ರಾಯ್ ಡಿಸೋಜಾ ಸಾವಿನ ಪ್ರಕರಣ: ಸಿಬಿಐ ತನಿಖೆಗೆ ಮುಖಂಡರ ಒತ್ತಾಯ

ವಿರಾಜಪೇಟೆ: ‘ಚಿಕಿತ್ಸೆ ನೀಡಲು ಅಗತ್ಯವೆಂದು ಹೇಳಿ ನನ್ನಿಂದ ಸಹಿ ಪಡೆದ ಪೊಲೀಸರು, ಬಳಿಕ ತಮಗೆ ಅನುಕೂಲವಾಗುವಂತೆ ಸುಳ್ಳು ಮಾಹಿತಿಯನ್ನೊಳಗೊಂಡ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ’ ಎಂದು ರಾಯ್ ಡಿಸೋಜಾ ಸಾವಿನ ಪ್ರಕರಣದ ಕುರಿತು ಅವರ ತಾಯಿ ಮೆಟಿಲ್ಡಾ ಲೋಬೊ ಆರೋಪಿಸಿದ್ದಾರೆ.
‘ಜೂ.9ರ ಮಧ್ಯರಾತ್ರಿ ಮನೆಗೆ ಬಂದ ಪೊಲೀಸರು, ಠಾಣೆಗೆ ಕರೆದುಕೊಂಡು ಹೋದರು. ಪೊಲೀಸ್ ಠಾಣೆಯ ಮುಂಭಾಗ ತೀವ್ರ ಹಲ್ಲೆಗೊಳಗಾಗಿ ಬಿದ್ದಿದ್ದ ಮಗನನ್ನು ಕೂಡಲೇ ಮನೆಗೆ ಕರೆದುಕೊಂಡು ಹೋಗುವಂತೆ ಅವಸರ ಮಾಡಿದರು. ಆದರೆ, ಎಫ್ಐಆರ್‌ನಲ್ಲಿ ಹಲ್ಲೆಗೊಳಗಾಗಿದ್ದ ಮಗನನ್ನು ಪಟ್ಟಣದ ಖಾಸಗಿ ಬಸ್ ನಿಲ್ದಾಣದಿಂದ ನಾನು ಮಧ್ಯರಾತ್ರಿ 2ರ ಸಮಯಕ್ಕೆ ಕರೆದುಕೊಂಡು ಹೋಗಿರುವುದಾಗಿ ದಾಖಲಿಸಿದ್ದಾರೆ. ಪೊಲೀಸ್ ಠಾಣೆಯ ಹೊರಭಾಗದಲ್ಲಿ ಬಿದ್ದಿದ ಮಗನ ಸ್ಥಿತಿಯನ್ನು ನೋಡಿ ಆತಂಕದಲ್ಲಿದ್ದ ನನ್ನಿಂದ ಅಲ್ಲಿಯೇ ಕಾಗದವೊಂದಕ್ಕೆ ಸಹಿ ಹಾಕಿಸಿಕೊಂಡಿದ್ದಾರೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಮರುದಿನ ಬೆಳಿಗ್ಗೆ ಪೊಲೀಸರೊಬ್ಬರು ಮೊಬೈಲ್‌ಗೆ ಕರೆ ಮಾಡಿ ಮಗನ ಆರೋಗ್ಯದ ಕುರಿತು ವಿಚಾರಿಸಿದರಲ್ಲದೆ, ಹೊಡೆದಿರುವ ಕುರಿತು ಯಾರಿಗೂ ತಿಳಿಸಬಾರದು. ತಿಳಿಸಿದರೆ ನಿಮಗೇ ತೊಂದರೆ ಉಂಟಾಗುತ್ತದೆ ಎಂದು ಹೆದರಿಸಿದರು. ಬಳಿಕ ಮೂವರು ಪೊಲೀಸರು ಮನೆಗೆ ಬಂದು ಮಗನ ಆರೋಗ್ಯ ವಿಚಾರಿಸಿದ್ದರು. ಮಡಿಕೇರಿಯ ಆಸ್ಪತ್ರೆಯಲ್ಲಿ ಮಗ ತೀವ್ರ ನಿಗಾ ಘಟಕದಲ್ಲಿದ್ದಾಗ ಅಲ್ಲಿಗೆ ಬಂದ ಪೊಲೀಸರು ಚಿಕಿತ್ಸೆಗೆ ಅಗತ್ಯವಿದೆ ಎಂದು ಹೇಳಿ ಮತ್ತೆ ಕೆಲ ಕಾಗದಗಳಿಗೆ ಸಹಿ ಹಾಕಿಸಿಕೊಂಡಿದ್ದಾರೆ. ಬಳಿಕ ಅದೇ ಸಹಿಯನ್ನು ಬಳಸಿಕೊಂಡು ಎಫ್ಐಆರ್ ಅನ್ನು ತಮಗೆ ಬೇಕಾದಂತೆ ದಾಖಲಿಸಿದ್ದಾರೆ’ ಎಂದು ಆರೋಪಿಸಿದ್ದಾರೆ.
ರಾಯ್ ಡಿಸೋಜಾ ಅವರ ಸಹೋದರ ರಾಬಿನ್ ಡಿಸೋಜಾ ಮಾತನಾಡಿ, ‘ಜೂ.10 ರಂದೇ ಪೊಲೀಸರು ಎಫ್ಐಆರ್ ದಾಖಲಿಸಿದ್ದರೂ ನಮಗೆ ಎಫ್ಐಆರ್ ಪ್ರತಿ ನೀಡಲು ಜೂ.17ರವರೆಗೆ ಸತಾಯಿಸಿದರು. ಮಫ್ತಿಯಲ್ಲಿದ್ದ ಏಳೆಂಟು ಪೊಲೀಸರು ಆಸ್ಪತ್ರೆಯ ಸುತ್ತಮುತ್ತ ಸುಳಿದಾಡುತ್ತಾ ಭಯ ಹುಟ್ಟಿಸಿದ್ದರು. ಜೂ.11 ರಂದು ಮಾಧ್ಯಮದವರು ಆಸ್ಪತ್ರೆ ಬಳಿ ಬರುತ್ತಿದಂತೆ ಅಲ್ಲಿಂದ ಮರೆಯಾದರು. ಪೊಲೀಸ್ ಸಿಬ್ಬಂದಿಯೊಬ್ಬರು ನನ್ನೊಂದಿಗೆ ಮಾತನಾಡಿ, ರಾಯ್‌ಗೆ ಮಂಗಳೂರಿನ ಉತ್ತಮ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು. ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಪೊಲೀಸರೇ ಭರಿಸುತ್ತಾರೆ ಎಂದು ದೂರವಾಣಿ ಸಂಖ್ಯೆಯನ್ನೂ ನೀಡಿದ್ದರು. ಜೂ. 17 ರಂದು ಸುಳ್ಳು ಹೇಳುತ್ತಾ ಮನೆಗೆ ಬಂದ ಪೊಲೀಸರು, ರಾಯ್ ಧರಿಸಿದ್ದ ಬಟ್ಟೆ ಹಾಗೂ ಕೆಲವು ಕಾಗದಗಳಿಗೆ ಸಹಿ ಮಾಡುವಂತೆ ತಾಯಿಯನ್ನು ಒತ್ತಾಯಿಸಿದ್ದರು’ ಎಂದರು.
ರೋಮನ್ ಕ್ಯಾಥೋಲಿಕ್ ಸಂಘದ ಜಿಲ್ಲಾ ಘಟಕದ ಸ್ಥಾಪಕಾಧ್ಯಕ್ಷ ವಿ.ಎ. ಲಾರೆನ್ಸ್ ಮಾತನಾಡಿ, ‘ಸಿಐಡಿಯಿಂದ ನ್ಯಾಯ ಸಿಗುವ ಕುರಿತು ಅನುಮಾನವಿದೆ. ಸಿಬಿಐ ತನಿಖೆಗೆ ಸರ್ಕಾರ ಮುಂದಾಗಬೇಕು. ಕೊರೊನಾ ನಿರ್ಬಂಧ ಸಡಿಲಿಕೆಯ ಬಳಿಕ ವಿವಿಧ ಸಂಘಟನೆಯ ಆಶ್ರಯದಲ್ಲಿ ಈ ಕುರಿತು ಪ್ರಬಲ ಹೋರಾಟ ನಡೆಸಲಾಗುತ್ತದೆ’ ಎಂದು ಎಚ್ಚರಿಸಿದರು.
ಪತ್ರಿಕಾ ಗೋಷ್ಟಿಯಲ್ಲಿ ವಿರಾಜಪೇಟೆ ನಾಗರಿಕ ಸಮಿತಿಯ ಡಾ.ದುರ್ಗಾಪ್ರಸಾದ್, ಸಂತ ಅನ್ನಮ್ಮ ಚರ್ಚ್‌ನ ಧರ್ಮಗುರು ಮದಲೈ ಮುತ್ತು ಹಾಗೂ ರೋಮನ್ ಕ್ಯಾಥೋಲಿಕ್ ಸಂಘದ ಜಿಲ್ಲಾ ಘಟಕದ ಉಪಾಧಕ್ಷ ಜಾನ್ಸನ್ ಪಿಂಟೋ ಮಾತನಾಡಿ, ನ್ಯಾಯಯುತ ತನಿಖೆಗೆ ಒತ್ತಾಯಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.