಸಹಾಯಕ ಗವರ್ನರ್ ದೇವಣಿರ ತಿಲಕ್ ಪೊನ್ನಪ್ಪ ಮಾತನಾಡಿ, ‘ರೋಟರಿ ವರ್ಷದಲ್ಲಿ ಅಂಗನವಾಡಿಗಳಿಗೆ ಮೂಲಸೌಕರ್ಯ ಕಲ್ಪಿಸುವಿಕೆ, ಮಳೆ ನೀರು ಕೊಯ್ಲು, ಆರೋಗ್ಯ ಮತ್ತು ಪರಿಸರ ಸಂರಕ್ಷಣೆಯ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ರೋಟರಿಯ ಸದಸ್ಯರೆಲ್ಲರೂ ರೋಟರಿಯ ಮೂಲತತ್ವವಾದ ಭಾವೈಕ್ಯದ, ಸೌಹಾರ್ದತೆಯ ಆಧಾರದಲ್ಲಿ ಒಂದಾಗಿ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕಾಗಿದೆ’ ಎಂದರು.
ವಲಯ ಸೇನಾನಿ ಎಸ್.ಎಸ್.ಸಂಪತ್ ಕುಮಾರ್ ಮಿಸ್ಟಿ ಹಿಲ್ಸ್‌ನ ವಾರ್ತಾ ಸಂಚಿಕೆ ‘ರೋಟೋ ಮಿಸ್ಟ್’ ಅನ್ನು ಬಿಡುಗಡೆಗೊಳಿಸಿದರು. ಇದೇ ವೇಳೆ ವಿಜ್ಞಾನ ವಾಹಿನಿಯ ಈ ವರ್ಷದ ಯೋಜನೆಗೆ ಚಾಲನೆ ನೀಡಲಾಯಿತು. ಇತ್ತೀಚೆಗೆ ಅರುಣಾಚಲ ಪ್ರದೇಶದಲ್ಲಿ ನಡೆದ ರಾಷ್ಟ್ರೀಯ ಮೋಟಾರ್ ರ‍್ಯಾಲಿಯ 4 ವಿಭಾಗಗಳಲ್ಲಿ ಪ್ರಥಮ ಸ್ಥಾನ ಪಡೆದ ಅಭಿನ್ ರೈ ಅವರನ್ನು ಗೌರವಿಸಲಾಯಿತು.
ಮಿಸ್ಟಿ ಹಿಲ್ಸ್‌ನ ನಿಕಟಪೂರ್ವ ಅಧ್ಯಕ್ಷ ಪ್ರಸಾದ್ ಗೌಡ, ಕಾರ್ಯದರ್ಶಿ ರತ್ನಾಕರ್ ರೈ, ಮಿಸ್ಟಿ ಹಿಲ್ಸ್ ಸ್ಥಾಪಕಾಧ್ಯಕ್ಷ ಬಿ.ಜಿ.ಅನಂತಶಯನ, ಸಂಸ್ಥೆಯ ಎಚ್.ಟಿ.ಅನಿಲ್, ಎ.ಕೆ.ಜೀವನ್, ಕೆ.ಡಿ.ದಯಾನಂದ್, ರಶ್ಮಿದೀಪ, ಪ್ರತಿಭಾ ರೈ, ಪಿ.ವಿ. ಅಶೋಕ್, ಎಂ.ಧನಂಜಯ್, ಹರೀಶ್ ಕುಮಾರ್, ಶಂಕರ್ ಪೂಜಾರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.